ಚಳಿಗಾಲ ಮೆಲ್ಲಗೆ ಮೈಯನ್ನು ಆವರಿಸುತ್ತಿದೆ. ಶೀತಗಾಳಿ ತ್ವಚೆಯನ್ನು ಒಣಗಿಸುತ್ತಿದೆ. ಈ ಸಮಯದಲ್ಲಿ ಮಕ್ಕಳು ಮತ್ತು ವಯಸ್ಸಾದವರನ್ನು ನೋಡಿಕೊಳ್ಳುವುದೇ ಸವಾಲು. ಈ ಕಾಲದಲ್ಲಿ ಯಾವ ವಯೋಮಾನದವರು ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು, ಯಾವುದನ್ನು ತಿಂದರೆ ದೇಹಕ್ಕೆ ಅನುಕೂಲ, ಅನಾನುಕೂಲ ಎನ್ನುವ ಗೊಂದಲ ಶುರುವಾಗುತ್ತದೆ. ಆದರೆ, ಈ ಋತುಮಾನದಲ್ಲಿ ಸಿಗುವ ಎಲ್ಲ ಬಗೆಯ ಹಣ್ಣುಗಳನ್ನೂ, ಆಹಾರ ಪದಾರ್ಥಗಳನ್ನು ಧಾರಾಳವಾಗಿ ಸೇವಿಸಬಹುದು. ಹಾಗೆ ಸೇವಿಸುವಾಗ ಇತಿ– ಮಿತಿ ಇರಲಿ ಎನ್ನುವರು ಆಹಾರ ತಜ್ಞರು.
ಚಳಿಗಾಲದಲ್ಲಿ ವಾತಾವರಣದ ತಾಪಮಾನ ಇಳಿಕೆಯಾಗುವಂತೆ, ದೇಹದ ತಾಪಮಾನವೂ ಇಳಿಯುತ್ತದೆ. ಇದನ್ನು ಸರಿದೂಗಿಸಿಕೊಳ್ಳಲು ಶರೀರವು ಚಯಾಪಚಯ ಕ್ರಿಯೆಯನ್ನು ಏರಿಸಿಕೊಳ್ಳುವ ಮೂಲಕ ಉಷ್ಣವನ್ನು ಉತ್ಪಾದಿಸಿಕೊಳ್ಳುತ್ತದೆ. ಆಹಾರದಲ್ಲಿ ಕೊಬ್ಬಿನ ಅಂಶವನ್ನು ಕರಗಿಸುತ್ತ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಹೆಚ್ಚು ಆಹಾರ ದೇಹಕ್ಕೆ ಬೇಕೆನಿಸುತ್ತದೆ. ಹೆಚ್ಚು ಹಸಿವು ಉಂಟಾಗುತ್ತದೆ. ಹಸಿವು ಎಂದು ಏನೇನೊ ತಿನ್ನುವ ಬದಲು ಸಮತೋಲಿತ ಆಹಾರ ಸೇವಿಸಬೇಕು ಎನ್ನುವುದು ಆಹಾರ ತಜ್ಞರ ಸಲಹೆ.
ಬೆಚ್ಚಗಿನ ಬಟ್ಟೆ ಧರಿಸಿ ಚಳಿ ದೂರ ಮಾಡಬಹುದು. ಆದರೆ ದೇಹದ ಆಂತರಿಕ ಆರೋಗ್ಯ ಕಾಪಾಡಿಕೊಳ್ಳಲು ಒಂದಷ್ಟು ಆಹಾರ ಕ್ರಮಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಆಹಾರ ತಜ್ಞರು ನೀಡಿದ ಕೆಲವು ಸಲಹೆಗಳು…
- ಋತುವಿಗೆ ಅನುಸಾರ ನಮ್ಮ ಆಹಾರ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ. ಗೋಧಿ, ಹೆಸರು ಕಾಳು, ಅಕ್ಕಿ, ವಿವಿಧ ಬಗೆಯ ಧಾನ್ಯಗಳನ್ನು ಅಡುಗೆಯಲ್ಲಿ ಬಳಸಿ. ಹಾಗಲಕಾಯಿ, ಸೋರೆಕಾಯಿ, ಹೀರೆಕಾಯಿ, ಕುಂಬಳಕಾಯಿ ಚಳಿಗಾಲದ ಅಂತ್ಯಕ್ಕೆ ಸಿಗುವ ಅವರೆಕಾಯಿಯನ್ನು ಅಡುಗೆಯಲ್ಲಿ ಬಳಸಿ. ಈ ಸಮಯದಲ್ಲಿ ಹಸಿ ಶೇಂಗಾ ಬೇಯಿಸಿ ತಿಂದರೆ ಹೆಚ್ಚು ಪ್ರೋಟಿನ್ ಲಭ್ಯವಾಗುತ್ತದೆ. ಶುಷ್ಕ ವಾತಾವರಣದ ಈ ಸಮಯದಲ್ಲಿ ಜಿಡ್ಡಿನಂಶ ಯುಕ್ತ ಹಾಲು, ಮಜ್ಜಿಗೆ, ತುಪ್ಪ, ಕೆನೆಯನ್ನೂ ನಿಯಮಿತವಾಗಿ ಸೇವಿಸಿದರೆ ಒಳ್ಳೆಯದು. ಹೆ ಉಪ್ಪು, ಹುಳಿ ಮತ್ತು ಖಾರದ ಪದಾರ್ಥಗಳನ್ನು ಹೆಚ್ಚು ಬಳಸಬಾರದು.
