December 21, 2024

Newsnap Kannada

The World at your finger tips!

WhatsApp Image 2022 10 01 at 1.01.22 PM

ಮೃದು ಸ್ವಭಾವದ ದಿಟ್ಟ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ

Spread the love

ಒಬ್ಬ ಮೇಧಾವಿ ಸೌಮ್ಯ ಮತ್ತು ನಿಗರ್ವಿ ದೇಶ ಭಕ್ತ ,ಪ್ರಧಾನಿ, ಅಪ್ಪಟ್ಟ ಸ್ವಾತಂತ್ರ್ಯ ಹೋರಾಟಗಾರ ಮೇರು ವ್ಯಕ್ತಿತ್ವ ಹೊಂದಿರುವ ಮ‌ಹಾನ್ ಚೇತನ ಲಾಲ್ ಬಹದ್ದೂರ್ ಶಾಸ್ತ್ರಿ.ಶತಮಾನಗಳ ನಂತರವೂ ಅವರ ಆದರ್ಶಗಳು ಭಾರತೀಯರಾದ ನಮಗೆ ಅನುಕರಣೀಯ.ಅವರ ಜೀವನ ಮೌಲ್ಯಗಳು, ದೂರದೃಷ್ಟಿ, ಆದರ್ಶ ಚಿಂತನೆಗಳು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪಣ ತೊಟ್ಟು ನಿಂತ ನಿಲುವುಗಳು ಇತಿಹಾಸದ ಪುಟಗಳಲ್ಲಿ ಇಂದಿಗೂ ರಾರಾಜಿಸುತ್ತಿವೆ.

ಅಕ್ಟೋಬರ್ ೨,೧೯೦೪ ರಂದು ಉತ್ತರ ಪ್ರದೇಶದ ವಾರಣಾಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಘಲ್ಸಾಯಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನನವಾಯಿತು.ಎಳವೆಯಲ್ಲೆ ಶಿಕ್ಷಕರಾಗಿದ್ದ ತಂದೆಯ ಸಾವು, ಕಿತ್ತು ತಿನ್ನುವ ಬಡತನ,ತಾಯಿಯ ಬವಣೆಗಳನ್ನು ನೋಡಿ ಮೈಗೂಡಿಸಿಕೊಂಡೇ ಬಾಲ್ಯವನ್ನ ಕಳೆದ ಶಾಸ್ತ್ರಿ ಮುಘಲ್ಸಾಯಿಯಲ್ಲಿರುವ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.ಹರೀಶ್ ಚಂದ್ರ ಫ್ರೌಢ ಶಾಲೆಯಲ್ಲಿ ಫ್ರೌಡ ಶಿಕ್ಷಣ ಮುಂದುವರೆಸಿದರು‌.


ತಮ್ಮ ಇಡೀ ಕುಟುಂಬ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನೋಡುತ್ತಲೇ ಬೆಳೆದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಹರೀಶ್ ಚಂದ್ರ ಫ್ರೌಢ ಶಾಲೆಯಲ್ಲಿ ಓದುತ್ತಿರುವಾಗ ನಿಷ್ಕಾಮೇಶ್ವರ ಪ್ರಸಾದ್ ಮಿಶ್ರಾ ಎಂಬ ದೇಶ ಭಕ್ತ ಹಾಗೂ ಗೌರವಾನ್ವಿತ ಶಿಕ್ಷಕರೊಬ್ಬರಿಂದ ಸ್ಫೂರ್ತಿ ಪಡೆದು ಸ್ವಾತಂತ್ರ್ಯ ಚಳುವಳಿಯಲ್ಲಿ ಆಸಕ್ತಿ ತೋರತೊಡಗಿದರು.ದೇಶದ ಇತಿಹಾಸ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಅನ್ನಿ ಬೆಸೆಂಟ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರ ಕೃತಿಗಳನ್ನು ಈ ಪ್ರಾಯದಲ್ಲೇ ಚಿತ್ತವಿಟ್ಟು ಓದಿ ಅರ್ಥೈಸಿಕೊಂಡರು.ಅದರ ಬಗ್ಗೆ ಸಂಶೋಧನೆಯನ್ನೂ ಪ್ರಾರಂಭಿಸಿದ್ದರು.

