ಹಿಂದು ಪದ್ಧತಿಯಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ದಿನವನ್ನು ಮಕರ ಸಂಕ್ರಮಣ ಕರೆಯಲಾಗುತ್ತದೆ. ಪ್ರತಿ ವರ್ಷದ ಜನವರಿ 14 ಅಥವಾ 15ನೇ ತಾರೀಖಿನಂದು ಮಕರ ಸಂಕ್ರಾತಿ ಹಬ್ಬವನ್ನು ಆಚರಿಸಲಾಗುತ್ತದೆ.
ಭಾರತದಾದ್ಯಂತ ಸಂಕ್ರಾಂತಿ ಹಬ್ಬವನ್ನು ಆಚರಿಸಿದರೂ ಆಯಾ ಪ್ರಾಂತಗಳ ಅನುಸಾರ ವಿವಿಧ ಹೆಸರಿದೆ. ಒಟ್ಟಿನಲ್ಲಿ ಸಂಕ್ರಾಂತಿ ಸುಗ್ಗಿಯ ಹಬ್ಬವಾಗಿದೆ. ಅದಕ್ಕೆಂದೆ ಇದನ್ನು ರೈತರ ಹಬ್ಬವೆಂದೂ ಕರೆಯಲಾಗುತ್ತದೆ. ಸಂಕ್ರಾಂತಿ ಹಬ್ಬವನ್ನು ಅಸ್ಸಾಮಿನಲ್ಲಿ ಬಿಹು ಎಂತಲೂ ಪಂಜಾಬದಲ್ಲಿ ಲೋಹಿರಿ ಎಂತಲೂ, ಥೈ ಪೊಂಗಲ್ ಎಂದು ತಮಿಳು ನಾಡಿನಲ್ಲೂ, ಘುಗುಟಿ ಎಂದು ಉತ್ತರಾಖಂಡದಲ್ಲೂ, ಮಕರ ಸಂಕ್ರಾಂತಿ ಎಂದು ಒಡಿಸ್ಸಾ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಪಶ್ಚಿಮ ಬಂಗಾಳದಲ್ಲಿ (ಪೌಷ ಸಂಕ್ರಾಂತಿ) ಎಂದೂ ಮತ್ತು ಉತ್ತರ ಪ್ರದೇಶದಲ್ಲಿ ಕಿಚಡಿ ಸಂಕ್ರಾಂತಿ ಎಂದರೆ ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿ ಎನ್ನುತ್ತಾರೆ. ಎಲ್ಲ ಪ್ರದೇಶಗಳಿಗೂ ಇದು ಸುಗ್ಗಿಯ ಕಾಲ ಬಂದ ಬೆಳೆಗಳ ಕಟಾವು ಮಾಡಿ ದೇವರಿಗೆ ಅರ್ಪಿಸಿ ಬಂಧು ಬಾಂಧವರೊಂಧಿಗೆ ಆಚರಿಸುವ ಸುಗ್ಗಿ ಹಬ್ಬವಾಗಿದೆ.
ಉತ್ತರ ಕರ್ನಾಟಕದಲ್ಲಿ ಎಳ್ಳು ಬೆಲ್ಲ ಹಂಚುವುದು ಗಾಳಿಪಟವನ್ನು ಹಾರಿಸುವುದು ಹುಗ್ಗಿ, ಎಳ್ಳು ಮತ್ತು ಶೆಂಗಾ ಹೋಳಿಗೆ, ಸಜ್ಜೆ ರೊಟ್ಟಿಗಳನ್ನು ಮಾಡಿಕೊಂಡು ಬಂಧು ಬಾಂಧವರೊಂದಿಗೆ ಹಂಚಿಕೊಂಡು ಪೂಜೆ ಮಾಡಿ ತಿಂದು ಉಂಡು ಸಂತೋಷದಿಂದ ಕಳೆಯುವ ಕಾಲ. ಸಂಕ್ರಮಣದ ಹಿಂದಿನ ದಿನ ಭೋಗಿ ಎನ್ನುತ್ತಾರೆ. ಅಡಿಗೆಯ ಎಲ್ಲ ಸಾಮಾನುಗಳನ್ನು ಹಾಕಿ ಮುತ್ತೈದೆ ಒಬ್ಬಳಿಗೆ ಅವರ ಮನೆಗೆ ಆಗುವಷ್ಟು ಸಾಮಾನುಗಳನ್ನು ಮೊರದಲ್ಲಿ ಹಾಕಿ ಬಾಗಿನ ಕೊಡುತ್ತಾರೆ ಮಾರನೆಯ ದಿನ ಮನೆಯಲ್ಲಿ ಹೋಳಿಗೆ ಹುಗ್ಗಿ ಗೊಜ್ಜು ಸಜ್ಜೆ ರೊಟ್ಟಿ ಕಾಳು ಪಲ್ಯಗಳು, ಪುಡಿಗಳು ಹಸಿ ತರಕಾರಿಗಳನ್ನು ಬಳಸಿ ಅಡಿಗೆಯನ್ನು ಮಾಡಿ ಸಂಭ್ರಮದಿಂಧ ಬಂಧು ಬಾಂಧವರೊಂದಿಗೆ ಉಂಡು ಎಲ್ಲರಿಗೂ “ಎಳ್ಳು ಬೆಲ್ಲವನ್ನು ಕೊಟ್ಟು ಒಳ್ಳೊಳ್ಳೆ ಮಾತನಾಡೋಣ” ಎಂದು ಕುಸರೆಳ್ಳು ಬೀರುವ ಪದ್ಧತಿ ಇದೆ. ಕುಸುರೆಳ್ಳಿನೊಂದಿಗೆ ಗಜ್ಜರಿ, ಬದನೆಕಾಯಿ, ಕಬ್ಬು ಬಾಳೆ ಹಣ್ಣನ್ನು ಹಂಚುತ್ತಾರೆ. ಈ ಸಾಮಾನುಗಳನ್ನು ಬೀರುವ ಹಿಂದೆ ನಮ್ಮವರೊಡನೆ ಆಗ ಬೆಳೆದ ನವ ಧಾನ್ಯವನ್ನು ಹಂಚಿ ತಿನ್ನುವ ಒಂದು ಸುಸಂಸ್ಕಾರಯುತ ಪದ್ಧತಿಯನ್ನು ಕಾಣಬಹುದು.
ಎಲ್ಲ ಹಬ್ಬಗಳೂ ಹೆಣ್ಣು ಮಕ್ಕಳ ಹಬ್ಬಗಳೇ, ಹೆಣ್ಣು ಮಕ್ಕಳೆಲ್ಲ ಸೇರಿ ಆಸು ಪಾಸಿನ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಎಳ್ಳನ್ನು ಬೀರುತ್ತಾರೆ. ಮದುವೆಯಾದ ಹೊಸದರಲ್ಲಿ ಐದು ವರ್ಷದ ದಿನ ಇದೇ ರೀತಿ ಒಂದೊಂದು ವಿಶೇಷ ಪದಾರ್ಥಗಳನ್ನು ಸೊಸೆಯ ಮೂಲಕ ಬೀರಿಸುತ್ತಾರೆ. ಬೆಂಗಳೂರಿನ ಕಡೆ ಎಳ್ಳು ಎಂದರೆ, ಬಿಳಿ ಎಳ್ಳು, ಹುರಿಗಡಲೆ, ಕಡಲೆಕಾಯಿ ಬೀಜ, ಒಣಕೊಬರಿ ಬೆಲ್ಲ ಎಲ್ಲವನ್ನೂ ತೆಗೆದು ಕೊಂಡು ಒಟ್ಟಿಗೆ ಮಿಶ್ರಣ ಮಾಡಿ ಅದರ ಜೊತೆಗೆ ಸಕ್ಕರೆ ಪಾಕದಲ್ಲಿ ಅಚ್ಚನ್ನು ಮಾಡಿ ಬೀರಿಸುತ್ತಾರೆ. ಎಲ್ಲ ಪ್ರದೇಶಗಳಲ್ಲೂ ಬೆಳೆಗಳ ಕೋಯ್ಲಿನ ನಂತರ ಆಚರಿಸುವ ಸಂಭ್ರಮದ ಸುಗ್ಗಿ ಹಬ್ಬವು ಇದಾಗಿದೆ.
ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬವೆಂದು ಕರೆಯುತ್ತಾರೆ. ಏಕೆಂದರೆ ರೈತರು ತಾವು ಬೆಳೆದ ಫಸಲನ್ನು ಪೂಜಿಸಿ ದೇವರಿಗೆ ಅರ್ಪಿಸಿ ಹೊಸ ಬಟ್ಟೆಯುಟ್ಟು ಸಂಭ್ರಮಿಸುತ್ತಾರೆ. ತಮ್ಮ ಬೆಳೆಗಳಿಂದ ಬೆಳೆದ ಕಾಳುಗಳನ್ನು ಹಣ್ಣು ಹಂಪಲುಗಳನ್ನು ವಿಶೇಷ ಭೋಜನದೊಂದಿಗೆ ಬಂಧು ಬಾಂಧವರೊಂದಿಗೆ ಉಂಡು ಸಂಭ್ರಮಿಸುತ್ತಾರೆ. ಈ ಎಳ್ಳು ಬೆಲ್ಲ ಹಂಚುವ ಪದ್ಧತಿಗೂ ಒಂದು ವೈಜ್ಞಾನಿಕ ಕಾರಣವಿದೆ ಅದೇನೆಂದರೆ ವರ್ಷದ ಈ ಸಮಯದಲ್ಲಿ ತಂಪು ಬಹಳವಾಗಿರುತ್ತದೆ. ದೇಹಕ್ಕೆ ಬೆಚ್ಚಗಿನ ಆಹಾರದ ಮತ್ತು ಹೆಚ್ಚು ಪೋಷಕಾಂಶಯುಕ್ತ ಆಹಾರದ ಅವಶ್ಯಕತೆ ಇರುವುದರಿಂದ ಎಳ್ಳು, ಕಡಲೆ, ಹೆಸರು ಬೇಳೆ ಹೊಸದಾಗಿ ಬೆಳೆದ ತರಕಾರಿಗಳನ್ನು ಬಳಸುತ್ತಾರೆ. ಇದರಿಂದ ಹವಾಮಾನಕ್ಕೆ ಅನುಗುಣವಾದ ಆಹಾರ ತಿಂದಂತಾಗಿ ಆರೋಗ್ಯವಂತರಾಗುತ್ತಾರೆ.
ಈ ಸಂಕ್ರಾಂತಿ ಹಬ್ಬದ ನಂತರವೇ ರೈತನು ತನ್ನ ಬೆಳೆಗಳನ್ನು ಮಾರಾಟ ಮಾಡಿ ಮುಂದಿನ ವರ್ಷದಲ್ಲಿ ಬಿತ್ತುವುದಕ್ಕೆ ಬೀಜಗಳನ್ನು ತೆಗೆದಿಟ್ಟು ಕೊಂಡು ಮಿಕ್ಕ ಬೆಳೆಗಳನ್ನು ಮಾರಿ ಜೀವನ ನಿರ್ವಹಣೆ ಮಾಡುವುದು ಶತಮಾನಗಳಿಂದಲೇ ನಡೆದು ಬರುತ್ತಿದೆ. ನಮ್ಮ ಭಾರತ ದೇಶ ಕೃಷಿ ಆಧಾರಿತ ದೇಶ. ದೇಶದ 70% ಶೇಕಡಾ ಉತ್ಪನ್ನವು ಕೃಷಿಯಿಂದಲೇ ಬರುತ್ತದೆ. ಕೃಷಿ ಒಂದು ಪರಮ ಪವಿತ್ರವಾದ ಕಾಯಕ ಏಕೆಂದರೆ ಪ್ರಪಂಚದ ಯಾವುದೇ ದೇಶವಿರಲಿ ಪ್ರದೇಶವಿರಲಿ ರೈತನ ಶ್ರಮದಿಂದ ಬೆಳೆದ ದವಸ ಧಾನ್ಯಗಳಿಂದಲೇ ಮಾನವರ ಹೊಟ್ಟೆ ತುಂಬುವುದು. ಮೊದಲು ವೇದಗಳ ಕಾಲದಲ್ಲಿ ಗಡ್ಡೆ ಗೆಣಸು ಕಂದಮೂಲಗಳನ್ನೇ ತಿಂದು ಬದುಕುತ್ತಿದ್ದರು. ನಂತರ ಋಷಿಗಳೇ ಕೃಷಿಯನ್ನು ಆರಂಭಿಸಿದರು ಬೆಳೆಗಳನ್ನು ಬೆಳೆದು ತಿನ್ನಲು ಆರಂಭಿಸಿದರು. ಋಗ್ವೇದದಲ್ಲಿಯೂ ಇದರ ಉಲ್ಲೇಖವಿದೆ. ಕೃಷಿಯೂ ಕೂಡ ಹಂತ ಹಂತವಾಗಿ ಬೆಳೆಯುತ್ತಾ ಬಂದಿತು.
