January 11, 2025

Newsnap Kannada

The World at your finger tips!

WhatsApp Image 2023 05 27 at 6.46.41 PM

ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?

Spread the love

” ನನ್ನ ಮಾತುಗಳನ್ನೇ ಇವರು ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲಾ….ಎಂದು ಆಗಾಗ್ಗೆ ಬೇಸರದಿಂದ ಮನಸಿನೊಳಗೇ ಸರಿಗಮಪ ಹಾಡಿದ್ದುಂಟಾ…? ಹಾಗಿದ್ದರೆ ಜಸ್ಟ್ ಎರಡು ನಿಮಿಷ ಇದರ ಮೇಲೆ ಕಣ್ಣಾಡಿಸಿ.

ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ವಾದ ನಡೆಯುತ್ತಲಿದೆ. ಅ ಸಮಯದಲ್ಲಿ ನಿಮ್ಮ ಮನದೊಳಗೆ‌ ಸುಪ್ತವಾದ ನಿಜವಾದ ಭಾವನೆಗಳನ್ನು , ಅವರಿಗೆ ಹೇಳಬೇಕೆನಿಸಿದ್ದನ್ನು ನೀವೆಷ್ಟೇ ಸರಳವಾಗಿ, ಸ್ಪಷ್ಟವಾಗಿ ಅರ್ಥಮಾಡಿಸಲು ಹೋದರೂ ಅದನ್ನು ಕೇಳಿಸಿಕೊಳ್ಳುವ ಅಥವಾ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ನಿಮ್ಮ‌ ಜೋಡಿಗೆ ಇರೋಲ್ಲ. ನೀವು ಹೆಚ್ಚಿಗೆ ಹೇಳಿ ಕನ್ವೀನ್ಸ್ ಮಾಡಿದಷ್ಟೂ ಅದು ಅಪಾರ್ಥಕ್ಕೆ ದಾರಿ ಮಾಡಿಕೊಟ್ಟು ಪರಿಸ್ಥಿತಿಯನ್ನು‌ ಮತ್ತಷ್ಟು ಗಬ್ಬೆಬ್ಬಿಸಿಬಿಡುತ್ತದೆ. ಅದರಲ್ಲೂ ಇಬ್ಬರಲ್ಲಿ ಯಾರಾದರೊಬ್ಬರಿಗೆ ಸ್ವಲ್ಪಮಟ್ಟಿಗೆ Ego ಇದ್ದರಂತೂ ಅಲ್ಲಿಗೆ ಪರಸ್ಪರ ಮನಸುಗಳಲ್ಲಿ ರಣರಂಗ ರಂಗೇರಿ, ತಾಳಗಳು ತಪ್ಪಿ ತಾರಕಕ್ಕೇರಿ ಮನಗಳು ರಗಡಾಗುವುದು ನಿಶ್ಚಿತ.

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸುವ ಅಭಿಲಾಷೆ ಇದ್ದಂತೆ ಅದನ್ನು ಅರ್ಥಮಾಡಿಕೊಳ್ಳಬೇಕಾದವರು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂಬ ಬಯಕೆಯೂ ಇದ್ದೇ ಇರುತ್ತದೆ. ಕುಟುಂಬದ ಒಳಗಾಗಲೀ ಅಥವಾ ಹೊರಗಾಗಲೀ ಇಂತಹಾ ಅಪೇಕ್ಷೆ ಸಹಜ. ಮನುಷ್ಯ ಏನೆಲ್ಲಾ ಹೆಸರು, ಹಣ, ಆಸ್ತಿ ಸಂಪಾದಿಸಿದರೂ‌ ತಾನೇನೆಂಬುದನ್ನು ತಾನಿದ್ದಂತೆ ಅರ್ಥಮಾಡಿಸುವಲ್ಲಿ ಕೆಲವೊಮ್ಮೆ ಸೋಲಲೂ ಬಹುದು. ಅದಕ್ಕೆ ಆ ವ್ಯಕ್ತಿಯ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಮನಸುಗಳು ಸಿಗದಿರುವುದೂ ಕಾರಣ.

