December 22, 2024

Newsnap Kannada

The World at your finger tips!

janki rao m

ಅಕ್ಷರಗುರು ಹೆತ್ತಬ್ಬೆ……..

Spread the love
janakirao
ಜಾನಕಿ ರಾವ್

ಬಾಲ್ಯಕ್ಕೂ ಶಾಲೆಗೂ.. ಬಿಡಿಸಲಾಗದ ಅವಿನಾಭಾವ ಸಂಬಂಧ.ಇವೆರಡರ ನಡುವೆ ಸೇತುವೆಯಂತಿರುವ ಮಹಾನ್ ಚೇತನಗಳೇ ಅಮ್ಮ ಹಾಗು ಶಿಕ್ಷಕರೆಂಬ ಹಿರಿ ಪದ. ಈ ಮೂರರಿಂದ ಬೆಸೆದ ನಂಟಿನ ಚಿತ್ತಾರ ಚಿತ್ತ ಭಿತ್ತಿಯಲ್ಲಿ ಎಂದೆಂದಿಗೂ ಅಳಿಸಲಾಗದ ಅದ್ಭುತ ಚಿತ್ರ. ಮೇಲು ಮಧ್ಯಮವರ್ಗದ ಮನೆಯಲ್ಲಿ ಹುಟ್ಟಿದ ನನ್ನ ಮತ್ತು ನನ್ನ ತಮ್ಮನ ಶಾಲಾ ದಿನಗಳು ಬಲು ಚಂದ. ಯಾವ ಜನುಮದ ಪುಣ್ಯವೋ ನಾನರಿಯೆ.. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ನನ್ನ ಮನೆಯ ಹಿರಿಯರಿಗೆ ಬಲು ಅಚ್ಚುಮೆಚ್ಚು.ಈಗಿನಂತೆ ಕೆಜಿ.. ಗ್ರಾಂ ಗಳ ಕಿರಿ ಕಿರಿ ಇಲ್ಲದೆ… ಸೂಕ್ತ ವಯಸ್ಸಿನಲ್ಲಿ ಮನೆಯಿಂದ ಕೂಗಳತೆಯ ದೂರದ ಶಾಲೆಗೆ ನಮ್ಮ ಪ್ರವೇಶ.

