ಒಮ್ಮೆ ಎಲ್ಲಾ ಎಲೆಗಳು ಒಟ್ಟುಗೂಡಿ ಸಭೆ ನಡೆಸಿದವು . ಮಾವಿನ ಎಲೆ ಮೊದಲು ಮಾತಾಡತೊಡಗಿತು. ಪ್ರತಿಯೊಂದು ಶುಭ ಕಾರ್ಯಗಳು,ಮದುವೆ ಅಥವಾ ಪವಿತ್ರ ದೈವಿಕ ಕಾರ್ಯಗಳಲ್ಲಿ, ನನ್ನನ್ನು ಮಂಗಳಕರ ಸಂಕೇತವಾಗಿ ಬಳಸಲಾಗುತ್ತದೆ., ಎಲ್ಲಾ ಆಧ್ಯಾತ್ಮಿಕ ಚಟುವಟಿಕೆಗಳಿಗೆ ನಾನು ಅಗತ್ಯ ಎಂದು ಅಹಂಕಾರದಿಂದ ಹೇಳತೊಡಗಿತು. ಅತ್ಯುತ್ತಮ ಜನ್ಮ ನನ್ನದು ಎಂದಿತು . ಅದೇನೇ ಇದ್ದರೂ ಬಾಗಿಲುಗಳ ಬಳಿ ನೇತಾಡುತ್ತೇನೆ ಎಂಬ ಅಂಶವನ್ನು ಮರೆತಿತ್ತು.
ನಂತರ ಬಾಳೆಯ ಎಲೆ ತನ್ನ ಪ್ರವರವನ್ನು ಶುರುಮಾಡಿತು. ತನ್ನ ಹಿರಿಮೆಯ ಬಗ್ಗೆ ಹೇಳುತ್ತಾ ಬಾಳೆಎಲೆಯಲ್ಲಿ ದೇವರಿಗೆ ಪ್ರಸಾದ ಕೊಡುವರು ಎಂದು ಜಂಭ ಕೊಚ್ಚಿಕೊಂಡಿತು. ಪೂಜೆ ಮತ್ತು ವ್ರತಗಳಂತಹ ದೈವಿಕ ಕಾರ್ಯಗಳಲ್ಲಿ ತನ್ನ ಸ್ಥಾನದ ಮೌಲ್ಯವನ್ನು ಹೇಳಿಕೊಂಡಿತು. ಮದುವೆ, ಮುಂಜಿ ಹೀಗೆ ಶುಭಕಾರ್ಯಗಳಲ್ಲಿ ಬಾಳೆ ಎಲೆಯಲ್ಲಿ, ಊಟ ಬಡಿಸಿದರೆ ಆ ಊಟಕ್ಕೆ ಸಾಂಪ್ರದಾಯಿಕ ಮೆರುಗು ನೀಡುವ ಕೀರ್ತಿ ತನ್ನದೇ ಎಂದು ಹೆಮ್ಮೆಪಡತೊಡಗಿತು. ಆದರೆ ಊಟದ ನಂತರ,ಪ್ರಸಾದ ವಿನಿಯೋಗವಾದ ಮೇಲೆ ತಾನು ಕಸದ ರಾಶಿಗೆ ಸೇರುವೆ ಎಂಬುದನ್ನು ಮರೆತoತಿತ್ತು.
ಆಮೇಲೆ ಕರಿಬೇವಿನ ಸರದಿ– ತನ್ನ ಎಲೆಗಳು ಊಟದ ರುಚಿಯನ್ನು ಹೆಚ್ಚಿಸಲು, ಭಕ್ಷ್ಯಗಳಿಗೆ ಸುವಾಸನೆ ನೀಡುವಲ್ಲಿ ತನ್ನ ಅವಶ್ಯಕತೆಯ ಬಗ್ಗೆ ಕೊರೆಯತೊಡಗಿತು. ಅದೇನೋ ಸರಿ ಆದರೆ ಊಟ ಮಾಡುವಾಗ, ಅಗತ್ಯವು ಮುಗಿದ ನಂತರ, ಕರಿಬೇವಿನ ಎಲೆಗಳನ್ನು ತೆಗೆದು ಪಕ್ಕಕ್ಕಿಟ್ಟು,ಎಸೆಯುತ್ತಾರೆ. ಇಸ್ಟೇ ನಿನ್ನ ಸ್ಥಾನ ಎಂದು ಉಳಿದ ಎಲೆಗಳು ಗೊಣಗಿದವು.
