November 25, 2024

Newsnap Kannada

The World at your finger tips!

temple,mysuru,hills

ಚಾಮುಂಡಿ ಬೆಟ್ಟ

Spread the love

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಸಿಕೊಳ್ಳುವ ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಆಗ್ನೇಯಕ್ಕೆ ಪೂರ್ವ ಪಶ್ಚಿಮವಾಗಿ ಹಬ್ಬಿ ನಿಂತಿರುವ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ಸನ್ನಿಧಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ದೇವಾಲಯದಲ್ಲಿ ಒಂದಾಗಿದೆ.

image 1
ಜ್ಯೋತಿ ಪ್ರಸಾದ್

ಚಾಮುಂಡಿ ಬೆಟ್ಟ ಮೈಸೂರು ನಗರದಿಂದ 13 ಕಿ. ಮೀ.ಗಳ ಅಂತರದಲ್ಲಿ ಹಾಗೂ ಸಮುದ್ರ ಮಟ್ಟದಿಂದ ಸುಮಾರು 3489 ಅಡಿಗಳ ಎತ್ತರದಲ್ಲಿದೆ.

ಹಿಂದೆ, ಈ ಬೆಟ್ಟದಲ್ಲಿ ಅತ್ಯಂತ ಪುರಾತನ ಮಹಾಬಲೇಶ್ವರ (ಶಿವ)ನ ದೇವಾಲಯ ಇರುವ ಕಾರಣ ಈ ಬೆಟ್ಟವನ್ನು ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತು. ಆನಂತರ ದೇವಿ ಚಾಮುಂಡೇಶ್ವರಿ ಮಹಿಷಾಸುರನೆಂಬ ರಾಕ್ಷಸರನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ಯಲ್ಲಿ ವರ್ಣಿತವಾಗಿದ್ದು, ಅಂದಿನಿಂದ ಶಾಂತಿ ಪಾಲನೆಗೆ ಕಾರಣವಾಗಿದ್ದ ದೇವಿಯ ಹೆಸರಿನಿಂದ ಚಾಮುಂಡಿ ಬೆಟ್ಟ ಎಂದು ಮಾರ್ಪಾಡಾಗಿದೆ.

ಚಾಮುಂಡಿ ಬೆಟ್ಟ,ಮೈಸೂರು ನಗರದ ಪ್ರಮುಖ ಹೆಗ್ಗುರುತಾಗಿದೆ. ಇದು ನಗರದ ಮಧ್ಯ ಭಾಗದಲ್ಲಿ ಎಲ್ಲಿಂದಲಾದರೂ ಗೋಚರಿಸುತ್ತದೆ.

ಚಾಮುಂಡಿ ಬೆಟ್ಟ ಚಾರಿತ್ರಿಕ ಹಿನ್ನೆಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆ ಇದೆ. ಸುತ್ತಲೂ ಬಯಲು ಇದ್ದು, ಒಂಟಿಯಾಗಿ ನಿಂತಿರುವ ಕಡಿದಾದ ಈ ಬೆಟ್ಟ ಬಹು ದೂರದವರೆಗೂ ಎದ್ದು ಕಾಣುತ್ತದೆ. ಚಾಮುಂಡಿ ಬೆಟ್ಟವು ಮೈಸೂರು ನಗರದ ಸ್ಥಾಪನೆಯೊಂದಿಗೆ ಬಹಳ ಹತ್ತಿರದ ಸಂಬಂಧವನ್ನು ಸಹ ಹೊಂದಿದೆ.

ಚಾಮುಂಡಿ ಬೆಟ್ಟದ ಪ್ರಮುಖ ಆಕರ್ಷಣೆ ಆಗಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ದೇವಾಲಯವು ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನದಲ್ಲಿ ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ಗೋಪುರ ಮತ್ತು ಗರ್ಭಗುಡಿಯ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು, ಪೆರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಳಶಗಳಿವೆ.

ಗರ್ಭಗುಡಿಯಲ್ಲಿ ಮಹಿಷಮರ್ದಿನಿ ಆದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ. ಆಸೀನಳಾಗಿದ್ದಾಳೆ. ಈ ಪುರಾತನವಾದ ಶಿಲಾಮೂರ್ತಿಯನ್ನು ಮಾರ್ಕಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ.

ದೇವಾಲಯದ ಮುಂದೆ 12ಅಡಿ ಎತ್ತರದ ಬೃಹತ್ ಆಕಾರದ ಮಹಿಷಾಸುರನು ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ನಾಗರ ಹಾವು ಹಿಡಿದ ಪ್ರತಿಮೆ ಇದೆ. ಚಾಮುಂಡೇಶ್ವರಿ ದೇವಾಲಯ ಬೆಟ್ಟದ ಮೇಲೆ ಹೋಗಲು ಡಾಂಬರು ರಸ್ತೆಯು ಇದೆ ,ನಗರ ಸಾರಿಗೆ ಸೌಲಭ್ಯವೂ ಇದೆ.ಅಲ್ಲದೆ 1008 ಕಲ್ಲಿನ ಮೆಟ್ಟಿಲುಗಳ ಸರಣಿಯ ಮೂಲಕ ಸಹ ತಲುಪಬಹುದು.

ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಕಾಲುನಡಿಗೆಯಲ್ಲಿ ಹತ್ತಿ ಶ್ರೀ ಮಹಾಬಲೇಶ್ವರ ಹಾಗೂ ದೇವಿ ಚಾಮುಂಡಿಯ ದರ್ಶನ ಪಡೆದ ಮಾತ್ರದಲ್ಲಿ ತಮ್ಮೆಲ್ಲ ಪಾಪಗಳು ಕಳೆವವು ಎಂಬುದು ಭಕ್ತರ ನಂಬಿಕೆ.

ಪರಮೇಶ್ವರನ ವಾಹನ ನಂದಿಯ 16ಅಡಿ ಹೆಬ್ಬಂಡೆಯಲ್ಲಿ ಕೆತ್ತಲಾಗಿರುವ ಸುಂದರ ಮೂರ್ತಿಯನ್ನು ಚಾಮುಂಡಿ ಬೆಟ್ಟಕ್ಕೆ ಹತ್ತುವ 700ನೇ ಮೆಟ್ಟಿಲಿನ ಬಳಿ ಕಾಣಬಹುದು. ಬೆಟ್ಟದ ಪ್ರಮುಖ ತಾಣಗಳಲ್ಲಿ ಒಂದಾಗಿರುವ ನಂದಿಯ ಮೂರ್ತಿಯಲ್ಲಿ ಗಂಟೆ ಸರ, ಗೆಜ್ಜೆ ಸರಗಳನ್ನು ಶಿಲ್ಪಿ ಸುಂದರವಾಗಿ ಕೆತ್ತಿದ್ದಾರೆ. ನಂದಿ ಮೂರ್ತಿಗೆ ದೊಡ್ಡ ಗಾತ್ರದ ಗಂಟೆಯನ್ನು ಕುತ್ತಿಗೆ ಕಟ್ಟಿದ್ದು ಬಲು ಆಕರ್ಷಣೆಯಿಂದ ಕೂಡಿದೆ.

ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆ, ಇನ್ನಿತರ ದೇವಾಲಯಗಳು, ಕಾರಂಜಿ ಸರೋವರ ಹಾಗೂ ನಗರದ ಹರವು ಮತ್ತು ಸುತ್ತಲಿನ ಪ್ರಕೃತಿ ಸೌಂದರ್ಯ ನೋಡುಗರ ಕಣ್ಣಿಗೆ ಬಹು ರಮಣೀಯವಾಗಿ ಕಾಣುತ್ತದೆ. ವಿಶ್ವದಾದ್ಯಂತ ಮೂಲೆ ಮೂಲೆಯಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮುಖ್ಯವಾದ ಆಕರ್ಷಣೆಗಳಲ್ಲಿ ಇದು ಒಂದು.

ಬೆಟ್ಟದ ಮೇಲೆ ಪ್ರತಿಷ್ಠಾಪಿಸ ಲಾಗಿದ್ದ ಮಹಿಶಾಸುರ ಮರ್ದಿನಿ ಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರಿ ಎಂದು ಕರೆದು ತಮ್ಮ ಕುಲ ದೇವತೆಯಾಗಿ ಪೂಜಿಸಿದರು ಎನ್ನುತ್ತದೆ ಇತಿಹಾಸ.

ಪ್ರತಿ ವರ್ಷ ಆಶ್ವಿಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರಿ ರಥೋತ್ಸವ ಜರುಗುತ್ತದೆ. ರಥೋತ್ಸವ ಎರಡು ದಿನಗಳ ನಂತರ ರಾತ್ರಿ ದೇವಾಲಯದ ಸಮೀಪದಲ್ಲಿ ಇರುವ ಕೊಳದಲ್ಲಿ ನಡೆಯುವ ತೆಪ್ಪೋತ್ಸವ ನೋಡಲು ದೇಶ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.

ದೇಶದಾದ್ಯಂತ ಭಕ್ತರು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.ಡಿಕೆಶಿ ಅಕ್ರಮ ಆಸ್ತಿ ಪ್ರಕರಣ – ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ – ಸಿಬಿಐಗೆ ಆದೇಶ
ಬೆಟ್ಟದ ತಾಯಿ ಚಾಮುಂಡೇಶ್ವರಿ ತಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸುವಳು ಎಂಬ ಅಪಾರ ನಂಬಿಕೆಯಿದೆ.

Copyright © All rights reserved Newsnap | Newsever by AF themes.
error: Content is protected !!