ಚಳಿಗಾಲ ಬಂತೆಂದರೆ ಸಾಕು, ಮೈ ಕೊರೆಯುವ ಚಳಿ ಒಂದೆಡೆಯಾದರೆ ಬಿಡದ ಕಾಡುವ ಆರೋಗ್ಯ ಸಮಸ್ಯೆಗಳು ಮತ್ತೊಂದೆಡೆ. ಈ ವೇಳೆಯಲ್ಲಿ ಆರೋಗ್ಯ ಕೈ ಕೊಡುವುದರ ಜೊತೆಗೆ ಚರ್ಮದ ಕಾಂತಿಯು ಹದಗೆಡುತ್ತವೆ ಬದಲಾಗುತ್ತಿರುವ ಹವಾಮಾನವು ಆರೋಗ್ಯ ಹಾಗೂ ತ್ವಚೆ ಎರಡರ ಮೇಲೂ ಪರಿಣಾಮ ಬೀರುತ್ತದೆ. ಬದಲಾಗುವ ಹವಾಮಾನಕ್ಕೆ ತಕ್ಕಂತೆ ನಾವು ಉಡುಪು, ಆಹಾರ ಎಲ್ಲಾ ವಿಚಾರದಲ್ಲೂ ಜಾಗ್ರತೆ ವಹಿಸಬೇಕು. ಹಾಗೇ ಚಳಿಗಾದಲ್ಲಿ ಕೂಡಾ. ತಣ್ಣನೆಯ ಗಾಳಿಯಿಂದ ಚರ್ಮವು ಒಣಗಿ ನಿರ್ಜೀವವಾಗುತ್ತದೆ. ಇದರಿಂದ ಚರ್ಮ ಬಹಳ ಶುಷ್ಕವಾಗಿರುತ್ತದೆ.
ಚಳಿಗಾಲದಲ್ಲಿ ಚರ್ಮದ ಆರೈಕೆಗೆ ವಿಶೇಷ ಗಮನ ಹರಿಸುವುದು ಅಗತ್ಯ. ಚಳಿಗೆ ಕೈಕಾಲುಗಳ ಚರ್ಮಗಳು ಬಿರುಕು ಬಿಟ್ಟುಕೊಂಡು ಒಡೆದು ಹೋಗಿ ರಕ್ತ ಸೋರುವುದು, ನಡೆಯಲು ನೋವಾಗುವುದು, ತುಟಿ ಒಡೆಯುವುದು, ಮೈ ಕೈ ಬಿಳಿಚಿಕೊಳ್ಳುವುದು ಇತ್ಯಾದಿ ಸಮಸ್ಯೆ ಕಂಡುಬರುತ್ತದೆ. ಚರ್ಮದ ರಕ್ಷಣೆ, ಆರೈಕೆಗಾಗಿ ಇಲ್ಲಿವೆ ಕೆಲವು ಸುಲಭ ಪರಿಹಾರಗಳು.
- ಮುಖಕ್ಕೆ ಅಥವಾ ದೇಹಕ್ಕೆ ಕ್ರೀಂ ಹಚ್ಚಿಕೊಳ್ಳುವ ಮುನ್ನ ತ್ವಚೆಯ ಅಗತ್ಯತೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿಬೇಕು. ನೀರಿನ ಸೇವನೆಯೇ ತ್ವಚೆಯನ್ನು ಸಂರಕ್ಷಿಸುವ ಸುಲಭ ವಿಧಾನವಾದ್ದರಿಂದ ಹೇರಳವಾಗಿ ನೀರು ಕುಡಿಯುವುದು ಒಳ್ಳೆಯದು. ದೇಹ ಮತ್ತು ಚರ್ಮದ ನೀರಿನ ಪ್ರಮಾಣವು ಆಹಾರ ಸೇವನೆ ಮೇಲೆ ಪರಿಣಾಮ ಬೀರುತ್ತದೆ. ನೀರಿನಂಶ ಹೊಂದಿರುವ ಸಮೃದ್ಧ ಆಹಾರ ಸೇವಿಸಿದಾಗ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಸ್ಟ್ರಾಬೆರಿ, ಕಿತ್ತಳೆ, ಬಾಟಲ್ ಸೋರೆಕಾಯಿ, ಚೀನೀಕಾಯಿ, ಕಲ್ಲಂಗಡಿ ಹಣ್ಣು, ಜ್ಯೂಸ್‌ಗಳನ್ನು ಸೇವಿಸುತ್ತಿರುವುದು ಒಳ್ಳೆಯದು. ರೋಗ ನಿರೋಧಕ ಶಕ್ತಿಯುಳ್ಳ ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿ, ಪೆಕನ್ಸ್, ಪೆಕಾನ್, ರಸ್ಬೆರ್ರಿ, ಬೀಟ್’ರೂಟ್, ಪಾಲಾಕ್ ಸೊಪ್ಪಿನ ಸೇವನೆ ಚರ್ಮಕ್ಕೆ ಎದುರಾಗುವ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ಚರ್ಮದ ಆರೈಕೆಗೆ ಕೇವಲ ಕ್ರೀಮ್ ಗಳನ್ನು ಹಚ್ಚುವುದಷ್ಟೇ ಮುಖ್ಯವಾಗುವುದಿಲ್ಲ. ನಾವು ಸೇವನೆ ಮಾಡುವ ಆಹಾರಗಳೂ ಕೂಡ ಮುಖ್ಯವಾಗುತ್ತದೆ. ಆರೋಗ್ಯಕರ ಆಹಾರ ಚರ್ಮವನ್ನು ರಕ್ಷಣೆ ಮಾಡುತ್ತದೆ. ವಾಲ್’ನಟ್, ಬಾದಾಮಿ ಎಣ್ಣೆ, ಬೆಣ್ಣೆಗಳನ್ನು ಸೇವನೆ ಮಾಡುವುದರಿಂದ ದೇಹದ ಚರ್ಮ ಉತ್ತಮವಾಗಿರುತ್ತದೆ.
- ವಿಟಮಿನ್ ಸಿ ಇರುವಂತಹ ಆಹಾರ ಸೇವೆ ಮಾಡುವುದರಿಂದ ದೇಹದಲ್ಲಿ ಎದುರಾಗುವ ನಿರ್ಜಲೀಕರಣವನ್ನು ತಡೆಯುತ್ತದೆ. ಚರ್ಮದ ವರ್ಣ ಸುಧಾರಿಸಲು ಕಾಲಜನ್ ಮತ್ತು ಎಲಾಸ್ಟಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ.
- ಆಲ್ಕೋಹಾಲ್, ಟೀ, ಕಾಫಿ ಹೆಚ್ಚಾಗಿ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಹಾಳಾಗುತ್ತದೆ. ಕಾರ್ಬೋಹೈಡ್ರೇಟ್’ವುಳ್ಳ ಆಹಾರ ಸೇವನೆಗಳನ್ನು ನಿಯಂತ್ರಿಸುವುದೂ ಕೂಡ ಚರ್ಮವನ್ನು ಒಣಗುವಂತೆ ಮಾಡುತ್ತದೆ. ಚರ್ಮದ ಒಣಗದಂತೆ ಮಾಡಲು ನೀರು ಅತ್ಯುತ್ತಮ ಪರಿಹಾರವೆಂದೇ ಹೇಳಬಹುದು. ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಚಳಿಗಾಲದಲ್ಲಿ ಕನಿಷ್ಟ ಎಂದರೂ 8 ಲೋಟಗಳಷ್ಟು ನೀರು ಕುಡಿಯಬೇಕು. ಜ್ಯೂಸ್ ಗಳು ಹಾಗೂ ಮಜ್ಜಿಗೆಯನ್ನು ದಿನನಿತ್ಯದ ಆಹಾರ ಪದ್ಧತಿಗಳಲ್ಲಿ ಅಳವಡಿಸಿಕೊಳ್ಳುವುದು ಉತ್ತಮ
- ಬೆಚ್ಚಗಿನ ನೀರಿನ ಸ್ನಾನ: ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಅಪಾಯ. ಈ ಕಾಲದಲ್ಲಿ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಕು ಎನಿಸುವುದು ಸಹಜ. ಆದರೆ ಬೆಚ್ಚಗಿನ ನೀರನ್ನು ಮಾತ್ರ ಬಳಸಿ. ತುಂಬಾ ಬಿಸಿ ನೀರನ್ನು ಸ್ನಾನಕ್ಕೆ ಬಳಸಬೇಡಿ. ಇದರಿಂದ ಚರ್ಮ ಇನ್ನಷ್ಟು ಒಣಗುತ್ತದೆ. ಚರ್ಮದ ಹೊರಪದರ ಪಕಳೆ ಏಳುವುದು, ತಲೆಹೊಟ್ಟು ಹಾಗೂ ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ಶೀಘ್ರವಾಗಿಸಬಹುದು.
- ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯ. ಲೋಳೆಸರವನ್ನು ಯಾವ ಬಗೆಯ ಚರ್ಮದವರೂ ಧಾರಾಳವಾಗಿ ಬಳಸಬಹುದು. ಅಲೋವೆರಾದ ಸಿಪ್ಪೆ ಹಾಗೂ ಮುಳ್ಳನ್ನು ಪ್ರತ್ಯೇಕಿಸಿ ಬಟ್ಟಲೊಂದಕ್ಕೆ ಲೋಳೆ ಸರದ ತಿರುಳನ್ನು ತೆಗೆದುಕೊಂಡು, ನಿಂಬೆ ರಸ ಹಾಗೂ ಅರಿಶಿಣವನ್ನು ಬೆರೆಸಿ, ಜೆಲ್‌ನಂತೆ ಇದನ್ನು ಮುಖಕ್ಕೆ, ಮೊಣಕೈ ತುದಿಗಳಿಗೆ ಲೇಪಿಸಿ, ಹದಿನೈದು ನಿಮಿಷಗಳ ನಂತರ ತೊಳೆದುಕೊಳ್ಳಿ.
- ಚಳಿಗಾಲದಲ್ಲಿ ಚರ್ಮ ಒಡೆಯದಂತೆ ಮಾಡಬಹುದಾದ ಸುಲಭ ವಿಧಾನ ತೆಂಗಿನೆಣ್ಣೆಯನ್ನು ಹಚ್ಚುವುದು. ಎಣ್ಣೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿಕೊಂಡರೆ ದೇಹ ತೇವವನ್ನು ಹೀರಿಕೊಂಡು ನುಣುಪಾಗಿರುತ್ತದೆ. ಅಥವಾ ನೀರಿಗೆ ಒಂದು ಚಮಚ ಎಣ್ಣೆಯನ್ನು ಹಾಕಿಯೂ ಸ್ನಾನ ಮಾಡಿಕೊಂಡರೆ ದೇಹ ದಿನವಿಡೀ ಫ್ರೆಶ್ ಆಗಿರುತ್ತದೆ. ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣತ್ವಚೆಯಾಗಿದ್ದರೆ ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿ ಹಾಲಿನ ಕೆನೆಯೊಂದಿಗೆ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ನುಣುಪಾಗುತ್ತದೆ.
ಮೊಟ್ಟೆಯ ಬಿಳಿಲೋಳೆಯನ್ನು ಮುಖಕ್ಕೆ ಹಚ್ಚಿ ಗಂಟೆ ಬಿಟ್ಟು ತೊಳೆದರೆ ಮುಖಕ್ಕೆ ಫ್ರೆಶ್ ಲುಕ್ ಕೊಡುತ್ತದೆ. - ಚಳಿಗಾಲದಲ್ಲಿ ತ್ವಚೆಯು ಹೆಚ್ಚು ಶುಷ್ಕವಾಗಿ ಇರುತ್ತದೆ. ಇಂತಹ ಸಮಯದಲ್ಲಿ ಮಾಯಿಶ್ವರೈಸರ್‌ಗಳನ್ನು ಹೆಚ್ಚಾಗಿ ಬಳಸಬೇಕು. ಇದು ಒಣ ತ್ವಚೆಗೆ ಉತ್ತಮ. ಎಣ್ಣೆ ತ್ವಚೆ ಹೊಂದಿದ್ದವರು ಆಯಿಲ್ ಬೇಸ್ಡ್ ಮಾಯಿಶ್ಚುರೈಸರ್ ಉತ್ತಮವಲ್ಲ. ಅದರ ಬದಲು ವಾಟರ್ ಬೇಸ್ಡ್ ಮಾಯಿಶ್ಚುರೈಸರ್ ಆಯ್ಕೆ ಮಾಡಿಕೊಳ್ಳಿ.
- ಟೊಮೆಟೊ ಪೇಸ್ಟ್ ಗೆ ರೋಸ್ ವಾಟರ್ ಬೆರೆಸಿ ಕೈ ಕಾಲು ಕುತ್ತಿಗೆಗೆ ಹಚ್ಚಿ. ಇದರಿಂದ ತ್ವಚೆ ಒಡೆಯುವುದಿಲ್ಲ. ಜೇನುತುಪ್ಪಕ್ಕೆ ಗುಲಾಬಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿದರೆ ತ್ವಚೆ ಒಣಗುವುದಿಲ್ಲ. ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖ ಹೊಳೆಯುವುದರೊಂದಿಗೆ ಒಣ ತ್ವಚೆ ಸಮಸ್ಯೆಯೂ ದೂರವಾಗುತ್ತದೆ.
