March 10, 2026

Newsnap Kannada

The World at your finger tips!

temple

“ಶಿವರೂಪಾಯ ವಿಷ್ಣವೇ!”

Spread the love

ಹಾಸನ ಜಿಲ್ಲೆ ತನ್ನ ಶಿಲ್ಪಕಲೆಗೆ ಹೇಗೆ ಪ್ರಖ್ಯಾತವೋ ಹಾಗೇ ಪ್ರಕೃತಿಯ ಸೌಂದರ್ಯಕ್ಕೂ ವಿಖ್ಯಾತಿಯನ್ನ ಪಡೆದಿದೆ.ಹರಿವ ಹೊಳೆ ತೀರದಲಿ, ಹಸಿರು ಸಿರಿಯ ನಡುವಿನಲ್ಲಿ ಒಂದು ದೊಡ್ಡ ಗುಡ್ಡ ಅಥವಾ ಪುಟ್ಟ ಬೆಟ್ಟ. ಆ ಬೆಟ್ಟದ ಮೇಲೊಂದು ಸುಂದರ ದೇವಾಲಯ. ಆ ಕಲ್ಪನೆಯೇ ಎಷ್ಟು ಚಂದವಲ್ಲವೇ? ಆದರೆ, ಆ ಕಲ್ಪನೆಯೇ ಸಾಕಾರವಾದಂತಿರುವ ಕ್ಷೇತ್ರ ಮಾವಿನಕೆರೆ ರಂಗನಾಥ ಕ್ಷೇತ್ರ! ಸುಮಾರು ಐದು ನೂರು ಮೆಟ್ಟಲುಗಳಿರುವ ಈ ಬೆಟ್ಟ ಚಾರಣೆಗೂ ಸರಾಗ! ಮೇಲೇರಿದವ ಕಾಣಬಹುದು ಪ್ರಕೃತಿ ಸೊಬಗ! ಇದೆಲ್ಲವೂ ಮೀರಿ ಜೀವ ಧನ್ಯವಾಗುವುದು ಕಂಡು, ರಂಗನಾಥನ ವೈಭೋಗ!

ನಾವು ಶೈವರು, ನಮ್ಮ ದೈವವೇ ಶ್ರೇಷ್ಠ! ನಮ್ಮ ಆಚರಣೆಯೇ ಉತ್ತಮ! ನಾವು ವೈಷ್ಣವರು. ಮಹಾವಿಷ್ಣುವೇ ಸರ್ವೋತ್ತಮ. ನಮ್ಮ ಆಚರಣೆಯೇ ಉತ್ಕೃಷ್ಟ! ಎಂದು ಅಜ್ಞಾನಿಗಳಾದ ನರಮಾನವರು ಕಿತ್ತಾಡುವಾಗ,
“ಶಿವಾಯ ವಿಷ್ಣು ರೂಪಾಯ, ಶಿವರೂಪಾಯ ವಿಷ್ಣವೇ, ಶಿವಶ್ಚ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಗಂ ಶಿವಃ “, ಎನ್ನುವ ಮಾತು ಸತ್ಯವೆನ್ನುವ ಉದಾತ್ತ ತತ್ವವನ್ನು ಸಾರಲು ಮಹಾವಿಷ್ಣುವು ಶಿವಲಿಂಗದ ರೂಪದಲ್ಲಿ ಆವಿರ್ಭವಿಸಿ,ತೋರುವ ಸಲುವಾಗಿಯೇ, ಕೊಂಚ ಕುತೂಹಲಭರಿತವಾದ ಕಥೆಯನ್ನೇ ಹೊಂದಿರುವ ಕ್ಷೇತ್ರ ಮಾವಿನಕೆರೆ.ಇಲ್ಲಿ, ವಿಷ್ಣು ರೂಪಿಯಾದ ರಂಗನಾಥ ಸ್ವಾಮಿ ನೆಲೆ ನಿಂತಿರುವುದು ಲಿಂಗಾಕಾರದಲ್ಲಿ!
ಇತಿಹಾಸ ತಿಳಿಸುವಂತೆ, ನಾಲ್ಕನೆಯ ಶತಮಾನದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ನರಸಿಂಹನಾಯಕನೆಂಬ ಪಾಳೆಗಾರನ ಗೋಶಾಲೆಯಿಂದ ಪ್ರತಿದಿನವೂ ಒಂದು ಹಸುವು ಬೆಟ್ಟದ ಮೇಲಿರುವ ಕಲ್ಲೊಂದರ ಮೇಲೆ ತನ್ನ ಕೆಚ್ಚಲಿನಿಂದ ಅಮೃತಧಾರೆಯನ್ನು ಸುರಿಸಿ ವಾಪಸ್ಸು ದೊಡ್ಡಿ ಸೇರುತ್ತಿತ್ತಂತೆ.

