ರವಿ ಕಾಣದ್ದನ್ನು ಕವಿ ಕಂಡ ಎಂದು ಪ್ರಸಿದ್ಧ ಉಕ್ತಿ. ತನ್ನ ಕಲ್ಪನಾ ಶಕ್ತಿಯಿಂದ ಭಾವನೆಯ ಯಾವುದೇ ರಸವನ್ನು ಚಿಮ್ಮಿಸಬಲ್ಲ ಸತ್ವ ಕವಿಗಿದೆ. ಮೂರ್ಧನ್ಯದ ತೇಜಸ್ಸಿನ ಯಾವುದೋ ಕಿರಣ ಕವಿಗೆ ವರ್ಣಗಳನ್ನು ಕೊಟ್ಟು ಪದಗಳನ್ನು ಮೂಡಿಸುತ್ತದೆ ಎಂದರು ವರಕವಿ ಬೇಂದ್ರೆ. ಹಾಗೆಯೇ ಕಾಣದ ಕಡಲಿಗೆ ಹಂಬಲಿಸಿದವರು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು.
ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಬೆಳಗುತ್ತಿರುವ ನಕ್ಷತ್ರವೆಂದರೆ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ, ಪ್ರೀತಿಯಿಂದ ಜನರು ಜಿ.ಎಸ್. ಶಿವರುದ್ರಪ್ಪ (G.S. Shivarudrappa) ಎಂದು ಕರೆಯುವರು. ಫೆಬ್ರವರಿ 7, 1926ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಜನಿಸಿದ ಅವರು, ಶಾಲಾ ಅಧ್ಯಾಪಕರ ಮಗನಾಗಿದ್ದರು. ಈಸೂರು ಕುಮುದ್ವತಿ ನದಿಯ ಬಲದಂಡೆಯ ಮೇಲಿರುವ ಗ್ರಾಮ .ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಸರು ತಂದ ಊರು ಈಸೂರು. ಶಿವರುದ್ರಪ್ಪನವರ ಬಾಲ್ಯದ ದಿನಗಳು ಕರ್ನಾಟಕದ ಸುಂದರ, ಪ್ರಾಕೃತಿಕ ಪರಿಸರದ ಮಧ್ಯೆ ಕಳೆದವು. ಇದು ಅವರ ಕಾವ್ಯ ಸಂವೇದನೆಗಳಿಗೆ ಬಹಳ ಪ್ರಭಾವ ಬೀರಿತು. ಪ್ರಕೃತಿ, ಮಾನವ ಸಂಬಂಧಗಳು ಮತ್ತು ಬದುಕಿನ ಸೂಕ್ಷ್ಮ ಭಾವನೆಗಳು ಅವರ ಕಾವ್ಯಗಳಲ್ಲಿ ಹಾಸುಹೊಕ್ಕಾಗಿವೆ.
ಅಧ್ಯಯನ ಮತ್ತು ಗುರುಗಳ ಪ್ರಭಾವ
ಶಿವರುದ್ರಪ್ಪ ಅವರು ತಮ್ಮ ವಿದ್ಯಾಭ್ಯಾಸದಲ್ಲಿ ಬಹಳ ಚುರುಕಿದ್ದರು. 1949ರಲ್ಲಿ ಅವರು ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದರು ಮತ್ತು 1953ರಲ್ಲಿ ಎಂಎ (MA) ಪದವಿ ಪಡೆದರು. ಮೂರು ಬಾರಿ ಸುವರ್ಣ ಪದಕ ಪಡೆದ ಅವರ ಪ್ರತಿಭೆಯನ್ನು ಹಿರಿಯ ಕವಿ ಕುವೆಂಪು ಅವರು ಗುರುತಿಸಿದರು. ಅವರ ಮಾರ್ಗದರ್ಶನದಲ್ಲಿ ಶಿವರುದ್ರಪ್ಪ ಅವರು “ಸೌಂದರ್ಯ ಸಮೀಕ್ಷೆ” ಎಂಬ ಮಹತ್ವದ ಸಂಶೋಧನಾ ಪ್ರಬಂಧವನ್ನು 1965ರಲ್ಲಿ ಮುಗಿಸಿದರು.
ಅಧ್ಯಾಪನ ಮತ್ತು ವೃತ್ತಿ ಜೀವನ
ಶಿವರುದ್ರಪ್ಪ ಅವರ ವೃತ್ತಿಜೀವನ 1949ರಲ್ಲಿ ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಪ್ರಾರಂಭವಾಯಿತು. 1963ರಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 1966ರಲ್ಲಿ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡು, ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಪಸರಿಸುವಲ್ಲಿ ಅವರ ಸೇವೆ ಅಮೂಲ್ಯವಾಗಿದೆ.
