ರಿಪಬ್ಲಿಕ್ ಟಿವಿ ಚೀಫ್ ಎಡಿಟರ್ ಅರ್ನಬ್ ಬಂಧನದ ಅಸಲಿಯತ್ತ ಕಾರಣ ಬಯಲು

Team Newsnap
3 Min Read
Image source : Google / Picture by : twitter.com

ರಿಪಬ್ಲಿಕ್‌ ಟಿವಿ ಮತ್ತು ಮುಂಬೈ ಪೊಲೀಸರ ನಡುವಿನ ಸಮರ ತಾರಕಕ್ಕೇರಿ ಅರ್ನಬ್‌ ಗೋಸ್ವಾಮಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಕ್ಕೆ ಹಲವಾರು ಕಾರಣಗಳು ಹುಟ್ಟಿಕೊಂಡವು. ಆದರೆ ಅಸಲಿಯತ್ತ ಕಾರಣ ಬಯಲಾಗಿದೆ.

2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್‌ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿ ತಂಡ ರಿಪಬ್ಲಿಕ್ ಟಿವಿ ಮುಖ್ಯಸ್ಥನನ್ನು ಬಂಧಿಸಿದೆ. ಅರ್ನಬ್‌ ಗೋಸ್ವಾಮಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪದೇ ಪದೇ ಟೀಕೆ ಮಾಡುತ್ತಿರುವುದು 2018ರಲ್ಲಿ ನಡೆದ ಆತ್ಮಹತ್ಯೆ ಪ್ರಕರಣ ಈಗ ಸದ್ದು ಮಾಡೋಕೆ ಕಾರಣ ಎನ್ನಲಾಗ್ತಿದೆ. 

ಇಂಟೀರಿಯರ್ ಡಿಸೈನರ್ ಆಗಿದ್ದ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್‌ ನಾಯಕ್ 2018ರ ಮೇ ತಿಂಗಳಲ್ಲಿ ಅಲಿಬಾಗ್‌ನಲ್ಲಿರುವ ಅವರ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸ್‌ ತನಿಖೆಯ ಪ್ರಕಾರ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಕುಮುದ್‌ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತು ಆಗಿತ್ತು. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಮುದ್ ಅವರನ್ನು ಅನ್ವಯ್ ಕೊಂದಿದ್ದಾನೆ ಎಂದು ಪೊಲೀಸರು ತನಿಖೆಯಲ್ಲಿ ದಾಖಲಿಸಿದ್ದರು. ಘಟನೆ ನಡೆದ ದಿನ ಕುಮುದ್ ಅವರ ಶವ ನೆಲಮಹಡಿಯ ಸೋಫಾದ ಅಡಿ ಪತ್ತೆಯಾಗಿದ್ದರೆ, ಅನ್ವಯ್‌ ದೇಹ ಮೊದಲ ಮಹಡಿಯಲ್ಲಿ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿತ್ತು.