- ತುಟಿಗಳಿಗೆ ತುಪ್ಪ ಹಚ್ಚುವುದರಿಂದ ತೇವಾಂಶ ಮತ್ತು ಮೃದುತ್ವವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ತುಟಿಗಳಿಗೆ ನೈಸರ್ಗಿಕ ಪರಿಹಾರವಾಗಿದೆ.
- ಸ್ನಾನದ ಸಮಯದಲ್ಲಿ ಸೋಪಿನ ಬದಲು ಕಡಲೆ ಹಿಟ್ಟು ಬಳಸಿದರೆ ಉತ್ತಮ . ಕಡಲೆ ಹಿಟ್ಟಿಗೆ, ಮೊಸರು, ಹಾಲು ಅಥವಾ ನೀರು ಬೆರೆಸಿ ಲೇಪಿಸಿಕೊಂಡರೆ ಚರ್ಮವು ಮೃದುವಾಗುವುದರ ಜೊತೆಗೆ ತೇವಾಂಶವಾಗಿರುತ್ತದೆ. ಒಣ ಚರ್ಮವಾಗಿದ್ದಲ್ಲಿ ಈ ಲೇಪನದಲ್ಲಿ ಕೆನೆ, ಮೊಸರು ಬಳಸಬಹುದು. ಇಲ್ಲದಿದ್ದಲ್ಲಿ ನಿಂಬೆ ರಸ ಅಥವಾ ತಿಳಿಮಜ್ಜಿಗೆ ನೀರು ಬೆರೆಸಿ ಲೇಪನ ಮಾಡಿಕೊಳ್ಳಬೇಕು. ಈ ಲೇಪನವನ್ನು ಮುಖ, ಕೈ-ಕಾಲುಗಳಿಗೆ ಲೇಪಿಸಿಕೊಂಡು, ಒಣಗಿದಂತೆ ಅನಿಸಿದಾಗ ಉಗುರು ಬೆಚ್ಚಗಿನ ನೀರನ್ನು ಬಳಸಿ ತೊಳೆದುಕೊಳ್ಳಬೇಕು.
- .ಅತಿ ಹಣ್ಣಾಗಿ ಕಳೆತ ಪಪ್ಪಾಯದ ತಿರುಳನ್ನು ಒಣಚರ್ಮವಾದರೆ ಕೆನೆ, ಎಣ್ಣೆ ಚರ್ಮವಾದರೆ ನಿಂಬೆರಸ ಬೆರೆಸಿ, ಪೇಸ್ಟ್ ಮಾಡಿ ಈ ಲೇಪನವನ್ನು ಮುಖ, ಕತ್ತು, ಕೈಗಳಿಗೆ ಲೇಪಿಸಿ ಕಾಲು ಗಂಟೆಯ ನಂತರ ಚರ್ಮ ಬಿಗಿದುಕೊಂಡಂತೆ ಎನಿಸಿದಾಗ ಉಗುರು ಬಿಸಿ ನೀರಿನಿಂದ ತೊಳೆದುಕೊಂಡಾಗ ಉತ್ತಮ ಫಲಿತಾಂಶ ಕಾಣಬಹುದು.
- ಆಲೂಗೆಡ್ಡೆ ಚರ್ಮವನ್ನು ಸ್ವಚ್ಛಗೊಳಿಸಿ, ಕೋಮಲಾಂಶ ನೀಡುತ್ತದೆ. ಆಲೂಗಡ್ಡೆಯನ್ನು ತುರಿದುಕೊಂಡು, ಆ ತುರಿಯನ್ನು ಮುಖಕ್ಕೆ ಉಜ್ಜಿಕೊಳ್ಳಬೇಕು. ಅದರ ನಂತರ ಐಸ್ ಕ್ಯುಬ್ ಅನ್ನು ಮುಖದ ತುಂಬಾ ಆಡಿಸಿಕೊಂಡರೆ ನುಣುಪು ನಿಮ್ಮ ಅನುಭವಕ್ಕೆ ಬರುತ್ತದೆ.
ಸೌಮ್ಯ ಸನತ್.
More Stories
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
ಪ್ರತಿ ಗ್ರಾ.ಪಂ ಅಭಿವೃದ್ಧಿಗೆ 8-9 ಕೋಟಿ ರೂ. ಅನುದಾನ: ಸಚಿವ ಮಧು ಬಂಗಾರಪ್ಪ
ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್: ನಾಲ್ಕು ಉಗುರು ವಶಕ್ಕೆ