November 5, 2024

Newsnap Kannada

The World at your finger tips!

pendrive

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

Spread the love

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?!

ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ , ರೈತರ ಬವಣೆ, ನೀರಿಗೆ ಹಾಹಾಕಾರ, ನಿರುದ್ಯೋಗ ಸಮಸ್ಯೆ, ಬಡವರು ಮತ್ತು ಮಧ್ಯಮ ವರ್ಗದ ಜನರ ದೈನಂದಿನ ಬದುಕಿನ ಮೇಲೆ ಆಗಿರುವ ದುಷ್ಪರಿಣಾಮಗಳ ಬಗ್ಗೆ ಗಮನ ಹರಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಬದ್ಧತೆ ತೋರಬೇಕಾದ ರಾಜಕಾರಣಿಗಳು, ಸರ್ಕಾರ ಮತ್ತು ಬಹುತೇಕ ಮಾಧ್ಯಮಗಳು ಪೆನ್ ಡ್ರೈವ್ ಹೊಳೆಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಪ್ರಗತಿ ಕೊಚ್ಚಿ ಹೋಗುವಂತೆ ಮಾಡುತ್ತಿರುವುದು ದುರ್ದೈವ.

ತೀರ್ವ ಬರಗಾಲ ನಂತರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯ ಅವಾಂತರಗಳು ಕಂಡು ಬರುತ್ತಿದೆ, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಉಲ್ಬಣ ಗೊಳ್ಳುವ ಸಾಧ್ಯತೆ ಇದೆ. ಓಟ್ ಬ್ಯಾಂಕಿಗಾಗಿ ಜಾರಿಗೊಳಿಸುವ ಗ್ಯಾರಂಟಿ ಗಳಿಂದ ಅಥವಾ ಪ್ರಚೋದನಕಾರಿ ಭಾಷಣ, ಪೊಳ್ಳು ಭರವಸೆಗಳಿಂದ ರಾಜ್ಯದ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಪೆನ್ ಡ್ರೈವ್ ಪ್ರಕರಣವನ್ನು ಸ್ವಾರ್ಥಕ್ಕಾಗಿ ವೈಭವೀಕರಿಸುವ ಅಗತ್ಯ ಇದೆಯೇ?. ಇದರಿಂದ ರಾಜ್ಯಕ್ಕೆ ಏನಾದರೂ ಲಾಭ ಇದೆಯೇ?.

ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು, ಇದು ಸಾರ್ವಕಾಲಿಕ ಸತ್ಯ. ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇನ್ನೂ ಸತ್ತಿಲ್ಲ, ತಡವಾದರೂ ನಿಜವಾದ ಅಪರಾಧಿಗಳು ಶಿಕ್ಷೆ ಅನುಭವಿಸುತ್ತಾರೆ, ಸಾಕ್ಷಿಗಳ ನಾಶ ಅಥವಾ ನಿಜವಾದ ಆರೋಪಿಗಳ ರಕ್ಷಣೆ ವಿಚಾರದಲ್ಲಿ ನ್ಯಾಯಾಂಗ ತಪ್ಪು ಮಾಡದು ಎಂಬುದು ರಾಜ್ಯದ ಜನತೆಗೆ ಗೊತ್ತು.
ತೀರ್ಪು ಬರುವ ತನಕ ಕಾಯಬೇಕು, ಈಗ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.


ಜೂನ್ ತಿಂಗಳಲ್ಲಿ ಕೇಂದ್ರದಲ್ಲಿ ರಚನೆ ಆಗಲಿರುವ ಹೊಸ ಸರ್ಕಾರದ ಮೇಲೆ ಒತ್ತಡ ಹೇರಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮತ್ತು ಜನಪರವಾದ ಯೋಜನೆಗಳನ್ನು ಮಂಜೂರು ಮಾಡಿಸಲು ಪ್ರಜ್ಞಾವಂತ ನಾಗರಿಕರ ಸಲಹೆ ಪಡೆದು ಗುಣಮಟ್ಟದ ವರದಿ ಸಲ್ಲಿಕೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವ ಪಕ್ಷಗಳು ಒಗ್ಗೂಡಿ ಕೆಲಸ ಮಾಡುವಂತೆ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ.


