ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ -ಕನ್ನಡ ಪರ ಸಂಘಟನೆಗಳು ಘೋಷಣೆ

Team Newsnap
1 Min Read

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಬೆಳಗಾವಿಯಲ್ಲಿ ಎಂಇಎಸ್​ ನಡೆಸುತ್ತಿರುವ ಪುಂಡಾಟವನ್ನ ಖಂಡಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ.

ಕನ್ನಡಪರ ಸಂಘಟನೆಗಳ ಪರವಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ವಿವಿಧ ಕನ್ನಡಪರ ಸಂಘಟನೆಗಳು ಸಭೆ ನಡೆಸಿದವು.

ಈ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ವಾಟಾಳ್ ನಾಗರಾಜ್ ಬಂದ್​ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಕನ್ನಡಿಗರಿಗೆ ಅಪಮಾನ ಆಗಿದೆ. ಹಾಗಾಗಿ ಬಂದ್ ಬಿಟ್ಟು ಬೇರೆ ದಾರಿಯೇ ಇಲ್ಲ. ನಮಗೆ ನೈತಿಕ ಬೆಂಬಲ ಬೇಡ. ನೇರವಾಗಿ ಬಂದ್​ನಲ್ಲಿ ಪಾಲ್ಗೊಳ್ಳಿ. ಟೌನ್​ಹಾಲ್​ನಿಂದ ಬಂದ್ ಆರಂಭ ಆಗಲಿದೆ. ಕನ್ನಡದ ಶಕ್ತಿ ಪ್ರದರ್ಶನ ಮಾಡಲೇಬೇಕು. ಪಕ್ಷಾತೀತವಾಗಿ ಬಂದ್‌ ಆಗಬೇಕು. 31ರೊಳಗೆ ಎಂಇಎಸ್‌ ನಿಷೇಧ ಮಾಡಿದ್ರೆ ಬಂದ್ ವಾಪಸ್ ಪಡೆಯುತ್ತೇವೆ. 35 ಸಂಘಟನೆಗಳಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಎಂಇಎಸ್ ದಬ್ಬಾಳಿಕೆ ಹೆಚ್ಚಾಗಿದೆ. ನಮ್ಮ ಪೊಲೀಸರ ಮೇಲೂ ದಬ್ಬಾಳಿಕೆ ಮಾಡುತ್ತಿದ್ದಾರೆ ರಾಜ್ಯದಲ್ಲಿ ಕನ್ನಡ ಉಳಿದಿದ್ದರೇ ಕನ್ನಡ ಪರ ಹೋರಾಟಗಾರರಿಂದಲೇ. ರಾಜ್ಯದಲ್ಲಿ ಸರ್ಕಾರ ಮತ್ತು ಪೊಲೀಸರು ಇದ್ದಾರಾ? ರಾಜ್ಯವನ್ನು ಯಾರು ನೋಡಿಕೊಳ್ತಿದ್ದಾರೆ? ಎಂಇಎಸ್ 70 ವರ್ಷಗಳಿಂದ ನಿರಂತರವಾಗಿ ದಬ್ಬಾಳಿಕೆ ಮಾಡಿಕೊಂಡು ಬಂದಿದ್ದಾರೆ. ಅವರು ಎಲ್ಲಿಯವರು? ಎಂದು ಪ್ರಶ್ನೆ ಮಾಡಿದರು.

ರಾಜ್ಯದ ಡಿಜಿ, ಕಮೀಷನರ್ ಎಲ್ಲರೂ ಹೊರಗಡೆಯವರು. ರಾಜ್ಯದ‌ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಕನ್ನಡ‌ ಬಾವುಟಕ್ಕೆ ಬೆಂಕಿ ಹಚ್ಚಿದ ಘಟನೆ ರಾಜ್ಯದ ಇತಿಹಾಸದಲ್ಲೂ ನಡೆದಿರಲಿಲ್ಲ. ಕನ್ನಡಿಗರ ಮೇಲೆ ಕನ್ನಡ‌ ಭಾಷೆಯ ಮೇಲೆ ಬೆಂಕಿ ಇಟ್ಟ ಹಾಗೆ ಆಗಿದೆ. ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಬಾಲ ಬಿಚ್ಚಬಾರದು ಎಂದು ಎಚ್ಚರಿಕೆಯನ್ನ ನೀಡಿದರು. ಸಿಎಂ ಬೊಮ್ಮಾಯಿ ಮೇಲೆ ಅಪಾರ ಗೌರವ ಇದೆ. ನೀವು‌ ಒಂದು ಕೆಲಸ ಮಾಡಲೇಬೇಕು. ಎಂಇಎಸ್ ನಿಷೇಧ ಆಗಲೇಬೇಕು. ನಿಷೇಧ ಆಗೋವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದರು.

Share This Article
Leave a comment