ಮಳೆ ಅಂತ ಅಂದ್ರೇ ಸಾಕು ಮೊದ್ಲು ನೆನಪಾಗೋದು ನಂಗೆ ನೀನೇ ಕಣೋ. ಅದೆಷ್ಟು ನೆನಪುಗಳು ಆ ಮಳೆ ಹನಿಗಳಲ್ಲಿ ಮೇಳೈಸಿದೆ ಗೊತ್ತಾ?? ನೀ ಸಿಗುವರೆಗೂ ಮಳೆ ಅಂದ್ರೇನೆ ನಂಗ್ ಆಗ್ತಿರ್ಲಿಲ್ಲ, ಮಳೆ ಅಂದ್ರೇ ಬರಿ ಕೆಸರು, ಬಟ್ಟೆ ಎಲ್ಲಾ ಒದ್ದೆ, ಕಾಲೇಜಿಗೆ ಹೋಗೋದೇ ಹಿಂಸೆ, ರಗಳೆ ಅಂತಿದ್ದವಳಿಗೆ ಮೊದಲ ಬಾರಿಗೆ ಮಳೆ ಅಂದ್ರೇ ಅದೇನೋ ಹಿತ, ಅದೆಷ್ಟು ಚಂದ ಅನ್ಸಿದ್ದು ನೀ ನನ್ನ ಬದುಕಲ್ಲಿ ಸೂಚನೆಯೇ ನೀಡದೆ ಸುರಿವ ಮಳೆಯಂತೆ ನೀ ಬಂದ ಮೇಲೆಯೇ.
ಇಬ್ಬರ ದಾರಿ ಒಂದೇ ಆದ್ಮೇಲೆ ಇಬ್ಬರ ಮನವು ಒಂದಾಗಿ ಬೆರೆತಮೇಲೆ ಮೊದಲ ಬಾರಿ ನಿನ್ನ ಭೇಟಿಯಾಗಲೆಂದು ನಾನು ಅದೆಷ್ಟೋ ವರುಷಗಳ ತರುವಾಯ ಬೆಂಗಳೂರಿಗೆ ಬಂದೆ. ಒಳಗೆ ತಳಮಳ ಅಷ್ಟು ದೊಡ್ಡ ಸಿಟಿಗೆ ಮೊದಲ ಬಾರಿ ಬರ್ತಿದೀನಿ, ಎಲ್ಲಿ ಹೋಗ್ಬೇಕೋ ಅಲ್ಲಿಗೆ ಹೋಗ್ತೀನಾ, ಎಲ್ಲಾದ್ರೂ ದಾರಿ ತಪ್ಪಿ ಹೋದ್ರೆ ಗೊತ್ತಿಲ್ಲದ ಊರಲ್ಲಿ ಎಲ್ಲಿ ಅಂತ ಹುಡುಕಿ ಹೋಗ್ಲಿ ಮೊಬೈಲ್ ಇದೆ ಹಂಗೇನಾದ್ರೂ ಆದ್ರೆ ನೋಡೋಣ ಅಂದ್ಕೊಂಡು ಬೆಂಗ್ಳುರಿಗೆ ಬಂದು ಇಳಿದೆ. ಅಲ್ಲಿಂದ ನಿನ್ನ ಭೇಟಿಯಾಗುವ ಸ್ಥಳಕ್ಕೆ ಹೋಗ್ಬೇಕು ಆ ರೂಟಿನ ಬಸ್ ನಂಬರ್ ಹುಡುಕಿ ಹತ್ತಿದೆ.. ಜನ ಕಿಕ್ಕಿರಿದು ತುಂಬಿದ ಬಸ್ ಮೊಬೈಲ್ ಎಲ್ಲಾದ್ರೂ ಕಳ್ಕೊಂಡ್ರೆ ಅನ್ನೋ ಭಯಕ್ಕೆ ಬ್ಯಾಗಿನಲ್ಲಿ ಹಾಕಿಟ್ಟು ಆ ಬ್ಯಾಗನ್ನ ಬಗಲಲ್ಲಿ ಗಟ್ಟಿಯಾಗಿ ಹಿಡಿದು ನಿಂತೆ. ನನ್ ಜೀವನೆ ಆ ಮೊಬೈಲ್ನಲ್ಲಿತ್ತು.
