ಮಾರ್ಗಶಿರ ಷಷ್ಠಿ ಸ್ಕಂದ ಷಷ್ಠಿ ಅಥವಾ ಸುಬ್ರಮಣ್ಯ ಷಷ್ಠಿ ಎಂದು ಗುರುತಿಸಲ್ಪಡುವ ದಿನವಾಗಿದೆ. ಚೈತ್ರ ಷಷ್ಠಿಯಂದು ಜನಿಸಿದ ಕುಮಾರನು ದೇವ ಸೇನಾಧಿಪತಿಯಾಗಿ ತಾರಕಾಸುರನನ್ನು ವಧಿಸಿದ ದಿನವೇ ಮಾರ್ಗಶಿರ ಷಷ್ಠಿಯಾಗಿದ್ದು ರಾಕ್ಷಸನಿಂದ ಜನರನ್ನು ದೇವತೆಗಳನ್ನು ಕಾಪಾಡಿದ ಸುಬ್ರಮಣ್ಯನನ್ನು ವಿಶೇಷವಾಗಿ ಪೂಜಿಸುವ ಪರ್ವವಾಗಿದೆ. ಕರ್ನಾಟಕದಲ್ಲಿ ಸುಬ್ರಮಣ್ಯ ಕ್ಷೇತ್ರ ಎಂದು ಪ್ರಸಿದ್ಧವಾಗಿರುವುದು ಕುಕ್ಕೆ ಸುಬ್ರಮಣ್ಯ ಮತ್ತೊಂದು ಘಾಟಿ ಸುಬ್ರಮಣ್ಯ.
ಸಂಸ್ಕೃತದಲ್ಲಿ ಘಟ ಎಂದರೆ ಮಡಿಕೆ ಎಂಬ ಅರ್ಥವಿದೆ. ಸರ್ಪವು ಸುತ್ತಿ ಕುಳಿತಾಗ ಘಟದಂತೆ ಕಾಣುವುದರಿಂದ ಈ ಸ್ಥಳಕ್ಕೆ ಘಾಟಿ ಮತ್ತು ಇಲ್ಲಿಯ ಆರಾಧ್ಯ ದೈವ ಸುಬ್ರಹ್ಮಣ್ಯನು ಘಟ ಸರ್ಪದ ರೂಪದಲ್ಲಿ ವಾಸಿಸುವುದರಿಂದ ಘಾಟಿ ಸುಬ್ರಹ್ಮಣ್ಯ ಎಂಬ ಹೆಸರು ಬಂದಿದೆ, ದೊಡ್ಡಬಳ್ಳಾಪುರದ ತೂಬಗೆರೆಯ ಬಳಿಯಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯವು ಪುರಾತನ ಹಾಗೂ ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಪುರಾಣ ಪ್ರಸಿದ್ಧಕ್ಷೇತ್ರ ಇಲ್ಲಿ ಸುಬ್ರಹ್ಮಣ್ಯ ಏಳು ಹೆಡೆಯ ಸರ್ಪರೂಪದಲ್ಲಿ ಪ್ರಕಟವಾಗಿರುವುದು ಇಲ್ಲಿಯ ವಿಶೇಷ. ನಾಗದೇವತೆಯ ಆರಾಧನೆಯು ಆರೋಗ್ಯದ ಸಲುವಾಗಿ ಸಂತಾನಕ್ಕಾಗಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸ್ಥಾನವಾಗಿದೆ. ರಾಹು ಕೇತುವಿನ ವಿಶೇಷ ದೋಷ ಪರಿಹಾರಕ್ಕಾಗಿ ಇಲ್ಲಿ ಬರುತ್ತಾರೆ. ಘಾಟಿ ಸುಬ್ರಹ್ಮಣ್ಯದಲ್ಲಿ ಪೂಜೆ ಮತ್ತು ನಾಗ ಪ್ರತಿಷ್ಠಾಪನೆ ಮಾಡಿದವರಿಗೆ ಇರುವ ಸಮಸ್ಯೆಗಳ ಪರಿಹಾರವಾಗುತ್ತದೆ. ನಾಗ ದೋಷ ಪರಿಹಾರವಾಗಿ, ಉತ್ತಮ ಫಲಗಳನ್ನು ಪಡೆಯಬಹುದಾಗಿದೆ. ವಿಶೇಷವಾಗಿ ಮಕ್ಕಳಿಲ್ಲದವರು ಸಂತಾನಕ್ಕಾಗಿ ಹಾಗೂ ಅನಾರೋಗ್ಯ ಪೀಡಿತರು ಉತ್ತಮ ಆರೋಗ್ಯಕ್ಕಾಗಿ ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗುತ್ತಾರೆ.
