December 22, 2024

Newsnap Kannada

The World at your finger tips!

child2

ಮಕ್ಕಳ ಬಾಲ್ಯ ಕಸಿಯುತ್ತಿದ್ದೇವೆಯೇ??

Spread the love
anusuya bhat
ಅನಸೂಯಾ ಕಾರಂತ್

“ಆಡಿ ಬಾ ಎನ ಕಂದ ಅಂಗಾಲ ತೊಳೆದೇನು”,”ಮಕ್ಕಳಾಟಿಕೆ ಚಂದ ಮತ್ತೆ ಯೌವನ ಚಂದ”ಎಂಬ ಹಾಡಿನ‌ ಸಾಲುಗಳನ್ನು ಕೇಳಿದಾಗಲೆಲ್ಲಾ ನಮ್ಮ ಬಾಲ್ಯ ಕಾಲದ ಜೀವನದ ಸುಂದರ ಚಿತ್ರಣ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ.ಹಿಂದಿನ ಕಾಲದಲ್ಲಿ ಹೆತ್ತವರು ತಮ್ಮ ಮಕ್ಕಳು ಹೊರಗಿನ ಪರಿಸರದಲ್ಲಿ ಆಟವಾಡಿಕೊಂಡು ಬೆಳೆಯಲೆಂದು ಅಪೇಕ್ಷಿಸುತ್ತಿದ್ದರು.ಹಿಂದಿನ ಮಕ್ಕಳು ಬಾಲ್ಯಕ್ಕಿಂತ ಇಂದಿನ‌ ಮಕ್ಕಳ ಬಾಲ್ಯ ಸಂಪೂರ್ಣ ಭಿನ್ನ.ಹಿಂದೆ ದೊಡ್ಡ ಸಂಸಾರ,ಕೂಡು ಕುಟುಂಬದ ವ್ಯವಸ್ಥೆ ಇದ್ದಿತ್ತು.”ಮಕ್ಕಳಿರಲವ್ವಾ ಮನೆತುಂಬಾ”ಎನ್ನುವ ಮಾತಿನಂತೆ ಮನೆ ತುಂಬಾ ಮಕ್ಕಳಿರುತ್ತಿದ್ದರು.ಮಕ್ಕಳು ತಮ್ಮ ಒಡಹುಟ್ಟಿದವರೊಂದಿಗೆ,ದೊಡ್ಡಪ್ಪ, ಚಿಕ್ಕಪ್ಪನವರ ಜೊತೆಗೇ ಬೆಳೆಯುತ್ತಿದ್ದರು.ಮಕ್ಕಳಿಗೆ ಅಜ್ಜ,ಅಜ್ಜಿಯಂದಿರ ಮಮತೆ, ವಾತ್ಸಲ್ಯ, ಒಡನಾಟ ಧಾರಾಳವಾಗಿ ದೊರಕುತ್ತಿತ್ತು.

ಈಗಿನಂತೆ ಆಗ ಕುಟುಂಬಕ್ಕೊಂದು ಅಥವಾ ಎರಡು ಮಕ್ಕಳಿರುತ್ತಿರಲಿಲ್ಲ.
ಅಣ್ಣ,ತಮ್ಮ,ಅಕ್ಕ,ತಂಗಿ ಎಂಬ ಬಾಂಧವ್ಯದ ಕೊಂಡಿ ಮಕ್ಕಳನ್ನು ಬೆಸೆಯುತ್ತಿತ್ತು.ಆಗೆಲ್ಲಾ ಮಹಿಳೆಯರು ನೌಕರಿಗಾಗಿ ಮನೆಯ ಹೊರಗೆ ಹೋಗಿ ದುಡಿಯುತ್ತಿರಲಿಲ್ಲ.ಮನೆಯಲ್ಲೇ ಗೃಹಕೃತ್ಯ ಮಾಡಿಕೊಂಡು ಇರುತ್ತಿದ್ದ ಕಾರಣ ಮಕ್ಕಳಿಗೆ ತಾಯಿಯ ಸಾಂಗತ್ಯ ದೊರೆಯುತ್ತಿತ್ತು.

child game1

ಶಾಲೆಯಿಂದ ಮನೆಗೆ ಬಂದ ನಂತರ ಮನೆಪಾಠದ ಹೊರೆ ಇರುತ್ತಿರಲಿಲ್ಲ.ಮಕ್ಕಳು ಮನೆಯ ಹೊರಗೆ ಬಯಲಿನಲ್ಲಿ,ಮೈದಾನಗಳಲ್ಲಿ ಗೆಳೆಯರೊಂದಿಗೆ ಆಟ ಆಡಿಕೊಂಡು,ಮರ,ಗಿಡ,ಗುಡ್ಡ,ಬೆಟ್ಟ ಹತ್ತಿ ಇಳಿದು,ಕೆರೆ,ತೊರೆಗಳಲ್ಲಿ ಈಜಿ,ಪ್ರಾಣಿ, ಪಕ್ಷಿಗಳೊಂದಿಗೆ ಬೆರೆತು ಮನೆಗೆ ಮರಳುತ್ತಿದ್ದರು.