ಪೆನ್ ಡ್ರೈವ್ ಪ್ರಕರಣದಿಂದ ಒಂದು ಪಕ್ಷ, ಒಂದು ಕುಟುಂಬ ಅಥವಾ ಕೆಲ ವ್ಯಕ್ತಿಗಳಿಗೆ ಲಾಭ ಅಥವಾ ನಷ್ಟ ಉಂಟಾಗಬಹುದು. ತನಿಖಾ ಸಂಸ್ಥೆ ಹಾಗೂ ನ್ಯಾಯಾಂಗ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟವರು ಸಹಕಾರ ನೀಡಿದಲ್ಲಿ ನಿಜವಾದ ಅಪರಾಧಿಗಳು ಯಾರೆಂದು ಗೊತ್ತಾಗುತ್ತದೆ.


ಜನ ಸಾಮಾನ್ಯರಿಗೆ ಪೆನ್ ಡ್ರೈವ್ ಪ್ರಕರಣಕ್ಕಿಂತ‌ ಬದುಕು ದೊಡ್ಡ ಸವಾಲು ಆಗಿದೆ, ಸುಂದರವಾದ ಜೀವನಕ್ಕಾಗಿ ಆರೋಗ್ಯಕರ ಬದುಕಿಗಾಗಿ ಬೆಂಬಲಿಸುತ್ತಿದ್ದಾರೆ. ಪೆನ್ ಡ್ರೈವ್ ಪ್ರಕರಣದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಆಗುವುದು ಬೇಡ, ಬಡವರು, ಮಧ್ಯಮ ವರ್ಗದ ಜನರ ದೈನಂದಿನ ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಆಳುವ ವರ್ಗದ ಜನರಿಗೆ ಮನವರಿಕೆ ಮಾಡಿ ಕರ್ನಾಟಕ ರಾಜ್ಯವನ್ನು ಬಲಿಷ್ಠಗೊಳಿಸಲು ಚಿಂತನೆ ನಡೆಸಬೇಕಿದೆ, ಭ್ರಷ್ಟಾಚಾರ, ಅನಾಚಾರ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಜನರಿಗೆ ತಕ್ಕ ಪಾಠ ಕಲಿಸಬೇಕಿದೆ, ಹೊಲಸು ರಾಜಕೀಯಕ್ಕೆ ಇತಿಶ್ರೀ ಹಾಡಬೇಕಿದೆ, ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ.

ಶುದ್ಧವಾದ ಆಡಳಿತ, ನೀರು, ಗಾಳಿ, ಆಹಾರ, ಪರಿಸರ ಸಂರಕ್ಷಣೆ ಮತ್ತು ಎಲ್ಲರನ್ನು ಒಳಗೊಂಡ ಸುಸಜ್ಜಿತ ಸುಂದರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಬೇಕಿದೆ.ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ


ಸಂವಿಧಾನವನ್ನು ಮಾರ್ಕೆಟಿಂಗ್ ಸರಕಾಗಿ ಮಾಡಿಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು, ಹೋರಾಟಕ್ಕೆ ಅಪಚಾರ ಉಂಟು ಮಾಡಿ ಸಮಸ್ಯೆಯನ್ನು ಜೀವಂತವಾಗಿ ಉಳಿಸಿ ಉದರ ಪೋಷಣೆ ಮಾಡಿಕೊಳ್ಳುವ ತಿಮಿಂಗಿಲಗಳ ಮುಖವಾಡ ಕಳಚಲು ಜನರನ್ನು ಸಜ್ಜುಗೊಳಿಸುವ ಕೆಲಸವನ್ನು ಪ್ರಜ್ಞಾವಂತ ನಾಗರಿಕರು , ಮಾಧ್ಯಮಗಳು ಹಾಗೂ ಸಂಘ ಸಂಸ್ಥೆಗಳು ಮಾಡುವ ಮೂಲಕ ಪೆನ್ ಡ್ರೈವ್ ಪ್ರಕರಣದಿಂದ ರಾಜ್ಯದ ಅಭಿವೃದ್ಧಿ ಮತ್ತು ಪ್ರಗತಿ ಕೊಚ್ಚಿ ಹೋಗುವಂತೆ ಎಚ್ಚರ ವಹಿಸಬೇಕು ಎಂದು ಕೋರುತ್ತೇನೆ.

— ಪಾ.ಶ್ರೀ. ಅನಂತರಾಮ್,
ಹಿರಿಯ ಪತ್ರಕರ್ತ ಕೋಲಾರ

Copyright © All rights reserved Newsnap | Newsever by AF themes.
error: Content is protected !!