ನಿಮ್ಮೊಳಗಿನ‌ ಮಾತುಗಳು, ಅಂತರಂಗದ ಅನಿಸಿಕೆಗಳು, ಪ್ರಾಮಾಣಿಕ ಭಾವನೆಗಳು ಅವುಗಳನ್ನು ಇದ್ದ ರೂಪದಲ್ಲೇ ಮತ್ತೊಬ್ಬರಿಗೆ ತಲುಪಿಸಲು ಇಲ್ಲವೇ ಅರ್ಥ ಮಾಡಿಸಲು ತಿಣುಕಾಡಿ ಕೊನೆಗೆ ಅಸಹಾಯಕರಾಗಿ ಸೋಲನ್ನೊಪ್ಪಲೇ ಬೇಕಾದ ಅನಿವಾರ್ಯ ಸ್ಥಿತಿಯಿದೆಯಲ್ಲಾ…ಅದು ನಿಜಕ್ಕೂ ಯಾತನಾಮಯ. ಬಹುಶಃ ಆ ಸಂಧರ್ಭದಲ್ಲಿ ಅದರಿಂದ ಉಂಟಾಗಬಲ್ಲ ನೋವು, ಬದುಕಿನ‌ ಮಿಕ್ಕೆಲ್ಲಾ ನೋವಿಗಿಂತಲೂ ಕ್ರೂರವೆನಿಸಿ ಒಮ್ಮೊಮ್ಮೆ ಜೀವನದ ನಿರುತ್ಸಾಹಕ್ಕೆ ಅಥವಾ ಖಿನ್ನತೆಗೆ ದೂಡುವಂತಾಗುತ್ತದೆ. ಅದನ್ನು‌ ಅನುಭವಿಸಿದವರಿಗೆ ಅದಕ್ಕಿಂತ ದುರದೃಷ್ಟ ಬೇರೊಂದಿಲ್ಲವೇನೋ ಎಂಬ ಸ್ಯಾಡ್ ಫ಼ೀಲಿಂಗ್ ಮನದಲ್ಲಿ‌ ಬಿಗಿಯಾಗಿ ಕೂತುಬಿಡಲೂ ಬಹುದು.!

ಈ ಪ್ರಪಂಚದಲ್ಲಿ ಕೆಲವರಿಗೆ ಸುಖ ಬದುಕಿಗೆ ಬೇಕಾದ ಸಕಲ ಅಷ್ಟೈಶ್ವರ್ಯವೂ ಕಾಲಬಳಿ‌ ಬಿದ್ದಿರುತ್ತದೆ. ಆದರೆ ಅವರ ಎದೆಚಿಪ್ಪಿನಲ್ಲಿ ಸುಪ್ತವಾದ ಪ್ರಾಮಾಣಿಕ ಭಾವನೆಗಳ ಪಿಸುಮಾತಿಗೆ ಕಿವಿಯಾಗಿ , ಮನದ ಮಾತುಗಳ ದನಿಗೆ ಪ್ರಾಮಾಣಿಕ ಪ್ರತಿಧ್ವನಿಯಾಗಿ, ಅಂತರಂಗದ ಉಸಿರಿನ ವೇದನೆಗೆ ಸಂವೇದನೆಯಾಗಿ ಸ್ಪಂದಿಸಬಲ್ಲ ಜೀವವೊಂದರ ಕೂರತೆಯೆಂಬುದು ಬದುಕಿನ‌ ಬಹುದೊಡ್ಡ ಶೂನ್ಯವಾಗಿ ಕಾಡಿರಲೂಬಲ್ಲದು.

ಈ ಕಾರಣಕ್ಕಾಗಿಯೇ ಕೆಲವರಲ್ಲಿ ಈ ಸಮಸ್ಯೆ ಎಷ್ಟರಮಟ್ಟಿಗೆ ಸೀರಿಯಸ್ ಆಗಿರಬಲ್ಲದೆಂದರೆ ಅವರಿಗೆ ತಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳಲು, ಅದನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳಲು ಬೇಕಾಗುವ ಮತ್ತೊಂದು ಸಮಾನಮನಸ್ಕ ಜೀವಕ್ಕಾಗಿ ಸದಾ ಹಂಬಲಿಸುತ್ತಲಿರುತ್ತದೆ.

