- ೨೦ನೇ ಶತಮಾನದ ಅಪರೂಪದ ಪ್ರತಿಭೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯ ೧೨೦ನೇ ಜಯಂತಿ ಇಂದು
- ಇಂದಿನ ಯುವ ಜನಾಂಗ, ವಿದ್ಯಾರ್ಥಿಗಳು ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ವೈಚಾರಿಕತೆಯ ಜ್ಞಾನ ಬಿತ್ತಿದ ರಸಋಷಿ
ತಮ್ಮ ನೂರಕ್ಕೂ ಹೆಚ್ಚು ಕೃತಿಗಳಲ್ಲಿ ವಿಚಾರ ಕ್ರಾಂತಿಗೆ ಒತ್ತು ನೀಡಿ ವೈಚಾರಿಕ ಪ್ರಜ್ಞೆಯನ್ನು ಬಿತ್ತುವ ಮೂಲಕ ವಿಶ್ವಮಾನವರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ಅವರ ೧೨೦ನೇ ಜಯಂತಿ ಅಂಗವಾಗಿ ಪ್ರಸ್ತುತಪಡಿಸಿರುವ ಸದರಿ ಲೇಖನದಲ್ಲಿ ಅವರ ಹುಟ್ಟು ಮತ್ತು ಸಾವಿನ ಕುರಿತು ಮಾಹಿತಿ ನೀಡುವುದಕ್ಕಿಂತ ಕುವೆಂಪು ಅವರು ನಮಗೆ ಇಂದಿಗೂ ಏಕೆ ಪ್ರಸ್ತುತ, ಕನ್ನಡ ನಾಡಿಗೆ ಅವರ ಕೊಡುಗೆ ಏನು, ಮುಂದಿನ ಪೀಳಿಗೆ ಅವರನ್ನು ಏಕೆ ಸ್ಮರಿಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದಿಷ್ಟು ವಿಚಾರಗಳನ್ನು ªಸಾಹಿತಿಯನ್ನು ಸಾಹಿತ್ಯಾಸಕ್ತರಿಗಾಗಿ ಮತ್ತು ನಾಡಿನ ಸಮಸ್ತ ಜನತೆಗಾಗಿ ಹಂಚಿಕೊಳ್ಳಲಾಗಿದೆ.
ಇನ್ನು ಕುವೆಂಪು ಅವರನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಅವರು ರಚಿಸಿರುವ ಕೃತಿಗಳನ್ನು ಓದಿದಾಗ ಮಾತ್ರ ಪ್ರತಿಯೊಬ್ಬರು ವಿಶ್ವಮಾನವ ಸಂದೇಶ ಅರಿಯಲು ದಾರಿ ಮತ್ತು ಬೆಳಕು ಸಿಗಲಿದೆ.
ಕುವೆಂಪು ಅವರು ಕನ್ನಡ ನಾಡಿನ ಪ್ರಸಿದ್ಧ ಕವಿ, ಕಾದಂಬರಿಕಾರ, ನಾಟಕಕಾರ, ರಾಮಾಯಣ, ಮಹಾಭಾರತದಂತಹ ಮಹಾ ಕಾನ್ಯದ ನಂತರ ಬೇರೆ ಯಾರಿಂದಲೂ ಮಹಾ ಕಾವ್ದ ರಚನೆ ಆಗಲು ಸಾಧ್ಯವಿಲ್ಲವೆಂಬ ಮಾತು ಸುಳ್ಳಾಗಿಸಿ ಮೂಲ ರಾಮಾಯಣಕ್ಕೆ ಚ್ಯುತಿ ಬರದಂತೆ ಹಾಗೂ ಸಾಮಾನ್ಯ ಜನರಿಗೆ ರಾಮಾಯಣದ ಬಗ್ಗೆ ಪ್ರೀತಿ ಮತ್ತು ಗೌರವ ಹೆಚ್ಚಾಗುವ ರೀತಿಯಲ್ಲಿ ಶ್ರೀ ರಾಮಾಯಣ ದರ್ಶಣ ಕೃತಿಯನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ದೈತ್ಯ ಪ್ರತಿಭೆ ಎನಿಸಿಕೊಂಡಿದ್ದಾರೆ.
