December 24, 2024

Newsnap Kannada

The World at your finger tips!

gnana butti

ಜ್ಞಾನಬುತ್ತಿ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುವ ಉಚಿತ ತರಬೇತಿ ಶಿಬಿರದ ಉದ್ಘಾಟನೆ

Spread the love

ಮೈಸೂರು: “ಸಮಾಜ ಸೇವೆ ಮಾಡಲು ನಾನು ಐ.ಎ.ಎಸ್.‌ ಮತ್ತು ಕೆ.ಎ.ಎಸ್‌ ಅಧಿಕಾರಿಯಾಗಬೇಕು ಎನ್ನುತ್ತಾರೆ ಹಲವರು. ಆದರೆ ನನ್ನ ಪ್ರಕಾರ ಸಮಾಜ ಸೇವೆ ಮಾಡಲು ಹತ್ತು ಹಲವು ಇತರೆ ಮಾರ್ಗಗಳಿವೆ”ಎಂದು ತರಬೇತಿ ನಿರತ ಐಎಎಸ್‌ ಅಧಿಕಾರಿ ಪಿ.ಶ್ರವಣ್‌ ಕುಮಾರ್‌ ಅಭಿಪ್ರಾಯಪಟ್ಟರು.

ಅವರು ದಿನಾಂಕ:20.05.2024ರಂದು ಜ್ಞಾನಬುತ್ತಿ ಸಂಸ್ಥೆಯಿಂದ ಮುಂಬರುವ ಪಿ.ಡಿ.ಓ., ಮತ್ತು ಗ್ರಾಮ ಆಡಳಿತಾಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುವ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಪರೀಕ್ಷಾ ಸಿದ್ಧತೆ ಕುರಿತು ಮಾತನಾಡಿದರು.

ಮುಂದುವರೆದು ಮಾತನಾಡುತ್ತಾ, ಉದಾಹರಣೆಗೆ ನಿಮ್ಮ ಜ್ಞಾನಬುತ್ತಿ ಸಂಸ್ಥೆಯೇ ಕಳೆದ 40 ವರ್ಷಗಳಿಂದ ನಿರಂತರವಾಗಿ ಜೈನಹಳ್ಳಿ ಸತ್ಯನಾರಾಯಣಗೌಡರ ಸಾರಥ್ಯದಲ್ಲಿ ಇಲ್ಲಿನ ಪದಾಧಿಕಾರಿಗಳು ಮತ್ತು ಸಂಪನ್ಮೂಲವ್ಯಕ್ತಿಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪ್ರತಿದಿನ ಸಂಜೆ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಸಮಾಜದ ಕಡುಬಡವ, ಹಿಂದುಳಿದ, ದಲಿತ, ಮಹಿಳೆ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡುತ್ತಿರುವುದು ಕೂಡ ಬಹುದೊಡ್ಡ ಸಮಾಜ ಸೇವೆ ಅಲ್ಲವೇ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ನಾನು ಕೂಡ ಸಾಧಾರಣ ಮಧ್ಯಮವರ್ಗದಿಂದ ಬಂದವನು ತಂದೆ ಪೊಲೀಸ್‌ ಕಾನ್ಸ್ಟೇಬಲ್ ಆಗಿದ್ದರು ಅವರ ಶಿಸ್ತಿನ ಜೀವನ ನನಗೆ ಐ.ಎ.ಎಸ್.‌ ಅಧಿಕಾರಿಯಾಗಲು ಪ್ರೇರಣೆ ನೀಡಿತು. ಬೆಂಗಳೂರಿನ ಕಾಲೇಜಿನಲ್ಲಿ ಬಿ.ಇ., ಎಲೆಕ್ಟ್ರಿಲ್‌ ಎಂಜಿನಿಯರ್‌ ಪದವಿ ಪಡೆದು, ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದೆ. ಸದರಿ ಕೆಲಸ ಚರ್ವಿತಚರ್ವಣ (ರೋಟಿನ್)‌ ರೀತಿ ಇತ್ತು.