ನಂತರ ವೀಳ್ಯದೆಲೆ ಮಾತನಾಡಿತು,, ನಾನಿಲ್ಲದೆ ತಾಂಬೂಲ ಸೇವನೆ ಆಗದು. ನಾನು ಎಲ್ಲಾ ಬಾಯಿಗಳನ್ನು ಉತ್ತಮ ಪರಿಮಳದೊಂದಿಗೆ ಕೆಂಪಾಗಿಸುತ್ತೇನೆ, ಮಾನವನ ಜೀವನದಲ್ಲಿ ತಾಂಬೂಲ ಸೇವನೆ ಬಹಳ ಮುಖ್ಯ. ಪೂಜೆ,ಪುನಸ್ಕಾರಗಳಲ್ಲೂ ನನ್ನ ಸ್ಥಾನವಿದ್ದೇ ಇದೆ ಎಂದು ತನ್ನ ಶ್ರೇಷ್ಠತೆಯನ್ನು ಸೊಕ್ಕಿನಿಂದ ಹೇಳಿತು. ಹೌದೌದು , ತಾಂಬೂಲ ತಿಂದಾದ ನಂತರ ಉಗುಳಿ ಬಿಡುತ್ತಾರೆ, ಅಷ್ಟೇ ನಿನ್ನ ಸ್ಥಾನ ಎಂದು ಉಳಿದ ಎಲೆಗಳು ನಕ್ಕು ಅಣಕಿಸಿದವು.
ವೀಳ್ಯದೆಲೆಯ ನಂತರ ಯಾವ ಎಲೆಯೂ ಮಾತನಾಡಲು ತಯಾರಿರಲಿಲ್ಲ. ಆದರೆ ವಿನಮ್ರತೆಯಿಂದ ಕುಳಿತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಒಂದು ಎಲೆ, ತುಳಸಿ ಎಲೆಯ ಕಡೆ ನೋಡುತ್ತಾ, ತನ್ನ ಹಿರಿಮೆಯನ್ನು ವಿವರಿಸುವಂತೆ ತುಳಸಿಗೆ ಹೇಳಿತು. ಆದರೆ ತುಳಸಿ ಸಸೇಮಿರಾ ಮಾತನಾಡಲಾರೆ ಎಂದು ದೃಢವಾಗಿ ಹೇಳಿತು. ಎಲ್ಲಾ ಎಲೆಗಳು ತುಳಸಿ ಎಲೆಯನ್ನು ಹೇಳಲೇಬೇಕೆಂದು ಒತ್ತಾಯಿಸಿದವು. ವಿಧಿಯಿಲ್ಲದೆ ತುಳಸಿ ಎಲೆ ಬಹಳ ವಿನಯದಿಂದ ನಿಂತು ಹೀಗೆ ಹೇಳತೊಡಗಿತು.
ನಾನು ತುಂಬಾ ಚಿಕ್ಕ ಎಲೆ, ನನ್ನ ಅಮ್ಮನಾದ ತುಳಸಿ ಗಿಡವೂ ತುಂಬಾ ಚಿಕ್ಕದು. ನಾನು ಆಕಾರದಲ್ಲಿ ಮತ್ತು ಎಲ್ಲದರಲ್ಲೂ ತುಂಬಾ ಚಿಕ್ಕವನು. ನನ್ನ ವಿಶೇಷತೆ ಏನು? ನನಗೆ ಯಾವುದೇ ವಿಶೇಷತೆ ಇಲ್ಲ ಎಂದು ಮೆಲ್ಲನೆ ನುಡಿಯಿತು.ತುಳಸಿ ಎಲೆಗೆ ಯಾವ ಅಹಂಕಾರವೂ ಇರಲಿಲ್ಲ. ಅದಕ್ಕಾಗಿಯೇ ತುಳಸಿ ಎಲೆಯು ತುಂಬಾ ಪವಿತ್ರವಾದ ಸ್ಥಾನ ಹೊಂದಿದೆ. ಅದನ್ನು ತುಳಸಮ್ಮ ಎಂದು ಕರೆಯುತ್ತಾರೆ, ಮಾತೃ ಸಮಾನ ಸ್ಥಾನವನ್ನು ಅದಕ್ಕಿತ್ತಿದ್ದಾರೆ.ಇದನ್ನು ಓದಿ –ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್
ಮಿತ್ರರೇ, ನಡೆ- ನುಡಿಗಳಲ್ಲಿ ಎಂದಿಗೂ ಅಹಂಕಾರ, ಒಣ ಜಂಭ ಬೇಡ, ಬದಲಾಗಿ ಅಲ್ಲಿ ವಿನಮ್ರತೆ, ವಿಧೇಯತೆ, ಶಿಸ್ತು ರೂಢಿಸಿಕೊಳ್ಳಿ . ಹಾಗಿದ್ದಲ್ಲಿ ನಿಮ್ಮ ವ್ಯಕ್ತಿತ್ವ ತಂತಾನೇ ಉನ್ನತದ್ದಾಗುತ್ತದೆ.
~ಸಂಪಿಗೆ ವಾಸು, ಬಳ್ಳಾರಿ
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