ಆವಾಗಿನ ಕಾಲದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದ ಅಮ್ಮನಿಗೆ ಏನನ್ನಾದರೂ ಸಾಧಿಸಬೇಕು ಅನ್ನೋ ಛಲ ಮನದಾಳದಲ್ಲಿ ಸುಪ್ತವಾಗಿತ್ತು. ಆದರೆ ಅದಕ್ಕೆ ಸೂಕ್ತ ಪ್ರೋತ್ಸಾಹ ಸಿಗದಾಗ.. ತನ್ನ ಅರೆಬಿರಿದ ಕನಸ ಮೊಗ್ಗು ಮಕ್ಕಳಿಂದವಾದರೂ ಹೂವಾಗಿ ಅರಳಲಿ ಎನ್ನುವ ತುಡಿತ. ಮಡಿ ಮೈಲಿಗೆ… ಪೂಜೆ ಪುನಸ್ಕಾರ… ಹಸು ಕರುಗಳ ಕೆಲಸ ಇವೆಲ್ಲದರ ನಡುವೆ… ಅಮ್ಮ ಬಹಳ ಹುಮ್ಮಸ್ಸಿನಿಂದ ನನಗೂ ತಮ್ಮನಿಗೂ ನೆತ್ತಿ ತಂಪಿರಲೆಂದು ಧಾರಾಳವಾಗಿ ಎಣ್ಣೆ ತಟ್ಟಿ.. ನನಗೆ ಬಿಗಿದು ಜಡೆ ಹೆಣೆದು… ಎರಡೂ ಜಡೆ ನಡುವೆ ಸೇತುವೆಯಂತೆ.. ಕಾಟು ಪೋಟು ಹೂ ದಂಡೆ ಮುಡಿಸಿ… ಗ್ರಾಂ ಲೆಕ್ಕದಲ್ಲಿ ಪೌಡರ್ ಮೆತ್ತಿ.. ಕಣ್ಣಿನ ತುದಿತನಕ ಕಾಡಿಗೆ ತೀಡಿ ಸಿದ್ಧ ಪಡಿಸುತಿದ್ದಳು. ನಾನು ನನ್ನ ಗೆಳತಿ ೯ಕ್ಕೆ ಆರಂಭವಾಗುವ ಶಾಲೆಗೆ ೭ ಗಂಟೆಗೆ ಸಿದ್ದರಾಗಿ ಕುಳಿತು ಬಿಡುತ್ತಿದ್ದೆವು. ಶಾಲೆಗೆ ಬರಲು ಸದಾ ಕಳ್ಳಾಟವಾಡುತಿದ್ದ ತಮ್ಮನಿಗೆ ಅದೇ ಸಮಯಕ್ಕೆ ಸರಿಯಾಗಿ ಹೊಟ್ಟೆನೋವು ಬಾಧಿಸುತ್ತಿತ್ತು. ಅದರ ಅರಿವಿದ್ದ ಅಮ್ಮ ಶಾಲೆಗೆ ಹೋದ್ರೆ ನಾಲ್ಕಾಣೆ ಕೊಡ್ತೇನೆ… ಎನ್ನುವ ಆಮಿಷಒಡ್ಡಿ ಕಳಿಸಲು ಹರಸಾಹಸ ಪಡುತಿದ್ದ ಚಿತ್ರ ಇನ್ನೂ ಕಣ್ಮುಂದೆ.

ಒಮ್ಮೊಮ್ಮೆ ತಮ್ಮ ಅದಕ್ಕೂ ಬಗ್ಗದಾಗ… ಹೊಡೆದರೆ ಕೆಲವು ನಿಮಿಷಗಳ ಕಾಲ ಚುರು ಚುರು ಅನ್ನುವ ಕೂಲುಂಬರಿ ಅನ್ನೋ ಗಿಡ ಮುರಿದು… ಚೆನ್ನಾಗಿ ಎರಡು ಕೊಡ್ತಾ ಇದ್ದಳು. ತದನಂತರ ವಾದ್ಯ ಸಮೇತ… ಅವನನ್ನು ಕರ್ಕೊಂಡು ಶಾಲೆಯೆಡೆಗೆ ನಮ್ಮ ಪಯಣ. ಸೀದಾ ಶಾಲೆಯಂಗಳಕ್ಕೆ ಒಂದೇ ಒಂದು ದಿನಕ್ಕೂ ಹೋದ ಜನ ನಾವಲ್ಲ. ಬೇಸಿಗೆಯ ದಿನದಲ್ಲಿ ಓಣಿಯ ಮಣ್ಣಿನಲ್ಲಿ ೫ಕಲ್ಲು ಹಿಡಿದು ಆಡುವ ಗುಡ್ನಾ ಅನ್ನೋ ಆಟಕ್ಕೆ ಶಾಲೆ ಪಕ್ಕದ ಓಣಿಯಲ್ಲಿ ಕೂತು ಬಿಡ್ತಿದ್ವಿ. ಮಳೆಗಾಲದಲ್ಲಿ, ಕಾಲಿನಗಂಟಿನ ತನಕ ಬರುತಿದ್ದ ಓಣಿಯ ಕೆನ್ನೀರಿನಲ್ಲಿ ಆಟವಾಡುತ್ತ, ಮಳೆ ಬಿದ್ದ ತಕ್ಷಣ ಹಾಡಿಯ ಗಿಡದಲ್ಲಿ ಮೊಸರು ಚೆಲ್ಲಿದಂತೆ ಬೆಳೆಯುತ್ತಿದ್ದ ಮಂಡಕ್ಕಿ ಹಣ್ಣು ಆರಿಸುತ್ತ ಮೈಮರೆಯುತಿದ್ದೆವು. ವಾಚ್ ಏನೂ ಇರದ ಆ ದಿನಗಳಲ್ಲಿ…. ಒಂದು ಅಂದಾಜು ಲೆಕ್ಕದಲ್ಲಿ ೯ಗಂಟೆ ಆಗಿರ ಬಹುದು ಅನ್ನೋ ಲೆಕ್ಕ ಹಾಕಿ… ಶಾಲೆಗೆ… ಬಾಲಂಗೋಚಿಯೊಡನೆ ಪ್ರವೇಶ.

jankirao t
ಸುಶೀಲ ಟೀಚರ್

ಅಲ್ಲೋ… ಮಹಾ ದುರ್ಗೆ ತ್ರಿಶೂಲ ಹಿಡಿದಿರುವಂತೆ… ಸದಾ ಬೆತ್ತವೊಂದನ್ನು ಕೈಯಲ್ಲಿ ಹಿಡಿದೇ ಓಡಾಡುವ ನನ್ನ ನೆಚ್ಚಿನ (ಇವಾಗ, ಆ ದಿನಗಳಲ್ಲಿ ಅಲ್ಲ )ಅಧ್ಯಾಪಕಿ ಸುಶೀಲ ಟೀಚರ್… ದರ್ಶನ ಭಾಗ್ಯ. ದರ್ಶನ ಕೊಟ್ಟರೆಂದರೆ… ಪ್ರಸಾದ ..ಕೊಡದೆ ಕಳಿಸುವ ಜನ ಅವರಲ್ಲವೇ ಅಲ್ಲ. ಒಂದೆರಡು ಬೆತ್ತದೇಟು ತಿಂದು… ತರಗತಿಗೆ ಹೋಗುತಿದ್ದೆವು. ಉದ್ದದ ಬೀಣಿ ಚೀಲದಿಂದ ಬಳಪದ ಸ್ಲೇಟ ಹೊರ ತೆಗೆದು ಬರೆಯೋ ಸಂಭ್ರಮ. ನಡುವೆ ಗೋಡೆಗಳು ಇರದ ಕೇವಲ ಮರದ ಚೌಕಟ್ಟಿಗೆ ಬಟ್ಟೆ ಕಟ್ಟಿ.. ಆಯಾಯ ತರಗತಿಗಳ ವಿಂಗಡಣೆ. ೧ನೆ ತರಗತಿಯವರಿಗೆ.. ೨.. ನೆ ತರಗತಿಯ ಎಲ್ಲಾ ಹಾಡು ಬಾಯಿಪಾಠ. ಹಾಗೆ ೨ ನೆ ತರಗತಿಯವರು ೧ ನೆ ತರಗತಿಯಲ್ಲಿ ಕಲಿತದ್ದು ಮರೆಯುವ ಪ್ರಶ್ನೆಯೇ ಇಲ್ಲ. ಗೋಡೆ ಇರದ ಕಾರಣ… ಎಲ್ಲರಿಗೆ ಎಲ್ಲವೂ ಬಾಯಿಪಾಠ. ಬಳಪದ ಸ್ಲೇಟನ ಕಥೆಗೆ ಬರೋಣ.ಕಡ್ಡಿಯಲ್ಲಿ ಬರೆದ ಅಕ್ಷರಗಳನ್ನ ಆವಾಗಾವಾಗ ಅಳಿಸಲೇ ಬೇಕಿತ್ತಲ್ಲ. ಹೆಚ್ಚಿನ ದಿನಾ ಅಮ್ಮ ಮರೆಯದೆ ಒದ್ದೆ ಬಟ್ಟೆ ಕೊಡ್ತಾ ಇದ್ದಳು. ಏನಾದ್ರು ನೆನಪಾಗದಿದ್ರೆ… ಸ್ಲೇಟ ಕ್ಲೀನ್ ಮಾಡೋದೇ ದೊಡ್ಡ ತಲೆ ನೋವು. ಅಧ್ಯಾಪಕರ ಗಮನ ತಪ್ಪಿಸಿ ಸ್ಲೇಟ್ ಮೇಲೆ ತುಪುಕ್.. ಅಂತ ಎಂಜಿಲು ಉಗಿದು ಬಿಡ್ತಿದ್ವಿ. ಅಧ್ಯಾಪಕರು ನೋಡಿದರೆ ಸರಸ್ವತಿ ಮೇಲೆ ಉಗಿತಿರಾ ಅಂತ ಮತ್ತೆರಡು ಬೆತ್ತದೇಟು.ಮಳೆಗಾಲದಲ್ಲಿ ಈ ಸಮಸ್ಯೆ ಇರುತ್ತಿರಲಿಲ್ಲ ಬಿಡಿ. ಒಂದು ಕಾದಂಬರಿ ಬರೆದರೂ, ಸ್ಲೇಟ್ ಕ್ಲೀನ್ ಮಾಡಲು ಸಾಕಾಗುವಸ್ಟು ಗದ್ದೆಯಂಚಿನಲ್ಲಿ ಬೆಳೆಯುತ್ತಿದ್ದ ಸೋಣೆ ಗಿಡದ ದಂಟು ಶೇಖರಿಸಿಕೊಂಡು ಹೋಗ್ತಿದ್ವಿ. ತದ ನಂತರ ರಾಗವಾಗಿ ಅ.. ಆ.. ಹೇಳ್ತಾ ಬರೆಯುವ ಪ್ರಕ್ರಿಯೆ ಆರಂಭ. ಪ್ರತಿಯೊಬ್ಬರಿಗೂ ಗಮನ ಕೊಡುತ್ತ ತಪ್ಪಿಲ್ಲದೆ ಬರೆಯಲು ಕಲಿಸಿದ ಆ ಜೀವಗಳನ್ನ ತಂಪು ಹೊತ್ತಲ್ಲಿ ನೆನೆಯಲೇ ಬೇಕು.