ಹತ್ತನೇ ತರಗತಿಯಲ್ಲಿರುವಾಗ ಅಂದರೆ ಜನವರಿ ೧೯೨೧ ರಲ್ಲಿ ಗಾಂಧಿ ಮತ್ತು ಪಂಡಿತ್ ಮದನ್ ಮಾಳವೀಯ ಅವರು ಬನಾರಸ್ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಥಮ ಭಾರಿಗೆ ಭಾಗವಹಿಸಿದರು.ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ಹಿಂದೆ ಸರಿದು ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ ಮಹಾತ್ಮಾ ಗಾಂಧಿಯವರ ಮಾತಿನಿಂದ ಪ್ರೇರಿತನಾಗಿ ಹರೀಶ್ ಚಂದ್ರ ಶಾಲೆಯನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಶಾಖೆಗೆ ಸ್ವಯಂ ಸೇವಕರಾಗಿ ಸೇರಿ ಸರ್ಕಾರದ ವಿರೋಧಿ ಪ್ರದರ್ಶನಗಳಲ್ಲಿ,ಸಭೆಗಳಲ್ಲಿ ಸಕ್ರೀಯವಾಗಿ ಕೋಣಿಸಿಕೊಂಡರು.ಪರಿಣಾಮ ಅವರನ್ನು ಶೀಘ್ರವಾಗಿ ಬಂಧಿಸಲಾಯಿತಾದರೂ ಅಪ್ರಾಪ್ತರೆಂಬ ಕಾರಣಕ್ಕೆ ಬಿಡುಗಡೆಯನ್ನೂ ಮಾಡಲಾಯಿತು.

ತಮ್ಮ ಶಿಕ್ಷಣವನ್ನು ಮುಂದುವರೆಸಬೇಕೆಂಬುದರ ಅಗತ್ಯತೆಯನ್ನು ಮನಗಂಡು ಲಾಲ್ ಬಹದ್ದೂರ್ ತತ್ವ ಶಾಸ್ತ್ರ,ನೀತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ಫಲವಾಗಿ ಅವರಿಗೆ ವಿದ್ಯಾಪೀಠದಿಂದ ಶಾಸ್ತ್ರಿ ( ವಿದ್ವಾಂಸ) ಎಂಬ ಬಿರುದು ನೀಡಿ ಗೌರವಿಸಲಾಯಿತು.

ಬಾಲ್ಯದಿಂದಲೇ ಧೈರ್ಯ,ಸಾಹಸ, ಪ್ರೀತಿ, ತಾಳ್ಮೆ, ಸ್ವಯಂ ನಿಯಂತ್ರಣ,‌ಸೌಜನ್ಯ,ನಿಸ್ವಾರ್ಥತೆಯಂತಹ ಜೀವನ ಪಾಠಗಳನ್ನು,ಮೇರು ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದ ಶಾಸ್ತ್ರೀಜಿ ಸ್ವಾತಂತ್ರ್ಯ ಚಳುವಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟರು.

ಸ್ವಾವಲಂಬನೆಯಿಂದ ಬಲಿಷ್ಟ ರಾಷ್ಟ್ರ ನಿರ್ಮಾಣ ಖಂಡಿತಾ ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದರು.ಉದಾತ್ತ ಭರವಸೆಗಳನ್ನು ಸಾರುವ ಭಾಷೆಗಳಿಗಿಂತ ಕೆಲಸದ ಮೂಲಕ ತೊಡಗಿಕೊಳ್ಳಬೇಕೆಂಬುದನ್ನು ಜಾಗ್ರತಿಯನ್ನು ಮೂಡಿಸಬೇಕೆಂಬುದನ್ನು ಬಯಸಿದ್ದರು.

ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಪ್ರಧಾನಿಯಾಗುವ ಮೊದಲೇ ಅವರು ರಾಜ್ಯ ಸಚಿವ ಮತ್ತು ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು.ಮೊದಲ ಮಹಿಳಾ ಬಸ್ ಕಂಡಕ್ಟರ್ ಗಳ ನೇಮಕಾತಿ ಹಾಗೂ ಲಾಠಿಗಳ ಬದಲಿಗೆ ಪೋಲಿಸ್ ವಾಟರ್ ಜೆಟ್ ಗಳನ್ನು ಪರಿಚಯಿಸಿದ ಮೊದಲಿಗರು.೧೯೪೭ ರ ಕೋಮು ಗಲಭೆಗಳನ್ನು ನಿಗ್ರಹಿಸುವಲ್ಲಿ ಯಶಸ್ಸನ್ನು ಸಾಧಿಸಿ ನಿರಾಶ್ರಿತರಿಗೆ ಪುನರ್ವಸತಿ ಮತ್ತು ಸಾಮೂಹಿಕ ವಲಸೆಯಂಥ ಗಂಭೀರ ಸಮಸ್ಯೆಗಳಿಗೆ ಪರಿಹಾರ ನೀಡಿದರು.೧೯೫೯ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ೧೯೬೧ ರಲ್ಲಿ ಗೃಹ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದರು.


೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ತರುವಾಯ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಾರಿಗೆ ಮತ್ತು ಗೃಹ ಸಚಿವಾಲಯದ ಖಾತೆಯನ್ನು ಪಡೆದರು.೧೯೫೨ ರಲ್ಲಿ ಅವರಿಗೆ ರೈಲ್ವೆ ಸಚಿವಾಲಯ ನೀಡಲಾಯಿತು.ಮುಂದೆ ಜವಾಹರಲಾಲ್ ನೆಹರು ನಿಧನರಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೇವಲ ೧೮ ತಿಂಗಳ ಅತ್ಯಂತ ಕಡಿಮೆ ಅವಧಿಗೆ ಭಾರತದ ಎರಡನೇಯ ಹೆಮ್ಮೆಯ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದರು.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅವರ ಮಹಾನ್ ವ್ಯಕ್ತಿತ್ವಕ್ಕೆ “ಭಾರತ ರತ್ನ” ಪ್ರಶಸ್ತಿಯನ್ನೂ ಪಡೆದರು.

ಸಮಾಜ ಸುಧಾರಣೆಯ ಹೊಣೆ ಹೊತ್ತ ಅವರು ೧೯೬೫ ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ‘ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆಯನ್ನು ಕೂಗಿದರು.ರೈತರಿಗೆ ಬೆನ್ನೆಲುಬಾಗಿ ನಿಂತ ಈ ಘೋಷಣಾ ವಾಕ್ಯ ಕೃಷಿಯ ಮಹತ್ವವನ್ನು ಎತ್ತಿ ಹಿಡಿಯಿತು.

ವರದಕ್ಷಿಣೆ ವ್ಯವಸ್ಥೆಯನ್ನು ಖಂಡಿಸಿ ಅದರ ವಿರುದ್ಧ ದನಿಯೆತ್ತಿದರು.ಸ್ವತ: ತಾವೇ ಮಾವನಿಂದ ವರದಕ್ಷಿಣೆ ಪಡೆಯಲು ನಿರಾಕರಿಸಿದರು.

ಆಹಾರದ ಕೊರತೆ, ನಿರುದ್ಯೋಗ, ಮತ್ತು ಬಡತನದಂತಹ ಪ್ರಾಥಮಿಕ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಲು ನಿರಂತರವಾಗಿ ಹೋರಾಟ ನಡೆಸಿದರು.ಅದಕ್ಕಾಗಿ ಸುಧೀರ್ಘ ಕಾಲದ ಕಾರ್ಯತಂತ್ರ ರೂಪಿಸುವಂತೆ ತಜ್ಞರಿಗೆ ಸಲಹೆ ನೀಡಿದರು. ಹಸಿರು ಕ್ರಾಂತಿಯ ಹರಿಕಾರ ತಾವಾದರು.