ಮೊದಲು ಮಾನವರೇ ಊಳುತ್ತಿದ್ದರು, ನಂತರ ಪ್ರಾಣಿಗಳನ್ನು ಉಪಯೋಗಿಸಿ ಕೊಂಡು ಭೂಮಿಯನ್ನು ಉಳಲು ಪ್ರಾರಭಿಸಿದರು ಇಂದಿನ ಆಧುನಿಕ ಯುಗದಲ್ಲಿ ಟ್ರಾಕ್ಟರ್‌ಗಳ ಬಳಕೆ ಹೆಚ್ಚಾಗಿದೆ. ಮೊದಲಿನ ಕಾಲದಲ್ಲಿ ಒಂದು ಪದಾರ್ಥವನ್ನು ಕೊಟ್ಟು ಮತ್ತೊಂದು ಪದಾರ್ಥಗಳನ್ನು ತೆಗೆದುಕೊಳ್ಳುವ ಪದಾರ್ಥ ವಿನಿಮಯ ಪದ್ಧತಿ ಇತ್ತು. ಆಗ ಬೆಳೆಗಳಿಗೆ ಸರಿಯಾದ ಮೌಲ್ಯವು ದೊರಕುತ್ತಿರಲಿಲ್ಲ. ಕಾಲಕ್ರಮೇಣ ಹಣದ ಉಪಯೋಗವನ್ನು ಪ್ರಾರಂಭಿಸಿದಾಗ ತಮ್ಮ ಬಳಿಯಲ್ಲಿದ್ದ ಹಣವನ್ನು ಕೊಟ್ಟು ಅವಶ್ಯಕವಾದ ಪದಾರ್ಥಗಳನ್ನು ಖರೀದಿಸುವ ಪದ್ಧತಿ ಬಂದಿತು.
ಭಾರತೀಯರು ಮೊದಲಿನಿಂದಲೂ ಸಂಪದ್ಭರಿತ ದೇಶ, ಸಂಪನ್ಮೂಲಗಳು ಬಹಳಷ್ಟಾಗಿದ್ದಿತು. ಮುಸಲ್ಮಾನರ ಆಗಮನದಿಂದ ಸ್ವಲ್ಪ ಮಟ್ಟಿಗೆ ಸಮೃದ್ಧಿ ಕಡಿಮೆಯಾದರೂ ತೀರ ಬಡ ರಾಷ್ಟ್ರವೇನೂ ಆಗಿರಲಿಲ್ಲ. 16-17ನೇ ಶತಮಾನದ ನಂತರ ಯುರೋಪಿಯನ್ನರ ಆಗಮನ ನಮ್ಮ ದೇಶದ ಕೃಷಿ ಪದ್ಧತಿಯಲ್ಲೂ ಅನೇಕ ರೀತಿ ದಬ್ಬಾಳಿಕೆಯಿಂದ ಅವನತಿಯ ಕಡೆಗೆ ನಡೆಯ ತೊಡಗಿತು. ಬರ-ಕ್ಷಾಮಗಳು ಸಾಮಾನ್ಯವಾಗಿಯೇ ಪ್ರಕೃತಿಯ ವಿಕೋಪಗಳಾಗಿದ್ದರೂ ಕೂಡ ಭಾರತೀಯರು ಒಂದು ವರ್ಷಗಳಿಗಾಗುವಷ್ಟು ದವಸ ಧಾನ್ಯಗಳನ್ನು ಶೇಖರಿಸಿ ಇಟ್ಟು ಕೊಳ್ಳುತ್ತಿದ್ದರು. ಬ್ರಿಟಿಷರ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ರಾಜ್ಯಭಾರದಿಂದ ಬಡ ರೈತರಿಗೂ ಹೇರಳವಾದ ಕರ ವಿಧಿಸುವುದು. ಸತತವಾದ ಗೋ ಹತ್ಯೆಗಳಿಂದ ಕೃಷಿ ವ್ಯವಸ್ಥೆಯು ಬಹಳಷ್ಟು ಹದಗೆಡುತ್ತಾ ಬಂದಿತು ಇದರ ಕಾರಣದಿಂದ ಇಂದಿಗೂ ಕೂಡ ನಮ್ಮ ದೇಶದ ಜನ ಸಾಮಾನ್ಯರು, ಸಾಮಾನ್ಯ ರೈತರು ಒಂದು ಸಾಮಾನ್ಯ ಬದುಕಿಗೂ ಪರದಾಡುವಂತಾಗಿದೆ. ಕೃಷಿಗಾಗಿ ಬಳಸುತ್ತಿದ್ದ ಜಾನುವಾರುಗಳನ್ನು ತಮ್ಮ ಗೋ ಮಾಂಸ ಭಕ್ಷಣೆಯ ಆಸೆಗೆ ಮತ್ತು ತಮ್ಮ ಸೈನ್ಯದ ಸಾರಿಗೆ ವ್ಯವಸ್ಥೆಗೆ ಬಳಸಲು ಆರಂಭಿಸಿದ ನಂತರ ಕೃಷಿಯ ಸಮೃದ್ಧಿಯು ಇಳಿಮುಖವಾಗುತ್ತಾ ಬರತೊಡಗಿತು.
