ದೇವನೆಂಬ ಭಾವ ಎಲ್ಲರಲ್ಲೂ ಇದ್ದರೂ ಅವನನ್ನು ಕಾಣುವ ದೃಷ್ಟಿಕೋನ ಮಾತ್ರ ಭಿನ್ನ ಭಿನ್ನವಾಗಿವೆ.
ಈ ಸುಂದರವಾದ ಪ್ರಕೃತಿಯ ನಡುವೆ ಹಚ್ಚ ಹಸಿರನ್ನು ಹರವಿ,ಆಕಾಶದೆಲ್ಲೆಡೆ ತಾರಾ ಮಂಡಲದ ಸೊಬಗನ್ನು ಚೆಲ್ಲಿ,ಈ ಭೂಮಿಯನ್ನು ಸಿಂಗರಿಸುವ ಬೆಟ್ಟ,ಗುಡ್ಡ,ನದಿ,ಸರೋವರ,ಗಿಡ ಮರ,ಹಕ್ಕಿ,ವನ್ಯ ಸಂಕುಲದ ಸಿರಿಯನ್ನೆಲ್ಲ ನಮಗಾಗಿ ನೀಡಿ ಈ ಲೋಕಕ್ಕೆ ನಮಗೆ ಪ್ರವಾಸಿಗರಾಗಿ ಕರೆತಂದ ಆ ಅಗೋಚರ ಶಕ್ತಿಯೇ ದೇವರು ಎನ್ನಬಹುದು.
ಸಾಮಾನ್ಯವಾಗಿ ಯಾರಾದರೂ ನಮಗೆ ದೇವರು ಹೇಗಿರುತ್ತಾನೆ ಕೇಳಿದರೆ ಮನುಷ್ಯರಂತೆಯೇ ರೂಪ ಹೊಂದಿರುತ್ತಾನೆ ಎಂದುಕೊಂಡು ಸ್ತ್ರೀ ಅಥವಾ ಪುಲ್ಲಿಂಗ ರೂಪದಲ್ಲಿರಬಹುದು ಎಂಬ ಪರಿಕಲ್ಪನೆಯಲ್ಲಿ ದೇವರನ್ನು ಅವನು ಅಥವಾ ಅವಳು ಎಂದು ಕರೆಯುತ್ತೇವೆ.ಏಕೆಂದರೆ ಈ ಪ್ರಪಂಚದಲ್ಲಿ ಹೆಣ್ಣು ಗಂಡು ಅಂತ ನಮಗೆ ಸಂಬಂಧಿಸಿದ್ದೆಲ್ಲ ದೇವರಿಗೂ ಸಂಬಂಧಿಸಿರಬಹುದು ಎಂದುಕೊಳ್ಳುತ್ತೇವೆ. ಈ ಬಯಲೊಳಗೆ ಭೂಮಿಯೊಂದು ಚಿಕ್ಕ ಕಣವಷ್ಟೆ.ಆ ಕಣದಲ್ಲಿ ಅದೆಷ್ಟೋ ತರ್ಕಕ್ಕೆ ನಿಲುಕದ ಜೀವ ರಾಶಿಗಳಿವೆ.ಅದರಲ್ಲಿ ಮನಿಷ್ಯನೂ ಒಬ್ಬ ಸಾಮಾನ್ಯ ಜೀವಿ.ಯಾರಿಗೆ ಗೊತ್ತು ಮನುಷ್ಯನಂತೆ ಎಲ್ಲ ಜೀವಿ ದೇವರ ಪರಿಕಲ್ಪನೆ ಹೊಂದಿವೆಯೋ ಇಲ್ಲವೋ ಅಂತ.ತಮ್ಮ ಪಾಡಿಗೆ ತಾವು ಹುಟ್ಟಿ ಎಲ್ಲವನ್ನೂ ಅನುಭವಿಸಿ ಕಾಲವಾಗುತ್ತಿವೆ.ಆದರೆ ಮನುಷ್ಯ ಮಾತ್ರ ತನ್ನಿಷ್ಟದಂತೆ ದೇವರನ್ನು ಕಲ್ಪಿಸಿಕೊಂಡು ಡಾಂಭಿಕತೆ ತೋರುವನು.ನಿತ್ಯ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಕಾರಣವಾದ ಅಗೋಚರ ಶಕ್ತಿ ಮಾತ್ರ ಪರಮ ಸತ್ಯಶಕ್ತಿ.ಆದರೆ ಆ ಚೈತನ್ಯ ಶಕ್ತಿ ಮಾತ್ರ ಸ್ತ್ರೀಯಳೂ ಅಲ್ಲ ಪುರುಷನೂ ಅಲ್ಲ.ಅದಕ್ಕೆ ಒಂದೇ ಆಕಾರವೂ ಇಲ್ಲ.ಅದೊಂದು ನಿರಾಕಾರ ,ನಿರ್ಗುಣ ಶಕ್ತಿ ಅಷ್ಟೆ.
ನಿರಾಕಾರ ನಿರ್ಗುಣ ದೇವನೆಂದು ಬಲ್ಲವರು ಹೇಳಿದರು.ಆದರೂ ದೇವರನ್ನು ಒಂದೇ ಕಡೆಗೆ ಪ್ರತಿಷ್ಟಾಪಿಸಿ ಮೂರ್ತಿ ರೂಪ ನೀಡಿ ತಾನೇ ದೇವನಿಗೊಂದು ಹೆಸರು ಕೊಟ್ಟು ತನ್ನಿಷ್ಟದಂತೆ ಕಲ್ಪಿಸಿಕೊಂಡು ಪೂಜಿಸುವುದು ಮನುಷ್ಯನ ಸಂಕುಚಿತ ಭಾವದ ಲಕ್ಷಣ.
