ವಿಶ್ವವಿಖ್ಯಾತ ಮೈಸೂರು ದಸರಾ ಸಂಪನ್ನಗೊಂಡಿದೆ. ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಅಭಿಮನ್ಯು ಆನೆ, ಗಾಂಭೀರ್ಯದಿಂದ ನಡಿಗೆ ಹಾಕಿ ರೋಮಾಂಚನಗೊಳಿಸಿತು.
ಈ ಮೂಲಕ ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿ ಸಂಭ್ರಮದಿಂದ ನೆರವೇರಿತು.
ಚಿನ್ನದ ಅಂಬಾರಿಯಲ್ಲಿ ಸ್ಥಾಪಿತವಾದ ನಾಡ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದಸರಾ ಜಂಬೂ ಸವಾರಿಗೆ ಸಿಎಂ ಯಡಿಯೂರಪ್ಪನವರು ಚಾಲನೆ ನೀಡಿದರು.
ಇದೇ ವೇಳೆ ನಾಡ ಅಧಿದೇವತೆಗೆ ಜಿಲ್ಲಾಡಳಿತದಿಂದ ನಮನ ಸಲ್ಲಿಸಲಾಯಿತು. ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ರಾಜವಂಶಸ್ಥ ಯದುವೀರ್ ಸಹ ಪುಷ್ಪಾರ್ಚನೆಯಲ್ಲಿ ಭಾಗಿಯಾಗಿದ್ದರು.
ಪುಷ್ಪಾರ್ಚನೆ ವೇಳೆ ಮೊಳಗಿದ ರಾಷ್ಟ್ರಗೀತೆಗೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಈ ವೇಳೆ ಕ್ಯಾ.ಅಭಿಮನ್ಯು ಸಹ ಗೌರವ ವಂದನೆ ಸಲ್ಲಿಸಿದ. ಬಳಿಕ ಫಿರಂಗಿ ಮೂಲಕ ಏಳು ಸುತ್ತಿನ ಸಿಡಿಮದ್ದು ಸಿಡಿಸಲಾಯಿತು.
ಅರಮನೆ ಆವರಣದಲ್ಲಿಯೇ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಗೆ ವಿಜಯಾ, ಕಾವೇರಿ ಆನೆಗಳು ಸಾಥ್ ನೀಡಿದವು.
ಸರಳ ದಸರಾ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅರಮನೆಯಿಂದ ಬನ್ನಿ ಮಂಟಪದವರೆಗೆ ಸುಮಾರು 5.5 ಕಿಲೋ ಮೀಟರ್ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಕೇವಲ 233 ಮೀಟರ್ ಅಂತರದಲ್ಲೇ ಸಾಗಿದವು.
ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ನಂದಿ ಧ್ವಜ ಪೂಜೆ ನಡೆಸುವ ಮೂಲಕ ಜಂಬೂ ಸವಾರಿ ಮೆರವಣಿಗೆ ಆರಂಭವಾಯ್ತು. ಮೊದಲಿಗೆ ವೀರಗಾಸೆ ಕುಣಿತದಿಂದ ಮೆರವಣಿಗೆ ಆರಂಭವಾಯ್ತು. ನಂತರ ಕೊರೊನಾ ವಾರಿಯರ್ಸ್ ಸ್ತಬ್ಧಚಿತ್ರ ಹಿಂಬಾಲಿಸಿತು.
More Stories
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