ಈ ಸುದ್ದಿ ತಿಳಿದ ಪಾಳೆಗಾರನು ಸ್ವತಃ ತಾನೇ, ಆ ಹಸುವಿನ ಜಾಡನ್ನು ಪತ್ತೆ ಮಾಡಲು ಆ ಧೇನುವನ್ನು ಹಿಂಬಾಲಿಸಿದಾಗ, ಬೆಟ್ಟದ ಮೇಲಿನ ಗುಹೆಯ ಒಳಗೆ, ಈ ಒರಳು ಕಲ್ಲಿನಾಕಾರದ ಶಿಲೆಯನ್ನ ಕಾಣುತ್ತಾನೆ. ನಂತರ, ಆ ಶಿಲೆಯಲ್ಲಿ ಏನೋ ಮಹತ್ವವಾದ ದೈವೀಶಕ್ತಿ ಇದೆಯೆಂದು ಬಗೆದು ಆತ, ಆ ಕಲ್ಲನ್ನು ಶಿವಲಿಂಗವೆಂದು ಭ್ರಮಿಸಿ, ಶೈವಸಂಪ್ರದಾಯದಂತೆ ಪೂಜಾದಿಗಳನ್ನು ನಡೆಸಲು ಅರ್ಚಕರನ್ನು ನೇಮಿಸಿದನು. ಆನಂತರ, ಆತನ ಕನಸಿನಲ್ಲಿ ಮಹಾವಿಷ್ಣುವೇ ಕಾಣಿಸಿಕೊಂಡು,ಲಿಂಗಾಕಾರದ ಆ ಶಿಲೆಯಲ್ಲಿ ನೆಲೆ ನಿಂತಿರುವುದು ತಾನೇ ಎಂದು ಹೇಳಿ, ವೈಷ್ಣವ ಸಂಪ್ರದಾಯದಲ್ಲಿ ಪೂಜೆ ಮುಂದುವರೆಸಲು ತಿಳಿಸಿದರಂತೆ.