ಕೆಲವೊಮ್ಮೆ ಸಂಗಾತಿಗಳ ನಡುವೆ ಎಷ್ಟೇ ಅನ್ಯೋನ್ಯತೆ ,ಅನುರಾಗ ಹಾಗೂ ಹೊಂದಾಣಿಕೆ ಇದ್ದರೂ ಸಹ ಕೆಲವೊಂದು ಸಂಧರ್ಭದಲ್ಲಿ ಇಬ್ಬರಲ್ಲೊಬ್ಬರು ” ತನ್ನ ಮಾತುಗಳನ್ನು ಇವರು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ, ನೆಟ್ಟಗೆ ಅರ್ಥ ಮಾಡಿಕೊಳ್ಳುತ್ತಿಲ್ಲವೆಂಬ ಕೊರಗು ಇದ್ದಾಗ ಅದನ್ನು ಮನಗಳಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ಬಿಡದೇ ಅದಕ್ಕೆ ತಕ್ಷಣದ ಪರಿಹಾರ ಹುಡುಕಿಕೊಳ್ಳುವುದರಲ್ಲಿ ಹೊಂದಾಣಿಕೆಯ ಮಹತ್ವವಿದೆ.

ನೆನಪಿರಲಿ, ಜೀವನದಲ್ಲಿನ ಯಾವುದೇ ಮಾನವೀಯ ಸಂಬಂಧಗಳಾಗಲೀ ಅಲ್ಲಿ ಪರಸ್ಪರ ಪ್ರೀತಿ ವಿಶ್ವಾಸ , ಪ್ರಾಮಾಣಿಕ ನಂಬಿಕೆ ಹಾಗೂ ಪರಿಶುದ್ಧವಾದ ಹೊಂದಾಣಿಕೆ ಬಲವಾಗಿ ಬೇರೂರಿರಬಲ್ಲದೋ, ಅಲ್ಲಿ ಶಬ್ದಾಡಾಂಬರಗಳ ಮಾತಿಲ್ಲದೆಯೂ ಅಂತರಂಗದ ಭಾವನೆಗಳು ಮೌನವಾಗಿ ಸಂವಹಿಸಬಲ್ಲವು. ಎಲ್ಲಿಯವರೆಗೆ ಸಂಬಂಧಗಳಲ್ಲಿ ನಂಬಿಕೆಗಳ ಆಧಾರದ ಮೇಲಿನ ಗಟ್ಟಿತನವೆಂಬುದು ಧೃಢವಾಗಿ ನೆಲೆ ನಿಲ್ಲಬಲ್ಲದೋ ಅಲ್ಲಿ ಅಂತರಂಗದ ಅಣೆಕಟ್ಟಿನ ಭಾವನೆಗಳ ಕ್ರಸ್ಟ್ ಗೇಟ್ ಸದಾ ತೆರೆದಿದ್ದು , ಭಾವನೆಗಳ ಸುಗಮ ಹರಿವಿಗೆ, ಸ್ವಚ್ಛಂದ ಲಾಸ್ಯಕ್ಕೆ , ಸೊಗಸಾದ ಲಾಲಿತ್ಯಕ್ಕೆ ತಡೆಯೆಲ್ಲಿದೆ…?

ಮನಸಿಗೆ ಹತ್ತಿರವಾದವರೊಬ್ಬರ ಭಾವನೆಗಳನ್ನು ಒಪ್ಪುತ್ತೇವೆಯೋ ಬಿಡುತ್ತೇವೆಯೋ ಅದು ಎರಡನೇ ಮಾತು. ಆದರೆ ಅವರ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತೊಬ್ಬರು ತಕ್ಕ ವೇದಿಕೆಯಾದಲ್ಲಿ……ಸಂಸಾರದ ಸರಿಗಮದಲ್ಲಿ ಆಗಾಗ್ಗೆ ತಪ್ಪುವ ತಾಳಗಳು, ಅಪಸ್ವರಗಳು ಹಾಗೂ ಶೃತಿಗಳೆಲ್ಲದಕ್ಕೂ ತಮ್ಮ ತಪ್ಪಿನ ಅರಿವಾಗಿ ಒಂದೇ ರಿದಮ್ ನಲ್ಲಿ ಒಟ್ಟು ಸೇರಿ ಬದುಕಿನ ಸುಂದರವಾದ, ಮಧುರವಾದ , ಇಂಪಾದ ಗೀತೆಯಾಗಬಲ್ಲದು.

