ರೋಲ್ಡ್ ಗೋಲ್ಡ್ ಸುಧಾ ಅಲ್ಲ: ಕೆ ಜಿ ಗಟ್ಟಲೆ ಚಿನ್ನದ ರಾಣಿ, ಖರ್ಚಿಗೆ ಮನೆಯಲ್ಲಿ 10 ಲಕ್ಷ ಕ್ಯಾಶ್

Team Newsnap
2 Min Read

ಕೆಎಎಸ್ ಅಧಿಕಾರಿ ಡಾ. ಸುಧಾ ತಮ್ಮ ಅಧಿಕಾರ ಅವಧಿಯಲ್ಲಿ ಸರ್ಕಾರದ ಮತ್ತು ಸಾರ್ವಜನಿಕರ ಕೆಲಸ ಮಾಡೇ ಇಲ್ಲ. ಬರೀ ಬಾಚುವುದನ್ನೇ ಮಾಡಿದ್ದಾರೆ.

ಆ ಅಧಿಕಾರಿ ಮನೆಯಲ್ಲಿ ಸಿಕ್ಕಿದ್ದು ಕೆ ಜಿ ಗಟ್ಟಲೆ ಚಿನ್ನಾಭರಣ, 10 ಲಕ್ಷ ರೂ. ಪತ್ತೆ. ಬಂಗಲೆಯಂತಹ ಮನೆ. ಸಾಲದ್ದಕ್ಕೆ ಸಂಬಂಧಿಗಳು ಮತ್ತು ಸ್ನೇಹಿತರ ಮನೆಯಲ್ಲಿ ಚಿನ್ನ, ದುಡ್ಡು ಬಚ್ಚಿ ಇಟ್ಟಿದ್ದು‌ ಇಂದು ಬಟಾ ಬಯಲಾಗಿದೆ. ಅದಕ್ಕೆ ಬಚ್ಚಿಟ್ಟಿದ್ದು ಪರರಿಗೆ ಅನ್ನೋದು!

ಭ್ರಷ್ಟಾಚಾರದ ಆರೋಪದಲ್ಲಿ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ, ಕಚೇರಿಗಳ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಈ ಕ್ಷಣದವರೆಗೂ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

ಬೆಂಗಳೂರು, ಉಡುಪಿಯ ಹೆಬ್ರಿ, ಮೈಸೂರಿನಲ್ಲಿರುವ ಡಾ. ಸುಧಾ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಅವರ ಭವ್ಯ ಬಂಗಲೆಯಲ್ಲಿ ಎಸಿಬಿ ಪರಿಶೀಲನೆ ಈ ವೇಳೆ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ.

ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು.

ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್​ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಲಾಗಿದೆ.

ಆಸ್ತಿ ಎಲ್ಲಿದೆ? ಬಾಚಿದೆಷ್ಟು?

ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್​, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿರುವ ಮನೆ ಮೇಲೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

sudha2

ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಮತ್ತು ತಂಡದಿಂದ ಡಾ. ಸುಧಾ ಅವರ ಮನೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

ಈ ಹಿಂದೆ ಸೊರಬದಲ್ಲಿ ತಹಸೀಲ್ದಾರ್ ಆಗಿದ್ದ ಡಾ. ಸುಧಾ‌ ಶಿವಮೊಗ್ಗದಲ್ಲೇ ಬೇರೆ ಬೇರೆ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಹೆಚ್ಚು ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಬಿಡಿಎಯಲ್ಲಿ ಮೊದಲು ಡೆಪ್ಯೂಟಿ ಸೆಕ್ರೆಟರಿ ಆಗಿದ್ದು, ನಂತರ ಭೂ ಸ್ವಾಧೀನಾಧಿಕಾರಿಯಾಗಿದ್ದರು. ಸದ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿರುವ ಡಾ. ಸುಧಾ ಅಲ್ಲಿ ಅಧಿಕಾರ ವಹಿಸಿಕೊಂಡು ದಿನದಿಂದ ಇದುವರೆಗೂ ಕಚೇರಿಗೆ ಹೋಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ, ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಇಂದು ಎಸಿಬಿ ದಾಳಿ ನಡೆಸಲಾಗಿದೆ.

Share This Article
Leave a comment