ಯಶವಂತಪುರ ಎಷ್ಟು ದೂರ ಇದೆಯೋ ಗೊತ್ತಿಲ್ಲ. ನಾನೇ ಬರ್ತೀನಿ ಕಣೇ ಅಂದವನನ್ನು ತಡೆದೆ ನಂಗೇನ್ ಭಯನ, ನೋಡ್ತಿರು ನಿನ್ನ ಹುಡುಕಿ ಬರ್ತೀನಿ ಅಂತ ಇಲ್ದೆ ಇರೋ ಬಿಲ್ದಪ್ ಬೇರೇ, ಏನಾರ ಆಗ್ಲಿ ಅದೇ ಲಾಸ್ಟ್ ಸ್ಟಾಪ್ ಅಂತಲ್ಲ ಇಳ್ಕೊಂಡ್ರೆ ಆಯ್ತು ಅಂತ ಎಚ್ಚರಿಕೆಯಿಂದಲೇ ಸುತ್ತು ಮುತ್ತು ನೋಡುತ್ತಾ ನಿಂತೆ ಎಷ್ಟು ದೂರ ಹೋದ್ರು ನಾನು ಇಳಿಬೇಕಾದ ಸ್ಟಾಪ್ ಹೆಸರು ಕೇಳ್ತಾನು ಇಲ್ಲ ರಶ್ ಕೂಡ ಕಮ್ಮಿಯಾಗಿಲ್ಲ.
ಮುಂದೆ ಅಂತೂ ಒಂದು ಸೀಟ್ ಸಿಕ್ತು ಸುತ್ತು ಮೋಡ ಕವಿದು ಗುಡುಗು ಬರ್ತಿತ್ತು. ಆಗಲು ಇದೆ ಸಮಯ, ಬೇಸಿಗೆಯಲ್ಲಿ ಬರುವ ಮಳೆ ಅಂದ್ರೇ ಅಬ್ಬರ ಜಾಸ್ತಿ ಗುಡುಗು ಸಿಡಿಲು ಮಿಂಚಿನೊಂದಿಗೆ ಸುರಿಯೋದು.
ಛತ್ರಿ ಏನೋ ಬ್ಯಾಗ್ನಲ್ಲಿತ್ತು ಆದ್ರೂ ಅದ್ಯಾಕೋ ಆತಂಕ ಮಳೆ ಬಂದ್ರೇ ನಾವಿಬ್ರು ಒಬ್ಬರನೊಬ್ಬರು ಹುಡುಕಿ ಸಿಗೋದೇ ಕಷ್ಟ ಆಗುತ್ತೆ ಅಂತ ಅನ್ಸಿ ಒಳಗೆ ದುಃಖ ಆಗೋಯ್ತು. ಇಷ್ಟು ದೊಡ್ಡ ಊರಲ್ಲಿ ನನ್ನ ಜೀವ ಜೀವನ ಆಗಿರೋ ನಿನ್ನನ್ನ ಹುಡುಕಿ ಹೊರಟೆ. ಆದ್ರೆ ನೀನು ಸಿಗದೇ ಹೋದ್ರೆ, ನೀನು ಬರ್ದೇನೇ ಇದ್ರೆ ಹಿಂಗೇ ಏನೇನೋ ಬೇಡದಿರೋ ವಿಚಾರ ತಲೆ ಹೊಕ್ಕಿ ಕಣ್ಣಾಲಿ ತುಂಬಿದ್ವು. ಜನಗಳಿಗೆ ಕಾಣುತ್ತೆ ಕಣ್ಣೀರು ಅಂತ ತಲೆ ಬಗ್ಗಿಸಿಕೊಂಡು ಬ್ಯಾಗ್ನಲ್ಲಿದ್ದ ಮೊಬೈಲ್ ತಗೆದು ನೋಡಿದ್ರೆ ನನ್ ಹುಡುಗನ ಹತ್ತಾರು ಮಿಸ್ ಕಾಲ್ಸ್. ವಾಪಸ್ ಕಾಲ್ ಮಾಡಿದ್ದೆ ತಡ ಪುರ್ಸೊತ್ತು ಕೊಡದೆ ಬೈಯೋಕೆ ಶುರು ಮಾಡ್ದ.