ಕಾವ್ಯರಚನೆ ಮತ್ತು ಸಾಹಿತ್ಯ ಸೇವೆ
ಅವರ ಕಾವ್ಯಸಂಕಲನಗಳು “ಸಾಮಗಾನ”, “ಚೆಲುವು-ಒಲವು”, “ದೇವಶಿಲ್ಪ” ಇವು ಅವರ ಕಾವ್ಯಪ್ರಜ್ಞೆಯನ್ನು ತೋರ್ಪಡಿಸುವ ಮುಖ್ಯ ಕೃತಿಗಳಾಗಿವೆ. ಕೇವಲ ಸುಂದರ ಪದ್ಯಗಳನ್ನು ರಚಿಸುವಷ್ಟರಲ್ಲದೆ, ಸಾಮಾಜಿಕ ಪ್ರಜ್ಞೆ, ಆಧ್ಯಾತ್ಮಿಕ ವಿಚಾರಗಳು, ಜೀವವಿಕಾಸ, ಮತ್ತು ಗಾಢ ಭಾವನೆಗಳ ಮೂಲಕ ಅವರು ಕನ್ನಡ ಸಾಹಿತ್ಯದ ಮೇರುಕವಿಗಳ ಸಾಲಿನಲ್ಲಿ ಸೇರುವಂತಹ ಕೃತಿಗಳನ್ನು ನೀಡಿದ್ದಾರೆ.
ತಮ್ಮ ಒಂದು ಕವಿತೆಯಲ್ಲಿ ಈ ಸಾಲುಗಳನ್ನು ಜಿ ಎಸ್ ಎಸ್ ಬರೆದಿದ್ದಾರೆ. “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ; ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ”. ಇದು ಕವಿಯ ಆಳವಾದ ಅಭಿವ್ಯಕ್ತಿಯನ್ನು ಮತ್ತು ಆಂತರಿಕ ಸಂಕಟ, ಆಕಾಂಕ್ಷೆ, ಮತ್ತು ಆಧ್ಯಾತ್ಮಿಕತೆ ತೋರಿಸುತ್ತದೆ. “ಎದೆ ತುಂಬಿ ಹಾಡಿದೆನು”, “ಯಾವ ಹಾಡು ಹಾಡಲಿ”, “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ”, “ಹಾಡು ಹಳೆಯದಾದರೇನು ಭಾವ ನವನವೀನ”, “ಯಾವುದೀ ಪ್ರವಾಹವು?”, “ಯಾವ ಹಾಡು ಹಾಡಲಿ”, ಇತ್ಯಾದಿ ಕವನಗಳನ್ನು ಬರೆದು ಕವಿ ಕನ್ನಡಿಗರ ಎದೆಯಲ್ಲಿ ಶಾಶ್ವತವಾದ ತಂತಿಯನ್ನು ಬಿಗಿದಿದ್ದಾರೆ. ಆ ತಂತಿಯನ್ನು ಮೀಟುತ್ತಾ ಕನ್ನಡಿಗ ಭಾವನಾ ಪ್ರಪಂಚದಲ್ಲಿ ತೇಲಿ ನೆಮ್ಮದಿಯನ್ನು ಕಾಣಲು ಶಕ್ಯವಾಗಿದೆ. ಜಿ ಎಸ್ ಎಸ್ ಅವರೇ ಇನ್ನೊಂದು ಪದ್ಯದಲ್ಲಿ ಹೀಗೆ ಬರೆಯುತ್ತಾರೆ, “ಯಾವ ರಾಗಕೊ ಏನೊ, ನನ್ನೆದೆ ವೀಣೆ ಮಿಡಿಯುತ ನರಳಿದೆ”. ಏನಿತ್ತೋ ಆ ರಾಗ ನಮಗೆ ಈಗ ತಿಳಿಯದಾಗಿದೆ. ವೀಣೆಯ ರೂಪಕ ಹಲವು ಕವಿಗಳು ತಮ್ಮ ಕವನಗಳಲ್ಲಿ ತಂದಿದ್ದಾರೆ.
