December 22, 2024

Newsnap Kannada

The World at your finger tips!

pumpkin seeds

ಹೃದಯ ಸಂಜೀವಿನಿ : ಕುಂಬಳ ಬೀಜಗಳು.

Spread the love

ನಮ್ಮ ಬಾಲ್ಯದಲ್ಲಿ ಕುಂಬಳಕಾಯಿಯ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ, ಟೈಂ ಪಾಸ್‌ಗಾಗಿ ತಿನ್ನುತ್ತಿದ್ದ ನೆನಪಿದೆಯೇ ಹಾಗೆ ಟೈಂ ಪಾಸ್‌ಗಾಗಿ ತಿನ್ನುತ್ತಿದ್ದಿದ್ದು ನೆನಪಿಪಿದೆಯೇ.

ಆ ವಯಸ್ಸಿನಲ್ಲಿ ಕುಂಬಳಕಾಯಿ ಬೀಜಗಳು ದೇಹಕ್ಕೆ ಹೇಗೆಲ್ಲಾ ಉಪಯೋಗಗಳನ್ನು ನೀಡುತ್ತಿತ್ತು ಎಂಬುದರ ಅರಿವು ನಮಗಿರಲಿಲ್ಲ. ಈಗಂತೂ ಸಮಯದ ಅಭಾವದಿಂದ ಅದನ್ನು ಒಣಗಿಸಿ ಸಿಪ್ಪೆ ತೆಗೆದು ತಿನ್ನುವುದನ್ನು ಮರೆತೇ ಹೋಗಿದ್ದೇವೆ ಎಂದರೆ ತಪ್ಪಾಗಲಾರದು.

image 10

ಕುಂಬಳಕಾಯಿಯಿಂದ ಯಾವುದೇ ಖಾದ್ಯವನ್ನು ತಯಾರಿಸುವಾಗಲೂ ಬೀಜವನ್ನು ಎಸೆಯುತ್ತೇವೆ, ಇದರಿಂದ ಪ್ರಯೋಜನವಿಲ್ಲ ಎಂದುಕೊಳ್ಳುವವರೇ ಜಾಸ್ತಿ. ಕುಂಬಳಕಾಯಿ ಬೀಜಗಳು ನೋಡಲು ಚಿಕ್ಕದಾಗಿದ್ದರೂ, ಇದರಿಂದ ಅಪಾರವಾದ ಆರೋಗ್ಯ ಪ್ರಯೋಜನಗಳಿವೆ. ನಮ್ಮ ದೈನಂದಿನ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇವಿಸುವ ಮೂಲಕ, ದೀರ್ಘಕಾಲೀನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮುಖ್ಯವಾಗಿ ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣ, ನಾರಿನಾಂಶ, ವಿಟಮಿನ್ ಕೆ, ಮ್ಯಾಂಗನೀಸ್, ಮೆಗ್ನೀಶಿಯಮ್‌ಗಳಿಂದ ಸಮೃದ್ಧವಾಗಿದೆ. ಕ್ಯಾಲ್ಸಿಯಂ, ಬಿ 2, ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ.

1.ಮೆಗ್ನೀಶಿಯo ಕೊರತೆಯಿಂದ ಹೃದಯ ಬಡಿತದಲ್ಲಿ ಏರುಪೇರುಂಟಾಗಿ ಅನಿರೀಕ್ಷಿತ ಹೃದಯಾಘಾತವುಂಟಾಗುವ ಅಪಾಯವಿರುತ್ತದೆ. ಕುಂಬಳ ಬೀಜದ ಸೇವನೆಯು ಹೃದಯಾಘಾತದ ಅಪಾಯದಿಂದ ದೂರವಿಡಲು ಸಹಾಯ ಮಾಡುತ್ತದೆ.

2.ಕುಂಬಳ ಬೀಜದಲ್ಲಿ ಹೇರಳವಾಗಿರುವ ಮೆಗ್ನೀಶಿಯo ಸತ್ವವು ರಕ್ತನಾಳಗಳನ್ನು ಶುದ್ಧೀಕರಿಸಿ, ರಕ್ತನಾಳಗಳನ್ನು ಮೃದುಗೊಳ್ಳುವಂತೆ ಮಾಡುತ್ತದೆ. ಇದರಿಂದ ಅನಿರೀಕ್ಷಿತ ಸ್ಟ್ರೋಕ್ ಉಂಟಾಗುವಿಕೆಯಿಂದ ಪಾರಾಗಲು ಸಹಾಯಕವಾಗುತ್ತದೆ.

3.ಕುಂಬಳಕಾಯಿ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿ. ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕುಂಬಳಕಾಯಿ ಬೀಜಗಳಿಂದ ಪರಿಹಾರದಂತೆ ಸೇವಿಸಬಹುದು.