“ಎಲ್ಲಿದೀಯ ಮಾರಾಯ್ತಿ, ಬಸ್ ಹತ್ತಿದಿಯ ಇಲ್ವಾ, ಎಲ್ಲಾದ್ರೂ ಮಿಸ್ಸಾಗಿ ಇಳಿದು ಎಲ್ಲಿ ಪರದಾಡ್ತಿದಿಯೋ ಏನೋ ಅಂತ ನಂಗಿಲ್ಲಿ ಗಾಬರಿ. ಫೋನ್ ಮಾಡಿದ್ರು ಎತ್ತದೆ ಅದೇನ್ ಮಾಡ್ತಿದಿಯೇ….. ಮೊಬೈಲ್ ಕಳ್ಕೊಂಡ್ಳ ಈಗ ಎಲ್ಲಿ ಅಂತ ಹುಡುಕ್ಲಿ ಅಂತ ಟೆನ್ಶನ್ನಲ್ಲಿ ಸಾಯ್ತಿದಿನಿ ಅಂತ ಒಂದೇ ಸಮನೇ ಬೈದುಬಿಟ್ಟ. ಬಸ್ ರಶ್ ಇತ್ತು ಬರ್ತೀನಿ ಇರು ಅಂದೆ. ಲೈವ್ ಲೊಕೆಷನ್ ಹಾಕು ಅಂದ.. ಅದು ಹೆಂಗ್ ಶೇರ್ ಮಾಡ್ಬೇಕು ಅನ್ನೋದು ನಂಗೆ ಗೊತ್ತಿರ್ಲಿಲ್ಲ, ಅವ್ನತ್ರನೇ ಕೇಳಿ ಅಂತೂ ಸೆಂಡ್ ಮಾಡ್ದೆ..
ಸ್ವಲ್ಪ ಹೊತ್ತಿಗೆ ಯಶವಂತಪುರ ಬಸ್ ಸ್ಟ್ಯಾಂಡ್ಗೆ ಬಸ್ ಬಂತು.. ನಾನು ಇಳಿದು ಸುತ್ತು ಮುತ್ತು ಹುಡುಕ್ತಾ ಇರುವಾಗಲೇ ಮಳೆ ಕೂಡ ಜರ್ರನೆ ಸುರಿಯೋಕೆ ಶುರು ಆಯ್ತು ಛತ್ರಿ ಬಿಡಿಸಿ ಅವ್ನಿಗೆ ಕಾಲ್ ಮಾಡಿ ಇಂಥ ಕಡೆ ನಿಂತಿದೀನಿ ಅಂದೆ ಅಷ್ಟೋತ್ತಿಗೆ ಆಗ್ಲೇ ನಮ್ಮಿಬ್ಬರ ಕಣ್ಣುಗಳು ಸಂದಿಸಿದ್ವು. ಕಾಣಿಸಿದ್ದೆ ತಡ ಅವ್ನು ಓಡೋಡಿ ಬಂದವನೇ ನನ್ನ ಛತ್ರಿಯಡಿ ತೂರಿದ. ಕೊಡೆಯ ಹಿಡಿ ಹಿಡಿದ ನನ್ನ ಕೈ ಮೇಲೆ ಅವನ ಕೈ ಹೊದಿಕೆಯಂತಾಯ್ತು.. ಅಬ್ಬಾ !! ಆ ಕ್ಷಣದಲ್ಲೂ ಮೈ ಬೆವರಿ ಕಂಪಿಸಿತು. ಅಷ್ಟು ಹತ್ತಿರದಲ್ಲಿ ಒಂದೇ ಕೊಡೆಯಡಿ ಇಬ್ಬರ ಉಸಿರು ಒಬ್ಬರಿಗೊಬ್ಬರಿಗೆ ತಾಕುವಷ್ಟು, ಎದೆ ಬಡಿತ ಕೇಳುವಷ್ಟು ಸನಿಹ, ತಲೆ ಸುತ್ತು ಬಂದು ಬಿದ್ದೆ ಬಿಡ್ತೀನಿ ಅನ್ನುವಷ್ಟು ಒಳಗೆ ಒಂಥರ ಅನುಭವ.