ಕುವೆಂಪು ಇತರರಂತೆ ಸಾಹಿತ್ಯ ರಚನೆ ಮಾಡಿದ್ದರೆ ಅವರು ವಿಶ್ವ ಮಾನವ ಎಂದು ಖ್ಯಾತಿ ಸಂಪಾದನೆ ಮಾಡಲು ಆಗುತ್ತಿರಲಿಲ್ಲ, ನುಡಿದಂತೆ ನಡೆದಿದ್ದಾರೆ, ತಾವು ಬರೆದ ಸಾಹಿತ್ಯದಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕು, ಜಾತಿ,ವರ್ಗದಿಂದ ಅಳೆಯದೆ ಎಲ್ಲರನ್ನು ಪ್ರೀತಿಸಬೇಕು, ಎಲ್ಲರ ಒಳತಿಗಾಗಿ ಸೇವೆ ಮಾಡಬೇಕೆಂಬುದನ್ನು ಹೇಳಿರುವುದರಿಂದ ಕುವೆಂಪು ವಿಶೇಷ ವ್ಯಕ್ತಿಯಾಗಿ ಕಾಣುತ್ತಾರೆ.
ಕುವೆಂಪು ಎಲ್ಲರಂತೆ ಕವಿ, ಕಾದಂಬರಿಗಾರ ಆಗಿದ್ದರೆ ಯಾರೂ ಸಹ ಅವರ ಬಗ್ಗೆ ಚಿಂತನೆ ಮಾಡುತ್ತಿರಲಿಲ್ಲ, ಕುವೆಂಪು ಅವರು ಇಂದಿಗೂ ಪ್ರಸ್ತುತವಾಗಲು ಅವರಲ್ಲಿದ್ದ ಕನ್ನಡ ಪ್ರೇಮ, ಪರಿಸರ ಪ್ರೇಮ, ಮಾನವತಾವಾದ ಹಾಗೂ ವೈ ಚಾರಿಕತೆಯ ಜ್ಞಾನ ಪ್ರಮುಖವಾದದ್ದು.
ಕುವೆಂಪು ಅವರು ತಮಗಾಗಿ ಕನ್ನಡವನ್ನು ಆರಾಧಿಸಿದ್ದರೆ ಜಗದ ಕವಿ, ಯುಗದ ಕವಿ ಆಗುತ್ತಿರಲಿಲ್ಲ, ಕನ್ನಡವನ್ನು ಪ್ರತಿಯೊಬ್ಬರು ಪ್ರೀತಿಸುವಂತೆ, ಗೌರವಿಸುವಂತೆ ಮಾಡಿದ್ದು ವಿಶೇಷ.
ಇಂದು ನಾಡಿನ ಪ್ರತಿ ಊರಿನಲ್ಲಿ, ಗಲ್ಲಿ ಗಲ್ಲಿಗಳಲ್ಲಿ: ಜಯ ಭಾರತ ಜನನಿಯ ತನುಜಾತೆ, ಜಯಯೇ ಕರ್ನಾಟಕ ಮಾತೆ…” ಎಂದು ಹೇಳುವ ನಾಡ ಗೀತೆ ವಿಶ್ವದ ಗಮನ ಸೆಳೆದಿದ್ದು ಇದು ಕುವೆಂಪು ಕನ್ನಡಕ್ಕೆ ನೀಡಿದ ಅಪಾರ ಕೊಡುಗೆ ಎಂದರೆ ತಪ್ಪಾಗಲಾರದು.
ರೈತರ ಬದುಕು, ಬವಣೆ ಬಗ್ಗೆ ಇದ್ದ ಕಾಳಜಿ ಹಾಗೂ ರೈತರ ಮೇಲಿನ ಗೌರವಕ್ಕಾಗಿ ರೈತ ಗೀತೆಯನ್ನು ರಚಿಸುವ ಮೂಲಕ ಮಾದರಿ ಕವಿಯಾಗಿದ್ದಾರೆ.