4.ಕುಂಬಳಕಾಯಿ ಬೀಜ ಸೇವನೆಯಿಂದ ಉರಿಯೂತ ನಿವಾರಣೆ ಆಗಲಿದೆ. ಕೀಲು ನೋವು, ಸ್ನಾಯು ನೋವು ಮತ್ತು ಮೂಳೆ ನೋವಿನ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.

5.ಕುಂಬಳ ಬೀಜಗಳಲ್ಲಿ “ಚಿಲ್-ಔಟ್ ಖನಿಜ” ಎಂದು ಕರೆಯಲ್ಪಡುವ ಮೆಗ್ನೀಶಿಯo ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುವ ಶಕ್ತಿಯನ್ನು ಹೊಂದಿದ್ದು, ಮನಸ್ಥಿತಿ, ನಿದ್ರೆ ಮತ್ತು ಒತ್ತಡವನ್ನು ಸುಧಾರಿಸುತ್ತದೆ.

6.ಕುಂಬಳಕಾಯಿ ಬೀಜಗಳ ಸೇವೆನೆಯು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಶೇಖರಣೆ ಆಗದಂತೆ ಇದು ತಡೆಯುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

7.ಕುಂಬಳಕಾಯಿ ಬೀಜದ ನಿಯಮಿತ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನ್ಯೂಟ್ರಿಷನ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಆದ್ದರಿಂದ, ಇದು ಟೈಪ್ 2 ಮಧುಮೇಹ ಹೊಂದಿರುವ ಜನರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

8.ನಿದ್ರಾಹೀನತೆ ಸಮಸ್ಯೆಗೂ ಇದು ರಾಮ ಬಾಣವಾಗಿದೆ. ಕುಂಬಳಕಾಯಿ ಬೀಜದ ಪುಡಿಯನ್ನು ಕುದಿಸಿದ ಹಸುವಿನ ಹಾಲಿನ ಜೊತೆ ತೆಗೆದುಕೊಂಡು ಮಲಗಿದಾಗ ಒಳ್ಳೆಯ ನಿದ್ದೆ ನಮ್ಮ ಪಾಲಾಗುತ್ತದೆ.

9.ಮಹಿಳೆಯರಿಗೆ ಮಾಸಿಕ ಹೊಟ್ಟೆ ನೋವಿದ್ದಾಗ ಕುಂಬಳಕಾಯಿ ಬೀಜವನ್ನು ಸೇವಿಸುವುದು ಉತ್ತಮ. ಋತುಚಕ್ರ ಶುರುವಾಗಲು 14 ದಿನ ಇರಬೇಕಾದರೆ, ಕುಂಬಳಕಾಯಿ ಬೀಜ ಸೇವಿಸುತ್ತ ಬಂದರೆ ಕ್ರಮೇಣ ಹೊಟ್ಟೆ ನೋವು ಕಡಿಮೆಯಾಗುತ್ತದೆ.

10.ಜರ್ನಲ್ ಆಫ್ ಮೆಡಿಸಿನಲ್ ಫುಡ್ ನಲ್ಲಿ ಪ್ರಕಟವಾದ ಅಧ್ಯಯನವು ಕುಂಬಳಕಾಯಿ ಬೀಜದ ಸಾರವು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಡು ಹಿಡಿದಿದೆ. ಇತರ ಅಧ್ಯಯನಗಳಲ್ಲಿಯೂ ಕೂಡ ಕುಂಬಳಕಾಯಿ ಬೀಜಗಳು ಕ್ಯಾನ್ಸರ್ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂಬ ಅಂಶವನ್ನು ಕಂಡು ಕೊಂಡಿವೆ.