ಮರೆಯುವ‌ ಮುನ್ನ * ಒಬ್ಬರ ಮನದ ಭಾವನೆಗಳನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳುತ್ತಿಲ್ಲವೆಂಬ ಸಮಸ್ಯೆ ಕೇವಲ ಗಂಡ- ಹೆಂಡತಿ ನಡುವೆ, ಪ್ರೇಮಿಗಳ ನಡುವೆ, ನವದಂಪತಿಗಳ ನಡುವೆ ಅಥವಾ ಕುಟುಂಬದ ಸದಸ್ಯರ ನಡುವಿನ‌ ಭಾಂದವ್ಯಗಳಿಗೆ ಸಂಬಂಧಿಸಿದ ಟಾಪಿಕ್ ಮಾತ್ರವಲ್ಲ. ಇದು ನಿಮ್ಮ ಆತ್ಮೀಯ ಸ್ನೇಹ ವಲಯದಲ್ಲಿ, ಬಂಧುಗಳಲ್ಲಿ, ಕೆಲಸ ಮಾಡುವ ಕಚೇರಿಗಳಲ್ಲಿ, ಸಾರ್ವಜನಿಕ ಬದುಕಿನಲ್ಲಿ, ಎಲ್ಲೆಡೆಯೂ ಅನುಭವಕ್ಕೆ‌ ಬಂದು ನಿಮ್ಮೊಳಗೆ ಒಂದು ಆಂತರಿಕ ಕೊರಗನ್ನು ಸೃಜಿಸಬಹುದಾದ, ನಿಧಾನಕ್ಕೆ‌ ತಂದೊಡ್ಡುವ ನೋವಿದ್ದಂತೆ ! ಆದರೆ ಸಾಮಾನ್ಯವಾಗಿ ಕುಟುಂಬದ ಹೊರಗಿನ‌ ಭಾವನೆಗಳು ಮನಸಿನ‌ ಮೇಲೆ ಭಾವನಾತ್ಮಕ ಪರಿಣಾಮಕ್ಕಿಂತ‌ ವ್ಯಾವಹಾರಿಕ ಪರಿಣಾಮವನ್ನಷ್ಟೇ ಬೀರಬಹುದು.

ನಿಮಗೆ ಗೊತ್ತಿರಲಿ, ವ್ಯಾವಹಾರಿಕ ಪರಿಣಾಮಗಳು ಕೇವಲ ದೇಹದ ಮೇಲೆ ಆಗುವ ಗಾಯಗಳಿದ್ದಂತೆ. ಕಾಲಾಂತರದಲ್ಲಿ ಅವು ವಾಸಿಯಾಗಿ ನೋವೂ ಕೂಡಾ ಮರೆಯಾಗಬಹುದು. ಆದರೆ ಈ ಭಾವನಾತ್ಮಕ ನೋವುಗಳಿವೆಯಲ್ಲಾ…..ಅವು ಮನಸಿನೊಳಗೆ ನಿರಾಶೆಯ ಸಣ್ಣ ರಂಧ್ರ ಕೊರೆಯುತ್ತಲೇ ಅಗಾಧ ದುಃಖ‌ವನ್ನುಕ್ಕಿಸಿ ಕೊನೆಗೆ ಮನಸಿನ ಮೇಲುಂಟಾಗುವ ಕ್ಯಾನ್ಸರ್ ನಂತೆ ಸಕತ್ ಡೇಂಜರಸ್ !

ಈಗೊಮ್ಮೆ….ನಿಮ್ಮ‌ ಕೈಲಿರುವ ಪೇಪರ್ ಹಾಗೂ ಕಾಫ಼ೀ ಕಪ್ಪನ್ನು‌ ಪಕ್ಕಕ್ಕಿಟ್ಟು , ನಿಮ್ಮ ಸಂಗಾತಿಯ , ಸ್ನೇಹಿತರ ಯಾವ ಭಾವನೆಗಳಿಗೆ ನೀವು ಪ್ರಾಮಾಣಿಕವಾಗಿ ಸ್ಪಂದಿಸಿಲ್ಲವೆಂಬ ಬಗ್ಗೆ ಎರಡು‌ ನಿಮಿಷ ಮೌನಕ್ಕೆ ಜಾರಿ ಆತ್ಮಾನುಸಂಧಾನ ಮಾಡಿಕೊಳ್ಳಿ….!

ಕೆಲವರ ಸಮಸ್ಯೆಗೆ‌ ಉತ್ತರ‌ ಸಿಕ್ಕರೂ ಸಿಕ್ಕಬಹುದು !!

ಪ್ರೀತಿಯಿಂದ…..

HIRITYRU PRAKASH 1

ಹಿರಿಯೂರು ಪ್ರಕಾಶ್.

Copyright © All rights reserved Newsnap | Newsever by AF themes.
error: Content is protected !!