ಆತ್ಮಹತ್ಯೆ ಘಟನೆ ನಡೆದ ಪೊಲೀಸರಿಗೆ ಲೆಟರ್‌ ಒಂದು ಸಿಕ್ಕಿತ್ತು. ಇದು ಆತ್ಮಹತ್ಯೆಗೂ ಮುನ್ನ ಬರೆದ ಪತ್ರವಾಗಿದ್ದು, ಈ ಮರಣಪತ್ರದಲ್ಲಿ ‘ಅರ್ನಬ್‌ ಗೋಸ್ವಾಮಿ, ಫಿರೋಜ್ ಶೇಖ್ ಮತ್ತು ನಿತೀಶ್ ಸರ್ದಾ ಅವರು ನನಗೆ ನೀಡಬೇಕಾಗಿದ್ದ 5.40 ಕೋಟಿ ರೂಪಾಯಿ ಬಾಕಿ ಹಣ ಪಾವತಿಸಿಲ್ಲ.ಹೀಗಾಗಿ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಲುತ್ತಿದ್ದೇನೆ ಎಂದು ಬರೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪರಸ್ಪರ ವ್ಯಾವಹಾರಿಕ ಒಪ್ಪಂದದಂತೆ ರಿಪಬ್ಲಿಕ್‌ ಟಿವಿಯ ಪತ್ರಕರ್ತ ಅರ್ನಬ್‌ ಗೋಸ್ವಾಮಿ 83 ಲಕ್ಷ ರೂಪಾಯಿ, ಐಕಾಸ್ಟ್‌ ಎಕ್ಸ್/ಸ್ಕಿಮೀಡಿಯಾದ ಫಿರೋಜ್ ಶೇಖ್ 4 ಕೋಟಿ ರೂಪಾಯಿ ಮತ್ತು ಸ್ಮಾರ್ಟ್‌ ವರ್ಕ್‌ ಕಂಪನಿಯ ನಿತೀಶ್ ಸರ್ದಾ 55 ಲಕ್ಷ ರೂಪಾಯಿ ಬಾಕಿ ಹಣವನ್ನು ಅನ್ವಯ್‌ ನಾಯಕ್ ಮಾಲೀಕತ್ವದ ಕಾನ್ಕಾರ್ಡ್‌ ಡಿಸೈನ್ಸ್ ಪ್ರೈವೇಟ್‌ ಲಿಮಿಟೆಡ್‌ಗೆ ನೀಡಬೇಕಾಗಿತ್ತು. ಆದರೆ ಈ ಮೂವರು ನಿರ್ದಿಷ್ಟ ಅವಧಿಗೆ ಹಣವನ್ನು ಹಿಂತಿರುಗಿಸಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಅನ್ವಯ್‌ ಆತ್ಮಹತ್ಯೆಗೆ ಶರಣಾಗಿದ್ದು ಈ ಮೂವರಿಗೆ ಉರುಳಾಗಿ ಪರಿಣಮಿಸಿತ್ತು. ಆದರೆ ತನಿಖೆ ವೇಳೆ ತಾನು ನೀಡಬೇಕಾಗಿದ್ದ ಹಣವನ್ನು ಈಗಾಗಲೇ ಪಾವತಿಸಿರುವುದಾಗಿ ಅರ್ನಬ್‌ ಗೋಸ್ವಾಮಿ ಹೇಳಿ ಆರೋಪವನ್ನು ತಳ್ಳಿ ಹಾಕಿದ್ದರು.

ಈ ಪ್ರಕರಣದ ತನಿಖೆ ನಡೆಸಿದ್ದ ರಾಯ್‌ಗಡ ಪೊಲೀಸರು ಅರ್ನಬ್‌ ಗೋಸ್ವಾಮಿ ಸೇರಿದಂತೆ ಆತ್ಮಹತ್ಯಾ ಪತ್ರದಲ್ಲಿ ಉಲ್ಲೇಖಿಸಿದ ಆರೋಪಿಗಳ ವಿರುದ್ಧ ಪುರಾವೆಗಳು ಲಭಿಸಿಲ್ಲ ಎಂದು ಹೇಳಿ 2019ರ ಏಪ್ರಿಲ್‌ನಲ್ಲಿ ಪ್ರಕರಣವನ್ನು ಮುಚ್ಚಿ ಹಾಕಿದ್ದರು. ಆದರೆ ಇದೇ ವರ್ಷ ಮೇ ತಿಂಗಳಲ್ಲಿ ಅನ್ವಯ್‌ ನಾಯಕ್ ಅವರ ಮಗಳು ಅದ್ನ್ಯಾ ನಾಯಕ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರನ್ನು ಸಂಪರ್ಕಿಸಿ ಅರ್ನಬ್‌ ಗೋಸ್ವಾಮಿ ಹಣ ಪಾವತಿ ಮಾಡದಿರುವ ಬಗ್ಗೆ ಅಲಿಬಾಗ್‌ ಪೊಲೀಸರು ತನಿಖೆ ನಡೆಸಿಲ್ಲ ಎಂದು ದೂರಿದ್ದರು. ಅಲ್ಲದೇ ಈ ಪ್ರಕರಣದ ಕೂಲಂಕುಶ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಆ ನಂತರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರು ಈ ಪ್ರಕರಣದ ಸಿಐಡಿ ತನಿಖೆ ನಡೆಸುವಂತೆ ಆದೇಶಿಸಿದ್ದರು. ಅದರಂತೆ ಈ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಿದ ಸಿಐಡಿ ಇಲಾಖೆ ಅರ್ನಬ್‌ ಗೋಸ್ವಾಮಿಯನ್ನು ಇಂದು ಬಂಧಿಸಿದೆ.

Share This Article
Leave a comment