ವಿಜ್ಞಾನಿ ಸಿ.ಆರ್. ಸತ್ಯ ಅವರು ಬರೆದಿರುವ ಆಚೆ ಮನೆಯ ಸುಬ್ಬಮ್ಮ ಏಕಾದಶಿ ಉಪವಾಸ ಒಂದು ಪ್ರಸಿಧ್ಧ ಕವನ. “ಕೊರವಂಜಿ”ಯಲ್ಲಿ 1959ರಲ್ಲಿ ಪ್ರಕಟವಾದ ಈ ಕವನ ಅವರ ಕಾಲೇಜು ದಿನಗಳಲ್ಲಿ ಬರೆಯಲ್ಪಟ್ಟಿದ್ದು. ಇದರಲ್ಲಿ ಅವರು ಪಕ್ಕದ ಮನೆಯ ಒಬ್ಬ ಹಿರಿಯರನ್ನು ಸೂಚ್ಯವಾಗಿ ಪದದಲ್ಲಿ ಬಳಸಿಕೊಂಡು, ಹೇಗೆ ಉಪವಾಸ ದಾರಿ ತಪ್ಪಿದೆ ಎಂಬುದನ್ನು ತಮಾಷೆಯಾಗಿ ಹೆಣೆದಿದ್ದಾರೆ. ಬೆಳಗಿನಕಾಲ ಪ್ರಾರಂಭವಾಗುವ ಉದರಶೋಷಣೆ ಸಾಯಂಕಾಲ ಉಂಡು ಮಲಗುವವರೆಗೆ ಮುಂದುವರೆಯುತ್ತದೆ. ಇದೆಲ್ಲ ಸರಿಯೇ ಎಂದು ತಮ್ಮ ಕವನದ ಮೂಲಕ ಚಿಂತನೆಗೆ ನೂಕುತ್ತಾರೆ.
ಇಂದಿನ ದಿನದಲ್ಲಿ ಅನ್ನ ಊಟಮಾಡದಿದ್ದರೆ ಅದು ಉಪವಾಸ. ಅನ್ನದ ಬದಲಿಗೆ, ಗೋಧಿ, ಹಣ್ಣಿನ ರಸ, ಅವಲಕ್ಕಿ ಹೀಗೆ ಅನ್ಯ ಆಹಾರವನ್ನು ಭುಂಜಿಸುವುದನ್ನು ಕಾಣುತ್ತೇವೆ. ವೈಕುಂಠ ಏಕಾದಶಿಯ ಈ ಶುಭಸಮಯದಲ್ಲಿ ಉಪವಾಸವನ್ನು ಉಪ’ನಯನ’ದಿಂದ ನೋಡುವ ಪ್ರಯತ್ನ ಮಾಡೋಣ.
ಈ ಪದವನ್ನು ಸ್ವಲ್ಪ ಒಡೆದು ನೋಡಿದರೆ, ಉಪ ಮತ್ತು ವಾಸ ಎಂಬ ಎರಡು ಪದಗಳು ನಮಗೆ ದೊರೆಯುತ್ತದೆ. ವಾಸ ಎಂಬುದು ನಮಗೆ ಗೊತ್ತೇ ಇದೆ. ಉಪ ಎಂದರೆ ಏನು? ಉಪ ಎಂದರೆ ‘ಪಕ್ಕದಲ್ಲಿ’ ಅಥವಾ ‘ಹತ್ತಿರದಲ್ಲಿ’ ಎಂಬರ್ಥ ಬರುತ್ತದೆ. ಒಟ್ಟಿಗೆ ಓದಿದರೆ ‘ಪಕ್ಕದಲ್ಲಿ ಅಥವಾ ಹತ್ತಿರದಲ್ಲಿ ವಾಸಿಸು’ ಎಂಬ ಸೂಚನೆ ದೊರೆಯುತ್ತದೆ. ನಿಘಂಟಿನಲ್ಲಿ ನೋಡಿದರೆ ಕೂಡ ಇದೇ ಅರ್ಥವಿದೆ. ಅದರ ಜೊತೆಗೆ “ಆಹಾರವನ್ನು ಬಿಟ್ಟಿರುವುದು’ ಅಥವಾ “ಹಸಿದಿರುವುದು” ಎಂಬ ಅರ್ಥ ಕೂಡ ಇದೆ. ಹಾಗಾದರೆ, ಉಪವಾಸ ಎಂದರೆ ಅಹಾರವನ್ನು ತ್ಯಜಿಸಿ ಖಾಲಿ ಹೊಟ್ಟೆಯಲ್ಲಿತುವುದು ಎಂಬ ಅರ್ಥ ಬರುತ್ತದೆ. ಮತ್ತೂ ಆಳವಾಗಿ ನೋಡಿದರೆ, ಉಪ ಎಂಬ ಪದಕ್ಕೆ “ಮೇಲೆ” ಎಂಬ ಅರ್ಥ ಕೂಡ ಇದೆ. ಅಟ್ಟದ ಬದಲಿಗೆ ಉಪ್ಪರಿಗೆ ಪದಬಳಕೆಯನ್ನು ನಾವು ಕಾಣುತ್ತೇವೆ. ಹಾಗಾಗಿ ಉಪವಾಸ ಎಂದರೆ ‘ಎತ್ತರದಲ್ಲಿ ವಾಸಿಸು’ ಎಂಬ ವಿಶೇಷಾರ್ಥವನ್ನು ಕೂಡ ನಾವು ನೋಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಅಹಾರವನ್ನು ಬಿಟ್ಟು ಉನ್ನತವಾದ ಚಿಂತನೆಯಲ್ಲಿ ಮುಳುಗಿರು ಎಂದು ಇದರ ಅರ್ಥ. ಉನ್ನತವಾದ ಚಿಂತನೆ ಯಾವುದೆಂದು ಅವರವರ ನಿಲುವಿಗೆ ಬಿಟ್ಟಿದ್ದು.
ಭಾರತೀಯ ವಿಚಾರಧಾರೆಯಲ್ಲಿ ಏಕಾದಶಿಗೆ ಬಹಳ ಮಹತ್ವ. ಚಾಂದ್ರಮಾನದ ಹನ್ನೊಂದನೆಯ ದಿನ ಏಕಾದಶಿ ಆಚರಿಸಲಾಗುತ್ತದೆ. ಅಂದು ನಿರಾಹಾರ, ಪ್ರಾರ್ಥನೆ ಹಾಗೂ ಸಚ್ಚಿಂತನೆ ಮಾಡಬೇಕು ಎಂಬು ವಿದಿತ. ಇಂದು ಆಧ್ಯಾತ್ಮಿಕವಾದ ಚಿಂತನೆಯ ಜೊತೆಜೊತೆಗೆ ವೈಜ್ಞಾನಿಕ ಆಧಾರಗಳನ್ನು ಮತ್ತು ಪ್ರಯೋಜನಗಳನ್ನು ಉಪವಾಸದೊಂದಿಗೆ ಜೋಡಿಸುತ್ತಾರೆ. ಏಕಾದಶಿಯೆಂಬುದು ಚಂದ್ರನ ಚಲನೆಯ ಒಂದು ಭಾಗ. ಚಂದ್ರನ ಚಲನೆಗೂ ಭೂಮಿಯಲ್ಲಿ ಇರುವ ನೀರಿನಂಶಕ್ಕೂ ಸಂಬಂಧ ಇದೆ. ಶರಧಿಯ ನೀರು ಹುಣ್ಣಿಮೆಗೆ ಮೇಲೇರುವುದು ತಿಳಿದೇ ಇದೆ. ನಮ್ಮ ದೇಹದಲ್ಲಿ ನೀರಿನ ಪ್ರಮಾಣ 71 ಪ್ರತಿಶತಃ ಇದೆ. ಹಾಗಾಗಿ ಚಂದ್ರನ ಪರಿಣಾಮ ನಮ್ಮ ದೇಹದ ಮೇಲೆ ಆಗಿಯೇ ಆಗುತ್ತದೆ. ಎಷ್ಟಿದ್ದರೂ ಚಂದ್ರ ನಮ್ಮ ಸೋದರಮಾಮನಲ್ಲವೇ?