ಕುವೆಂಪು ಕೇವಲ ಕನ್ನಡದ ಮೇಲೆ ಪ್ರೀತಿ ತೋರಿ ದೊಡ್ಡ ವ್ಯಕ್ತಿ ಅನಿಸಿಕೊಂಡಿಲ್ಲ, ಅವರಲ್ಲಿದ್ದ ಪರಿಸರ ಪ್ರೇಮವೂ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿದೆ.
ಪರಿಸರವನ್ನೇ ದೇವರು ಎಂದು ಭಾವಿಸಿದ್ದ ಕುವೆಂಪು ಕಾಡಿನ ಸಂಪತ್ತು ಉಳಿಸಲು ತಮ್ಮ ಸಾಹಿತ್ಯದಲ್ಲಿ ಜಾಗ ನೀಡಿದ್ದಾರೆ, ಮಲೆನಾಡಿನ ಕೂವರರಾದ ಕುವೆಂಪು “ಮಲೆಗಳಲ್ಲಿ ಮದುಮಗಳು” ಹಾಗೂ “ಕಾನೂರು ಹೆಗ್ಗಡತಿ ಕಾದಂಬರಿ” ರಚಿಸಿ ಪರಿಸರದ ಮೇಲೆ ಅವರಿಗಿರುವ ಕಾಳಜಿ ಮತ್ತು ಪ್ರೀತಿಯನ್ನು ಸಾಕ್ಷಿಕರಿದ್ದಾರೆ.
ಕುವೆಂಪು ಅವರು ಏಕೆ ಪ್ರಸ್ತುತ ಎಂಬುದಕ್ಕೆ ಮತ್ತೊಂದು ಉತ್ಕೃಷ್ಠ ಕಾರಣವೆಂದರೆ ಅವರಲ್ಲಿದ್ದ ಮಾನವ ಪ್ರೇಮ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಬೇಕು, ಜಾತಿಯಿಂದ ಮನುಷ್ಯನ ಯೋಗ್ಯತೆಯನ್ನು ಅಳೆಯಬಾರದು, ಜಾತಿ ಎಂಬ ಕಾರಣಕ್ಕೆ ದೂರ ಇಡಬಾರದು, ಜಾತಿ ಮನು ವಿರೋಧಿ ಆಗಬರದು ಎಂದು ಕುವೆಂಪು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸುವ ಮೂಲಕ ಮಾನವ ಪ್ರೀತಿಯನ್ನು ಮೆರೆದಿದ್ದಾರೆ. ಇದು ಅವರು ರಚಿಸಿರುವ ಓ ನನ್ನ ಚೇತನ, ಆಗು ನೀ ಅನಿಕೇತನ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಜಲಗಾರ, ಮನುಜ ಮತ ವಿಶ್ವಪಥ, ಬೆರಳ್ಗೆ ಕೊರಳ್ ಕೃತಿಗಳಲ್ಲಿ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ.
ಇನ್ನು ಮೂಡನಂಬಿಕೆ ವಿರುದ್ಧ ಜಾಗೃತಿ ಮೂಡಿಸಲು ಅವರು ಬರೆದಿರುವ ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಭೆಯನ್ನು ಪೂಜಿಸೋಣ ಎಂಬ ಹಾಡು ವೈಚಾರಿಕತೆಯ ಅವಶ್ಯಕತೆಯನ್ನು ತಿಳಿಸಿಕೊಟ್ಟಿದೆ.