” ಶತ್ರು ಪಡೆಯನ್ನು ಬಲದಿಂದ ಎದುರಿಸಲಾಗುವುದು” ಎಂಬುದಾಗಿ ಶತ್ರು ದೇಶವಾದ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಲೇ ೧೯೬೫ರಲ್ಲಿ ಅಂದರೆ ತಾವು ಪ್ರಧಾನಿಯಾಗಿದ್ದ ಸಮಯದಲ್ಲೇ ಪಾಕಿಸ್ತಾನದ ಆಕ್ರಮಣವನ್ನು ಎದುರಿಸಿದರು.

ಒಳ್ಳೆಯ ಓದುಗ ಮತ್ತು ಪುಸ್ತಕ ಪ್ರಿಯರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಮೇಡಂ ಕ್ಯೂರಿ ಅವರ ಆತ್ಮ ಕಥೆಯನ್ನು ಹಿಂದಿ ಭಾಷೆಗೆ ಅನುವಾದಿಸಿದರು.ಅವರ ನಾಯಕತ್ವ ದೇಶ ಭಕ್ತಿ ಮಹಾತ್ಮಾ ಗಾಂಧಿಯಷ್ಟೇ ಮಹತ್ವದ್ದು.ಹಾಗೂ ಸಾರ್ವಕಾಲಿಕವಾಗಿಯೂ ಅನುಕರಣೀಯ ವಾದುದು.RBI: MPC ಮುನ್ನ ಮೂವರು ಹೊಸ ಬಾಹ್ಯ ಸದಸ್ಯರ ಘೋಷಣೆ

ಜನವರಿ ೧೧,೧೯೬೬ರಂದು ಭಾರತವು ಒಬ್ಬ ಮಹಾನ್ ಶ್ರದ್ಧಾವಂತ ಮತ್ತು ಧೈರ್ಯಶಾಲಿ ವ್ಯಕ್ತಿಯನ್ನು ಕಳಕೊಂಡಿತು.ಅವರು ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿದ್ದರು.ಅವರು ಬಿತ್ತಿದ ಆದರ್ಶಗಳು ಇಂದಿಗೂ ಸಮಾಜಕ್ಕೆ ಉತ್ತಮ ಸಂದೇಶವನ್ನೇ ನೀಡುತ್ತಿವೆ.ಚೈತನ್ಯ ಶೀಲತೆ,ಧಕ್ಷತೆ,ಧೃಡ ನಿಲುವಿನ ದಾರ್ಶನಿಕ ಮತ್ತು ಅಪಾರ ದೇಶ ಭಕ್ತಿಯನ್ನು ಹೊಂದಿರುವ ಲಾಲ್ ಬಹದ್ದೂರ್ ಶಾಸ್ತ್ರಿಯವರ ” ನಾವು ಶಾಂತಿ ಮತ್ತು ಶಾಂತಿಯುತ ಅಭಿವೃದ್ಧಿಯನ್ನು ನಂಬುತ್ತೇವೆ.ನಮಗಾಗಿ ಮಾತ್ರವಲ್ಲದೇ ಪ್ರಪಂಚದಾದ್ಯಂತದ ಜನರಿಗೆ”ಎಂಬ ನುಡಿ ಮುತ್ತುಗಳು ಅವರ ಪಾರದರ್ಶಕ ನಿಲುವುಗಳು ಅಹಿಂಸಾತ್ಮಕ ತತ್ವಗಳನ್ನು ಜೀವನದಲ್ಲಿ ಅಳವಡಿಸಲು ಪ್ರೇರಕವಾಗಿವೆ.ಇಂದಿಗೂ ಅವರ ಜನ್ಮದಿನ ಪ್ರತೀ ಅಕ್ಟೋಬರ್ ೨ ರಂದು ಆಚರಿಸುವ ನಾವುಗಳು ಅವರ ಆದರ್ಶಗಳಿಗೆ ಶಿರಬಾಗಿ ಕರ್ತವ್ಯದ ಕರೆಗೆ ಪ್ರೀತಿಯಿಂದ ಓಗೊಡೋಣ.ಜೈ ಭಾರತ ಮಾತೆ.

image 2

ಸೌಮ್ಯ ಗುರು ಕಾರ್ಲೆ

Copyright © All rights reserved Newsnap | Newsever by AF themes.
error: Content is protected !!