ಘಾಟಿ ಸುಬ್ರಹ್ಮಣ್ಯದಲ್ಲಿ ಕೇವಲ ಕಾರ್ತಿಕೇಯ ಪೂಜೆ ಮಾತ್ರ ನಡೆಯುವುದಿಲ್ಲ ಅಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಪೂಜೆಯು ಕೂಡ ಆಗುತ್ತದೆ. ಸುಬ್ರಹ್ಮಣ್ಯ ವಿಷ್ಣುವನ್ನು ಕುರಿತು ತಪಸ್ಸು ಮಾಡಿ ಕ್ಷೇತ್ರವಾಗಿದೆ.
ಸರ್ಪ ಸಂತತಿಯನ್ನು ನಾಶ ಮಾಡುತ್ತಿದ್ದ ಗರುಡನಿಂದ ಸರ್ಪ ಸಂತತಿಯನ್ನು ಉಳಿಸಲು ಆಶ್ವಾಸನೆ ನೀಡಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿಯು ಬೆಂಗಾವಲಾಗಿ ನಿಂತಿರುವುದು ಇಲ್ಲಿಯ ವಿಶೇಷ
ಏಕ ಶಿಲೆಯಲ್ಲಿ ಎರಡೂ ದೇವರು ಇರುವುದು ಇಲ್ಲಿಯ ವಿಶೇಷತೆಯಾಗಿದೆ.. ಸಾಲಿಗ್ರಾಮ ಶಿಲೆಯಲ್ಲಿ ಇದೆ. ಪೃವಾಭಿಮುಖಿಯಾಗಿ ಸುಬ್ರಹ್ಮಣ್ಯ ಹಾಗೂ ಪಶ್ಚಿಮಾಭಿಮುಖಿಯಾಗಿ ನರಸಿಂಹ ದೇವರು ಇರುತ್ತಾರೆ ಭಕ್ತರಿಗೆ ಇಬ್ಬರ ದರ್ಶನವೂ ಚೆನ್ನಾಗಿ ಆಗಲೆಂದು ಕನ್ನಡಿಯನ್ನು ಅಳವಡಿಸಿರುತ್ತಾರೆ. ಇಲ್ಲಿಯ ಇತಿಹಾಸಕಾರರ ಪ್ರಕಾರ ಸುಬ್ರಹ್ಮಣ್ಯನ ಹಾಗೂ ನರಸಿಂಹ ದೇವರ ವಿಗ್ರಹಗಳು ಭೂಮಿಯಲ್ಲಿ ದೊರೆತ ವಿಗ್ರಹಗಳಾಗಿವೆ. ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪೌಷ್ಯ ಶುದ್ಧ ಷಷ್ಠಿಯಂದು ಮತ್ತು ನರಸಿಂಹ ಜಯಂತಿಗಳಂದು ವಿಶೇಷ ಉತ್ಸವಗಳು ನಡೆಯುತ್ತವೆ.
ಘಾಟಿ ಸ್ಥಳ ಪುರಾಣ :
ಹಾವುಗಳಿಗೆ ಸರ್ಪ ಸಂತತಿಗೆ ಈ ಘಾಟಿಯ ಗುಹೆಗಳೊಳಗೆ ಗರುಡನ ಭಯದಿಂಧ ಕಾಪಾಡಲು ಮತ್ತು ಲಕ್ಷ್ಮಿ ನರಸಿಂಹನ ಸನ್ನಿಧಾನದಲ್ಲಿ ಗುಹೆಯಲ್ಲಿರಿಸಿ ಕಾರ್ತಿಕೇಯನು ಕಾಪಾಡಿದನು ಎಂದು ಹೇಳುತ್ತಾರೆ. ತಾರಕಾಸುರನ ವಧೆಯನ್ನು ಮಾಡಿದ ಕಾರ್ತಿಕೇಯನು ಸರ್ಪಗಳ ರಕ್ಷಣೆಗೆ ಇಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.
