ಜಯಚಾಮರಾಜೇಂದ್ರ ಒಡೆಯರ್ ನಮ್ಮ ಕಾಲದಲ್ಲಿ ನಾವು ಕಂಡ ಕೊನೆಯ ಅರಸರು.
ಜಯಚಾಮರಾಜೇಂದ್ರ ಒಡೆಯರ್ 1919ರ ಜುಲೈ 18ರಂದು ಜನಿಸಿದರು. ಇವರ ತಂದೆ ಕಂಠೀರವ ನರಸಿಂಹರಾಜ ಒಡೆಯರ್ ಅವರು ಚಾಮರಾಜೇಂದ್ರ ಒಡೆಯರ್ ಅವರ ಎರಡನೆಯ ಮಗನಾಗಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಮ್ಮನಾಗಿ ಮೈಸೂರಿನ ಯುವರಾಜರಾಗಿದ್ದರು.
ನಾವು ಪುಟ್ಟ ವಯಸ್ಸಿನಿಂದ ಮೈಸೂರಲ್ಲಿ ರಾಜರಿದ್ದಾರೆ ಎಂದು ಕೇಳಿದ್ದೆವು. ಆದರೆ ನಿಜವಾಗಿ ನಾನು ರಾಜರನ್ನು ಕಂಡದ್ದು 1968ರಲ್ಲಿ ಆನೆ ಮೇಲೆ ಅಂಬಾರಿಯಲ್ಲಿ ದಿಗ್ಗಜರಾಗಿ ಕುಳಿತ ಅಪ್ಪ ಮಗರನ್ನು ಕಂಡಾಗಲೇ. ಅಂದಿನ ದಿನಗಳಲ್ಲಿ ಮೈಸೂರಿನಲ್ಲಿ ದಸರಾ ವೈಭವ ನೋಡುವುದು, ಜಂಬೂಸವಾರಿ ಮೆರವಣಿಗೆ ನೋಡುವುದು ಕಣ್ಣಿಗೆ ಹಬ್ಬವಾಗಿತ್ತು. ನಮ್ಮ ಹಿಂದಿನವರು ನಮಗೆ ಹೇಳ್ತಾ ಇದ್ರು “ನಾವು ಚಿಕ್ಕವರಿದ್ದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೆರವಣಿಗೆ ನೋಡೋಕೆ ಇನ್ನೂ ಎಷ್ಟು ಚೆನ್ನಾಗಿರ್ತಿತ್ತು ಗೊತ್ತಾ, ಎರಡೂ ಕಣ್ಣು ಸಾಲದಿತ್ತು ಅಂತ!”
ಒಡೆಯರ್ ಕಾಲದಲ್ಲಿ ಅರಮನೆಯ ಆವರಣದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವ, ಯಾವುದೋ ಶಿಫಾರಸ್ಸಿನ ಮೇಲೆ ಅರಮನೆ ದರ್ಶನ, ಗ್ಯಾಲರಿಯಲ್ಲಿ ಕುಳಿತು ದರ್ಬಾರ್ ನೋಡುವುದು ಇವೆಲ್ಲಾ ಖುಷಿ ಕೊಡುತ್ತಿದ್ದವು.
ಜಯಜಾಮರಾಜೇಂದ್ರ ಒಡೆಯರ್ ಮೈಸೂರು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನಾ ನಂತರದಲ್ಲಿ 1940ರಿಂದ 1950ರವರೆಗೆ ರಾಜ್ಯಭಾರ ನಡೆಸಿದರು.
ಮುಂದೆ ರಾಜಪ್ರಮುಖರಾಗಿ, ಕರ್ನಾಟಕದ ರಾಜ್ಯಪಾಲರಾಗಿ ಮತ್ತು ಮದ್ರಾಸಿನಲ್ಲಿ ಎರಡು ವರ್ಷ ಕಾಲ ರಾಜ್ಯಪಾಲರಾಗಿ, ಹೀಗೆ 1966ರ ವರ್ಷದವರೆಗೆ ಅವರು ರಾಜರಾಗದಿದ್ದರೂ ಹಲವು ಅಧಿಕಾರಗಳ ಮರ್ಯಾದೆ ಪಡೆದಿದ್ದರು.
ಸಂಗೀತದಲ್ಲಿ ಮೈಸೂರರಸರಿಗೆ ಪ್ರೀತಿ ಇತ್ತು ಎಂಬುದು ಸರ್ವವೇದ್ಯ. ನಮ್ಮ ನಾಡಿನಲ್ಲಿ ಸಂಗೀತಗಾರರಿಗೆ ಸಿಕ್ಕ ಮಹತ್ವದ ಗೌರವಗಳಿಗೆ ಮೈಸೂರರಸರು ಎಂದೂ ಅಭಿನಂದಾರ್ಹರು. ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಪಾಶ್ಚಿಮಾತ್ಯ ಮತ್ತು ಕರ್ನಾಟಕ ಸಂಗೀತದ ಪರಿಚಯವಿತ್ತು. ಅವರ ರಚನೆಗಳೆಂದು ಹಲವು ಕೃತಿಗಳು ಜನಪ್ರಿಯತೆ ಪಡೆದಿವೆ.
ಜಯಚಾಮರಾಜೇಂದ್ರ ಒಡೆಯರ್ ಅವರು, ಅಂದಿನ ಪ್ರಧಾನಿ ಇಂದಿರಾಗಾಂಧಿ ಒಂದು ದಿನ ಇದ್ದಕ್ಕಿದ್ದಂತೆ ರಾಜಮಹಾರಾಜರಿಗೆ ಕೊಡುತ್ತಿದ್ದ ಕೊಡುತ್ತಿದ್ದ ರಾಜಧನವನ್ನು ನಿಲ್ಲಿಸುವವರೆಗೆ ನಡೆಸುತ್ತಿದ್ದ ದರ್ಬಾರು, ಅಂಬಾರಿ ಮೆರವಣಿಗೆ ನೋಡಿದ್ದರ ಜೊತೆಗೆ ಅವರು 1974ರ ಸೆಪ್ಟೆಂಬರ್ 23ರಂದು ನಿಧನರಾದಾಗ ಕಂಡ ಅವರ ಅಂತಿಮ ಯಾತ್ರೆ ಕೂಡಾ ಇನ್ನೂ ನೆನಪಲ್ಲಿದೆ.
ಹೀಗೆ ನಾವು ಕಂಡ ಕಡೆಯ ಅರಸರಾಗಿ ಜಯಚಾಮರಾಜೇಂದ್ರ ಒಡೆಯರ್ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ.
ತಿರು ಶ್ರೀಧರ ✍️.
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.