November 22, 2024

Newsnap Kannada

The World at your finger tips!

rto , lokayukta , Karnataka

2 ಸಾವಿರ, ಮದ್ಯದ ಬಾಟಲಿ ಸ್ವೀಕರಿಸುತ್ತಿದ್ದ ವೇಳೆ ಸರ್ವೇಯರ್ ಲೋಕಾಯುಕ್ತ ಬಲೆಗೆ

Spread the love

ಮಡಿಕೇರಿಯಲ್ಲಿ ವ್ಯಕ್ತಿಯೊಬ್ಬರಿಂದ 2 ಸಾವಿರ ರು ನಗದು ಮತ್ತು 1 ಬಾಟಲಿ ಮದ್ಯ ಸ್ವೀಕರಿಸುತ್ತಿದ್ದ ಸಂದರ್ಭ ಮಡಿಕೇರಿ ಸರ್ವೇ ಇಲಾಖೆ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್ ಆಗಿರುವ ಮಾದಪ್ಪ ಎಂಬುವವರೇ ಆರೋಪಿ.

ಮಾದಪ್ಪನಿಂದ 2 ಸಾವಿರ ನಗದು ಹಾಗೂ 1 ಮದ್ಯದ ಬಾಟಲಿಯನ್ನು ವಶಕ್ಕೆ ಪಡೆಯಲಾಗಿದೆ.

WhatsApp Image 2023 01 24 at 10.00.53 PM

ಚೇರಂಬಾಣೆ ಬಾಡಗ ಗ್ರಾಮದ ವ್ಯಕ್ತಿಯೊಬ್ಬರು 2 ಸರ್ವೇ ನಂಬರ್ ಗಳಲ್ಲಿ ಕಾಫಿ ತೋಟ ಹೊಂದಿದ್ದು, ಮನೆ ನಿರ್ಮಿಸುವ ಸಲುವಾಗಿ ನಿವೇಶನ ಮಾಡಲು ಮುಂದಾಗಿದ್ದರು. ಈ ಸ್ಥಳದಲ್ಲಿ 3 ಬೀಟೆ ಮರಗಳಿದ್ದು, ಅದನ್ನು ತೆರವು ಮಾಡುವುದು ಮತ್ತು ನಿವೇಶನವನ್ನಾಗಿ ಪರಿವರ್ತಿಸಲು ಸ್ಥಳದ ಸರ್ವೇ ನಡೆಸಬೇಕಿತ್ತು.

ಈ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಮಡಿಕೇರಿ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲದೇ ಸರ್ವೇಗಾಗಿ ಸರಕಾರ ನಿಗದಿಪಡಿಸಿದ್ದ ಶುಲ್ಕವನ್ನೂ ಪಾವತಿ ಮಾಡಿದ್ದರು.

ಈ ವೇಳೆ ಸರ್ವೇಯರ್ ಮಾದಪ್ಪ ಅವರು ರೂ.10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಜಾಗದ ಮಾಲೀಕರು 10 ಸಾವಿರ ರೂ. ನಗದು ನೀಡಿದ್ದರು. ಬಳಿಕವೂ ಕೆಲಸ ನಿಧಾನಗತಿಯಲ್ಲಿ ಸಾಗಿದ್ದು ಈ ವೇಳೆ ಸರ್ವೇಯರ್ ಮಾದಪ್ಪ ಅವರನ್ನು ಸಂಪರ್ಕಿಸಿದಾಗ ಹೆಚ್ಚುವರಿ 5 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಆ ಹಣವನ್ನೂ ನೀಡಲಾಗಿತ್ತು. ಹೀಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗಿರಲಿಲ್ಲ. ಮಾತ್ರವಲ್ಲದೇ ಹೆಚ್ಚುವರಿ 2 ಸಾವಿರ ನಗದು ಮತ್ತು 1 ಮದ್ಯದ ಬಾಟಲಿ ನೀಡುವಂತೆ ಸರ್ವೇಯರ್ ಮಾದಪ್ಪ ಅರ್ಜಿದಾರರನ್ನು ಒತ್ತಾಯಿಸಿದ್ದರು. ಇದರಿಂದ ಮನನೊಂದ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ಆರೋಪಿಸಲಾಗಿದೆ.

ಇಂದು ಅರ್ಜಿದಾರರಿಂದ ಆರೋಪಿ ಮಾದಪ್ಪ ಅವರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ 2 ಸಾವಿರ ರೂ. ನಗದು ಮತ್ತು 1 ಮದ್ಯದ ಬಾಟಲಿಯನ್ನು ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಲೋಕಾಯುಕ್ತ ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್, ವೃತ್ತನಿರೀಕ್ಷಕ ಲೋಕೇಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!