ಏಕಾದಶಿಯಂದು ನಿರಾಹಾರವೆಂದು ತಿಳಿದಿದ್ದೇವೆ. ಅಥವಾ ಕರಗಲು ಸುಲಭವಾಗುವಂತಹ ಅಹಾರವನ್ನು ಸೇವಿಸುವ ಕ್ರಮವಿದೆ. ಇದು ಶರೀರದ ಮುಖ್ಯ ಅಂಗವಾದ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರಕುತ್ತದೆ. ಹೆಚ್ಚಿನ ಶ್ರಮವಿಲ್ಲದೆ ದೇಹವ ಕೃಶಗೊಂಡಿರುವ ಅಂಗಗಳನ್ನು ಅಥವಾ ಅಣುಗಳನು ಸರಿಪಡಿಸಲು ತನ್ನ ಶಕ್ತಿಯನ್ನು ಉಪಯೋಗಿಸಿಕೊಳ್ಳಬಹುದು. ವೈಜ್ಞಾನಿಕ ಸಂಶೋಧನೆಗಳು ಕೂಡ ಇದನ್ನು ಸಮರ್ಥಿಸುತ್ತವೆ. ಇವುಗಳ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುವ ಕೆಲಸವನ್ನು ಉಪವಾಸದಿಂದ ಸಾಧಿಸಬಹುದು. ಇನ್ನು ಈ ಕಾಲದ ಮುಖ್ಯ ಸಮಸ್ಯೆಯಾದ ಅತಿತೂಕವನ್ನು ನಿಯಂತ್ರಿಸುವ ಉಪಾಯ ಸಿದ್ದಿಸುತ್ತದೆ. ಗೀತೆಯ ಆರನೆಯ ಅಧ್ಯಾಯದ ಹದಿನಾರು ಮತ್ತು ಹದಿನೇಳನೆಯ ಶ್ಲೋಕ ಕೂಡ ಇದನ್ನೇ ಹೇಳುತ್ತದೆ.
ಶರೀರದ ಇನ್ನೊಂದು ಬಹುಮುಖ್ಯ ಅಂಗ ಮನಸ್ಸು. ಕಣ್ಣಿಗೆ ಕಾಣದಿದ್ದರೂ ನಮ್ಮನ್ನೆಲ್ಲಾ ನಿತ್ಯ ಆಟವಾಡಿಸುತ್ತದೆ. ಇಂತಹಾ ಕಣ್ಣಿಗೆ ಕಾಣಿಸದ ಮನಸ್ಸನ್ನು ಬಗ್ಗಿಸಲು ಉಪವಾಸ ಸಹಾಯಮಾಡುತ್ತದೆ. ಹೆಚ್ಚಿನ ಶ್ರಮವಿಲ್ಲದ, ಏಕಾಗ್ರತೆಯ ಮತ್ತು ಧ್ಯಾನದ ಸಮಯ ಮನಸಿಗೆ ನೆಮ್ಮದಿಯನ್ನು ಕೊಡುತ್ತದೆ. ಮಾನವನಿಗೆ ಎಲ್ಲಕ್ಕಿಂತಲೂ ಹೆಚ್ಚು ಬೇಕಿರುವುದು ಶಾಂತಿ ಮತ್ತು ನೆಮ್ಮದಿ. ಅದು ಉಪವಾಸದಿಂದ ಸಾಧ್ಯವಾಗುತ್ತದೆ. ಇತ್ತೀಚೆಗೆ ಮೈಂಡ್ ಫುಲ್ನೆಸ್ಸ್ ಎಂಬುದು ಎಲ್ಲಾ ಕಡೆ ಮುನ್ನೆಲೆಗೆ ಬಂದಿದೆ. ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ಕೂಡ ಇದಕ್ಕೆ ಒತ್ತು ಕೊಡುತ್ತಿವೆ. ಹಾಗೆಯೇ ಅದಕ್ಕಾಗಿ ಹಣವನ್ನು ಕೂಡ ವ್ಯಯಿಸುತ್ತಿವೆ. ಹಾಗಾಗಿ ನಮ್ಮದೇ ಆದ ಅಂದರೆ ಭಾರತೀಯ ದಾರಿಯಾದ ಉಪವಾಸವನ್ನು ನಾವೇ ಬಳಸದಿದ್ದರೆ ಅದಕ್ಕೆ ಯಾರು ಹೊಣೆ?
