January 11, 2025

Newsnap Kannada

The World at your finger tips!

ellu bella

ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ

Spread the love

ಎಳ್ಳು ಬೆಲ್ಲ ತಿನ್ನಿ ಬಾಯಿ ತುಂಬಾ ಸಿಹಿ ಮಾತನಾಡಿ ಎಂದು ಹೇಳುತ್ತಾ ನಮ್ಮ ಹಿರಿಯರು ತಂದಿರುವ ಆಚರಣೆಗಳು, ಪದ್ಧತಿಗಳ ಹಿಂದೆ ವೈಜ್ಞಾನಿಕ ಕಾರಣ ಕೂಡ ಇದೆ. ಚಳಿಗಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೈ ಚರ್ಮಗಳು ಬಿಳಿಚಿಕೊಂಡು, ಒಣಗಿದಂತೆ ಕಂಡು ಬರುತ್ತದೆ. ಕಾಂತಿಯತೆ ಕೊಂಚವೂ ಕಾಣುವುದಿಲ್ಲ. ಅದು ಅಲ್ಲದೇ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ ಯಾಕಾದ್ರೂ ಚಳಿಗಾಲ ಬರುತ್ತಪ್ಪಾ ಎಂದು ನಾವೇ ಕೈ ಹಿಚುಕಿಕೊಳ್ಳುತ್ತಿರುತ್ತೇವೆ. ಅಲ್ಲದೇ ಚರ್ಮ ಸುಕ್ಕು ಗಟ್ಟುವುದು, ಕೆಮ್ಮು ಶೀತ, ಗಾಯ ಮಾಗುವುದು ತಡವಾಗುವುದು ಹೀಗೆ ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣವೇ ಮಕರ ಸಂಕ್ರಾಂತಿಯ ಪ್ರಮುಖ ತಿನಿಸು ಎಂದರೆ ಈ ಎಳ್ಳು ಬೆಲ್ಲ. ಹಿಂದೆ ಎಳ್ಳು ಮತ್ತು ಬೆಲ್ಲವನ್ನು ಮಾತ್ರ ನೀಡುತ್ತಿದ್ದರು. ಆದರೆ ಇದರಲ್ಲಿ ಹಲವಾರು ಪದಾರ್ಥಗಳು ಕಾಲಕ್ಕೆ ತಕ್ಕಂತೆ ಸೇರ್ಪಡೆಗೊಂಡವು. .

ಹಾಗಾದರೆ ಬನ್ನಿ ಚಳಿಗಾಲಕ್ಕೂ ಎಳ್ಳು ಬೆಲ್ಲಕ್ಕೂ ಏನು ಸಂಬಂಧವಿದೆ?

1) ಕೇವಲ ಕಾಲು ಕಪ್ ಎಳ್ಳಿನ ಬೀಜಗಳು ಒಂದು ಕಪ್ ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಒದಗಿಸುತ್ತವೆ. ಅಲ್ಲದೆ, ಲ್ಯಾಕ್ಟೋಸ್ ಇಂಟಾರೆನ್ಸ್ ಹೊಂದಿರುವವರೂ ಇದನ್ನು ಸೇವಿಸಬಹುದು. ಎಳ್ಳಿನಲ್ಲಿರುವ ಎಣ್ಣೆಯು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಿ ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿರಿಸುತ್ತದೆ.

2) ಬೆಲ್ಲವು ಕಬ್ಬಿಣ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ ಮತ್ತು ಉಸಿರಾಟದ ಸಮಸ್ಯೆಗಳಿಗೆ ಸಾಂಪ್ರದಾಯಿಕ ಪರಿಹಾರವಾಗಿ ಬಳಸಲಾಗುತ್ತದೆ. ಹಾಗಾಗಿ, ಚಳಿಗಾಲದ ಅತಿಯಾದ ಗಾಳಿಯ ನಡುವೆ ಉಸಿರಾಟ ಸರಿಯಾಗಿಡುವ ಕೆಲಸ ಬೆಲ್ಲ ಮಾಡುತ್ತದೆ

3) ರಕ್ತ ಸಂಚಾರಕ್ಕೆ ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುವ ಸಂಭವ ಹೆಚ್ಚು ಇಂತಹ ಸಮಯದಲ್ಲಿ ಎಳ್ಳು ತಿಂದರೆ ರಕ್ತವನ್ನು ಶುದ್ಧೀಕರಿಸಿ, ರಕ್ತ ಸಂಚಲನ ಚೆನ್ನಾಗಿ ಇರುವಂತೆ ನೋಡಿಕೊಳ್ಳುತ್ತದೆ

4) ಎಳ್ಳೆಣ್ಣೆ ದೇಹವನ್ನು ಆರೈಕೆ ಮಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಎಳ್ಳೆಣ್ಣೆ ಬಳಸುವುದರಿಂದ ವಾತ ಹಾಗೂ ಪಿತ್ತ ದೋಷ ತಡೆಗಟ್ಟಬಹುದು. ಇದು ತ್ವಚೆಯನ್ನು ನುಣಪಾಗಿ ಹಾಗೂ ಕಾಂತಿಯುತದಿಂದ ಹೊಳೆಯುವಂತೆ ಮಾಡುತ್ತದೆ.