ಪ್ರತಿ ಶನಿವಾರ ಕೊನೆಯ ೨ ಅವಧಿ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಮೀಸಲಾಗಿರುತಿತ್ತು. ಏಕಪಾತ್ರಾಭಿನಯ… ಚರ್ಚಾ ಸ್ಪರ್ಧೆ.. ಭಾಷಣ… ಹಾಡು… ಒಂದೇ ಎರಡೇ. ಈಗಿನ ಶಾಲೆಗಳಂತೆ… ಸಂಗೀತ ತರಗತಿಗೆ ಬೇರೆ ಫೀಸ್ ಡಾನ್ಸ್ ಗೆ ಬೇರೆ… ಹೀಗೆಲ್ಲ ಇರಲೇ ಇಲ್ಲ. ಕಾಸು ಖರ್ಚಿಲ್ಲದೆ ಸರ್ವತೋಮುಖ ಬೆಳವಣಿಗೆ. ಇನ್ನು ಶಾಲೆಯ ವಾರ್ಷಿಕೋತ್ಸವ… ಪ್ರತಿ ಶಾಲೆಯ ಘನತೆಯ ಪ್ರಶ್ನೆ. ಪಕ್ಕದ ಗ್ರಾಮದ ಶಾಲೆಯ ನಾಟಕಕ್ಕಿಂತ ನಮ್ಮ ಶಾಲೆ ನಾಟಕ ಚೆನ್ನಾಗಿ ಬರಬೇಕು…. ಅನ್ನೋ ಅರೋಗ್ಯಕರ ಪೈಪೋಟಿ. ಅದೇ ನನ್ನ ಬೆತ್ತದ ಟೀಚರ್… ಮನೆಯ ಕೆಲಸ ಕಾರ್ಯವೆಲ್ಲ ಬದಿಗೊತ್ತಿ ತಿಂಗಳು ಗಟ್ಟಲೆ ತರಬೇತಿ ಕೊಟ್ಟು ಟಾ.. ಟು.. ಎನ್ನಲು ಬಾರದ ಮಕ್ಕಳ ಬಾಯಿಂದನೂ…ದೊಡ್ಡ ದೊಡ್ಡ ಡೈಲಾಗ್ ಹೇಳಿಸಿ ರಾಮಾಯಣ ಮಹಾಭಾರತದ ಮಹಾನ್ ಪಾತ್ರ ಮಾಡಿಸುತ್ತಿದ್ದರು.ಅಬ್ಬಾ ಅವರ ಛಲಕ್ಕೆ ಎಷ್ಟು ಸಲಾಂ ಹೇಳಿದರೂ ಅದು ಕಮ್ಮಿಯೇ. “ಗುಣ ವಿಶೇಷ “…ಈ ಪದವನ್ನ ಎಷ್ಟೇ ಹೇಳಿಕೊಟ್ಟರೂ ವಿಸೇಸ.. ಅಂತಾನೆ ಉಚ್ಚಾರ ಮಾಡೋದು ಜವಾಬ್ದಾರಿ…ಪದವನ್ನ ಏನೇ ತಿಪ್ಪರಲಾಗ ಹಾಕಿದ್ರು ಜಬದ್ದಾರಿ… ಅನ್ನೋರು.. ನಾಲಿಗೆ ಹೊರಳದ ಇಂತಹ ಮಕ್ಕಳನ್ನ ಹಾಕಿಕೊಂಡೇ ನಮ್ಮೂರಿನ ಅದ್ಭುತ ಕಲೆ ಯಕ್ಷಗಾನ.. ಮಾಡಿಸುತಿದ್ದಿದ್ದರು.(ಒಂದೇ ಒಂದು ಉಚ್ಚಾರ ದೋಷ ಇರದಂತೆ ) ಇಂದು ಇವೆಲ್ಲಾ ನಮ್ಮ ಮಕ್ಕಳಿಗೆ ಹೇಳಿದರೆ ಅಡಗೂಲಜ್ಜಿ ಕಥೆ ಎಂದು ನಕ್ಕಾರು…. ಅಧ್ಯಾಪಕ ವೃತ್ತಿಯೆಂದರೆ ದೇವರ ಕೆಲಸ ಎಂದು ನಂಬಿದವರು ವಿದ್ಯಾದಾನ ಮಹಾ ದಾನ ಎಂದು ತಿಳಿದ ಪುಣ್ಯ ಜೀವಿಗಳೊಂದಿಗೆ… ಕಳೆದ ದಿನಗಳು ಮರೆಯುವಂತದ್ದಲ್ಲ.ಯಾವ ಸ್ವಾರ್ಥವೂ ಇಲ್ಲದೆ ಮಕ್ಕಳ ಬಗ್ಗೆ ಅವರು ತೋರಿಸುತಿದ್ದ ಆ ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವೇ?

ಆ ದಿನಗಳಲ್ಲಿ ಗಣಿತವೆಂಬುದು ನನಗೆ ಕಬ್ಬಿಣದ ಕಡಲೆ. ಲೆಕ್ಕದ ಮೇಸ್ಟ್ರು ಅದನ್ನೊಂದು ಸವಾಲಾಗಿ ಸ್ವೀಕರಿಸಿ ಬಿಟ್ಟಿದ್ರು. ದಿನಾ ಬೋರ್ಡ್ ಹತ್ರ ಕರೆದು ಲೆಕ್ಕ ಬಿಡಿಸಲು ಹೇಳೋರು.. ಮಗ್ಗಿ ಕೇಳೋರು. ಅವರೇನೇ ಪ್ರಯತ್ನಮಾಡಿದರೂ 1..ರ ಮಗ್ಗಿ… 10…ಮಗ್ಗಿ ಬಿಟ್ಟು ಬೇರಾವುದಕ್ಕೂ ನನ್ನ ನಾಲಿಗೆ ಹೊರಳ್ತಾನೆ ಇರಲಿಲ್ಲ. ಸಹನೆ ತಪ್ಪಿ duster ನಲ್ಲಿ ತಲೆ ತಲೆಗೆ ಕುಟ್ಟುತಿದ್ದರು. ಇಂತಿಪ್ಪ ನನ್ನ ಬದುಕಲ್ಲೂ ಸುವರ್ಣ ದಿನಗಳು ಬಂದವು. ಪೇರಳೆ ಮರ ಹತ್ತಿ ಬಿದ್ದು ಕೈ ಮುರಿದುಕೊಂಡೆ. ಒಂದು ತಿಂಗಳ ಕಾಲ ಕೈಗೆ ಬ್ಯಾಂಡೇಜ್. ಅದೇ ವೇಷದಲ್ಲಿ ಶಾಲೆಗೂ ಹೋಗ್ತಾ ಇದ್ದೆ. ಮೊದಲೇ ನೋಡಲು ನರಪೇತಲ ನಾರಾಯಣನ ತರ.. ಜೊತೆಗೊಂದು ಬ್ಯಾಂಡೇಜ್ ಬೇರೆ…ಅನುಕಂಪ ಮೂಡಿತಿರಬೇಕು. ಬೋರ್ಡ್ ಹತ್ತಿರ ಕರೆಯೋದು ನಿಲ್ಲಿಸಿಯೇ ಬಿಟ್ಟರು.

ಹೆತ್ತಬ್ಬೆ ಹಾಗು ಗುರುಗಳು… ಬದುಕಿನ ನಾಣ್ಯದ ಎರಡು ಮುಖಗಳು. ಶಾಲೆಯಲ್ಲಿ ಸೂಕ್ತ ವಾತಾವರಣ ಇದ್ದರೆ ಸಾಕಾಗದು. ಮನೆಯಲ್ಲೂ ಇರಬೇಕು. ಅದಕ್ಕೆ ತಾನೇ ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು ಎಂದಿದ್ದು. ನಮ್ಮ ಪುಣ್ಯ ವಿಶೇಷ. ಮನೆಯಲ್ಲೂ ಒಳ್ಳೆಯ ವಾತಾವರಣ. ಹೊಸ ಪಠ್ಯ ಪುಸ್ತಕ ಕೊಟ್ಟಾಗ ಎಲ್ಲಾ ಕೆಲಸ ಮುಗಿಸಿ ಬಂದು ಅಮ್ಮ ಬಹಳ ಅಚ್ಚುಕಟ್ಟಾಗಿ ಬೈಂಡ್ ಹಾಕಿ ಕೊಡುತಿದ್ದಳು. ದಿನಾ ಬೆಳಿಗ್ಗೆ ೫ಕ್ಕೆ ನನ್ನನ್ನು ತಮ್ಮನನ್ನು ಎಬ್ಬಿಸಿ ಬಿಸಿ ಬಿಸಿ ಕಾಫಿ ಕೊಟ್ಟು ಓದಿಕೊಳ್ಳಿ ಮಕ್ಕಳೇ ಅಂತ ಪಿಸುಗುಡುತಿದ್ದಳು (ದೊಡ್ಡ ಧ್ವನಿಯಲ್ಲಿ ಓದಿ ಮಕ್ಕಳೇ ಅಂತ ಅಮ್ಮ ಬೈದರೆ ಅಪ್ಪಯ್ಯನ ಕೆಂಗಣ್ಣಿಗೆ ಅಮ್ಮ ಗುರಿಯಾಗ ಬೇಕಿತ್ತು ಬೆಳಿಗ್ಗೆ ಬೆಳಿಗ್ಗೆ ಮಕ್ಕಳಿಗೆ ಕಿರಿ ಕಿರಿ ಮಾಡ್ಬೇಡ ಮಲಗಲಿ ಪಾಪ ಅನ್ನೋದು ಅಪ್ಪಯ್ಯನ ಅಂಬೋಣ ).. ಅಮ್ಮನ ತುಡಿತ ಮಿಡಿತ ಅರ್ಥ ಮಾಡಿಕೊಳ್ಳದ ನಾವು ಬಿಸಿ ಕಾಫಿ ಕುಡಿದು ಜೊತೆಗೆರಡು ಬಿಸ್ಕತ್ತು ಕೂಡಾ ತಿಂದು ಅಮ್ಮ ಹಾಲು ಕರೆಯಲು ಹಟ್ಟಿಗಿಳಿದ ಕ್ಷಣಕ್ಕೆ ತಲೆಯಿಂದ ಕಾಲಿನ ತನಕ ಮುಸುಕೆಳೆದು ಮಲಗಿ ಬಿಡುತ್ತಿದ್ದೆವು. ಛಲ ಬಿಡದೆ ತ್ರಿವಿಕ್ರಮನಂತೆ ಮತ್ತೆ ಬಂದು ಅಪ್ಪಯ್ಯನಿಗೆ ಗೊತ್ತಾಗದಂತೆ ತೊಡೆ ಚೂಟಿ ಎಬ್ಬಿಸಿ ಕೂಡಿಸುತಿದ್ದಳು.