ಬಯಲೇ ಆ ದೇವನ ಆಲಯ .ಹೀಗಿರುವಾಗ ದೇವರನ್ನು ದೇವಾಲಯದಲ್ಲಿ ಬಂಧಿಸಿಟ್ಟು ಪೂಜಿಸಲು ಸಾಧ್ಯವೇ..?
ಇದಲ್ಲದೆ ದೇವರ ಶಕ್ತಿಯಲ್ಲಿಯೂ ಹೆಚ್ಚು ಕಡಿಮೆ ಎಂಬ ಬೇಧ ಮಾಡುತ್ತೇವೆ.ಜಾತಿವಾರು ದೇವರು ,ಧರ್ಮದ ಆಧಾರದ ಮೇಲೆಯೂ ಬೇರೆ ಬೇರೆ ಹೆಸರಿನ ದೇವರು ಎನ್ನುವ ನಂಬಿಕೆ.
ಈ ಜಗತ್ತೇ ದೇವರ ಕುರುಹು.ಅಂದರೆ ದೇವರ ಕಲಾಕೃತಿ.ದೇವರಿದಾನೆ ಅನ್ನೋದಕ್ಕೆ ಸಾಕ್ಷಿಯೇ ಕಣ್ಣಿಗೆ ತೋರುವ ಜಗತ್ತು.ಇಲ್ಲಿರುವುದೆಲ್ಲವೂ ದೇವರ ಶಕ್ತಿ ಕಣಗಳು ಎನ್ನುವುದಾದರೆ ಕಣ ಕಣದಲ್ಲೂ ದೇವರಿರುವನು.ನಾವು ಈ ಜಗತ್ತನ್ನು ನೋಡುವಾಗ ಎಲ್ಲವೂ ಆ ಶಕ್ತಿಯ ಪ್ರತಿರೂಪ ಎಂಬ ದೃಷ್ಟಿಯಲ್ಲಿ ನೋಡಬೇಕು.ಎದೆಯೊಳಗೆ ಇಂತಹ ಭಗವತ್ ಪ್ರೇಮ ತುಂಬಿತೆಂದರೆ ಈ ಜಗತ್ತೇ ಸುಂದರ ಸ್ವರ್ಗವಾಗಿ ಕಾಣುವುದು.ತತ್ ಕ್ಷಣವೇ ಸತ್ಯಂ ಶಿವಂ ಸುಂದರಂ ಅನುಭವಿಸುತ್ತೇವೆ.
ದೇವರೆಂದರೆ ಗಾಳಿಯಂತೆ ಉಸಿರಾಡುತ ಅನುಭವಿಸಬೇಕೇ ಹೊರತು ನೋಡುವುದಲ್ಲ ,ಸೆರೆಹಿಡಿಯುವುದಲ್ಲ.ಹಾಗೆಯೇ ದೇವರನ್ನು ಅನುಭವಿಸಬೇಕು ಒಂದೇ ವಸ್ತುವಿನಲ್ಲಿ ಸೆರೆ ಹಿಡಿದು ಕಾಣುವುದಲ್ಲ.
ಒಂದು ಸರೋವರದ ದಡದಲ್ಲಿ ಒಬ್ಬ ಪರಮ ಅನುಭಾವಿ ಮತ್ತು ಆತನ ಶಿಷ್ಯರು ಕುಳಿತು ಸರೋವರದ ಗುಣಗಾನದಲ್ಲಿ ತೊಡದಿದರು.ಅಲ್ಲಿರುವ ಮೀನು ಅದನ್ನು ಆಲಿಸುತ್ತಿತ್ತು .ಕೂಡಲೇ ಮೀನಿಗೆ ಸರೋವರದ ಬಗ್ಗೆ ಕೇಳಿ ಅದನ್ನು ನೋಡಬೇಕು ಅನ್ನುವ ಮೂರ್ಖ ಆಸೆ ಬಂದಿತು.ತಾಯಿ ಮೀನಿಗೆ ತನ್ನಾಸೆಯನ್ನು ಹೇಳಿತು .ಇದನ್ನ ಕೇಳಿದ ತಾಯಿ ಮೀನಿಗೂ ಕುತೂಹಲ ಉಂಟಾಗಿ ಇಬ್ಬರೂ ಸರೋವರದ ವೀಕ್ಷಣೆ ಮಾಡೋಣ ಅಂತ ಸಾಗಿದವು.ಆದರೆ ಸರೋವರದ ದರ್ಶನ ಕಡೆಗೂ ಸಾಧ್ಯವಾಗಲಿಲ್ಲ.
ಹಾಗೆಯೇ ನಾವುಗಳೂ (ನಿಸರ್ಗದ ಮಡಿಲಲ್ಲಿ)ದೇವನ ಮನೆಯಲ್ಲೇ ಇದ್ದು ದೇವರ ಹುಡುಕಾಟದಲ್ಲಿ ತೊಡಗಿದ್ದೇವೆ.
ಲೇಖನ-ಸತೀಶ್ ಹಿರೇಮಠ್.
More Stories
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