ಸಾಹಿತ್ಯ ವಿಮರ್ಶೆ ಮತ್ತು ವಿಮರ್ಶಾತ್ಮಕ ಬರಹಗಳು
ಅವರು ಕೇವಲ ಕವಿಯಲ್ಲ, ವಿಮರ್ಶಕರು, ವಿಮರ್ಶಾತ್ಮಕ ಬರಹಗಾರರು ಮತ್ತು ಯಾತ್ರಾ ಕಥನಕಾರರೂ ಆಗಿದ್ದರು. ಅವರ “ವಿಮರ್ಶೆಯ ಪೂರ್ವ-ಪಶ್ಚಿಮ” ಮತ್ತು “ಕಾವ್ಯಾರ್ಥ ಚಿಂತನೆ” ಎಂಬ ಕೃತಿಗಳು ಸಾಹಿತ್ಯದ ಅಧ್ಯಯನಕ್ಕೆ ಪೂರಕವಾಗಿದೆ. “ಮಾಸ್ಕೋವಿನಲ್ಲಿ 22 ದಿನ” ಎಂಬ ಯಾತ್ರಾ ಕೃತಿಯು ಅವರು ಮಾಸ್ಕೋ ಪ್ರವಾಸದ ಅನುಭವಗಳನ್ನು ಕನ್ನಡಿಗರಿಗೆ ಪರಿಚಯಿಸಿದಂತಾಗಿದೆ. “ಇಂಗ್ಲೆಂಡಿನಲ್ಲಿ ಚತುರ್ಮಾಸ”, “ಅಮೆರಿಕದಲ್ಲಿ ಕನ್ನಡಿಗ” ಹಾಗೂ “ಗಂಗೆಯ ಶಿಖರಗಳಲ್ಲಿ” ಅವರ ಇನ್ನಿತರ ಪ್ರವಾಸ ಕೃತಿಗಳು.
“ರಾಷ್ಟ್ರಕವಿ” ಗೌರವ ಮತ್ತು ಅಂತಿಮ ದಿನಗಳು
ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಮಹತ್ವದ ಸೇವೆಯನ್ನು ಪರಿಗಣಿಸಿ 2006ರ ನವೆಂಬರ್ 1ರಂದು ಕರ್ನಾಟಕ ಸರ್ಕಾರ “ರಾಷ್ಟ್ರಕವಿ” ಎಂಬ ಗೌರವಕ್ಕೆ ಭಾಜನಗೊಳಿಸಿತು. ಅವರ ಮೊದಲು ಕುವೆಂಪು ಮತ್ತು ಎಂ. ಗೋವಿಂದ ಪೈ ಮಾತ್ರ ಈ ಗೌರವವನ್ನು ಪಡೆದಿದ್ದರು. ಇದಲ್ಲದೇ ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿಗಳು ಕೂಡ ಇವರಿಗೆ ಲಭಿಸಿತ್ತು.
ಡಿಸೆಂಬರ್ 23, 2013 ರಂದು ಶಿವರುದ್ರಪ್ಪ ಅವರು ಬೆಂಗಳೂರಿನ ತಮ್ಮ ವಾಸಸ್ಥಾನದಲ್ಲಿ ನಿಧನರಾದರು. ಅವರ ಸಾಹಿತ್ಯ, ಅವರ ಕಾವ್ಯ, ಅವರ ಚಿಂತನೆಗಳು ಸದಾ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿಯೇ ಉಳಿಯುತ್ತವೆ.ಇದನ್ನು ಓದಿ –ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ ಟೋಲ್ ದರ ಇಳಿಕೆ
“ಕನ್ನಡ ಕಾವ್ಯದ ಸುಗಂಧ”
ಜಿ ಎಸ್ ಶಿವರುದ್ರಪ್ಪ ಅವರ ಹೆಸರನ್ನು ಕೇಳಿದಾಕ್ಷಣ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಕಾವ್ಯಪ್ರೀತಿ ಮತ್ತು ಭಾವನಾತ್ಮಕ ಅಧ್ಯಯನದ ನೆನಪು ಉಂಟಾಗುವುದು ಸಹಜ. ಅವರ ಕಾವ್ಯ, ಸಾಹಿತ್ಯ ವಿಮರ್ಶೆ, ಮತ್ತು ಆಲೋಚನೆಗಳು ಕನ್ನಡ ಸಾಹಿತ್ಯದ ಭವಿಷ್ಯವನ್ನು ರೂಪಿಸುತ್ತಿವೆ. ಕಾವ್ಯದ ಋಷಿ ಎಂದೇ ಕರೆಯಬಹುದಾದ ಈ ಮಹಾನ್ ಕವಿ ನಮ್ಮೆಲ್ಲರ ಹೃದಯಗಳಲ್ಲಿ ಸದಾ ಜೀವಂತ!

ಬರೆದವರು – ಸಚಿನ್ ಮುಂಗಿಲ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ಉತ್ತರ ಜಿಲ್ಲಾ ಸಂಯೋಜಕರು.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು