January 3, 2025

Newsnap Kannada

The World at your finger tips!

kadre

ಪಿಓಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ – ಸಚಿವ ಈಶ್ವರ ಖಂಡ್ರೆ ಸೂಚನೆ

Spread the love

ಬೆಂಗಳೂರು: ನೀರಿನಲ್ಲಿ ಕರಗದ ಪಿಓಪಿ ವಿಗ್ರಹಗಳು ಜಲ ಮೂಲಗಳಿಗೆ ಅಪಾಯಕಾರಿಯಾಗಿವೆ . ಇಂತಹ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ಕಚೇರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಇಂತಹ ತಯಾರಕರಿಗೆ ಮಂಡಳಿ ನೋಟಿಸ್ ನೀಡಿದ್ದಾಗ್ಯೂ ಅವರು ಮತ್ತೆ ತಯಾರಿಕೆಯಲ್ಲಿ ತೊಡಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಸೂಚನೆ ನೀಡಿದರು.

ಪ್ರಕೃತಿ ಮತ್ತು ಪರಿಸರ ಉಳಿಸಬೇಕಾದ್ದು ನಮ್ಮೆಲ್ಲರ ಹೊಣೆಯಾಗಿದೆ, ಜಲ ಮೂಲಗಳಿಗೆ ಹಾನಿಯುಂಟು ಮಾಡುವ ಭಾರ ಲೋಹ ಮತ್ತು ರಾಸಾಯನಿಕ ಬಣ್ಣ ಲೇಪಿತ ಪಿಓಪಿ ವಿಗ್ರಹಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ವಿಸರ್ಜನೆಯನ್ನು ತಡೆಯಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2020ರ ಮೇ 12ರಂದು ಮಾರ್ಗಸೂಚಿ ಹೊರಡಿಸಲಾಗಿದೆ

ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ:

ಜಲ ಕಾಯಿದೆ, ವಾಯು ಕಾಯಿದೆ ಮತ್ತು ಪರಿಸರ ಸಂರಕ್ಷಣಾ ಕಾಯಿದೆ 1986ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದ ಈಶ್ವರ ಖಂಡ್ರೆ, ಮಂಡಳಿಯ ನೋಟಿಸ್ ಗೂ ಹೆದರದೆ, ಬೀಗಮುದ್ರೆ ಹಾಕಿದ್ದರೂ, ಹಿಂಬಾಗಿಲಿನಿಂದ ಪಿಓಪಿ ಗಣೇಶ ತಯಾರಿಕೆ, ಸಾಗಣೆ, ದಾಸ್ತಾನು ಮತ್ತು ಮಾರಾಟದಲ್ಲಿ ತೊಡಗಿರುವ ತಯಾರಕರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸ್ಪಷ್ಟ ಸೂಚನೆ ನೀಡಿದರು.

ವಿಷಕಾರಿ:

ಪಿಓಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಕೆರೆ, ಕಟ್ಟೆ, ನದಿ, ತೊರೆ, ಬಾವಿಗಳಲ್ಲಿ ವಿಸರ್ಜನೆ ಮಾಡಿದರೆ, ನೀರಿನಲ್ಲಿ ಸೀಸ, ನಿಕ್ಕಲ್, ಕ್ರೋಮಿಯಂನಂತಹ ಭಾರ ಲೋಹಗಳು ಕರಗುತ್ತವೆ. ಜೊತೆಗೆ ಪಿಓಪಿ ಕರಗದೆ ಹಾಗೇ ಉಳಿದು ಜಲಚರಗಳ ಸಾವಿಗೆ ಕಾರಣವಾಗುತ್ತದೆ.

ಈ ನೀರು ಕುಡಿಯುವ ಜಾನುವಾರುಗಳು ಸಾವಿಗೀಡಾಗುತ್ತವೆ. ಜನರೂ ಕಾಯಿಲೆ ಬೀಳುತ್ತಾರೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸಮುದಾಯ ಆರೋಗ್ಯ ರಕ್ಷಣೆಗೆ ಪಿಓಪಿ ಗಣೇಶ ಮಾರಾಟ, ತಯಾರಿಕೆ, ವಿಸರ್ಜನೆ ನಿಷೇಧಿಸುವುದು ಅನಿವಾರ್ಯ ಎಂದು ಹೇಳಿದರು.ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಕಲಿಯಿರಿ: ಹಂಸಲೇಖ

ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯಾದ್ಯಂತ ಪಿಓಪಿ ಗಣೇಶ ಮಾರಾಟ ನಿರ್ಬಂಧಿಸುವಂತೆ ಆದೇಶ ನೀಡಿದರು.

Copyright © All rights reserved Newsnap | Newsever by AF themes.
error: Content is protected !!