ಸ್ವಾತಂತ್ರ್ಯದ ನಂತರ ಕೃಷಿ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ರೂಪಿಸಿದರು ಆದರೂ ಕೂಡ ಸ್ವಾತಂತ್ರ್ಯದ 70 ವರ್ಷಗಳ ನಂತರವೂ ಸಾಮಾನ್ಯ ಕೃಷಿಕನ ಜೀವನ ಬಹಳ ಶೋಚನೀಯ ಪರಿಸ್ಥಿತಿಯಲ್ಲಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶದಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಅದರೆ ಅದರ ಸರಿಯಾದ ರೀತಿಯ ಉಪಯೋಗ ಆಗುತ್ತಿಲ್ಲ. ಅದಕ್ಕೆ ಭ್ರಷ್ಟ ರಾಜಕಾರಣಿಗಳನ್ನು ದೂಷಿಸ ಬೇಕೋ ನಮ್ಮ ಜನರ ಅನಕ್ಷರತೆ ಮತ್ತು ತಿಳಿವಳಿಕೆ ಇಲ್ಲದ ನಡತೆಯನ್ನು ದೂಷಿಸ ಬೇಕೋ ತಿಳಿಯುವುದಿಲ್ಲ. ದೊಡ್ಡ ಜಮೀನ್ದಾರರು ಮ್ತತು ಹೆಚ್ಚು ಪ್ರಮಾಣದ ಜಮೀನನ್ನು ಹೊಂದಿರುವವರಿಗೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಸಣ್ಣ ಹಿಡುವಳಿದಾರರು ಮತ್ತು ಕೇವಲ ಕೃಷಿಯ ಆಧಾರದ ಮೇಲೆಯೇ ತಮ್ಮ ಜೀವನ ನಿರ್ವಹಣೆ ಮಾಡುವವರಿಗೆ ಕಷ್ಟವೆನಿಸುತ್ತದೆ. ಈಗೀಗ ವಿದ್ಯಾವಂತರು ಆಧುನಿಕ ತಂತ್ರಗಳನ್ನು ಬಳಸಿ ಹೆಚ್ಚಿನ ಇಳುವರಿ ಮತ್ತು ಉತ್ತಮ ಫಸಲನ್ನು ತೆಗೆದು ಉತ್ತಮ ಜೀವನ ಸಾಗಿಸುತ್ತಿರುವ ನಿದರ್ಶನಗಳೂ ಇವೆ.
