January 29, 2026

Newsnap Kannada

The World at your finger tips!

hike,electric,bill

ಸರ್ಕಾರದಿಂದ ಗ್ರಾಹಕರಿಗೆ ಶಾಕ್: ವಿದ್ಯುತ್ ದರ ಹೆಚ್ಚಳ

Spread the love

ಕೊರೊನಾ, ಲಾಕ್‌ಡೌನ್‌ ಮತ್ತು ಆರ್ಥಿಕ ಸಂಕಷ್ಟದ ನಡುವೆಯೇ ಇದೀಗ ವಿದ್ಯುತ್‌ ದರ ಏರಿಕೆಗೆ ಜನರು ಸಿದ್ಧರಾಗಬೇಕಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) 2020-21ನೇ ಸಾಲಿನ ವಿದ್ಯುತ್‌ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಯೂನಿಟ್‌ಗೆ ಸರಾಸರಿ 40 ಪೈಸೆಯಷ್ಟು ದರ ಹೆಚ್ಚಿಸಲಾಗಿದೆ. ದರಗಳು ನ.1ರಿಂದಲೇ ಪೂರ್ವಾನ್ವಯವಾಗಲಿವೆ.

ಪರಿಷ್ಕೃತ ದರ ನ.1ರಿಂದ ಅನ್ವಯವಾಗುವುದಿದ್ದರೂ, ಲಾಕ್‌ಡೌನ್‌ ಅವಧಿಯ 7 ತಿಂಗಳ ದರಗಳನ್ನು ಮುಂದಿನ ಸಾಲಿನಲ್ಲಿ ವಸೂಲು ಮಾಡಲಾಗುತ್ತದೆ. ಇದರಿಂದ ಹೊಸ ದರಗಳು ಐದು ತಿಂಗಳಿಗೆ (ನ.1- 2021ಮಾ.31ರ ವರೆಗೆ) ಮಾತ್ರ ಅನ್ವಯವಾಗಲಿದೆ. ಆನಂತರ 2021-22ನೇ ಸಾಲಿನ ದರಗಳು ಪರಿಷ್ಕರಣೆಯಾಗಲಿವೆ ಎಂದು ಕೆಇಆರ್‌ಸಿ ಸ್ಪಷ್ಟಪಡಿಸಿದೆ.

ಸ್ಲಾಬ್‌ ಬದಲಾವಣೆ ಇಲ್ಲ:

ದರ ನಿಗದಿಗೆ ಈಗ ಮೊದಲ ಸ್ಪ್ಯಾಬ್‌ನ್ನು 30 ಯುನಿಟ್‌ಗೆ ನಿಗದಿಪಡಿಸಲಾಗಿದೆ. ಅದನ್ನು 50ಕ್ಕೆ ಏರಸಬೇಕೆಂಬ ನಾಗರಿಕ ಸಂಘಟನೆಗಳ ಬೇಡಿಕೆ ತಿರಸ್ಕರಿಸಲಾಗಿದೆ.
ರಾಜ್ಯದಲ್ಲಿ ಗೃಹ ಬಳಕೆ, ಕೈಗಾರಿಕೆ ಬಳಕೆ, ವಾಣಿಜ್ಯ ವಹಿವಾಟು ಹೀಗೆ ನಾನಾ ವಿಭಾಗಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.

