ಬೆನ್ನಿಗೆ ಚೂರಿ ಹಾಕಿ ಮುನಿರತ್ನ ಬಿಜೆಪಿ ಪಲಾಯನ – ವಿ ಕೃಷ್ಣಮೂರ್ತಿ

Team Newsnap
1 Min Read

ಕಾಂಗ್ರೆಸ್‌ನಲ್ಲಿದ್ದ ಮುನಿರತ್ನ ಬಿಜೆಪಿಗೆ ಏಕೆ ಹೋದರು? ನಮ್ಮ ಕುಮಾರಸ್ವಾಮಿ ಅನುದಾನ ನೀಡಿರಲಿಲ್ಲವಾ? ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಹೋಗಿ ಮುನಿರತ್ನ ಹಣ ಗಳಿಸಿದ್ದಾರೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಕಿಡಿ ಕಾರಿದ್ದಾರೆ. 

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಆಯೋಜಿಸಿದ್ದ ಜೆಡಿಎಸ್‌ ನಿಷ್ಠಾವಂತರ ಸಭೆಯಲ್ಲಿ ಮಾತನಾಡಿದ ಅವರು, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಕುಮಾರಣ್ಣ ಗುರುತಿಸಿ ಟಿಕೆಟ್‌ ನೀಡಿದ್ದಾರೆ ಎಂಬುದನ್ನು ಇಡೀ ಕರ್ನಾಟಕವೇ ನೋಡುತ್ತಿದೆ. ಕಾರ್ಯಕರ್ತರ ಮೇಲೆ ಬಿಜೆಪಿಯವರು 1600 ಕೇಸ್ ಹಾಕಿದರು. ಈಗ ತತ್ವ, ಸಿದ್ಧಾಂತಗಳೆಲ್ಲ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದ್ದಾರೆ. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ, ಚುನಾವಣೆಯಲ್ಲಿ ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಮೇಯ ಇಲ್ಲ. ಒಪ್ಪಂದ ಮಾಡಿಕೊಳ್ಳುವುದಾದರೆ ಓಪನ್ ಆಗಿಯೇ ಮಾಡಿಕೊಳ್ಳುತ್ತೇವೆ. ನಾವು ಜನರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆಯೇ ಹೊರತು ಬೇರಾವ ಪಕ್ಷದೊಂದಿಗೂ ಅಲ್ಲ ಎಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಪಕ್ಷಾಂತರ ಮಾಡುವವರಾಗಿದ್ದಾರೆ. ನಾನು ಬಿಜೆಪಿ ಅಭ್ಯರ್ಥಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೇನೆ ಅಂತಾ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ರಾಜಕಾರಣದಲ್ಲಿ ಪಾಪದ ಹಣಕ್ಕೆ ಎಂದಿಗೂ ಆಸೆ ಪಟ್ಟವನಲ್ಲ. ಎಲ್ಲ ಮುಖಂಡರ ಜೊತೆ ಚರ್ಚೆ ಮಾಡಿಯೇ ಕೃಷ್ಣಮೂರ್ತಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಜೆಡಿಎಸ್ ಕಾರ್ಯಕರ್ತರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಎರಡು- ಮೂರು ನಾಯಕರನ್ನು ಕಾಂಗ್ರೆಸ್ ಆಮಿಷ ನೀಡಿ ಕರೆದುಕೊಂಡು ಹೋದರೆ ಏನು ವ್ಯತ್ಯಾಸ ಆಗಲ್ಲ. ನಾವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್‌. ಪ್ರಕಾಶ್‌, ಮಾಜಿ ಪರಿಷತ್‌ ಸದಸ್ಯ ಶರವಣ್‌ ಸೇರಿ ಅನೇಕ ಜೆಡಿಎಸ್‌ ನಾಯಕರು ಇದ್ದರು.

Share This Article
Leave a comment