ಸ್ಯಾಂಡಲ್ ವುಡ್ ರೊಮ್ಯಾಂಟಿಕ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪ್ರೀತಿ, ಪ್ರೇಮದ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಲವ್ ಮಾಕ್ಟೇಲ್ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ ಬಳಿಕ ಈ ಜೋಡಿ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು.
ಸಿನಿಮಾದಲ್ಲಿ ಆದಿ-ನಿಧಿಮಾ ಪಾತ್ರದ ಮೂಲಕ ಅಭಿಮಾನಿಗಳ ಮನಗೆದಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲೂ ಒಂದಾಗುತ್ತಿದೆ ಎನ್ನುವ ಸುದ್ದಿ ಕೇಳಿ ಅಚ್ಚರಿ ಪಟ್ಟಿದ್ದರು.
ಸದ್ಯ ಇವರು ಲವ್ ಮಾಕ್ಟೇಲ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಮದುವೆ ಯಾವಾಗ ಎನ್ನುವ ಪ್ರಶ್ನೆ ಇವರಿಗೆ ಎದುರಾಗುತ್ತಿತ್ತು. ಸಿನಿಮಾ ಮುಗಿಸಿ ಮದುವೆ ಯಾಗುವುದಾಗಿ ಹೇಳುತ್ತಿದ್ದ ಈ ಜೋಡಿ ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಕೃಷ್ಣ ಹಾಗೂ ಮಿಲನಾ ನಾಗರಾಜ್ ಮೊದಲ ಬಾರಿಗೆ ಪ್ರೀತಮ್ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾದಲ್ಲಿ ನಟಿಸಿದರು. ಇದು ಕೃಷ್ಣಗೆ 4ನೇ ಸಿನಿಮಾವಾದರೆ, ಮಿಲನಾಗೆ ಮೊದಲ ಚಿತ್ರವಾಗಿತ್ತು. ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಇಬ್ಬರು ಜೋಡಿಯಾಗಿರಲಿಲ್ಲ. ಈ ಸಿನಿಮಾದಿಂದ ಇಬ್ಬರ ನಡುವೆ ಪರಿಚಯ ಶುರು ಆಯ್ತು. ನಂತರ ಸ್ನೇಹ, ಆ ನಂತರ ಪ್ರೀತಿ ಆವರಿಸಿತ್ತು.
‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾದ ನಂತರ ಮತ್ತೆ ಮತ್ತೆ ಈ ಜೋಡಿ ಒಟ್ಟಿಗೆ ನಟಿಸಿದರು. ‘ಚಾರ್ಲಿ’ ಹಾಗೂ ‘ಚಂದ್ರಲೇಖ ರಿಟರ್ನ್’ ಚಿತ್ರಗಳಲ್ಲಿ ಕೃಷ್ಣ ಮತ್ತು ಮಿಲನಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬಳಿಕ, ಕೃಷ್ಣ ನಿರ್ದೇಶನ ಮಾಡಿ ನಟಿಸಿರುವ ‘ಲವ್ ಮಾಕ್ಟೇಲ್’ ಸಿನಿಮಾದಲ್ಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡರು. ಆಗ ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಸುದ್ದಿ ಹರಿದಾಡಲು ಪ್ರಾರಂಭಿಸಿತ್ತು.
6 ವರ್ಷ ಲವ್ – ಈಗ ಮದುವೆ
ಇಬ್ಬರ ಪ್ರೀತಿಗೆ 6 ವರ್ಷ ತುಂಬಿದೆ. ಈ ಖುಷಿಯನ್ನು ಕೃಷ್ಣ ಮತ್ತು ಮಿಲನಾ ಇತ್ತೀಚಿಗೆ ಹಂಚಿಕೊಂಡಿದ್ದರು. ಅಂದ್ಹಾಗೆ ಇಬ್ಬರ ಪ್ರೀತಿಗೆ ಎರಡು ಮನೆಯವರ ಸಮ್ಮತಿ ಸಹ ಸಿಕ್ಕಿದೆ. ಅಲ್ಲದೆ ಕೃಷ್ಣ ಕುಟುಂಬ ಮತ್ತು ಮಿಲನಾ ಕುಟುಂಬದ ನಡುವೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ.
ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಇಬ್ಬರು ಯಾವಾಗ ಹಸೆಮಣೆ ಏರುತ್ತಾರೆ ಎನ್ನುವ ಪ್ರಶ್ನೆ ಆಗಾಗ ಎದುರಿಸುತ್ತಿದ್ದರು. ಲವ್ ಮಾಕ್ಟೇಲ್-2 ಸಿನಿಮಾ ಶೂಟಿಂಗ್ ಬಳಿಕ ಮದುವೆಯಾಗುವುದಾಗಿ ಹೇಳಿದ್ದ ಜೋಡಿ ಈಗ ಮದುವೆ ದಿನಾಂಕ ಅನೌನ್ಸ್ ಮಾಡಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಮುದ್ದಾದ ಜೋಡಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯ ದಿನ ಹಸೆಮಣೆ ಏರುತ್ತಿದ್ದಾರೆ.
ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರು ಸುಂದರವಾದ ಫೋಟೋ ಶೇರ್ ಮಾಡುವ ಮೂಲಕ ಮದುವೆ ದಿನಾಂಕ ಬಹಿರಂಗ ಪಡಿಸಿದ್ದಾರೆ. ನಮ್ಮ ಮದುವೆ ಎನ್ನುವ ಕೇಕ್ ಕತ್ತರಿಸಿ ಮದುವೆ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ’ ಎಂದು ಬರೆದುಕೊಂಡಿದ್ದಾರೆ. ಇಬ್ಬರು ಮದುವೆ ದಿನಾಂಕ ಬಹಿರಂಗಪಡಿಸುತ್ತಿದ್ದಂತೆ ಮುದ್ದಾದ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