ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಬಿ ಎಸ್ ವೈ ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರ ನಗರದ ವಾರ್ಡ್ ಸಂಖ್ಯೆ 3ರಲ್ಲಿ ಸೋಮವಾರ ರಾತ್ರಿ ನಡೆದ ಹನುಮಂತ ದೇವಸ್ಥಾನದ ಕಾಂಪೌಂಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ಉಮೇಶ ವಂದಾಲ ವಿಜಯಪುರಕ್ಕೆ ಬಂದಿದ್ದ ರೂ. 125 ಕೋ. ಅನುದಾನವನ್ನು ಸರ್ಕಾರ ವಾಪಸ್ ಪಡೆದಿದ್ದನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಉಮೇಶ ವಂದಾಲ ಆಡಿದ ಮಾತನ್ನು ಪ್ರಸ್ತಾಪಿಸಿ ಯತ್ನಾಳ ತಮ್ಮ ಆಕ್ರೋಶವನ್ನು ಮತ್ತೆ ಹೊರ ಹಾಕಿದ್ದಾರೆ. ಸಿಎಂ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಅವರು, ವಿಜಯಪುರಕ್ಕೆ ಬಂದಿದ್ದ 125 ಕೋ. ರು ಅನುದಾನವನ್ನು ಸಿಎಂ ಹಿಂದಕ್ಕೆ ಪಡೆದಿದ್ದಾರೆ. ಸಿಎಂ ಅನುದಾನವನ್ನು ಬರೀ ಶಿವಮೊಗ್ಗಕ್ಕೆ ಒಯ್ಯುತ್ತಿದ್ದಾರೆ. ಇನ್ನೇನು ಅವರು ಬಹಳ ದಿವಸ ಅಧಿಕಾರದಲ್ಲಿ ಇರುವುದಿಲ್ಲ. ಅವರದೂ ಬಂದೈತಿ. ಏಕೆಂದ್ರೆ ಮೇಲಿನವರಿಗೂ ಅವರು ಸಾಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಉಮೇಶ ಕತ್ತಿ ಇವರು ಶಿವಮೊಗ್ಗ ಮುಖ್ಯಮಂತ್ರಿಯೋ? ಕರ್ನಾಟಕದ ಮುಖ್ಯಮಂತ್ರಿಯೋ ಎಂದು ಹೇಳಿಕೆ ನೀಡಿದ್ದರು ಎಂದು ಯತ್ನಾಳ ತಮ್ಮ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರಕ್ಕೆ ನೀಡಿದ್ದ ಅನುದಾನ ವಾಪಸ್ ಪಡೆದಿದ್ದರೂ ನಾನು ಬಿಡಲ್ಲ. ಹೇಗೆ ತರಬೇಕೋ ತರ್ತಿನಿ. ಬೆಂಗಳೂರಿನವರು ಬಂದು ವಿಜಯಪುರದ ನಮ್ಮ ಮನೆಯ ಮುಂದೆ ನಿಲ್ಲಬೇಕು. ಈಗ ನಾವು ಅವರ ಮನೆಯ ಮುಂದೆ ಹೋಗಿ ನಿಲ್ಲುತ್ತಿದ್ದೇವೆ. ಉತ್ತರ ಕರ್ನಾಟಕದ ಶಾಸಕರಿಂದಲೇ ಬಿಜೆಪಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮಂಡ್ಯ, ಚಾಮರಾಜನಗರ ಮತ್ತು ಕೋಲಾರದಲ್ಲಿ ಯಾರಾದರೂ ಬಿಜೆಪಿಗೆ ಓಟ್ ಹಾಕ್ತಾರಾ? ಎಂದು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕದವರೇ 100 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ಆ ಮೇಲೆ ಆ ಕಡೆ 10 ರಿಂದ 15 ಶಾಸಕರು ಆಯ್ಕೆಯಾಗಿರುತ್ತಾರೆ. ಹೀಗಾಗಿ ಮೇಲಿನವರಿಗೂ ಇದು ಗೊತ್ತಾಗಿದೆ. ಮುಂದಿನ ಉತ್ತರಾಧಿಕಾರಿ ಉತ್ತರ ಕರ್ನಾಟಕದವರೇ ಆಗುತ್ತಾರೆ. ಪ್ರಧಾನಿ ಮಂತ್ರಿಗಳ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ. ಅದೂ ಕೂಡ ಬಹುತೇಕ ಫೈನಲ್ ಆಗಿದೆ ಎಂದು ಯತ್ನಾಳ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಈ ಮುಂಚೆ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿದ್ದ ಯತ್ನಾಳ, ಸಿಎಂ ವರಸೆಗೆ ಬೇಸತ್ತು ಆಗಾಗ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಸಿಎಂ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡದೇ ಸಿ. ಸಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿದಾಗಿನಿಂದ ಮತ್ತು ವಿಜಯಪುರ ನಗರಕ್ಕೆ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದಿದ್ದರಿಂದ ಯತ್ನಾಳ ಅವರು ಯಡಿಯೂರಪ್ಪ ಮೇಲೆ ಸಿಟ್ಟಾಗಿದ್ದಾರೆ.
ಹಿಂದೂ, ಲಿಂಗಾಯತಿ ಮತ್ತು ಹಿರಿಯ ನಾಯಕ ತಾವಾಗಿದ್ದರೂ ಸಿಎಂ ಯತ್ನಾಳ ಅವರಿಗೆ ಕಡಿವಾಣ ಹಾಕಲು ಯತ್ನಿಸುತ್ತಿದ್ದಾರೆ. ಅಲ್ಲದೇ, ಸಿಎಂ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಬಳಸಿ ಯತ್ನಾಳ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ಈಗ ಬಹುತೇಕ ಲಿಂಗಾಯಿತ ಶಾಸಕರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶೈಲಿಯಲ್ಲಿಯೇ ಯತ್ನಾಳ, ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸಿಎಂ ವಿರೋಧಿ ಪಾಳಯದಲ್ಲಿ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದ್ದು, ಮುಂದಿನ ಸಿಎಂ ತಾವೇ ಎಂಬ ವಿಶ್ವಾಸದಲ್ಲಿದ್ದಾರೆ.
ಯತ್ನಾಳ ಅವರೇ ತಮ್ಮ ಭಾಷಣದಲ್ಲಿ ಹೇಳಿದಂತೆ ಯಡಿಯೂರಪ್ಪ ನಂತರ ಉತ್ತರ ಕರ್ನಾಟಕದವರಿಗೆ ಸಿಎಂ ಪಟ್ಟ ಸ್ವತಃ ಪ್ರಧಾನಿಯೇ ಉತ್ಸುಕರಾಗಿರುವ ವಿಷಯ ಅರ್ಥೈಸಿಕೊಂಡರೆ, ಒಂದು ವೇಳೆ ಉತ್ತರ ಕರ್ನಾಟಕ್ಕೆ ಸಿಎಂ ಸ್ಥಾನ ನೀಡಿದರೆ ಯತ್ನಾಳ ಸಿಎಂ ಆಗುವವರಲ್ಲಿ ಅಗ್ರಗಣ್ಯರಾಗಿದ್ದಾರೆ. ಈ ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕಿದೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