ಪ್ರತಿ ಪರೀಕ್ಷೆ ಮುಗಿಸಿ ಮನೆಗೆ ಬಂದ ಕೂಡ್ಲೇ ತಾನೇ ಪ್ರಶ್ನೆ ಪತ್ರಿಕೆ ಹಿಡಿದು ಪ್ರಶ್ನೆ ಕೇಳುತಿದ್ದಳು. ನಾವದಕ್ಕೆ ಉತ್ತರ ನೀಡಬೇಕಿತ್ತು… ಹಾಗೆ ಮಾರ್ಕ್ಸ್ ಕಾರ್ಡ್ನ ರೋಚಕ ಕಥೆಯನ್ನೂ ಹೇಳಿಬಿಡುತ್ತೇನೆ. ಕಮ್ಮಿ ಅಂಕಗಳು ಬಂದಾಗ.. ನಾನೂ ತಮ್ಮ ಒಗ್ಗಟಾಗಿ (ಬೇರೆ ವಿಷಯಕ್ಕೆ ಸದಾ ಹಾವು ಮುಂಗುಸಿ ಕಿತ್ತಾಟ.. ಕೆಲವು ವಿಷಯದಲ್ಲಿ ಮಹಾನ್ ಒಗ್ಗಟ್ಟು ) ಅಮ್ಮನ ಕಣ್ತಪ್ಪಿಸಿ ಅಪ್ಪಯ್ಯನಿಗೆ ಕೊಟ್ಟು ಸೈನ್ ಹಾಕಿ ಅಪ್ಪಯ್ಯ ಅನ್ನುತಿದ್ದೆವು. ಎಷ್ಟೇ ಅಂಕ ಬಂದರೂ ಒಂದೇ ಒಂದು ಅಕ್ಷರ ಬೈಯ್ಯದೆ ಸೈನ್ ಹಾಕಿ ಕೊಡೊ ಅಪ್ಪಯ್ಯ ನಮಗೆ ಬಲು ಮೆಚ್ಚು. ಅಷ್ಟಕ್ಕೇ ಈ ಅಮ್ಮನೆಂಬ ನಕ್ಷತ್ರಿಕ ಬಿಡುವುದುಂಟೆ? ದಿನಾ ಒಂದೇ ಪಿಟೀಲು.. ಮಕ್ಕಳೇ ಪರೀಕ್ಷೆ ಆಗಿ ಇಷ್ಟು ದಿನ ಆಯ್ತು ಇನ್ನೂ ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ವಾ. ಮನೆಗೆ ಬಂದ ಗೆಳತಿ ಹತ್ರಾನೂ ಮರು ವಿಚಾರಣೆ. (ಮೊದಲೇ ಗೆಳತಿಗೂ ಟ್ರೈನಿಂಗ್ ಕೊಟ್ಟಿರುತ್ತಿದ್ದೆವು ಅದು ಬೇರೆ ವಿಷಯ ) ಏನೋ ಇದೆ ಅನ್ನೋ ಡೌಟ್ ಬಂದಾಗ ಅಮ್ಮನ ಸವಾರಿ ಶಾಲೆಯ ಕಡೆ ಹಾಜರ್. ಅಮ್ಮನ ನೆತ್ತಿ ಶಾಲೆಯಲ್ಲಿ ನೋಡಿದವರಿಗೆ… ಇವತ್ತು ಮನೇಲಿದೆ ಹಬ್ಬ ಅನ್ನೋ ಅರಿವಾಗುತ್ತಿತ್ತು. ತಾಯಿ ಅನ್ನೋ ಜೀವಕ್ಕೆ ಮಾತ್ರ ಮಕ್ಕಳ ಭವಿಷ್ಯದ ಬಗ್ಗೆ ಇಷ್ಟು ಕಾಳಜಿ ಇರಲು ಸಾಧ್ಯ ಅಲ್ವಾ?