ಆದರೆ, ಆ ಪಾಳೆಗಾರನು, ಆ ಕನಸನ್ನು ನಿರ್ಲಕ್ಷಿಸುತ್ತಾ, ಪೂಜೆಯನ್ನು ಮುಂಚಿನ ಸಂಪ್ರದಾಯದಲ್ಲೇ ಮುಂದುವರೆಸುತ್ತಾರೆ. ಒಮ್ಮೆ ಕೆಲವು ವೈಷ್ಣವ ಸಂಪ್ರದಾಯದ ಬ್ರಾಹ್ಮಣರು ಗ್ರಾಮಕ್ಕೆ ಆಗಮಿಸಿದಾಗ, ಪುನಃ ಮಹಾವಿಷ್ಣುವು ಆ ಬ್ರಾಹ್ಮಣರ ಸ್ವಪ್ನದಲ್ಲಿ ಕಾಣಿಸಿಕೊಂಡು,’ನೀವು ಇಲ್ಲೇ ನೆಲೆನಿಂತು, ವೈಷ್ಣವ ಸಂಪ್ರದಾಯದಲ್ಲಿ ಪೂಜಾಕಾರ್ಯಗಳನ್ನು ನಡೆಸಬೇಕು”, ಎಂದು ಆದೇಶಿಸುತ್ತಾರೆ. ಆ ವಿಪ್ರೋತ್ತಮರು ಶ್ರೀಹರಿಯ ಆಜ್ಞೆಯಂತೆಯೇ ನಡೆದುಕೊಂಡು ಪೂಜಾ ಕೈಂಕರ್ಯಕ್ಕೆ ಮುಂದಾದಾಗ, ಮುಂಚಿನ ಅರ್ಚಕರು ಈ ವಿಚಾರವಾಗಿ ಪಾಳೆಯಗಾರರಿಗೆ ದೂರು ನೀಡುತ್ತಾರೆ. ಪಾಳೇಗಾರರು ಬಂದು ವಿಚಾರಣೆ ನಡೆಸಿದಾಗ, ಅಲ್ಲಿದ್ದ ವಿಪ್ರೋತ್ತಮರು ಸ್ವಪ್ನದಲ್ಲಿ ತಮಗಾದ ಅನುಭವವನ್ನು ಹೇಳುತ್ತಾರೆ. ಆಗ, ಗೊಂದಲಗೊಂಡ ನಾಯಕ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗದೆ,”ಸ್ವಲ್ಪ ದಿನ ಈ ಗುಹೆಯನ್ನು ಒಂದು ಬಂಡೆಯಿಂದ ಸಂಪೂರ್ಣ ಮುಚ್ಚಿಬಿಡೋಣ. ಒಂದು ಮಂಡಲ(೪೮ ದಿನಗಳು)ದ ನಂತರ ಬಂಡೆ ಸರಿಸೋಣ. ಆ ಶಿಲೆಯೇನಾದರೂ ಮಹಾವಿಷ್ಣುವಿನ ಅವತಾರವಾದರೆ, ಹರಿಯ ಅವತಾರಿ, ಶ್ರೀರಾಮನ ಭಂಟನಾದ ಹನುಮಂತನು ಕಾಣಿಸಿಕೊಳ್ಳಲಿ. ಅದೇ ಶಿಲೆ ಏನಾದರೂ ಶಿವ ಸ್ವರೂಪವಾದರೆ, ಕಲ್ಲಿನ ಮುಂದೆ ನಂದಿ ಉದ್ಭವಿಸಲಿ”, ಎಂದು ಸಂಕಲ್ಪ ಮಾಡಿಕೊಂಡನಂತೆ.

image

ಆಗಿನ ಕಾಲದಲ್ಲಿ ಎಷ್ಟು ಸತ್ಯ ನಡೆಯುತ್ತಿತ್ತೆಂದು ಊಹೆ ಮಾಡಿಕೊಳ್ಳಿ! ಒಂದು ಮಂಡಲ ಕಳೆದ ನಂತರ ಬೆಟ್ಟದ ಮೇಲೆ ಸಿಡಿಲು ಬಡಿದಂತೆ ಭಾರಿ ಸದ್ದಿನೊಂದಿಗೆ ಗುಹೆಗೆ ಮುಚ್ಚಿದ್ದ ಬಂಡೆ ತನ್ನಿಂತಾನೇ ಛಿದ್ರಗೊಂಡು ನೋಡುಗರಿಗೆ ವಿಸ್ಮಯ ಮಾಡಿಸುತ್ತದೆ. ದೇವಾಲಯದ ಉತ್ತರ ದಿಕ್ಕಿನಲ್ಲಿ ಆಂಜನೇಯ ಸ್ವಾಮಿಯು ಉದ್ಭವವಾಗಿ, ಆ ಶಿಲೆ ವಿಷ್ಣುರೂಪಿಯೆಂದು ಖಾತ್ರಿಯಾಗುತ್ತದೆ. ಪಾಳೆಗಾರನು ಈ ಸೋಜಿಗವನ್ನು ಕಣ್ಣಾರೆ ಕಂಡು, ನಂತರದ ದಿನಗಳಲ್ಲಿ ವೈಷ್ಣವ ಸಂಪ್ರದಾಯದಂತೆ ಪೂಜೆ ಮುಂದುವರೆಸಲು ಒಪ್ಪಿಗೆ ನೀಡುತ್ತಾನೆ. ಈ ಕಲ್ಲನ್ನು ಅಂದಿನಿಂದ ಇಂದಿನವರೆಗೂ ರಂಗನಾಥ ಸ್ವಾಮಿಯೆಂದು ಆಸ್ತಿಕರು ಭಕ್ತಿಯಿಂದ ಆರಾಧಿಸಿ ಪೂಜಿಸುತ್ತಾರೆ. ಈ ಉದ್ಭವ ಮೂರ್ತಿಯ ಹಿಂದೆಯೇ ಸುಮಾರು ಮೂರು ಅಡಿಗಳೆತ್ತರದ ನಿಂತಿರುವ ಭಂಗಿಯಲ್ಲಿರುವ ರಂಗನಾಥ ಸ್ವಾಮಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

