April 25, 2025

Newsnap Kannada

The World at your finger tips!

, suicide, harrasment , crime

ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ

Spread the love

ಬೆಂಗಳೂರು: ಸೈಟ್ ವಿಚಾರದ ತನಿಖೆ ಹೆಸರಿನಲ್ಲಿ ಪೊಲೀಸ್ ಅಧಿಕಾರಿಯು ನಿರಂತರ ಕಿರುಕುಳ ನೀಡುತ್ತಿದ್ದರಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕಾಮಾಕ್ಷಿಪಾಳ್ಯದ ಶ್ರೀನಿವಾಸನಗರದಲ್ಲಿ ನಡೆದಿದೆ.

ಶ್ರೀನಿವಾಸನಗರ ನಿವಾಸಿ ಮಹದೇವಯ್ಯ ಮೃತಪಟ್ಟ ದುರ್ದೈವಿ. ಸೈಟ್ ಸಂಬಂಧ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ, ಕಳೆದ ಫೆಬ್ರವರಿಯಲ್ಲಿ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಮಹದೇವಯ್ಯ ವಿರುದ್ಧ ದೂರು ದಾಖಲಾಗಿತ್ತು. ಶಿವಶಂಕರ್ ಎಂಬವರು ಈ ಸಂಬಂಧ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಯ್ಯ ಜಾಮೀನು ಪಡೆದ ಬಳಿಕ, ಅವರು ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆ ವೇಳೆ ರಾಜಗೋಪಾಲನಗರ ಠಾಣೆ ಇನ್ಸ್‌ಪೆಕ್ಟರ್‌ ನಿರಂತರ ಕಿರುಕುಳ ನೀಡಿದ್ದರು. ತನಿಖೆ ಹೆಸರಿನಲ್ಲಿ ಕಳೆದ 15 ದಿನಗಳಿಂದ ದಿನವಿಡೀ ಠಾಣೆಗೆ ಕರೆಸಿ ಮಾನಸಿಕ ಒತ್ತಡ ನೀಡುತ್ತಿದ್ದರು. ಊರುಬಿಟ್ಟು ಹೋಗುವಂತೆ ಅಥವಾ ತಮ್ಮ ಹೇಳಿದವರ ಹೆಸರಿಗೆ ಸೈಟ್ ರಿಜಿಸ್ಟರ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಮಹದೇವಯ್ಯ ಪತ್ನಿ ಆರೋಪಿಸಿದ್ದಾರೆ.

ಬುಧವಾರ ಸಂಜೆ ಮಹದೇವಯ್ಯ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಹದೇವಯ್ಯ ಅವರ ಸಾವಿಗೆ ರಾಜಗೋಪಾಲನಗರ ಠಾಣೆ ಇನ್ಸ್‌ಪೆಕ್ಟರ್‌ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ, ಮಹದೇವಯ್ಯ ಪತ್ನಿ ಕಾಮಾಕ್ಷಿಪಾಳ್ಯ ಠಾಣೆಗೆ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ.
ಇದನ್ನು ಓದಿ -CET ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: ಪ್ರತಿ ಪ್ರಶ್ನೆಗೆ ಐದು ಆಯ್ಕೆಗಳ ವ್ಯವಸ್ಥೆ

ಈ ಪ್ರಕರಣ ಪೊಲೀಸರ ಮೇಲಿನ ನೈತಿಕತೆ ಮತ್ತು ವಹಿಸುವ ಹೊಣೆಗಾರಿಕೆಗೆ ಪ್ರಶ್ನೆ ಎಬ್ಬಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!