ಹೀಗೆ ಮಕ್ಕಳು ಪ್ರಕೃತಿಯ ಮಡಿಲಲ್ಲೇ ಬೆಳೆಯುತ್ತಿದ್ದುರಿಂದ ಬದುಕಿನ ಅನೇಕ ಪಾಠಗಳನ್ನು ಎಳವೆಯಲ್ಲೇ ಕಲಿಯುತ್ತಿದ್ದರು.
ಬದಲಾದ ಈ ಕಾಲಘಟ್ಟದಲ್ಲಿ ಮಕ್ಕಳ ಬಾಲ್ಯದ ಚಿತ್ರಣವೇ ಸಂಪೂರ್ಣ ಬದಲಾಗಿದೆ.ಪುಟ್ಟ ಮಕ್ಕಳ ಬೆನ್ನ ಮೇಲೆ ಪುಸ್ತಕದ ಹೊರೆ ಬಿದ್ದು ಮಕ್ಕಳ ಬೆನ್ನು ಬಾಗಿದೆ.ಶಾಲೆಯಿಂದ ಮನೆಗೆ ಮರಳಿದ ನಂತರ ಮನೆಪಾಠ, ಟ್ಯೂಶನ್ ಗಳ ಹಾವಳಿಯಿಂದ ಮಕ್ಕಳು ನಲುಗುತ್ತಿದ್ದಾರೆ.ಪ್ರತೀ ತಿಂಗಳು ನಡೆಯುವ ಪರೀಕ್ಷೆಗಾಗಿ ತಯಾರಿ, ಅಂಕ ಗಳಿಸಲು ತೀವ್ರ ಪೈಪೋಟಿ ಮುಂತಾದ ಕಾರಣಗಳಿಂದ ಮಕ್ಕಳ ಎಳೆಯ ಮನಸ್ಸಿನ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ.

ಈಗಿನ ಕಾಲದಲ್ಲಿ ಹೆತ್ತವರು ರಜಾದಿನಗಳಲ್ಲಿ ಮಕ್ಕಳನ್ನು ಸಂಗೀತ, ನೃತ್ಯ,ಕರಾಟೆ, ಕೀಬೋರ್ಡ್ ಮುಂತಾದ ತರಗತಿಗಳಿಗೆ ಸೇರಿಸುತ್ತಾರೆ.ಇದರಿಂದ ಮಕ್ಕಳಿಗೆ ರಜೆಯ ಮಜಾ ಅನುಭವಿಸಲು ಸಮಯವೇ ಇಲ್ಲದಂತಾಗಿದೆ.ಮೊದಲೆಲ್ಲಾ ಬೇಸಿಗೆ ರಜೆ ಬಂತೆಂದರೆ ಮಕ್ಕಳು ಅಜ್ಜಿಯ ಮನೆಗೋ,ಬಂಧುಗಳ ಮನೆಗೋ ಹೋಗಿ ಆನಂದದಿಂದ ರಜೆ ಕಳೆಯುವ ಪರಿಪಾಠವಿದ್ದಿತ್ತು.

ಈಗೆಲ್ಲಾ ಮಕ್ಕಳು ರಜಾದಿನಗಳಲ್ಲಿ ಬೇಸಿಗೆ ಶಿಬಿರಕ್ಕೆ ಸೇರಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.ರಜಾದಿನಗಳಲ್ಲಿ ಮಕ್ಕಳು ತಮ್ಮ ಪಾಡಿಗೆ ತಾವು ಆರಾಮವಾಗಿ ಆಡಿಕೊಡಿರಲು ಅವಕಾಶವೇ ಇಲ್ಲದಂತಾಗಿದೆ.