image 1


ಬೆಟ್ಟದ ರಂಗನಾಥಸ್ವಾಮಿ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯ ಹಳೆಕೋಟೆ ಗ್ರಾಮದಲ್ಲಿರುವ ಒಂದು ಪವಿತ್ರ ಹಿಂದೂ ದೇವಾಲಯವಾಗಿದೆ. ಮಾವಿನಕೆರೆ ಬೆಟ್ಟದ ಮೇಲಿರುವ ಇದು ಕರ್ನಾಟಕದ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ.ವಿಶಿಷ್ಟಾದ್ವೈತವನ್ನು ಪರಿಚಯಿಸಿದ ಶ್ರೀ ರಾಮಾನುಜಾಚಾರ್ಯರು ಈ ಬೆಟ್ಟದ ಮೇಲೆ ಸ್ವಲ್ಪ ಕಾಲ ವಿಶ್ರಮಿಸಿದರು ಮತ್ತು ತಮ್ಮ ಭಕ್ತಿ ಗಾನಗಳ ಸಂಕೀರ್ತನೆ ಮಾಡುತ್ತಾ ಶ್ರೀ ರಂಗನಾಥನ ದರ್ಶನವನ್ನು ಕೋರಿದರು ಎಂದು ಹೇಳಲಾಗುತ್ತದೆ.


ಪೀಠಾಧಿಪತಿಯ ಪ್ರತಿಷ್ಠಾಪನೆಯನ್ನು ಮಹಾನ್ ವಸಿಷ್ಠ ಮುನಿಯು ಮಾಡಿದನೆಂದು ಹೇಳಲಾಗುತ್ತದೆ. ಶಾಸನಗಳು ದೇವರನ್ನು ತಿರುವೆಂಗಲನಾಥ,ಬೆಟ್ಟದ ರಂಗ, ಮಾಂಗಿರಿ ರಂಗ ಎಂದು ಕರೆಯುತ್ತವೆ.
ದೇವಾಲಯವನ್ನು ಸ್ವಚ್ಛಗೊಳಿಸಲು ವೈಖಾನಸ ಆಗಮ ಎಂಬ ವಿಶೇಷ ವಿಧಾನವನ್ನು ಆಚರಿಸಲಾಗುತ್ತದೆ ಮತ್ತು ವಿವಿಧ ಪೂಜೆಗಳನ್ನು ಮಾಡಲಾಗುತ್ತದೆ. ಪುಷ್ಯ ನಕ್ಷತ್ರ ತ್ರಯೋದಶಿ-ಚತುರ್ದಶಿಯಂದು ಭವ್ಯವಾದ ರಥೋತ್ಸವ, ಅಂದರೆ ಮಾಘ ಮಾಸದ ಹುಣ್ಣಿಮೆಯ ಹಿಂದಿನ ದಿನ, ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯುವ 15 ದಿನಗಳ ದೀರ್ಘ ಮಹಾ ಜಾತ್ರೆಯ ಪ್ರಾರಂಭವನ್ನು ಸೂಚಿಸುತ್ತದೆ. ಈ ಜಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಲ್ಲಿ ಸೇರುತ್ತಾರೆ.ಬಹಳಷ್ಟು ಜನ ಆಸ್ತಿಕರಿಗೆ ರಂಗನಾಥ ಸ್ವಾಮಿ ಮನೆದೇವರಾಗಿದ್ದಾನೆ. ನಾಮಕರಣ, ಮದುವೆ,ಮಂತ್ರೋಪದೇಶ, ಚೌಲ ಮುಂತಾದ ಕಾರ್ಯಗಳನ್ನು ಸ್ವಾಮಿಯ ಸಮ್ಮುಖದಲ್ಲಿ ಮಾಡಿ, ಆತನ ನಂಬಿದ ಭಕ್ತರು ಧನ್ಯತಾಭಾವವನ್ನು ಹೊಂದುತ್ತಾರೆ. ಮಾವಿನಕೆರೆಯ ಬೆಟ್ಟದ ಮೇಲೆ ರಂಗನಾಥ ನೆಲೆಸಿದ್ದರೆ, ಕೆಳಗೆ, ಲಕ್ಷ್ಮೀ ಸಮೇತನಾಗಿ ವೇಂಕಟೇಶ್ವರನು ನೆಲೆನಿಂತು ಭಕ್ತರ ಅಭೀಷ್ಟೆಗಳನ್ನ ನೆರವೇರಿಸುತ್ತಿದ್ದಾನೆ. ಇತ್ತೀಚೆಗೆ ಕೆಳಗಿನ ದೇವಾಲಯವೂ ಕೂಡಾ ಜೀರ್ಣೋದ್ದಾರವಾಗಿ, ಅತಿ ಸುಂದರವಾದ ದೇವಾಲಯವಾಗಿ ಬದಲಾಗಿದೆ.