ಘಾಟಿ ದೇವಸ್ಥಾನಕ್ಕೆ 600 ವರ್ಷಗಳಿಗೂ ಹಿಂದಿನ ಇತಿಹಾಸವಿದೆ. ಮೊದಲಿಗೆ ಈ ದೇವಾಲಯವನ್ನು ಕಟ್ಟಿಸಿದವರು ಬಳ್ಳಾರಿಯ ಸಂಡೂರು ಸಂಸ್ಥಾನದ ಫೋರ್ಪಡೆ ವಂಶಜರು ಎಂದು ಹೇಳಲಾಗುತ್ತದೆ. ಮಹಾರಾಜ ಯಶವಂತರಾವ ಫೋರ್ಪಡೆಯವರಿಗೆ ಸ್ವಪ್ನದಲ್ಲಿ ಬಂದು ಇಂತಹ ಕಡೆಯಲ್ಲಿ ಹುತ್ತದಲ್ಲಿ ವಾಸಿಸುತ್ತೀದ್ದೇನೆ ನನಗೆ ದೇವಸ್ಥಾನ ನಿರ್ಮಿಸು ಎಂಬ ಆದೇಶವನ್ನು ಸ್ವಾಮಿ ನೀಡಿದ ನಂತರ ಮಹಾರಾಜರು ಬಂದು ಆ ಸ್ತಳದಲ್ಲಿ ಬಂದು ನೋಡಿದಾಗ ಹುತ್ತ ಇದ್ದ ಸ್ಥಳಕ್ಕೆ ಬಂದು ಅಲ್ಲಿಯೇ ದೇವಾಲಯ ನಿರ್ಮಿಸಿದ್ದಾರೆ. ಇನ್ನೊಂದು ಕಥೆಯ ಪ್ರಕಾರ ಒಂದು ಬಾರಿ ವೀಳ್ಯದೆಲೆ ಮಾರಾಟ ಮಾಡುವ ವ್ಯಾಪಾರಿ ಈಗಿನ ಗುಡಿಯ ಪ್ರದೇಶದಲ್ಲಿ ಊಟ ಮಾಡಿ ನದಿಯಲ್ಲಿ ನೀರು ಕುಡಿದು ವಿಶ್ರಾಂತಿ ಮಾಡಿದಾಗ ಅವರ ಕನಸಿನಲ್ಲಿ ಸ್ವಾಮಿಯು ಬಂದು ಈ ಕಲ್ಲಿನ ಮೇಲೆ ಏಕೆ ಮಲಗಿದ್ದೀಯ ಇಲ್ಲಿ ನಾನು ಇರುವೆ, ಬಳ್ಳಾರಿಯ ಸಂಡೂರಿನಲ್ಲಿರುವ ನನ್ನ ಭಕ್ತನಿಗೆ ಹೇಳಿ ನನಗೆ ಇಲ್ಲಿ ದೇವಾಲಯ ಕಟ್ಟುವ ವ್ಯವಸ್ಥೆ ಮಾಡಿಸು ಎಂದು ಹೇಳಿದರಂತೆ ಆಗ ಆ ವ್ಯಾಪಾರಿ ಬ್ರಾಹ್ಮಣರೊಬ್ಬರಿಗೆ ಕರೆದು ತೋರಿಸಿದಾಗ ಆ ಬ್ರಾಹ್ಮಣನಿಗೂ ಸರ್ಪ ರೂಪದಲ್ಲಿ ದರ್ಶನ ನೀಡಿ ಇದೇ ವಿಷಯವನ್ನು ಪುನಃ ಹೇಳಿದಾಗ. ವ್ಯಾಪಾರಿ ಮತ್ತು ಬ್ರಾಹ್ಮಣ ಇಬ್ಬರೂ ಸೇರಿ ಸಂಡೂರಿನ ರಾಜನ ಬಳಿ ಹೋಗಿ ಎಲ್ಲವನ್ನೂ ಹೇಳಿದಾಗ ನನಗೆ ಬಂದು ನಿಂತು ದೇವಾಲು ಕಟ್ಟಿಸಲು ಆಗದು ನಿಮಗೆ ಧನ ಸಹಾಯ ಮಾಡುತ್ತೇನೆ ಎಂದು