ತರಂಗ,ಸುಧಾ, ಕಸ್ತೂರಿ,ಕರ್ಮವೀರ ಮಯೂರ… ಇವಿಷ್ಟು ಪತ್ರಿಕೆಗಳು..ಅಮ್ಮನಿಗಾಗಿ ಅಪ್ಪಯ್ಯ ತರುತ್ತಿದ್ದರು. ಜೊತೆಗೆ ಬಾಲ ಮಂಗಳ ಚಂದಮಾಮ.. ಎಂಬ ಅದ್ಭುತ… ಪತ್ರಿಕೆಗಳು ನಮಗಾಗಿ. ಬಹುಷಃ ಓದುವ ಹವ್ಯಾಸ ಅಂದೇ ನಮ್ಮಲ್ಲಿ ಮೂಡಿತಿರಬೇಕು. ಓದುವ ಹವ್ಯಾಸವೇ ಬರವಣಿಗೆಯ ಹಾದಿಯ ಮೆಟ್ಟಿಲುಗಲ್ಲಾಯಿತು. ಇಂದು ಒಂದಿಷ್ಟು ಬರೆಯುವ ಹವ್ಯಾಸ,ಅದರಿಂದಾಗಿ ನನ್ನದಾದ ಒಂದಿಷ್ಟು ಅಭಿಮಾನಿ ಬಳಗ ಎಲ್ಲವೂ ಇವೆ. ಈ ಪುಟ್ಟ ಸಾಧನೆಯ ಗರಿ.. ಅಕ್ಷರಕಲಿಸಿದ ಗುರುಗಳಿಗೂ ಹೆತ್ತಬ್ಬೆಗೂ ಸಂದಾಯವಾಗಬೇಕು. ನೆನಪಿನ ಬುತ್ತಿಯಲಿದ್ದ ಸಿಹಿ ತುತ್ತುಗಳನ್ನು ಮತ್ತೆ ತೆಗೆದು ಮೆಲುವ ಅವಕಾಶ ಮಾಡಿಕೊಟ್ಟ ಫೇಸ್ ಬುಕ್ ಜಾಲತಾಣಕ್ಕೆ ಋಣಿ..

Copyright © All rights reserved Newsnap | Newsever by AF themes.
error: Content is protected !!