ಗೃಹ ಬಳಕೆಯಡಿ ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಇತರ ಪೌರಸಂಸ್ಥೆಗಳಲ್ಲಿ ಸರಕಾರಿ/ಧರ್ಮಾರ್ಥ ಸಂಸ್ಥೆಗಳು ನಡೆಸುವ ವಿದ್ಯಾಸಂಸ್ಥೆ/ಆಸ್ಪತ್ರೆಗಳಿಗೆ ಪ್ರತಿ ವಿದ್ಯುತ್‌ ಯೂನಿಟ್‌ಗೆ 25 ಪೈಸೆ ಹೆಚ್ಚಿಸಲಾಗಿದೆ. ಮಾಸಿಕ ವಿದ್ಯುತ್‌ ಬಳಕೆಯಡಿ 30 ಯೂನಿಟ್‌ವರೆಗೆ ದರವನ್ನು 3.75 ರೂ.ನಿಂದ 4 ರೂ., 31-100ರ ವರೆಗಿನ ಯೂನಿಟ್‌ಗೆ 5.20 ರೂ.ನಿಂದ 5.45 ರೂ.ಗೆ, 101-200 ಯೂನಿಟ್‌ವರೆಗೆ 6.75 ರೂ.ನಿಂದ 7 ರೂ.ಗೆ ಹಾಗೂ 200 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ಗೆ ವಿಧಿಸುತ್ತಿರುವ ದರ 7.80ರಿಂದ 8.05 ರೂ.ಗೆ ಏರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಗೃಹ ಬಳಕೆದಾರರಿಗೆ ಮೊದಲ 30 ಯೂನಿಟ್‌ವರೆಗಿನ ದರ 3.65 ರೂ.ನಿಂದ 3.90ಕ್ಕೆ ಏರಿಸಲಾಗಿದೆ. 31-100 ಯೂನಿಟ್‌ವರೆಗೆ 4.90 ರೂ.ನಿಂದ 5.15 ರೂ., 101-200 ಯೂನಿಟ್‌ವರೆಗೆ 6.45 ರೂ.ನಿಂದ 6.70 ಹಾಗೂ 200 ಮೇಲ್ಪಟ್ಟ ಬಳಕೆಗೆ 7.30 ರೂ.ನಿಂದ 7.55 ರೂ.ಗೆ ಏರಿಸಲಾಗಿದೆ.

ಬೆಸ್ಕಾಂ ಹೊರತುಪಡಿಸಿ ಉಳಿದ ಎಸ್ಕಾಂಗಳ ನಗರಪಾಲಿಕೆ/ ಪೌರ ಸಂಸ್ಥೆಗಳ ಗೃಹ ಬಳಕೆಯ ಮೊದಲ 30 ಯೂನಿಟ್‌ವರೆಗೆ 3.70 ರೂ.ನಿಂದ 3.95 ರೂ.ಗೆ ಏರಿಸಲಾಗಿದೆ. 31-100 ಯೂನಿಟ್‌ವರೆಗೆ 5.20 ರೂ.ನಿಂದ 5.45 ರೂ.ಗೆ, 101-200 ಯೂನಿಟ್‌ಗೆ 6.75 ರೂ.ನಿಂದ 7 ರೂ. ಹಾಗೂ 200 ಮೇಲ್ಪಟ್ಟ ಯೂನಿಟ್‌ ಬಳಕೆಗೆ 7.80 ರೂ.ನಿಂದ 8.05ಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಈ ದರಗಳು ಸ್ಲಾಬ್‌ವಾರು ಕ್ರಮವಾಗಿ 3.60 ರೂ.ನಿಂದ 3.85 ರೂ.ಗೆ, 4.90 ರೂ.ನಿಂದ 5.15 ರೂ.ಗೆ, 6.45 ರೂ.ನಿಂದ 6.70 ರೂ.ಗೆ ಹಾಗೂ 7.30 ರೂ.ನಿಂದ 7.55 ರೂ.ಗೆ ಹೆಚ್ಚಿಸಲಾಗಿದೆ.

ಕೈಗಾರಿಕೆ ಬಳಕೆದಾರರು:

ರಾಜ್ಯದ ಎಲ್ಲಾಎಲ್‌ಟಿ ಕೈಗಾರಿಕೆ ಬಳಕೆದಾರರಿಗೆ ದರ ಹೆಚ್ಚಳ ಪ್ರತಿ ಯೂನಿಟ್‌ಗೆ 25 ಪೈಸೆ ಇರಲಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ/ಪೌರಸಂಸ್ಥೆಗಳ ಪ್ರದೇಶಗಳಲ್ಲಿಮೊದಲ 500 ಯೂನಿಟ್‌ಗೆ ಪ್ರತಿ ಯೂನಿಟ್‌ಗೆ 5.65 ರೂ.ನಿಂದ 5.90 ರೂ. ಹಾಗೂ 500 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ ದರ 6.95 ರೂ.ನಿಂದ 7.20 ರೂ.ಗೆ ಏರಿಕೆಯಾಗಿದೆ. ಬಿಬಿಎಂಪಿ ಹೊರಗಿನ ಪ್ರದೇಶಗಳಿಗೆ ಮೊದಲ 500 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 5.35 ರೂ.ನಿಂದ 5.60 ರೂ., 501-1000 ಯೂನಿಟ್‌ವರೆಗೆ 6.30 ರೂ.ನಿಂದ 6.55 ರೂ. ಹಾಗೂ 1000 ಯೂನಿಟ್‌ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ಗೆ 6.60 ರೂ.ನಿಂದ 6.85 ರೂ.ಗೆ ಏರಿಸಲಾಗಿದೆ.

ಎಚ್‌.ಟಿ. ಕೈಗಾರಿಕೆ ಬಳಕೆದಾರರಿಗೆ ಬಿಬಿಎಂಪಿ/ಪೌರಸಂಸ್ಥೆ ವ್ಯಾಪ್ತಿಯಲ್ಲಿ ಮೊದಲ ಒಂದು ಲಕ್ಷ ಯೂನಿಟ್‌ ಬಳಕೆಗೆ ಪ್ರತಿ ಯೂನಿಟ್‌ಗೆ 7.10 ರೂ.ನಿಂದ 7.35 ರೂ. ಹಾಗೂ ಒಂದು ಲಕ್ಷ ಯೂನಿಟ್‌ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ಗೆ 7.40 ರೂ.ನಿಂದ 7.65 ರೂ.ಗೆ ಹೆಚ್ಚಿಸಲಾಗಿದೆ.

ವಾಣಿಜ್ಯ ಬಳಕೆ ದರ:

ಎಲ್‌ಟಿ ವಾಣಿಜ್ಯ ಬಳಕೆಗೆ ಬಿಬಿಎಂಪಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೊದಲ 50 ಯೂನಿಟ್‌ ಬಳಕೆಗೆ ಪ್ರತಿ ಯೂನಿಟ್‌ಗೆ 8 ರೂ.ನಿಂದ 8.25 ರೂ. ಹಾಗೂ 50 ಯೂನಿಟ್‌ ಮೇಲ್ಪಟ್ಟ ಬಳಕೆಗೆ 9 ರೂ.ನಿಂದ 9.25 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ದರಗಳು ಕ್ರಮವಾಗಿ ಪ್ರತಿ ಯೂನಿಟ್‌ಗೆ 7.50 ರೂ.ನಿಂದ 7.75 ರೂ. ಹಾಗೂ 8.50 ರೂ.ನಿಂದ 8.75 ರೂ.ಗೆ ಏರಿಸಲಾಗಿದೆ.

ವಿನಾಯಿತಿ ಮುಂದುವರಿಕೆ:

ವಿದ್ಯುತ್‌ ಮಿತ ಬಳಕೆ ಕಾರಣಕ್ಕೆ ಎಲ್‌ಇಡಿ/ಇಂಡಕ್ಷನ್‌ ಬಲ್ಬ್‌ಗಳ ಅಳವಡಿಕೆ ಉತ್ತೇಜನಕ್ಕೆ ಪ್ರೋತ್ಸಾಹ ದರ ಮುಂದುವರಿಸಲಾಗಿದೆ. ಬಿಬಿಎಂಪಿ, ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಯೂನಿಟ್‌ಗೆ 1.05 ರೂ. ರಿಯಾಯಿತಿ ಘೋಷಿಸಲಾಗಿದೆ.

ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್‌ ಖರೀದಿ/ಉಪಯೋಗ ಉತ್ತೇಜಿಸಲು ಎಚ್‌ಟಿ ಕೈಗಾರಿಕೆ/ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 50 ಪೈಸೆಯಷ್ಟು ಹಸಿರು ದರವನ್ನು ಮುಂದುವರಿಸಲಾಗಿದೆ.

error: Content is protected !!