ಕಾನೂನಿನಲ್ಲಿ ಹೊಸ ಹೊಸ ತಿದ್ದುಪಡಿಗಳನ್ನು ತಂದು ರೈತರಿಗೆ ಹೆಚ್ಚಿನ ಲಾಭವನ್ನು ಬರುವಂತೆ ಕೇಂದ್ರ ಸರಕಾರವು ನೀತಿಗಳನ್ನು ರೂಪಿಸುತ್ತಿದೆ. ಮೊದಲಿನಿಂದ ನಡೆದು ಬಂದ ಅನೇಕ ಕು-ಪದ್ಧತಿಗಳನ್ನು ತೊಡೆದೊಡಿಸಲು ಪ್ರಯತ್ನವನ್ನು ನಡೆಸಿದೆ. ಸರಕಾರವು ದಲ್ಲಾಳಿಗಳ ಮಧ್ಯಸ್ಥಿಕೆಯನ್ನು ಮುಗಿಸಿ ನೇರವಾಗಿ ಗ್ರಾಹಕ ಮತ್ತು ರೈತರು ಖರೀದಿ ಮಾಡಲು ಅನುಕೂಲವಾಗುವ ಮಸೂದೆಯನ್ನು ಮಂಡಿಸಿದೆ. ಕೆಲವು ವಿರೋಧಿ ಶಕ್ತಿಗಳು ಅದನ್ನು ತಡೆಯುವ ಕೆಲಸವನ್ನು ನಡೆಸಿದ್ದರೂ ಕೂಡ ಸರಕಾರವು ರೈತರ ಪರವಾದ ಅನೇಕ ಉತ್ತಮ ಕೆಲಸಗಳನ್ನು ಮಾಡಿದೆ. ಅದರಲ್ಲಿ ಕಡಿಮೆ ಬೆಲೆಗೆ ಬೀಜ ಮತ್ತು ಗೊಬ್ಬರಗಳನ್ನು ಕೊಡುವುದು, ಬೆಂಬಲ ಬೆಲೆ ನೀಡುವುದು, ಫಸಲು ಬೀಮಾ ಮಾಡಿಸಿ ಬೆಳೆ ಹಾನಿಯಾದಾಗ ಅದಕ್ಕೆ ಹಣ ನೀಡುವುದ ಮುಂತಾದ ಸಣ್ಣ ಪುಟ್ಟ ಸಹಾಯವನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದೆ.
ಎಲ್ಲ ರಾಜ್ಯಗಳಲ್ಲಿಯೂ ಕೂಡ ಕೃಷಿ ವಿಶ್ವವಿದ್ಯಾಲಯಗಳಿದ್ದು ಹೊಸ ಆವಿಷ್ಕಾರ ಹೊಸ ಪದ್ಧತಿಯಲ್ಲಿ ಬೆಳೆಯುವುದು ತಾಂತ್ರಿಕವಾಗಿ ಬೆಳೆದ ಬೆಳೆಗಳಿಂದ ಹೆಚ್ಚಿನ ಇಳುವರಿ ಪಡೆಯುವ ಕ್ರಾಂತಿಯು ಈ ಶತಮಾನದಲ್ಲಿ ಬಹಳ ವೇಗವಾಗಿ ನಡೆಯುತ್ತಲೇ ಇದೆ. ಈ ಕ್ಷೇತ್ರದ ಬೆಳವಣಿಗೆಯನ್ನು ನೋಡಿ ಸಮಾಧಾನ ಪಟ್ಟುಕೊಳ್ಳವಷ್ಟೇ ಚಿಂತೆಯ ವಿಚಾರಗಳೂ ಕೃಷಿ ಕ್ಷೇತ್ರಕ್ಕೆ ಮಾರಕವಾಗಿದೆ. ರೈತರ ಸಾಲಗಳು, ಆತ್ಮ ಹತ್ಯೆಗಳು, ಸರಿಯಾದ ಸಮಯದಕ್ಕೆ ಕೊಂಡುಕೊಂಡ ಬೆಳೆಗಳಿಗೆ ಸಂಸ್ಥೆಗಳು ಹಣ ಪಾವತಿಸದಿರುವುದು ಕೆಲವು ಸಾಮಾನ್ಯ ಸಮಸ್ಯೆಗಳಾಗಿವೆ. ಇಷ್ಟು ದಿನದಲ್ಲಿ ಕೃಷಿಯ ಗುಣಮಟ್ಟವನ್ನು ಹೆಚ್ಚಿಸುವ ಒಳ್ಳೆಯ ಇಳುವರಿಯನ್ನು ಪಡೆಯುವ ಕ್ರಾಂತಿಯಾದಂತೆ. ರೈತನ ಜೀವಕ್ಕೂ ಬೆಲೆ ಕೊಡುವ, ದೇಶದ ಬೆನ್ನೆಲುಬಾದ ರೈತನ ಸಮಸ್ಯೆಗಳಿಗೆ ಬೆಂಬಲವಾಗಿ ನಿಲ್ಲುವ ಕ್ರಾಂತಿ ಇನ್ನು ಬಾಕಿ ಇದೆ.
ಮಾಧುರಿ
More Stories
ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ
ಸಂಕ್ರಾಂತಿ….
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