February 19, 2026

Newsnap Kannada

The World at your finger tips!

WhatsApp Image 2024 12 05 at 10.04.09 AM

ದೇವೇಂದ್ರ ಫಡ್ನವೀಸ್ ಮತ್ತೆ ಸಿಎಂ, ಶಿಂಧೆ-ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ

Spread the love

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಆಯ್ಕೆಯಾಗಿದ್ದು, ಅವರು ಇಂದು (ಗುರುವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಹಾಯುತಿ ಸರ್ಕಾರದಲ್ಲಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್‌ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಲಾಗಿದೆ. ಸರ್ಕಾರ ರಚನೆಗೆ ಸಂಬಂಧಿಸಿದ ಮೈತ್ರಿ ಸೂತ್ರ ಇಂದು ಬಹಿರಂಗಗೊಳ್ಳಲಿದೆ.

2019ರಲ್ಲಿ ವಂಚಿತರಾಗಿ, “ಸಮುದ್ರದಂತೆ ಮತ್ತೆ ವಾಪಸ್ ಬರುತ್ತೇನೆ” ಎಂದು ಹೇಳಿದ ದೇವೇಂದ್ರ ಫಡ್ನವೀಸ್, ಐದು ವರ್ಷಗಳಲ್ಲಿ ಆ ಮಾತು ನಿಜವನ್ನಾಗಿ ಮಾಡಿದ್ದಾರೆ. ಅಂದಿನ ಸಿಎಂ ಉದ್ಧವ್ ಠಾಕ್ರೆಯೊಂದಿಗೆ ನಡೆದ ಭಿನ್ನಮತದಿಂದ ಮುಖ್ಯಮಂತ್ರಿಪದ ಕಳೆದುಕೊಂಡಿದ್ದ ಅವರು, ಈಗ ಮತ್ತೊಮ್ಮೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ.

ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಸಂಜೆ 5:30ಕ್ಕೆ ಪದಗ್ರಹಣ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ. ಬುಧವಾರ ರಾಜಭವನದಲ್ಲಿ ಮಹಾಯುತಿ ಮೈತ್ರಿಕೂಟದ ನಾಯಕರು ಸರಕಾರ ರಚನೆಗೆ ಹಕ್ಕು ಮಂಡಿಸಿ, ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಮುಖ್ಯಮಂತ್ರಿಗಾಗಿ ಶಿಫಾರಸು ಮಾಡಿದರು.

ಬಿಜೆಪಿಯೇ ಮುಖ್ಯಮಂತ್ರಿ ಸ್ಥಾನ ಹೊಂದಿದರೂ, ಶಿವಸೇನೆಯ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಡಿಸಿಎಂ ಸ್ಥಾನಕ್ಕೆ ಒಪ್ಪಿದ್ದಾರೆ. ಶಿಂಧೆ ಗೃಹ ಖಾತೆ ಸೇರಿದಂತೆ ಪ್ರಮುಖ ಖಾತೆಗಳನ್ನು ಹೊಂದಲಿದ್ದಾರೆ.

ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಎನ್‌ಡಿಎ ಆಡಳಿತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.ಇದನ್ನು ಓದಿ –ಕರ್ನಾಟಕದಲ್ಲಿ ‘ಪುಷ್ಪ 2’ಗೆ ಶಾಕ್- ಪ್ರದರ್ಶನ ರದ್ದಿಗೆ ಆದೇಶ

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಗುಂಪು) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ನೇತೃತ್ವದ ಮಹಾಯುತಿ 2.0 ಸರ್ಕಾರ ಇಂದಿನಿಂದ ಪ್ರಾರಂಭವಾಗಲಿದೆ.

error: Content is protected !!