- ಬಿಸಿ ಬಿಸಿ ಆಹಾರ ಸೇವಿಸಿ : ಚಳಿಗಾಲದಲ್ಲಿ ಸಾಕಷ್ಟು ಬಿಸಿ ಬಿಸಿ ಆಹಾರ ಸೇವಿಸಿ. ಸೂಪ್, ಟೀಯಂತಹ ಬಿಸಿ ಬಿಸಿ ಪಾನೀಯಗಳನ್ನು ಹೆಚ್ಚು ಕುಡಿಯಿರಿ. ಇದು ದೇಹವನ್ನು ಬೆಚ್ಚಗಿಡುವ ಜೊತೆಗೆ ಜೀರ್ಣಕ್ರಿಯೆ ಹೆಚ್ಚಲು ಸಹಕಾರಿ. ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯಕರ ಚಯಾಪಚಯವು ದೇಹವನ್ನು ನಿರ್ವಿಷಗೊಳಿಸಲು ಮತ್ತು ಒಟ್ಟಾರೆ ರೋಗನಿರೋಧಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- 3.ಗ್ರೀನ್ ಟೀ : ಚಳಿಗಾಲದ ಸಮಯದಲ್ಲಿ ದೇಹ ರಕ್ಷಣೆಗೆ ಗ್ರೀನ್ ಟೀ ಹೆಚ್ಚು ಸಹಕಾರಿ. ಸುಲಭದಲ್ಲಿ ಸಿಗುವ ಪುದಿನಾ, ದೊಡ್ಡ ಪತ್ರೆ, ತುಳಸಿ, ಒಂದೆಲಗ, ಅಮೃತಬಳ್ಳಿ ಇವುಗಳನ್ನು ಒಂದೊಂದು ದಿನ ಒಂದೊಂದು ಎಲೆಗಳನ್ನು ಗ್ರೀನ್ ಟೀಗೆ ಬಳಸಬಹುದು. ಈ ಗಿಡಗಳ ಎಲೆಗಳನ್ನು ಕುದಿಯುವ ನೀರಿಗೆ ಹಾಕಬೇಕು. ನೀರು ತಣ್ಣಗಾದ ಬಳಿಕ ಕುಡಿಯಬೇಕು. ಗ್ರೀನ್ ಟೀ ಕೊಳ್ಳಲಾಗದವರು ಹೀಗೆ ಮಾಡಿ. ಎಲೆಗಳಲ್ಲಿರುವ ಅಂಶಗಳು ನೀರಿನೊಂದಿಗೆ ಬೆರೆತು ಹೊಸ ಸ್ವಾದ ನೀಡುತ್ತವೆ. ಅದನ್ನೆ ಗ್ರೀನ್ ಟೀ ರೀತಿ ಬಳಸಹುದು. ಇದಕ್ಕಾಗಿ ಮನೆಯಲ್ಲೇ ಪುಟ್ಟ ಕೈತೋಟ ಮಾಡಿಕೊಂಡರೆ ಅನುಕೂಲ. ಒಂದಷ್ಟು ಪಾಟ್‌ಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿಕೊಂಡು ಗ್ರೀನ್ ಟೀ ಸುಲಭದಲ್ಲಿ ಮಾಡಿಕೊಳ್ಳಬಹುದು. ಅಲ್ಲದೆ, ಚಳಿಗಾಲದ ಈ ಸಮಯದಲ್ಲಿ ಕಷಾಯದ ಜತೆ ಪ್ರತಿ ದಿನ ಒಂದೊಂದು ಬಗೆಯ ಎಲೆಯನ್ನು ಹಾಕಿ ಕುದಿಸಿ ಬೆಳಿಗ್ಗೆ ಸಮಯದಲ್ಲಿ ಒಂದು ಹೊತ್ತು ಕುಡಿದರೆ ದೇಹದ ಉಷ್ಣತೆ ಕಾಪಾಡಿಕೊಳ್ಳಬಹುದು.