image 2

ಜಾತ್ರೆಯ ಅಂಗವಾಗಿ ಪುಷ್ಕಳವಾದ ಊಟೋಪಚಾರಗಳು, ಪ್ರಸಾದಗಳು ಬೆಟ್ಟದ ಮೇಲೂ ಕೆಳಗೂ ಆ ದಿನ ಅನವರತ ನಡೆಯುತ್ತದೆ. ಆ ದಿನ ಎರಡೂ ಆಲಯಗಳಲ್ಲಿನ ವಿಶೇಷ ಪೂಜೆಗಳು, ಕಣ್ಣು ಕೋರೈಸುವಂಥ ಅಲಂಕಾರಗಳನ್ನು ವಿವರಿಸುವುದಕಿಂತಲೂ ನೋಡಿಯೇ ಕಣ್ಣು ತುಂಬಿಕೊಳ್ಳಬೇಕು.
ಇಲ್ಲಿನ ಮೂಲದೇವರು ಒರಳುಕಲ್ಲಿನ ಆಕಾರದಲ್ಲಿದ್ದು ಸ್ವಲ್ಪವೂ ಸಹ ಭೂಮಿಯಲ್ಲಿನ ಮಣ್ಣಿನ ಸಂಪರ್ಕವನ್ನು ಹೊಂದಿಲ್ಲದಿದ್ದರೂ,ಅಭಿಷೇಕ ಮಾಡಿದ ಜಲ, ಕ್ಷೀರವಾಗಲೀ ಒರಳು ಕಲ್ಲಿನ ಮೇಲೆ ಉಳಿಯುವುದೇ ಇಲ್ಲ. ಎಲ್ಲವನ್ನೂ ಆ ಉದ್ಭವಮೂರ್ತಿ ರಂಗನಾಥನು ಹೀರಿಕೊಳ್ಳುವುದು ವಿಜ್ಞಾನಕ್ಕೂ ಸವಾಲಾಗಿರುವ ದೈವ ಸದೃಶ್ಯ ಪವಾಡ!