ದೂರದರ್ಶನದಲ್ಲಿ ಮಕ್ಕಳಿಗಾಗಿ ಪ್ರಸಾರವಾಗುವ ರಿಯಾಲಿಟಿ ಶೋ ಸ್ಪರ್ಧೆಗಳಲ್ಲಿ ಹೆತ್ತವರು ತಮ್ಮ ಮಕ್ಕಳೇ ಗೆಲ್ಲಬೇಕೆಂಬ ಆಶೆಯಿಂದ ಮಕ್ಕಳಿಗೆ ತರಬೇತಿ ನೀಡುತ್ತಾರೆ.ಇದರಿಂದ ಮಕ್ಕಳ ಮನಸ್ಸಿನ ಮೇಲೆ ಆತಂಕ,ಒತ್ತಡಗಳು ಹೆಚ್ಚುವ ಸಾಧ್ಯತೆಗಳಿವೆ.ಚಿಕ್ಕಂದಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದಂತಹ ಹೆತ್ತವರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ನಿರೀಕ್ಷಿಸುತ್ತಾರೆ.ಹಾಗಾಗಿ ಮಕ್ಕಳು ಹೆಚ್ಚು ಅಂಕ ಪಡೆಯಬೇಕೆಂದು ಅಪೇಕ್ಷಿಸುತ್ತಾರೆ.ಈ ಎಲ್ಲಾ ಕಾರಣಗಳಿಂದ ಮಕ್ಕಳ ಬಾಲ್ಯ ಕಸಿಯುತ್ತಿದ್ದೇವೆ ಎಂದೆನಿಸುವುದು ಸಹಜ.

child game

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಾಲ್ಯವೆಂಬುದು ಖುಷಿಯಿಂದ ಕಳೆಯಬೇಕಾದ ಅತ್ಯಂತ ಪ್ರಮುಖವಾದ ಒಂದು ಘಟ್ಟ.ಸುಮಧುರವಾದ ಬಾಲ್ಯದ ನೆನಪುಗಳು ಬೆಲೆ ಕಟ್ಟಲಾಗದ ಅಮೂಲ್ಯ ನಿಧಿ ಇದ್ದಂತೆ.ಮಕ್ಕಳು ಸಂಗೀತ, ನೃತ್ಯ ಯಾವುದೇ ಕಲಿಯುವುದಿರಲಿ ಸ್ವಂತ ಆಸಕ್ತಿಯಿಂದ ಖುಷಿಯಿಂದ ಕಲಿಯಬೇಕು ಹೊರತು ಅವುಗಳೆಂದೂ ಬಲವಂತದ ಮಾಘಸ್ನಾನವಾಗಬಾರದು.

ಹೆತ್ತವರು ತಮ್ಮ ಮಕ್ಕಳ ಓದು,ಬರಹದ ಜೊತೆಗೇ ದಿನದ‌ ಸ್ವಲ್ಪ ಹೊತ್ತು ಹೊರಗಿನ‌ ಮುಕ್ತ ವಾತಾವರಣದಲ್ಲಿ ತಮ್ಮಷ್ಟಕ್ಕೇ ತಾವು ಆಟವಾಡಿಕೊಂಡಿಕೊಂಡು, ತಮ್ಮಿಷ್ಟದ ಚಟುವಟಿಕೆಗಳಲ್ಲಿ ತಮ್ಮನ್ನು ಖುಷಿಯಿಂದ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು.
ಬದುಕಿನಲ್ಲಿ ಒಮ್ಮೆ ಮಾತ್ರ ಬಂದು ಹೋಗುವ ಬಾಲ್ಯಜೀವನದಲ್ಲಿ ಮಕ್ಕಳ ಹೂವಿನಂತಹ ಮನಸ್ಸು ಅರಳಿ ವಿಕಾಸಗೊಳ್ಳಬೇಕೇ ಹೊರತು ಬಾಡಿ ಮುದುಡಬಾರದು.ಮಕ್ಕಳ ಮನಸ್ಸಿನ ಮೇಲೆ ಒತ್ತಡ ಹೇರಿದರೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.


ಮಕ್ಕಳು ಮುಂದೆ ಬೆಳೆದು ದೊಡ್ಡವರಾದ ಮೇಲೆ ತಮ್ಮ ಬಾಲ್ಯದ ಸವಿನೆನಪುಗಳ ಬುತ್ತಿಯನ್ನು ಸವಿಯಬೇಕೇ ಹೊರತು ನೆನಪುಗಳೆಂದೂ ಕಹಿಯಾಗಬಾರದು.

Copyright © All rights reserved Newsnap | Newsever by AF themes.
error: Content is protected !!