- ಮಸಾಲೆ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿದರೆ ಉತ್ತಮ. ಚಳಿಗಾಲದಲ್ಲಿ ದೇಹ ಹಾಗೂ ನಾಲಿಗೆ ಖಾರ, ಉಪ್ಪು, ಹುಳಿಯಂತಹ ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ಬಯಸುವುದು ಸಹಜ. ಆದರೆ ಚಳಿಗಾಲದಲ್ಲಿ ಅತಿಯಾದ ಮಸಾಲೆ ಪದಾರ್ಥಗಳ ಸೇವನೆಯು ಜೀರ್ಣಕ್ರಿಯೆ ನಿಧಾನಗೊಳಿಸಲು ಕಾರಣವಾಗಬಹುದು. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದಾಗಿಯೂ ಕಡಿಮೆ ಪ್ರಮಾಣದಲ್ಲಿ ಮಸಾಲೆ ಪದಾರ್ಥಗಳ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
- ‘ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರಿನಿಂದ ಉಂಟಾಗುವ ಕಾಯಿಲೆಗಳು ಹೆಚ್ಚು. ಆದ್ದರಿಂದ ಕುದಿಸಿ ಆರಿಸಿದ ನೀರನ್ನು ಸೇವಿಸಬೇಕು. ಕೆಲವರು ಗಂಟಲಿಗೆ ಹಿತವಾಗರಿಲಿ ಎಂದು ತಣ್ಣನೆ ನೀರನ್ನು ಸ್ವಲ್ಪ ಮಾತ್ರ ಬಿಸಿ ಮಾಡಿಕೊಂಡು ಕುಡಿಯುತ್ತಾರೆ. ಈ ಕ್ರಮ ತಪ್ಪು. ನೀರಿನ ಉಷ್ಣತೆಗೆ ತಕ್ಕಂತೆ ಕೆಲವು ಬ್ಯಾಕ್ಟೀರಿಯಾಗಳು, ವೈರಸ್‌ಗಳು ಆಕ್ಟಿವ್ ಆಗುತ್ತವೆ. ಆಗ ಆ ನೀರನ್ನು ಸೇವಿಸುವುದರಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು. ಹಾಗಾಗಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು’ ಎನ್ನುವರು ಚೈತ್ರಾ ಕಿರಣ್.
- ಶೀತ ಉಂಟು ಮಾಡುವಂತಹ ಪದಾರ್ಥಗಳಿಗೆ ಉಷ್ಣದ ಪದಾರ್ಥಗಳನ್ನು ಸೇರಿಸಿ ತಿಂದರೆ ದೇಹಕ್ಕೆ ಉತ್ತಮ. ಉದಾಹರಣೆಗೆ ಸೌತೆಕಾಯಿ, ಸೀಬೇಕಾಯಿ ಶೀತ ಉಂಟುಮಾಡುತ್ತವೆ ಎಂದರೆ, ಅದರ ಹೋಳುಗಳ ಮೇಲೊಂದಿಷ್ಟು ಕಾಳು ಮೆಣಸಿನ ಪುಡಿ, ಉಪ್ಪು ಉದುರಿಸಿಕೊಂಡು ಸವಿದರೆ ಸಮತೋಲನ ಕಾಯ್ದುಕೊಳ್ಳಬಹುದು.
- ಚಳಿಗಾಲದಲ್ಲಿ ಕಿತ್ತಲೆ ಹಣ್ಣು ಶೀತ ಎಂದು ಹೇಳುವವರು ಕಿತ್ತಲೆ ಬದಲು ಮೂಸಂಬಿ ಹಣ್ಣು ಸೇವಿಸಬಹುದು. ಚಳಿಗಾಲದಲ್ಲಿ ವಿಟಮಿನ್ ‘ಸಿ’ ಅಂಶ ಹೆಚ್ಚು ಬೇಕು. ಹಾಗಾಗಿ ಈ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು.
- ಮೂರು ವರ್ಷದ ಮೇಲ್ಪಟ್ಟ ಮಕ್ಕಳಿಗೆ ದೊಡ್ಡ ಪತ್ರೆ ರಸ ಹಾಗೂ ಜೇನುತುಪ್ಪ ಬೆರೆಸಿ ಆಗಾಗ ಕೊಡಬಹುದು. ಹಿಪ್ಪಲಿ, ಜೇಷ್ಠಮಧು ತೇಯ್ದು ವಾರಕ್ಕೆ ಒಮ್ಮೆ ಕೊಡಬಹುದು.
- ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರು ಕುಡಿಯುವುದನ್ನು ಬಹುತೇಕರು ಕಡಿಮೆ ಮಾಡುತ್ತಾರೆ. ಅದು ತಪ್ಪು. ಶುಷ್ಕ ವಾತಾವರಣ ಇರುವುದರಿಂದ ದೇಹದಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು.