ತ್ರಿಮೂರ್ತಿಗಳೆಂದು ಕರೆಯಲ್ಪಡುವ ಬ್ರಹ್ಮ ವಿಷ್ಣು ಮಹೇಶ್ವರರು ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣ. ಮೂರು ಶಕ್ತಿಗಳು ಒಗ್ಗೂಡಿ ಈ ಜಗತ್ತನ್ನು ನಿಯಂತ್ರಿಸುತ್ತದೆಂಬ ಭಾರತೀಯ ತತ್ವ ಚಿಂತನೆಯ ಪ್ರತೀಕ. ತ್ರಿಮೂರ್ತಿಗಳ ಪೈಕಿ ಶಿವ-ವಿಷ್ಣು ಬೇಧದ ಬಗ್ಗೆ ಅನೇಕ ಬಾರಿ ಪಂಡಿತರು ವಿದ್ವಾಂಸರ ನಡುವೆ ವಾಗ್ವಾದ, ಚರ್ಚೆಗಳು ನಡೆದಿವೆ.  
ವಿಷ್ಣು- ಶಿವನನ್ನು ಆರಾಧಿಸುವ ವೈಷ್ಣವ- ಶೈವ ಪಂಥವೂ ಆಚರಣೆಯಲ್ಲಿದೆ. ಶಿವ- ವಿಷ್ಣು ಬೇಧದ ಬಗ್ಗೆ ಅದೆಷ್ಟೇ ಚರ್ಚೆ ನಡೆದರೂ, ಶಂಕರಾಚಾರ್ಯರು ಸೇರಿದಂತೆ ಸನಾತನ ಧರ್ಮದ ಅನೇಕ ಶ್ರೇಷ್ಠ ದಾರ್ಶನಿಕರು ಶಿವ-ವಿಷ್ಣು ನಡುವೆ ಬೇಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ದಾರ್ಶನಿಕರು, ಋಷಿಗಳಿಗಿಂತ ಮೊದಲೇ ಅಸ್ತಿತ್ವದಲ್ಲಿದ್ದ ಶಾಸ್ತ್ರಗಳು, ಶಿವ-ವಿಷ್ಣುವಿನ ನಡುವೆ ಬೇಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿವೆ.
ಶೃತಿ-ಸ್ಮೃತಿ, ಗ್ರಂಥಗಳನ್ನು ಹೊರತಾಗಿ ಅಂದರೆ ಸ್ಥಿತಿ, ಲಯಗಳ ಉದಾಹರಣೆಗಳೂ ಸಹ ಶಿವ-ವಿಷ್ಣು ಒಬ್ಬರನ್ನು ಹೊರತುಪಡಿಸಿ ಮತ್ತೊಬ್ಬರ ಅಸ್ತಿತ್ವವೇ ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತವೆ. ಸೃಷ್ಟಿಯ ನಂತರ ಸ್ಥಿತಿ, ಸ್ಥಿತಿಯ ನಂತರ ನಾಶ ಇದು ಪ್ರಕೃತಿ ನಿಯಮ. ಸೃಷ್ಟಿಯ ನಂತರದ ಸ್ಥಿತಿಗೆ ಹಾಗೂ ನಾಶ(ಲಯ) ಕ್ಕೆ ಸಂಬಂಧವಿದೆ. ಯಾವುದೇ ಕ್ರಿಯೆ ನಡೆಯಬೇಕೆಂದರೆ ಅಲ್ಲಿ ಸ್ಥಿತಿ- ಲಯಗಳ ಅಸ್ತಿತ್ವ ಇದ್ದೇ ಇರುತ್ತದೆ. ಅಂದರೆ ಹರಿಹರರ ಸಾನ್ನಿಧ್ಯ ಇದ್ದೇ ಇರುತ್ತದೆ.

ಹರಿ-ಹರ, ಶಂಕರ-ನಾರಾಯಣರ ಸಾನ್ನಿಧ್ಯ ಇರುವ ಅನೇಕ ದೇವಾಲಯಗಳು ಶಿವ-ಕೇಶವರಲ್ಲಿ ಬೇಧವಿಲ್ಲ ಎಂದು ಸಾರಿ ಹೇಳುತ್ತಿವೆ.ಇಂಥ ಸಂದೇಶ ಸಾರುವ ಕ್ಷೇತ್ರಗಳಲ್ಲಿ ಮಾವಿನಕೆರೆಯೂ ಒಂದು! ನಗರದ ಯಾಂತ್ರಿಕ ಬದುಕಿನ ಒತ್ತಡಕ್ಕೆ ಸಿಕ್ಕಿ ಹೈರಾಣಾಗಿರುವ ಇಂದಿನ ಪೀಳಿಗೆಗೆ ವಾರಾಂತ್ಯವನ್ನು ಆನಂದಿಸುವುದಕ್ಕೆ, ಒಂದು ಒಳ್ಳೆಯ ವಿಹಾರ ತಾಣ,ಪರಿಶುದ್ದ ಪವನ, ಪ್ರಕೃತಿಯೊಡನೆ ಸಮ್ಮಿಲನ, ಹೇಮೆಯ ಜುಳುಜುಳು ಗಾನ, ದೈವ ಸನ್ನಿಧಾನ ಎಲ್ಲವೂ ಒಂದೇ ಕಡೆ ದೊರೆಯಬೇಕೆಂದರೆ, ಖಂಡಿತ ಮಾವಿನಕೆರೆ ಹೇಳಿ ಮಾಡಿಸಿದ ತಾಣ!ವಂದನೆಗಳು.

image 10

ರೂಪ ಮಂಜುನಾಥ
ಹೊಳೆನರಸೀಪುರ

error: Content is protected !!