ನನಗೆ ಅದು ಇಷ್ಟವಾಗಲಿಲ್ಲ ಬೋರ್‌ ಎನಿಸಿತು.ನನಗೆ ಪ್ರತಿದಿನ ಹೆಚ್ಚು ಛಾಲೆಂಜ್‌ ಆಗಿರುವ ಕೆಲಸದ ಹುದ್ದೆ ಬೇಕಿತ್ತು ಎನಿಸಿತು. ಹೀಗಾಗಿ ಕೆಲವರಲ್ಲಿ ವಿಚಾರಿಸಿದಾಗ ಐ.ಎ.ಎಸ್.‌ ಹುದ್ದೆಗೆ ಪ್ರತಿದಿನ ಛಾಲೆಂಜಿಂಗ್ ಟಾಸ್ಕ್‌ ಇರುತ್ತೆ ಎಂದು ಹೇಳಿದಾಗ ನಾನು ಯುಪಿಎಸ್ಸಿ ಪರೀಕ್ಷೆ ಬರೆಯಲು ಮುಂದಾಗಿ ಪ್ರಥಮ ಪ್ರಯತ್ನದಲ್ಲಿ ಭಾರತೀಯ ರಕ್ಷಣಾ ಎಸ್ಟೇಟ್‌, ದ್ವಿತೀಯ ಯತ್ನದಲ್ಲಿ ಭಾರತೀಯ ಕಂದಾಯ ಇಲಾಖೆಯಲ್ಲಿ ಹಾಗೂ ಅಂತಿಮವಾಗಿ ಮತ್ತು ಸತತ ಮೂರನೇ ಪ್ರಯತ್ನದಲ್ಲಿ ಐ.ಎ.ಎಸ್.‌ ಆಗಿ ಆಯ್ಕೆಯಾದೆ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳೇ ಅಂತಿಮ ಅಲ್ಲ. ಇದರ ಹೊರತಾಗಿಯೂ ಯಶಸ್ವೀ ಜೀವನ ನಡೆಸಿ ಸಾಧನೆ ಮಾಡಲು ಹಲವು ಮಾರ್ಗಗಳಿವೆ ಎಂದರು. ಇಡೀ ಜಗತ್ತೇ ನಿನ್ನ ಮೇಲೆ ಅಪನಂಬಿಕೆ ಇಟ್ಟರೂ ಚಿಂತೆಯಿಲ್ಲ; ಆದರೆ ನೀನು ನಿನ್ನ ಮೇಲೆ ನಂಬಿಕೆಯನ್ನು ಬಲವಾಗಿ ಇಟ್ಟುಕೊಂಡು ಸಾಧನೆಗೆ ಹೊರಟರೇ, ʼಜಯʼ ನಿನ್ನ ಅಭಿಮುಖವಾಗಿ, ನಿನ್ನನ್ನು ಬಿಗಿದಪ್ಪಲು ಬರುತ್ತದೆ ಎಂದರು.