image 12

ನೆನಪಿನಲ್ಲಿಡಬೇಕಾದ ಅಂಶಗಳು

  1. ಯಾವುದೇ ಕಾರಣಕ್ಕೂ ಗರ್ಭಿಣಿಯರು, ಕುಂಬಳಕಾಯಿ ಬೀಜವನ್ನು ಸೇವಿಸಬಾರದು.ಇದು ಉಷ್ಣ ಪದಾರ್ಥವಾದ್ದರಿಂದ ಗರ್ಭಿಣಿಯರು ಇದನ್ನು ಸೇವಿಸಿದರೆ, ಮಗುವಿನ ಆರೋಗ್ಯದ ಮೇಲೆ ಇದರ ಪರಿಣಾಮವಾಗುತ್ತದೆ. ಆದ್ದರಿಂದ ಗರ್ಭಿಣಿಯರು ಕುಂಬಳಕಾಯಿ ಬೀಜದ ಉಪಯೋಗ ಮಾಡಬಾರದು. ಹಾಲು ಕುಡಿಸುವ ತಾಯಂದಿರು ಈ ಬೀಜವನ್ನು ಹೆಚ್ಚು ಬಳಸಬಾರದು ಇದರ ಸೇವೆನೆಯಿಂದ ಉಷ್ಣತೆ ಹೆಚ್ಚಾಗಿ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ.
  2. ಕುಂಬಳಕಾಯಿ ಬೀಜದಲ್ಲಿ ಸಾಕಷ್ಟು ಕೊಬ್ಬಿನ ಎಣ್ಣೆ ಇರುತ್ತದೆ. ಇದು ಕಿಬ್ಬೊಟ್ಟೆಯ ಸೆಳೆತ, ನೋವು ಹೆಚ್ಚಿಸುತ್ತದೆ. ದಿನಕ್ಕೆ ಬೆರಳೆಣಿಕೆಯಷ್ಟು ಕುಂಬಳಕಾಯಿ ಬೀಜಗಳನ್ನು ಮಾತ್ರ ಸೇವಿಸಿ ಅಥವಾ ಇತರ ಆಹಾರಗಳೊಂದಿಗೆ ಸೇವಿಸಿ.
  3. ಕಡಿಮೆ ರಕ್ತದೊತ್ತಡ ಹೊಂದಿರುವ ಜನರಿಗೆ ಅಸುರಕ್ಷಿತ.
  4. ಹೈಪೊಗ್ಲಿಸಿಮಿಯಾ ಹೊಂದಿರುವ ಜನರಿಗೆ ಸುರಕ್ಷಿತವಲ್ಲ.
    ಮಧುಮೇಹ ಇರುವವರಿಗೆ ಕುಂಬಳಕಾಯಿ ಬೀಜಗಳು ಸೂಕ್ತ ತಿಂಡಿ. ಆದಾಗ್ಯೂ,ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ,ಆದರೆ ಇದು ಹೈಪೊಗ್ಲಿಸಿಮಿಯಾ ಹೊಂದಿರುವ ಜನರಿಗೆ ಸೂಕ್ತವಲ್ಲ.

ಸೂಪರ್‌ಫುಡ್‌ಗಳ ಪಟ್ಟಿಯಲ್ಲೂ ಸ್ಥಾನ ಪಡೆದ ಕುಂಬಳಕಾಯಿ ಬೀಜಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಅವುಗಳನ್ನು ನಿಮ್ಮ ಆಹಾರದಲ್ಲಿ ಹೇಗೆ ಸೇರಿಸುವುದು ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ಬೀಜಗಳನ್ನು ನಮ್ಮ ಆಹಾರದ ಒಂದು ಭಾಗವನ್ನಾಗಿ ಮಾಡಲು ತಜ್ಞರು ಸೂಚಿಸಿದ ಕೆಲವು ಮಾರ್ಗಗಳು ಇಲ್ಲಿವೆ.

ಕುಂಬಳಕಾಯಿ ಬೀಜಗಳನ್ನು ಹಾಲಿನಲ್ಲಿ ಅಥವಾ ನೀರಿನಲ್ಲಿ ನೆನೆಸಿ ಸೇವಿಸಬಹುದು. ಒಣಗಿಸಿ ಪುಡಿ ರೂಪದಲ್ಲಿಯೂ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳ ಪುಡಿಯೊಂದಿಗೆ ಬೆರೆಸಿಯೂ ತಿನ್ನಬಹುದು. ಇದರಿಂದ ಬೆನ್ನು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಗ್ರೇವಿಗಳು ಮತ್ತು ಪಲ್ಯಗಳಲ್ಲಿ, ಉಪಾಹಾರದಲ್ಲಿ ಮತ್ತು ಬ್ರೆಡ್ ಗಳಿಂದ ತಯಾರಿಸಬಹುದಾದ ತಿಂಡಿಗಳಿಗೆ ಸೇರಿಸಬಹುದು. ಅವುಗಳನ್ನು ನೆನೆಸಿ ಅಥವಾ ಹುರಿದುಕೊಂಡು ಸೇವಿಸಬಹುದು. ಸ್ಮೂಥಿಗಳು ಮತ್ತು ಎನರ್ಜಿ ಬಾರ್ ಗಳಲ್ಲಿ ಸೇರಿಸಬಹುದು. ಇವುಗಳನ್ನು ಸಲಾಡ್ ಮತ್ತು ಸೂಪ್ ಗಳಿಗೂ ಸೇರಿಸಬಹುದು.

sowmya sanath

ಶ್ರೀಮತಿ ಸೌಮ್ಯಾಸನತ್ ✍️.

Copyright © All rights reserved Newsnap | Newsever by AF themes.
error: Content is protected !!