5) ಆಯುರ್ವೇದದಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಹೋಗಲಾಡಿಸಲು ಎಳ್ಳು ಬಳಸಿ ಮಾಡಿದ ಪುಡಿ, ಕಷಾಯ ಇವುಗಳನ್ನು ನೀಡಲಾಗುವುದು. ಎಳ್ಳು ತಿನ್ನುವುದರಿಂದ ಅನಿಯಮಿತ ಮುಟ್ಟು ತಡೆಗಟ್ಟಿ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುತ್ತದೆ.

6) ಎಳ್ಳು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಅದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

7) ಅವುಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

8) ಬೆಲ್ಲವು ದೇಹದಲ್ಲಿನ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣ, ಮಲಬದ್ಧತೆ ಮತ್ತು ವಾಯು ಮುಂತಾದ ಜೀರ್ಣಕಾರಿ ಅಸ್ವಸ್ಥತೆಗಳನ್ನು ತಡೆಯುತ್ತದೆ.

9) ಬೆಲ್ಲವು ನೈಸರ್ಗಿಕ ನಿರ್ವಿಶೀಕರಣವಾಗಿ ಕಾರ್ಯನಿರ್ವಹಿಸುತ್ತದೆ, ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ಮತ್ತು ಅದರ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಮೂಲಕ ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

10) ಬೆಲ್ಲದಲ್ಲಿರುವ ಕಬ್ಬಿಣ ಮತ್ತು ಫೋಲೇಟ್ ಅಂಶವು ಸರಿಯಾದ ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಮತ್ತು ಮುಟ್ಟಿನ ನೋವು ಮತ್ತು ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

11) ಬೆಲ್ಲವು ರಕ್ತವನ್ನು ಶುದ್ಧೀಕರಿಸುತ್ತದೆ, ಆರೋಗ್ಯಕರ ಮತ್ತು ಸ್ಪಷ್ಟವಾದ ಚರ್ಮಕ್ಕೆ ಕಾರಣವಾಗುತ್ತದೆ. ಇದು ಮೊಡವೆಗಳು, ಮೊಡವೆಗಳು ಮತ್ತು ಇತರ ಚರ್ಮದ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.

12)ಬಡವರ ಬಾದಾಮಿ ಕಡಲೆಕಾಯಿ ಅಥವಾ ಶೇಂಗಾವು ಜನ ಇಷ್ಟಪಡುವ ಕೆಲವು ಆಹಾರ ಪದಾರ್ಥಗಳಲ್ಲಿ ಹೆಸರು ಪಡೆದಿರುತ್ತದೆ. ಶೇಂಗಾ ಪ್ರೋಟೀನ್, ಫಾಲೆಟ್ ಕಾಪರ್, ಮ್ಯಾಂಗನೀಸ್, ಪೊಟ್ಯಾಷಿಯಮ್, ಕ್ಯಾಲ್ಷಿಯಂ, ಐರಾನ್, ಮೆಗ್ನೀಷಿಯಂ, ಸತು ಇನ್ನಿತರ ಅಂಶಗಳಿವೆ. ಇವೆಲ್ಲ ಅಂಶಗಳು ದೇಹದ ಶಕ್ತಿ ಹೆಚ್ಚಿಸುವುದಲ್ಲದೇ ದೇಹಕ್ಕೆ ಬೆಚ್ಚನೆಯ ಅನುಭವ ನೀಡುತ್ತದೆ.

13) ಕಡಲೇ ಕಾಯಿ ಬೀಜದಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಅನುಕೂಲಕರ. ಮೂಳೆಗಳು ಗಟ್ಟಿಯಾಗುವಿಕೆ ಸಹಾಯಕವಾಗುತ್ತದೆ. ನಾರಿನಾಂಶ ಹೆಚ್ಚಿರುವುದರಿಂದ ಜೀರ್ಣಶಕ್ತಿಗೆ ಅನುಕೂಲವಾಗುತ್ತದೆ.