ಏಕಾದಶಿ ಉಪವಾಸದ ಆಧ್ಯಾತ್ಮಿಕ ಬೇರುಗಳು ಆಳಗಿದ್ದರೂ, ಅದರ ವೈಜ್ಞಾನಿಕ ಆಧಾರವು ಎಲ್ಲರಿಗೂ ಪ್ರಸ್ತುತವಾಗಿದೆ. ಉಪವಾಸದ ಆರೋಗ್ಯ ಪ್ರಯೋಜನಗಳನ್ನು ಮೆಚ್ಚಲು ನಾವು ಭಕ್ತಿಯನ್ನು ಹೊಂದಿರಬೇಕಾಗಿಲ್ಲ. ಏಕಾದಶಿ ಉಪವಾಸವನ್ನು ಅಳವಡಿಸಿಕೊಳ್ಳುವುದು ಅಥವಾ ಯಾವುದೇ ರೀತಿಯ ನಿಯಮಿತ ಉಪವಾಸ, ಜೀವನಕ್ಕೆ ಸಮತೋಲನವನ್ನು ತರುವ ಒಂದು ಸೌಮ್ಯವಾದ ಮಾರ್ಗವಾಗಿದೆ.
ಉಪವಾಸ ಬುದ್ಧಿವಂತಿಕೆಯಿಂದ ಮಾಡುವುದು ಅತ್ಯಗತ್ಯ ಎಂದು ಎಲ್ಲರೂ ತಿಳಿಯಬೇಕು. ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿದ್ದರೆ, ಯಾವುದೇ ಉಪವಾಸದ ದಿನಚರಿಯನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಹೆಚ್ಚು ನೀರು ಕುಡಿಯಬೇಕು ಮತ್ತು ಶ್ರಮದಾಯಕ ಚಟುವಟಿಕೆಯನ್ನು ತಪ್ಪಿಸಬೇಕು. ಉಪವಾಸವನ್ನು ಬಿಡುವ ವೇಳೆ ಬೆಳಕು, ಪೌಷ್ಟಿಕಾಂಶಭರಿತ ಆಹಾರಗಳ ಮೇಲೆ ಗಮನ ಕೇಂದ್ರೀಕರಿಸಬೇಕು.ಇದನ್ನು ಓದಿ –ಮೋಕ್ಷವನ್ನು ನೀಡುವ “ಮೋಕ್ಷದಾ ಏಕಾದಶಿ (ವೈಕುಂಠ ಏಕಾದಶಿ )”
ಏಕಾದಶಿ ಉಪವಾಸವು ಪ್ರಾಚೀನ ಆಚರಣೆಗಳಲ್ಲಿ ಹುದುಗಿರುವ ಬುದ್ಧಿವಂತಿಕೆಯ ಕುರುಹಾಗಿದೆ. ಅದರ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ಪ್ರಕೃತಿಯೊಂದಿಗೆ ಸಮನ್ವಯಗೊಳಿಸುವ, ಯೋಗಕ್ಷೇಮವನ್ನು ಉತ್ತೇಜಿಸುವ ಮತ್ತು ನಮ್ಮನ್ನು ‘ನಮ್ಮ’ ಹತ್ತಿರಕ್ಕೆ ತರುವ ವಿಚಾರ ಎಂಬುದನ್ನು ಅರಿಯಬೇಕು. ಹಾಗಾದರೆ ಅದನ್ನು ನಮಗಾಗಿ ಏಕೆ ಪ್ರಯತ್ನಿಸಬಾರದು? ನಂಬಿಕೆ, ಆರೋಗ್ಯ, ಅಥವಾ ಕುತೂಹಲಕ್ಕಾಗಿಯಾದರೂ ಏಕಾದಶಿ ಪಾಲಿಸಬಹುದು. ನಮ್ಮ ಬಿಡುವಿಲ್ಲದ ಜೀವನದಲ್ಲಿ ವಿರಾಮ, ಆನಂದ ಮತ್ತು ಶಾಂತಿಯನ್ನು ಯಾಕೆ ಪಡೆಯಬಾರದು?
ಸಚಿನ್ ಮುಂಗಿಲ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ಉತ್ತರ ಜಿಲ್ಲಾ ಸಂಯೋಜಕರು. ಚರವಾಣಿ – 9845463014.
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