ಶಾಲೆಗಳನ್ನು ಜನಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ಸಂಘ-ಸಂಸ್ಥೆಗಳು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವಂತಹ ಪರಿಕಲ್ಪನೆ ದೇಶದಲ್ಲೇ ಮೊದಲನೆಯದ್ದು. ಇದು ಉಳಿದವರಿಗೂ ಪ್ರೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಆಶ್ರಯದಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ ದತ್ತು ಸ್ವೀಕರಿಸಿದ ಸಂಸ್ಥೆಗಳಿಗೆ ಶಾಲಾ ದತ್ತು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರದೊಂದಿಗೆ ಸಮುದಾಯವೂ ಕೈಜೋಡಿಸಿ ಶಾಲೆಗಳನ್ನು ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ವಿಶಿಷ್ಟವಾದ ಕಲ್ಪನೆಯಾಗಿದ್ದು, ಇದರಿಂದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದರು.
2020-21ನೇ ಸಾಲಿನ ಆಯವ್ಯದಲ್ಲಿ ಘೋಷಿಸಿದಂತೆ ರಾಜ್ಯದ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ತಮ್ಮ ಅವಧಿಯಲ್ಲಿ ಕನಿಷ್ಠ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಅಭಿವೃದ್ಧಿ ಪಡಿಸುವುದು ಸೇರಿದಂತೆ ರಾಜ್ಯದ 34 ಹೆಚ್ಚು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ದತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ನಮ್ಮ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ಮಠ-ಮಾನ್ಯಗಳು, ಶಿಕ್ಷಣ ಸಂಸ್ಥೆಗಳು ಶಿಕ್ಷಣ, ಜ್ಞಾನ, ಅನ್ನ ಅಕ್ಷರ, ದಾಸೋಹದಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲರಿಗೂ ಜಾತಿಭೇದವಿಲ್ಲದೇ ಶಿಕ್ಷಣ ನೀಡಿದ್ದರಿಂದಲೇ ನಾಡು ಇಂದು ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗಿದೆ. ಈಗ ಇಡೀ ಸಮುದಾಯ ಮತ್ತು ಜನಪ್ರತಿನಿಧಿಗಳು ತಮ್ಮ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಪರಿಕಲ್ಪನೆಯ ಯೋಜನೆ ವಿಶಿಷ್ಟವಾಗಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಭಾಗಿಯಾಗಿ ರಾಜ್ಯದ ಶಾಲೆಗಳು ಅಭಿವೃದ್ಧಿಯಾಗುವಂತಾಗಲಿ ಎಂದರು.
ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ:
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಕೂಲಿ ಕೆಲಸ ಮಾಡುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ತಮ್ಮ ಆದಾಯದ ಶೇ. 20ರಷ್ಟನ್ನು ಶುಲ್ಕವಾಗಿ ತುಂಬುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದರಿಂದ ಆ ಶೇ. 20 ಹಣವನ್ನು ತಮ್ಮ ಕುಟುಂಬದ ಇತರೆ ಸಂಗತಿಗಳಿಗೆ ಬಳಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನಾವು ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಮುದಾಯದ ಭಾಗಿಯಾಗುವಿಕೆ ನಿಜಕ್ಕೂ ಅತ್ಯಂತ ವೈಶಿಷ್ಟ್ಯ ಪೂರ್ಣವಾದುದು ಎಂದರು.
ರಾಜ್ಯದಲ್ಲಿ 53 ಸಾವಿರ ಸರ್ಕಾರಿ ಶಾಲೆಗಳಿದ್ದು, ಶೇ. 85ಕ್ಕಿಂತ ಹೆಚ್ಚಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವುದರಿಂದ ಅವುಗಳ ಅಭಿವೃದ್ಧಿಗೆ ಸಮಾಜದ ಸಕ್ರಿಯ ಭಾಗಿಯಾಗುವಿಕೆಯ ಅಗತ್ಯವಿದ್ದು, ಈ ದತ್ತು ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ ಸಚಿವರು, ಸಮುದಾಯ ತಮ್ಮೂರಿನ ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಬಂಟ್ವಾಳ ತಾಲೂಕಿನ ದದ್ದಲಕಾಡು ಗ್ರಾಮದ ಶಾಲೆಯನ್ನು ಅಭಿವೃದ್ಧಿಪಡಿಸಿ ಅದನ್ನು ಗ್ರಾಮಸ್ಥರು ಉಳಿಸಿಕೊಂಡಿದ್ದನ್ನು ಉದಾಹರಿಸಿದರು. ತಾವು ಇತ್ತೀಚಿಗೆ ಅಧ್ಯಯನ ಮಾಡಿದ ಇಂಗ್ಲಿಷ್‍ನ ‘ಆರ್ಡಿನರಿ ಪೀಪಲ್ ಎಕ್ಸ್ಟ್ರಾರ್ಡಿನರಿ ಟೀಚರ್ಸ್’ ಎಂಬ ಪುಸ್ತಕ ಸಾರಾಂಶಗಳನ್ನು ಮೆಲುಕು ಹಾಕಿದ ಸುರೇಶ್ ಕುಮಾರ್ ಸರ್ಕಾರಿ ಶಾಲೆಗಳು ಏಕೆ ಅಭಿವೃದ್ಧಿಯಾಗಬೇಕು ಎಂಬುದನ್ನು ಸಚಿವರು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಸುರೇಶ್ ಕುಮಾರ್, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವ ದತ್ತು ಸ್ವೀಕಾರ ಪ್ರಮಾಣ ಪತ್ರ ಸ್ವೀಕರಿಸಿದರು.
ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಭಾಗವಹಿಸಿದ್ದರು. ಸ್ಥಳೀಯ ವಿಧಾಸಭಾ ಸದಸ್ಯ ರಿಜ್ಞಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಟಿ. ಶ್ರೀಕಂಠೇಗೌಡ, ಹನುಮಂತ್ ಆರ್. ನಿರಾಣಿ, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.
More Stories
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