ಬಿಜೆಪಿ ಸಭೆಯಲ್ಲಿ ಮೋದಿ ಕೆಂಡ – ರಾಜ್ಯ ನಾಯಕರು ಥಂಡ

Team Newsnap
1 Min Read

ಕರ್ನಾಟಕ ಬಿಜೆಪಿ ನಾಯಕರ ಕುಟುಂಬ ರಾಜಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿ ಕೆಂಡ ಕಾರಿದ್ದಾರೆ. ಮೋದಿ ಗರಂ ಆಗಿದ್ದನ್ನು ಕಂಡ ರಾಜ್ಯ ನಾಯಕರು ಥಂಡಾ ಹೊಡೆದಿದ್ದಾರೆ.

ಕಳೆದ ರಾತ್ರಿ ದೆಹಲಿಯಲ್ಲಿ ರಾಜ್ಯ ಚುನಾವಣೆಯ ಟಿಕೆಟ್‌ ಹಂಚಿಕೆ ಸಂಬಂಧ ಹೈಕಮಾಂಡ್‌ ನಾಯಕರು ಸರಣಿ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಜೆಪಿ ನಡ್ಡಾ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಭೆಯಲ್ಲಿ ರಾಜ್ಯ ನಾಯಕರು ತಂದ ಸಮೀಕ್ಷಾ ವರದಿ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ನೋಡಿ ಮೋದಿ ಅಸಮಾಧಾನಗೊಂಡು, ಕೆಂಡಕಾರಿದರು.

ನಿಮ್ಮ ಕುಟುಂಬದ ವ್ಯಕ್ತಿಗಳಿಗೆ ಯಾಕೆ ಟಿಕೆಟ್‌ ನೀಡಬೇಕು. ಆ ಕ್ಷೇತ್ರದಲ್ಲಿ ಬೇರೆ ಸಮರ್ಥ ವ್ಯಕ್ತಿಗಳು ಇಲ್ಲವೇ ಎಂದು ರಾಜ್ಯ ನಾಯಕರನ್ನು ಪ್ರಧಾನಿ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಅಂತಿಮವಾಗಿ ಪ್ರಮುಖ ನಾಯಕರು ಮಕ್ಕಳಿಗಾಗಿ ಕೇಳಿದ ಕ್ಷೇತ್ರಗಳು ಸೇರಿ ಹಲವು ಕ್ಷೇತ್ರಗಳನ್ನು ಮರುಪರಿಶೀಲಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ತನ್ನಿ ಎಂದು ಸೂಚನೆ ನೀಡಿರುವುದೇ ರಾಜ್ಯ ಬಿಜೆಪಿ ತಲ್ಲಣಗಳಿಗೆ ಕಾರಣವಾಗಿದೆ

ಹಲವು ನಾಯಕರು ಪುತ್ರರಿಗೆ ಟಿಕೆಟ್‌ ಕೇಳಿದ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಿಗೆ ಪುತ್ರರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಈ ನಾಯಕರ ನಡೆಯನ್ನು ಕಂಡು ಅಸಮಾಧಾನಗೊಂಡ ಮೋದಿ, ಕುಟುಂಬ ರಾಜಕಾರಣ ವಿರುದ್ಧ ಮಾತನಾಡುವ ನಾವೇ ಮಕ್ಕಳಿಗೆ ಟಿಕೆಟ್‍ ನೀಡುವಂತೆ ಪಟ್ಟು ಹಿಡಿದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೇ ನೀವು ಮಾಡಿದ ಎಲ್ಲಾ ಸಮೀಕ್ಷೆಗಳು ಪ್ರಮುಖ ನಾಯಕರ ಪರವೇ ಯಾಕಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಮೋದಿ ಸೂಚನೆಯ ಬೆನ್ನಲ್ಲೇ ಸೋಮವಾರ ಮತ್ತೆ ರಾಜ್ಯ ನಾಯಕರು ಇಡೀ ದಿನ ಕ್ಷೇತ್ರದಲ್ಲಿರುವ ಬೇರೆ ನಾಯಕರ ಹೆಸರು ಇರುವ ಪಟ್ಟಿಯನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಈ ಪಟ್ಟಿ ಹೈಕಮಾಂಡ್‌ ನಾಯಕರಿಗೆ ಮೆಚ್ಚುಗೆಯಾಗಿದ್ದರೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಇಂದು ರಾತ್ರಿಯೇ ಅಥವಾ ಬುಧವಾರ ಬೆಳಿಗ್ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

Share This Article
Leave a comment