ಟಿಸಿ ಕೊಡಲು ಖಾಸಗಿ ಶಾಲೆಗಳ‌ ನಕಾರ: ಶಿಕ್ಷಣ ಇಲಾಖೆ ಕಠಿಣ ಕ್ರಮ

Team Newsnap
1 Min Read

ಕಲಬುರ್ಗಿಯಲ್ಲಿ ಖಾಸಗೀ ಶಾಲೆಗಳು ಮಕ್ಕಳ ಟಿಸಿ ಕೊಡಲು ನಿರಾಕರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಲಬುರ್ಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಇಷ್ಟುದಿನ ಶಾಲೆಗಳನ್ನು ಮುಚ್ಚಲಾಗಿತ್ತು. ಈಗ ಮತ್ತೆ ಶಾಲೆಗಳನ್ನು ಪುನರಾರಂಭ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಕೊರೋನಾದಿಂದ ಎಲ್ಲೆಲ್ಲೂ ಆರ್ಥಿಕ ಸಂಕಷ್ಟ ತಾಂಡವವಾಡುತ್ತಿದೆ. ಹಾಗಾಗಿ ಕಲಬುರ್ಗಿಯ ಅನೇಕ ಪೋಷಕರು ತಮ್ಮ ಮಕ್ಕಳನ್ನು, ಹೆಚ್ಚು ಹಣ ಸುಲಿಯುತ್ತಿರುವ ಖಾಸಗೀ ಶಾಲೆಗಳಿಂದ ಕಡಿಮೆ ಶುಲ್ಕ ವಿಧಿಸುವ ಶಾಲೆಗಳಿಗೆ ಅಥವಾ ಸರ್ಕಾರಿ‌ ಶಾಲೆಗಳಿಗೆ ಸೇರಿಸಲು‌ ಬಯಸುತ್ತಿದ್ದಾರೆ. ಆದರೆ ಖಾಸಗೀ ಶಾಲೆಯ ಆಡಳಿತ ಮಂಡಳಿ ಟಿಸಿ ಯನ್ನು ಕೊಡುತ್ತಿಲ್ಲ.

ಮಾಹಿತಿಯನ್ನು ತಿಳಿದ ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಲಿನ್ ಅತುಲ್ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರಗಳನ್ನು ಆನ‌ಲೈನ್ ಮೂಲಕ ಪೋಷಕರು ಇಚ್ಛಿಸುವ ಶಾಲೆಗಳಿಗೆ ಕಳಿಸುವಂತೆ ಸೂಚಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್‌ಲೈನ್ ಲಾಗಿನ್ ಮುಖಾಂತರ ಪೋಷಕರು ಇಚ್ಛಿಸುವ ಶಾಲೆಗಳಿಗೆ ವರ್ಗಾವಣೆ ಪ್ರಮಾಣಪತ್ರಗಳನ್ನು ಕಳುಹಿಸುತ್ತಾರೆ‌.‌ ಹಾಗಾಗಿ ಯಾವುದೇ ಪಾಲಕರು ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Share This Article
Leave a comment