ಎಳ್ಳು ಮತ್ತು ಬೆಲ್ಲವನ್ನು ಸೇವಿಸುವ ಇತರ ಕ್ರಮಗಳು

1) ಎಳ್ಳು ಮತ್ತು ಬೆಲ್ಲ ಎಂದರೆ ಕೇವಲ ಎಳ್ಳುಂಡೆ ಮಾತ್ರವೇ ಅಲ್ಲ, ನಿಮಗೆ ಇಷ್ಟವಾಗುವಂತಹ ಬೇರೆ ಯಾವುದೇ ತಿನಿಸನ್ನೂ ತಯಾರಿಸಬಹುದು. ಅಥವಾ ಇತರ ಸಾಮಾಗ್ರಿಗಳನ್ನು ಹಾಕಿ ವಿಶೇಷ ಖ್ಯಾದ್ಯವನ್ನೂ ತಯಾರಿಸಬಹುದು.
2) ಹಲವು ಕಡೆಗಳಲ್ಲಿ ರಾಗಿ ರೊಟ್ಟಿಯನ್ನು ಎಳ್ಳು ಮತ್ತು ಬೆಲ್ಲದೊಂದಿಗೆ ತಿನ್ನುತ್ತಾರೆ.
3) ಬೆಲ್ಲ, ಪುಡಿಮಾಡಿದ ಎಳ್ಳು ಮತ್ತು ಕೊಂಚ ಒಣಫಲಗಳ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಬಹುದು. ವಿಶೇಷವಾಗಿ ಅಶಕ್ತತೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದು ಉತ್ತಮವಾಗಿದೆ.
4) ಇವೆರಡನ್ನೂ ಕೊಂಚ ನೀರಿನಲ್ಲೆ ಬೆರೆಸಿ ದಪ್ಪನೆಯ ದೋಸೆ ಹಿಟ್ಟ್ ಮಾಡಿ ’ಮಾಲ್ಪುವಾ’ ದೋಸೆಯನ್ನೂ ಮಾಡಬಹುದು.
5) ಆಹಾರ ತಜ್ಞರ ಪ್ರಕಾರ, ಎಳ್ಳು, ಬೆಲ್ಲ ಮತ್ತು ತುಪ್ಪ ಅತ್ಯುತ್ತಮ ಕಾಂಬಿನೇಶನ್. ಇದು ಒಮೆಗಾ 3, 6 ಮತ್ತು 9ನ ಸಂಯೋಜನೆ. ಈ ಮೂರನ್ನೂ ಬಳಸಿ ಎಳ್ಳುಂಡೆ ತಯಾರಿಸಿ ಬಳಸುವುದು ದೇಹಕ್ಕೆ ಆಹಾರದಲ್ಲಿ ಸಮತೋಲನವನ್ನು ನೀಡುತ್ತದೆ.ಇದನ್ನು ಓದಿ – ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ

ಎಳ್ಳು ಜೊತೆ ಬೆಲ್ಲದ ಪಾತ್ರವೇನು?

ಜನವರಿ ತಿಂಗಳು ಎಂದರೆ ಚಳಿಗಾಲವಾಗಿದ್ದು ನಮ್ಮ ದೇಹ ಹೆಚ್ಚಿನ ಬಿಸಿಯನ್ನು ಉತ್ಪಾದಿಸಿ ದೇಹವನ್ನು ಬೆಚ್ಚಗಿಡಬೇಕಾಗುತ್ತದೆ. ಇದಕ್ಕೆ ಶಕ್ತಿಯ ಬಳಕೆಯಾಗಬೇಕು. ಈ ಶಕ್ತಿ ಮತ್ತು ಬಿಸಿಯನ್ನು ಎಳ್ಳು ಮತ್ತು ಬೆಲ್ಲ ಒದಗಿಸಿದಷ್ಟು ಉತ್ತಮವಾಗಿ ಬೇರಾವುದೇ ಸಾಮಾಗ್ರಿ ಒದಗಿಸುವುದಿಲ್ಲ. ಬೆಲ್ಲದ ಜೊತೆಗೆ ಎಳ್ಳು ತಿಂದಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಏನೇ ಆಗಲಿ ಬಿಸಿಯಾಗಬೇಕೆಂದರೆ ಇಂಧನ ಬೇಕು. ದೇಹದಲ್ಲಿ ಬೆಲ್ಲ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ, ಬೆಲ್ಲ ತಿಂದ ಎಳ್ಳನ್ನು ಶಕ್ತಿಯಾಗಿ ಪರಿವರ್ತಿಸಿ ದೇಹದ ಆರೋಗ್ಯ ವೃದ್ಧಿಸುತ್ತದೆ.

sowmya sanath

ಸೌಮ್ಯಾ ಸನತ್ ✍️

Copyright © All rights reserved Newsnap | Newsever by AF themes.
error: Content is protected !!