ಯುಪಿಎಸ್ಸಿ ಪರೀಕ್ಷೆ ಸಂಬಂಧಪಟ್ಟ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾಡಿನ ಸಾಂಸ್ಕೃತಿಕ ಚಿಂತಕರಾದ ಪ್ರೊ. ಎಂ. ಕೃಷ್ಣೇಗೌಡ ಮಾತನಾಡಿ ಗ್ರಾಮಾಣಾಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿ ಎನ್ನುವ ಪದದ ʼಅಧಿಕಾರಿʼ ಅನ್ನುವ ಪದವು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ ಇದು ಮಾರಕ. ಇಲ್ಲಿ “ಪ್ರಜೆಗಳೇ ಪ್ರಭುಗಳು” ಇಲ್ಲಿ ಪ್ರಜೆಗಳ ಮೇಲೆ ಅಧಿಕಾರಿ (ಸಾಹೇಬ್ರು) ಹೇಗೆ ಅಧಿಕಾರ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಗ್ರಾಮ ಸಹಾಯಕ, ಗ್ರಾಮಸೇವಕ, ಗ್ರಾಮೀಣಾಭಿವೃದ್ಧಿ ಸೇವಕ ಎಂಬ ಪದಗಳನ್ನು ಪ್ರಜಾಪ್ರಭುತ್ವದಲ್ಲಿ ಹುದ್ದೆಗಳಿಗೆ ಇಡಬೇಕು. ಆಳುವ ಸರ್ಕಾರಗಳು ವಿವೇಕದಿಂದ ಹುದ್ದೆಗಳ ಹೆಸರನ್ನು ಇಡಬೇಕು ಎಂದರು. ಭವಿಷ್ಯದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅಧಿಕಾರಿಗಳಾಗಿ ಹೋಗುವ ನಿಮ್ಮ ತಲೆಗಳಿಗೆ ʼಅಧಿಕಾರʼದ ಮದ ಏರದ ಹಾಗೆ ನೋಡಿಕೊಳ್ಳಿ ಎಂದರು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ 2020ನೇ ಸಾಲಿನ ಐಎಎಸ್‌ ಅಧಿಕಾರಿ, ಹುಣಸೂರು ಉಪವಿಭಾಗಾಧಿಕಾರಿ ಮಹಮ್ಮದ್‌ ಹ್ಯಾರಿಸ್‌ ಸುಮೈರ್‌ ಸಾಮಾನ್ಯ ಗ್ರಾಮೀಣ ಪ್ರದೇಶದ ಜನರಿಗೆ ಮೊದಲು ಸಂಪರ್ಕಕ್ಕೆ ಸಿಗುವವರು ಗ್ರಾಮ ಆಡಳಿತಾಧಿಕಾರಿಗಳು (ಹಿಂದೆ ಗ್ರಾಮ ಲೆಕ್ಕಿಗರು- VA) ಮತ್ತು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂದರೆ ಪಿಡಿಓ ಗಳು. ಇದರಿಂದ ನಿಮ್ಮ ಹುದ್ದೆ ಅತ್ಯಂತ ಜವಾಬ್ದಾರಿಯುತವಾದುದು.

ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಮತ್ತು ಸರ್ಕಾರದ ಸವತ್ತುಗಳು ʼಸಕಾಲʼ ಕ್ಕೆ ಸಾರ್ವಜನಿಕರಿಗೆ ಸಿಗುವ ಹಾಗೆ ಕೆಲಸ ಮಾಡಬೇಕು, ಆದುದರಿಂದ ಅತ್ಯಂತ ಶ್ರಮ ಮತ್ತು ಅಧ್ಯಯನದಿಂದ ಪರೀಕ್ಷಾ ಸಿದ್ದತೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ : ಬಾಲಕಿಯರೇ ಮೇಲುಗೈ

ಸಮಾರಂಭದಲ್ಲಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಸಂಯೋಜಕರಾದ ಪ್ರೊ. ಕೃ.ಪ. ಗಣೇಶ, ಡಾ. ಎಸ್.ಬಿ.ಎಂ. ಪ್ರಸನ್ನ, ಪ್ರೊ.ಸಿ.ಕೆ. ಕಿರಣ್‌ ಕೌಶಿಕ್‌ , ಕೆ.ವೈ. ನಾಗೇಂದ್ರ, ಸಂಪನ್ಮೂಲ ವ್ಯಕ್ತಿಗಳಾದ ಡಾ.ನಾಗಾಚಾರಿ, ಪ್ರೊ. ವಿ. ಜಯಪ್ರಕಾಶ್‌, ಕಾರ್ಯದರ್ಶಿ ಹೆಚ್. ಬಾಲಕೃಷ್ಣ ಇದ್ದರು.

Copyright © All rights reserved Newsnap | Newsever by AF themes.
error: Content is protected !!