ಹೇಳಿದಾಗ ಬೇಸರಗೊಂಡ ವ್ಯಾಪಾರಿ ಮತ್ತು ಬ್ರಾಹ್ಮಣ ಅಲ್ಲಿಯೇ ಸಂಡೂರಿನಲ್ಲಿ ತಂಗಿದಾಗ ಅದೇ ರಾತ್ರಿ ಸ್ವಾಮಿಯು ರಾಜನ ಕನಸಿನಲ್ಲಿ ಹೋಗಿ ನನ್ನ ಆಜ್ಞೆಯನ್ನು ಕೇಳದೇ ಹೋದಲ್ಲಿ ನಿನ್ನ ಖಜಾನೆಯು ಬರಿದಾಗಲಿ ಎಂದು ಶಾಪವನ್ನು ನೀಡುತ್ತಾನೆ. ನಿದ್ರೆಯಿಂದ ಎಚ್ಚಿತ್ತು ರಾಜನು ವ್ಯಾಪಾರಿ ಬ್ರಾಹ್ಮಣರ ಜೊತೆಗೆ ಹೋಗಿ ಮುಂದೆ ನಿಂತ ದೇವಾಲಯ ಕಟ್ಟಿಸಿ ಅಲ್ಲಿಯ ಉಸ್ತುವಾರಿ ನೋಡಿ ಕೊಂಡು ಪೂಜೆಯ ವ್ಯವಸ್ಥೆಯನ್ನು ಮಾಡಿದನು. ಇಂದಿಗೂ ಕೂಡ ಬ್ರಹ್ಮೋತ್ಸವದ ಸಮಯದಲ್ಲಿ ಸೊಂಡರಿನ ರಾಜ ಮನೆತನದವರು ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಕ್ಷೇತ್ರದ ಪೂಜಾ ವಿಶೇಷ :
ದಿನ ನಿತ್ಯವೂ ಇಲ್ಲಿ ಅನೇಕ ರೀತಿಯ ಪೂಜೆ ಅಭಿಷೇಕ, ಅರ್ಷನೆ, ಶಾಂತಿ, ಸರ್ಪಶಾಂತಿ, ಆಶ್ಲೇಷ ಬಲಿ, ಮಂಗಳ ದೋಷ ನಿವಾರಣೆಯ ಶಾಂತಿ ಪೂಜೆಗಳು ಜರಗುತ್ತವೆ. ರಾಹು, ಕೇತು ಕುಜ ದೋಷವಿರುವವರು ಇಲ್ಲಿ ಪೂಜೆ ಸಲ್ಲಿಸಿದರೆ ಅವರ ಕಷ್ಟಗಳು ನಿವಾರಣೆಯಾಗುತ್ತವೆ.ಇದನ್ನು ಓದಿ –ಮುಡಾದಲ್ಲಿ ಮತ್ತೊಂದು ಭ್ರಷ್ಟಾಚಾರ ಬಯಲು: ಸರ್ಕಾರಕ್ಕೆ 300 ಕೋಟಿ ನಷ್ಟ!
ಸುತ್ತಮುತ್ತಲಿನ ಜನರು ಅನೇಕ ಬಗೆಯ ಸಮಸ್ಯೆಗಳನ್ನು ಹೊಂದಿರುವವರು ಭಕ್ತಿಯಿಂದ ನಡೆದು ಕೊಳ್ಳುತ್ತಾರೆ. ತಮ್ಮ ಸಮಸ್ಯೆಗಳ ಪರಿಹಾರ ಮಾಡಿ ಕೊಂಡು ಶ್ರದ್ಧೆಯಿಂದ ಪೂಜಿಸುತ್ತಾರೆ.
ಮಾಧುರಿ ದೇಶಪಾಂಡೆ, ಬೆಂಗಳೂರು
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