January 15, 2025

Newsnap Kannada

The World at your finger tips!

makara sankranti

ಮಕರ ಸಂಕ್ರಾಂತಿ ಶಾಸ್ತ್ರ ರೀತ್ಯ ಆಚರಣೆ

Spread the love

ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಉತ್ತರಾಯಣ – ಸೂರ್ಯನು ಭೂಮಧ್ಯೆಯ ರೇಖೆಗೆ ಉತ್ತರಾಭಿಮುಖ ವಾಗಿ ಸಂಚರಿಸುವ ಕಾಲ. ಸಾಮಾನ್ಯವಾಗಿ ಜನವರಿ 14, 15ಕ್ಕೆ ಪ್ರಾರಂಭವಾಗುತ್ತದೆ. ಮಕರಕ್ಕೆ ಸೂರ್ಯನು ಪ್ರವೇಶಿಸಿದ ನಂತರ ಮುಂದಿನ ಮೂವತ್ತು ಘಳಿಗೆ ಬಹಳ ಪುಣ್ಯಕಾಲ. ಅದಕ್ಕೇ ಪಂಚಾಂಗದಲ್ಲಿ ಉತ್ತರಾಯಣ ಪುಣ್ಯಕಾಲದ ಸಮಯವನ್ನು ತಿಳಿಸಿರುತ್ತಾರೆ. ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಮೈಗೆ ಹಚ್ಚಿಕೊಂಡು ಎಲ್ಲರೂ ಸ್ನಾನ ಮಾಡಬೇಕು. ಇದರಿಂದ ರೋಗದಿಂದ ದೂರ. ಉತ್ತರಾಯಣ ಪರ್ವಕಾಲದಲ್ಲಿ ಹೆಂಗಸರು ತಲೆಯ ಮೇಲೆ ಸ್ನಾನ ಮಾಡಬಾರದು. ಆದರೆ ಎಳ್ಳು ಮೈಗೆ ತಿಕ್ಕಿ ಸ್ನಾನ ಮಾಡಬೇಕು.

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಮಕರ ಸಂಕ್ರಾಂತಿ ದಿನ : ಷಡ್ತಿಲ ಕರ್ಮಾನುಷ್ಠಾನ ಆಚರಣೆ ಮಾಡಬೇಕು. ಅಂದರೆ ಎಳ್ಳಿನ ಸಂಬಂಧಿತ ಆರು ಕರ್ಮಾನುಷ್ಠಾನ. ೧) ಎಳ್ಳು ಹಚ್ಚಿ ಸ್ನಾನ, ೨) ಎಳ್ಳುದಾನ, ೩) ಎಳ್ಳು ಹೋಮ ೪) ಎಳ್ಳು ಭಕ್ಷಣ, ೫) ಎಳ್ಳಿನಿಂದ ತರ್ಪಣ, ೬) ಎಳ್ಳೆಣ್ಣೆಯ ದೀಪ ಇವು ಬಹಳ ವಿಶೇಷ.

ಸಂಕ್ರಮಣ ಪರ್ವಕಾಲದಲ್ಲಿ ದ್ವಾದಶ ಪಿತೃಗಳಿಗೆ ತರ್ಪಣ ರೂಢಿಯಲ್ಲಿದೆ. ಸರ್ವಪಿತೃಗಳಿಗೂ ತರ್ಪಣ ಕೊಡಬೇಕು ಕನಿಷ್ಠ ದ್ವಾದಶಪಿತೃಗಳಿಗಾದರೂ ಕೊಡಬೇಕು. ನಿಣ೵ಯ ಸಿಂಧು ಗ್ರಂಥದಲ್ಲಿ ತಿಳಿಸಿರುವಂತೆ ಮಕರ ಸಂಕ್ರಮಣದ ಪರ್ವಕಾಲ ಸಂಕ್ರಮಣದ ನಂತರದ 16 ಘಳಿಗೆ (20 ಘಳಿಗೆ ಕೆಲವರ ಸಂಪ್ರದಾಯ). ಅರ್ಥಾತ್ ಒಂದು ಘಳಿಗೆ ಅಂದರೆ 48 ನಿಮಿಷ.

ಎಲ್ಲರೂ ಸಂಕ್ರಮಣ ಸಂದರ್ಭದಲ್ಲಿ ನದಿ ಸ್ನಾನಕ್ಕೆ ಹೋಗಲು, ಅಥವಾ ಬಾವಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಅಂತಹವರು ಮನೆಯಲ್ಲಿಯೇ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ನೆನೆದು ಸ್ನಾನ ಮಾಡತಕ್ಕದ್ದು.ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಗರುಡ ಪುರಾಣ ತಿಳಿಸುತ್ತದೆ.

ಸಾಧನೆಯ ದೃಷ್ಟಿಯಿಂದ ಮಹತ್ವ: ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯನದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.


ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.

ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾಮ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.

ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ.

ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲ ವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನುಕೊಡುತ್ತವೆ.

ದಾನ ಕೊಡುವ ವಸ್ತುಗಳು: ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’

ಬಾಗಿನ ನೀಡುವುದರ ಮಹತ್ವ: ‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.

ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು? ಇತ್ತೀಚೆಗೆ ಸಾಬೂನು, ಪ್ಲಾಸ್ಟಿಕ್‌ನ ವಸ್ತುಗಳಂತಹ ನಿರುಪಯುಕ್ತ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು.

Dr. Gururaj

ಡಾ.ಗುರುರಾಜ ಪೋಶೆಟ್ಟಿಹಳ್ಳಿ ,ಸಂಸ್ಕೃತಿ ಚಿಂತಕರು , ಬೆಂಗಳೂರು

Copyright © All rights reserved Newsnap | Newsever by AF themes.
error: Content is protected !!