ಶೀಘ್ರದಲ್ಲೇ ‘ವರ್ಕ್ ಫ್ರಮ್ ಎನಿವೇರ್’ ಕಾನೂನು ಜಾರಿ: ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌

Team Newsnap
1 Min Read

ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ‘ವರ್ಕ್‌ ಫ್ರಂ ಎನಿವೇರ್‌’ಗೆ ಅನುಕೂಲ ಕಲ್ಪಿಸಲು ಕಾನೂನು ಜಾರಿಗೆ ತರಲಾಗುವುದು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

23 ನೇ ‘ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಮನೆಯಿಂದಲೇ ಶೇ 7 ರಷ್ಟು ಅಭಿವೃದ್ಧಿಯನ್ನು ಸಾಧಿಸಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲಿಂದಲಾದರೂ ಕೆಲಸ ಮಾಡುವ (ವರ್ಕ್‌ ಫ್ರಂ ಎನಿವೇರ್‌) ಸಂಬಂಧ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಚೀನಾ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಮೊಬೈಲ್‌ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿವೆ. ಸುಮಾರು ₹11 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಇಲ್ಲಿ ತಯಾರಾಗುವ ಮೊಬೈಲ್‌ಗಳ ಪೈಕಿ 7 ಲಕ್ಷದಷ್ಟು ಸೆಟ್‌ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೆ, ಉಳಿದ ಸುಮಾರು 5 ಲಕ್ಷ ಮೊಬೈಲ್‌ ಸೆಟ್‌ಗಳು ರಫ್ತು ಆಗಲಿವೆ ಎಂದು ಹೇಳಿದ್ದಾರೆ.

ದತ್ತಾಂಶ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಿವೆ. ಸದ್ಯವೇ ದತ್ತಾಂಶ ರಕ್ಷಣಾ ಕಾನೂನು ಜಾರಿಗೆ ತರಲಾಗುವುದು. ಕರ್ನಾಟಕ ದತ್ತಾಂಶ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿದರೆ, ಐಟಿ ಕ್ಷೇತ್ರದಂತೆ ಬೃಹತ್‌ ಆಗಿ ಬೆಳೆಯಲು ಕರ್ನಾಟಕಕ್ಕೆ ಅವಕಾಶವಿದೆ ಎಂದು ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

ಡಿಜಿಟಲ್ ತಾಂತ್ರಿಕತೆಯ ಬೆಳವಣಿಗೆಗೆ ಪೂರಕವಾಗಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿರುವ ಕೇಂದ್ರ ಸರ್ಕಾರವು 1000 ದಿನಗಳಲ್ಲಿ 6 ಲಕ್ಷ ಕಿ.ಮೀ. ಉದ್ದದಷ್ಟು ಆಪ್ಟಿಕ್ ಫೈಬರ್ ಕೇಬಲ್ ಜಾಲ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ ಎಂದು ಹೇಳಿದ್ದಾರೆ..

Share This Article
Leave a comment