January 29, 2026

Newsnap Kannada

The World at your finger tips!

sidda

Pic Credits : deccanherald.com

ಕಟೀಲ್​ ಒಬ್ಬ ಕಾಡು ಮನುಷ್ಯ: ಸಿದ್ದರಾಮಯ್ಯ ಕಿಡಿ

Spread the love

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ವಿರುದ್ಧ ಮತ್ತೊಮ್ಮೆ ಟ್ವಿಟರ್​ನಲ್ಲಿ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಳಿನ್ ಕುಮಾರ್​ ಕಟೀಲ್​ ಓರ್ವ ಕಾಡು ಮನುಷ್ಯ. ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಎಂದು ಬೋಧನೆ ಮಾಡುವ ಸಂಘ ಪರಿವಾರದಲ್ಲಿ ಯಾರಾದರೂ ಹಿರಿಯರು, ಮಾನವಂತರು ಉಳಿದಿದ್ದರೆ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಅವರಿಗೆ ಸ್ವಲ್ಪ ಬುದ್ದಿ ಹೇಳಿ ನಾಲಿಗೆ ಬಿಗಿಹಿಡಿದು ಮಾತನಾಡಲು ಕಲಿಸಿ. ಇಲ್ಲದೆ ಇದ್ದರೆ ಇವರೊಬ್ಬರೇ ಸಾಕು ಎಲ್ಲರ ಮಾನ ಕಳೆಯಲು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಇದೀಗ ಉಪ ಚುನಾವಣೆ ಕಾವು ರಂಗೇರಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಆರ್​ಆರ್​ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ್ದ ನಳಿನ್ ಕುಮಾರ್​ ಕಟೀಲ್ ಕಾಂಗ್ರೆಸ್​ ನಾಯಕರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರನ್ನು ಉಲ್ಲೇಖಿಸಿ “ಹುಲಿಯಾ ಕಾಡಿಗೆ, ಬಂಡೆ ಛಿದ್ರ” ಎಂದು ಹೇಳಿಕೆ ನೀಡಿದ್ದರು.

ನಳಿನ್ ಕುಮಾರ್​ ಕಟೀಲ್ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸಿದ್ದರಾಮಯ್ಯ, “ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ. 

“ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್​ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ.

ಈಗ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಅದರ ಹೊಣೆಯನ್ನು ಯಡಿಯೂರಪ್ಪನವರ ತಲೆಗೆ ಕಟ್ಟಿ, ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಬೇಕು. ಇದು ನಳಿನ್ ಕುಮಾರ್​ ಕಟೀಲ್ ಅವರಿಗೆ ಪಕ್ಷದೊಳಗಿನ ಕೆಲವು ನಾಯಕರೇ ಕೊಟ್ಟಿರುವ ಟಾಸ್ಕ್ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ಗೆ ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬಿಲ್ಲ. ಈ ಬೆನ್ನೆಲುಬಿಲ್ಲದ ಅಧ್ಯಕ್ಷನಿಗೆ ತಮ್ಮದೇ ಪಕ್ಷದ ಶಾಸಕರು ಪ್ರತಿದಿನ ತಮ್ಮದೇ ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವ ತಾಕತ್ ಇಲ್ಲ. ನಮ್ಮ ಪಕ್ಷದ ಬಗ್ಗೆ ಕೂಗಾಡ್ತಾರೆ.

ಬಿಜೆಪಿ ಸೇರಬೇಕಾದರೆ ಹತ್ತು ವರ್ಷ ಪಕ್ಷದ ಕಚೇರಿಯ ಕಸಗುಡಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಈ ನಳಿನ್ ಕುಮಾರ್ ಕಟೀಲನ್ನು ಇನ್ನೂ ಒಂದು ಹತ್ತು ವರ್ಷ ಕಚೇರಿಯ ಕಸಗುಡಿಸಲು ಹಚ್ಚಿದರೆ ಏನಾದರೂ ಸ್ವಲ್ಪ ಬುದ್ದಿ ಬರಬಹುದೇನೋ” ಎಂದು ನಳಿನ್ ವಿರುದ್ಧ ಸಿದ್ದರಾಮಯ್ಯ ಅಪಹಾಸ್ಯ ಮಾಡಿದ್ದಾರೆ.

error: Content is protected !!