ಸಾರೀ ಕಣೇ ಬೈದುಬಿಟ್ಟೆ. ಕಾಲ್ ಪಿಕ್ ಮಾಡಿದ್ರೆ ಇಷ್ಟೆಲ್ಲ ಆಗ್ತಿರ್ಲಿಲ್ಲ. ಎಷ್ಟು ಸಲ ಕಾಲ್ ಮಾಡಿದ್ರು ಫೋನ್ ಎತ್ತದೆ ಇದ್ದಿದ್ದಕ್ಕೆ ಗಾಬರಿಯಾಗಿ ಸಿಟ್ಟುಬಂದು ಬೈದೇ ಕಣೇ ಸಾರಿ ಪಾ ಬೇಜಾರಾಗ್ಬೇಡ ಅಂತ ಒಂದೇ ಸಮನೇ ಆ ಮಳೆಯಂತೆ ಉಲಿತನೇ ಇದ್ದ. ಆ ನುಡಿಗಳ ಬಿಸಿ ಉಸಿರು ನನ್ ಕಿವಿಗೆ ಬೆಚ್ಚನೆ ಅನುಭವ ನೀಡಿದ್ವು.
“ನಾನು ಫೋನ್ ಬ್ಯಾಗ್ನಲ್ಲಿಟ್ಟು ಕಾಲ್ ಪಿಕ್ ಮಾಡ್ದೆ ಇದ್ದಿದ್ದೇ ಒಳ್ಳೆದಾಯ್ತು.. ನಿಂಗ್ ಇಷ್ಟೊಂದು ಚಡಪಡಿಕೆ ಆಗುತ್ತೆ ಅಂತ ಗೊತ್ತಿರ್ಲಿಲ್ಲ.. ಬೈದಿದ್ರಲ್ಲೂ ನಿನ್ನ ಕಾಳಜಿ ಪ್ರೀತಿ ಕಾಣ್ತು ಖುಷಿಯಾಯ್ತು.. ಥ್ಯಾಂಕ್ಸ್ ಬೈದಿದ್ದಕ್ಕೆ ಅಂದೆ. ” “ತರ್ಲೆ ಚುಬ್ಬಿ ಬಾ ಮಳೆ ಬಿಡೋ ತರ ಕಾಣಲ್ಲ” ಅಂತ ಕೈ ಚಾಚಿ ನನ್ನ ಬಳಸಿದ ಅವನನ್ನೇ ನೋಡುತ್ತಾ ಹೆಜ್ಜೆ ಹಾಕಿದೆ, ಇಬ್ಬರ ಒಂದೊಂದು ತೋಳುಗಳು ಕೊಡೆಯಿಂದ ಜಾರಿದ ಮಳೆ ಹನಿಗಳಿಗೆ ಒದ್ದೆಯಾಗಿತ್ತು.. ಅವನನ್ನು ಅಂಟಿ ನಡೆದ ಮನವೇಕೋ ಮುದ್ದೆಯಾಗಿತ್ತು..
ಇವೆಲ್ಲ ಆಗಿ ಅದೆಷ್ಟೋ ವರುಷ ಆದ್ರೂ ಆ ನೆನಪು ಈಗಲೂ ನಿನ್ನಂತೆಯೆ ಹಚ್ಚ ಹಸಿರು.. ನಿನ್ನಂತೆಯೇ ನಿತ್ಯ ನೂತನ.. ಮಳೆ ಜೊತೆಗೂ ಕೂಡ ನಿನ್ನಷ್ಟೇ ಆಪ್ತ ಬಂಧನ.
ಮಳೆಯಲಿ ನಿನ್ನ ಜೊತೆಯಲಿ ಈ ಬದುಕು ಎಂದೂ ಸಾಗ್ತಾನೆ ಇರ್ಲಿ.. ಜೊತೆಯಾಗಿ ಹೆಜ್ಜೆ ಹಾಕ್ತಿಯ ಅಲ್ವ ಬದುಕಿನ ಕೊನೆ ತಾಣದವರೆಗೂ, ಉಸಿರು ಚೆಲ್ಲುವವರೆಗೂ……
ಸಂಧ್ಯಾ ಗಿರಿಶ್ರೀ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