ಕುವೆಂಪು ನೂರು ದೇವರನ್ನು ನೂಕಾಚೆ ಎಂದು ಕವಿತೆ ಬರೆದ ಮಾತ್ರಕ್ಕೆ ಅವರು ನಾಸ್ತಿಕರಾಗಿದ್ದರು ಎಂದರ್ಥವಲ್ಲ, ದೇವರ ಹೆಸರಲ್ಲಿ ನಡೆಯುವ ಅನಾಚಾರಗಳ ಬಗ್ಗೆ ವಿಸ್ಕೃತವಾಗಿ ತಿಳಿಸಿ ಭರತಾಂಭೆಗಿAತ ಯಾರೂ ದೊಡ್ಡವರಲ್ಲವೆಂದು ಪ್ರತಿಪಾದಿಸಿ ಜಗತ್ತಿನ ತಮನ ಸೆಳೆದಿದ್ದಾರೆ.
ಇದೇ ರೀತಿ ಮಂದಿರ,ಮಸೀದಿ, ಚರ್ಚ್ಗಳಿಂದ ಹೊರ ಬಂದು ಹೊರಗೆ ಇರುವ ಬಡವರನ್ನೇ ದೇವರೆಂದು ಕಾಣಿ, ಇವರನ್ನು ಪ್ರೀತಿಸಿ, ಸೇವೆ ಮಾಡಿ ಎಂದು ಸಂದೇಶ ನೀಡುವ ಮೂಲಕ ಮನು ಕುಲದ ಕರ್ತವ್ಯಗಳನ್ನು ತಿಳಿಸಿಕೊಟ್ಟಿದ್ದಾರೆ.
ವಿಶ್ವಮಾನವರಾಗೊಣ:
ಈ ಎಲ್ಲಾ ಕಾರಣಕ್ಕೆ ಕುವೆಂಪು ನಮಗೆ ಪ್ರಸ್ತುವಾಗಿದ್ದು ಕುವೆಂಪು ಅವರ ಜಯಂತಿ ದಿನ, ಪುಣ್ಯ ಸ್ಮರಣೆ ದಿನ ಅವರನ್ನು ಹಾಡಿ ಹೊಗಳಿ ಕರ್ತವ್ಯ ಮರೆಯುವ ಬದಲು “ಇರಬೇಕು ಇರುವಂತೆ ತೊರೆದು ಸಾವಿನ ಚಿಂತೆ … ಮಳೆ ಸುರಿಸಿ ಹಗುರಾದ ಮುಗಿಲಿನಂತೆ…
ತಾನು ಬಿಸಿಲಿನಲ್ಲಿ ನಿಂತು ತನ್ನ ಬಳಿ ಬರುವವರಿಗೆ ತಣ್ಣನೆಯ ಆಸರೆಯ ನೆರಳ ಕೊಟ್ಟು… ಎಂಬ ಕವಿತೆಯನ್ನು ಅರ್ಥ ಮಾಡಿಕೊಂಡು ಬದುಕಿದರೆ ಮನುಜ ಧರ್ಮ ಧರ್ಮದ ಕಿಮ್ಮತ್ತು ಹೆಚ್ಚುತ್ತದೆ ಎಂಬುದನ್ನು ಅರಿತು ಬಾಳಿದರೆ ವಿಶ್ವ ಮಾನವ ಸಂದೇಶ ಮುಂದಿನ ಪೀಳಿಗೆಗೆ ವರದಾನವಾಗುತ್ತದೆ.
ಕುವೆಂಪು ಬಗ್ಗೆ ದಿಗ್ಗಜರ ಮಾತು:
- ಕುವೆಂಪು ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ‘ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.- ದ.ರಾ.ಬೇಂದ್ರೆ.
- ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ_ ಬಿ.ಎಂ.ಶ್ರೀ.
- ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿAದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ. – ಡಿ.ಎಲ್.ನರಸಿಂಹಾಚಾರ್
- ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ._
- ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ._ ಹಾ.ಮಾ.ನಾಯಕ
_ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.-ದೇಜೆಗೌ
-ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ – ಆತ್ಮಜ್ಞಾನ – ಪುಟ್ಟಪ್ಪನವರಿಗೆ ಚಿಕ್ಕಂದಿನಿAದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.-
ಕೋ.ಚೆನ್ನಬಸಪ್ಪ.
ವಿಶೇಷ ಲೇಖನ:
ಪಾ.ಶ್ರೀ.ಅನಂತರಾಮ್
More Stories
₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