- ಹುಳಿ ಅಂಶಗಳನ್ನು ತಿಂದರೆ ಶೀತ ಆಗುತ್ತದೆ, ಕೆಮ್ಮು ಬರುತ್ತದೆ ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದು ತಪ್ಪು ತಿಳಿವಳಿಕೆ. ಹುಳಿ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಗುಣಗಳಿರುತ್ತವೆ. ಕಿತ್ತಲೆ, ಮೂಸಂಬಿ, ನೆಲ್ಲಿ ಕಾಯಿ ತಿನ್ನಬಹುದು. ನೆಲ್ಲಿಕಾಯಿಯಿಂದ ಮೊರಬ್ಬ ತಯಾರಿಸಿ ಮಕ್ಕಳಿಗೂ ಕೊಡಬಹುದು.
- ಮಕ್ಕಳ ಬಗ್ಗೆ ಜಾಗ್ರತೆಯಿರಲಿ : ಚಳಿಗಾಲದ ಸಮಯದಲ್ಲಿ ಮಕ್ಕಳು ಹುಷಾರು ತಪ್ಪುವುದು ಹೆಚ್ಚು. ಶೀತ, ಜ್ವರ, ಕೆಮ್ಮು ಮುಂತಾದವು ಹೆಚ್ಚು ಕಾಡುತ್ತವೆ. ಆಗ ಕುದಿಸಿ ಆರಿಸಿದ ನೀರನ್ನು ಹೆಚ್ಚು ಹೆಚ್ಚು ಕುಡಿಸಬೇಕು. ಭೇದಿ ಉಂಟಾದರೆ ಉಪ್ಪು, ಸಕ್ಕರೆ, ನಿಂಬೆಹಣ್ಣು ಬೆರೆಸಿ ಮನೆಯಲ್ಲೆ ಒಆರ್‌ಎಸ್ ತಯಾರಿಸಿ ಮಕ್ಕಳಿಗೆ ಕೊಡಬೇಕು.
- ಕರಿದ ಪದಾರ್ಥ, ಹೆಚ್ಚು ಎಣ್ಣೆ ಅಂಶವಿರುವ ತಿನಿಸು ಕಡಿಮೆ ತಿನ್ನುವುದು ಒಳ್ಳೆಯದು. ಮನೆಯಲ್ಲೇ ತಯಾರಿಸಿದ ಕರಿದ ಪದಾರ್ಥಗಳನ್ನು ಮಿತವಾಗಿ ತಿಂದರೆ ಉತ್ತಮ. ಹಾಗಂತ ಸಂಪೂರ್ಣ ವರ್ಜ್ಯ ಮಾಡುವುದೂ ಸರಿಯಲ್ಲ.
- ಕರಿದ ಪದಾರ್ಥದ ಬದಲು ಮಕ್ಕಳಿಗೆ ಶೇಂಗಾ ಮಿಠಾಯಿ, ಕೊಬ್ಬರಿ ಬರ್ಪಿ ಮಾಡಿಕೊಡಬಹುದು. ಇವು ಆರೋಗ್ಯ ಪೂರ್ಣವೂ ಹೌದು. ಮಕ್ಕಳೂ ಖುಷಿಯಾಗಿ ತಿನ್ನುವರು.
- ಬೀಜಗಳು ಮತ್ತು ಒಣ ಹಣ್ಣುಗಳು : ಬಾದಾಮಿ, ವಾಲ್ನಟ್ಸ್ , ಅಗಸೆಬೀಜಗಳು ಮತ್ತು ಚಿಯಾ ಬೀಜಗಳಂತಹ ವಿವಿಧ ಬೀಜಗಳು ಮತ್ತು ಬೀಜಗಳು ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ, ಇದು ದೇಹವನ್ನು ಬೆಚ್ಚಗಾಗಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ವಿಟಮಿನ್ ಡಿ ಭರಿತ ಆಹಾರಗಳು: ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳಾದ ಮೊಟ್ಟೆಯ ಹಳದಿ, ಅಣಬೆಗಳು, ಬಲವರ್ಧಿತ ಸಿರಿಧಾನ್ಯಗಳು, ಹಾಲು ಮತ್ತು ಕೆಂಪು ಮಾಂಸವು ನಿಮ್ಮ ದೇಹವನ್ನು ಬೆಚ್ಚಗಾಗಲು ಸಹಾಯ ಮಾಡುತ್ತದೆ ಮತ್ತು ವಿವಿಧ ರೋಗಗಳಿಂದ ರಕ್ಷಿಸುತ್ತದೆ.
ಸೌಮ್ಯಾ ಸನತ್. ✍️
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