December 25, 2024

Newsnap Kannada

The World at your finger tips!

deepa1

ಭಾರತದಲ್ಲಿ……….

Spread the love

ರೈತರಾಗುವುದು ವರವೋ ? ಶಾಪವೋ ?

ಅನ್ನದಾತ – ದೇಶದ ಬೆನ್ನೆಲುಬು – ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ……

ಈ ಕ್ಷಣದಲ್ಲಿ
” ತಿನ್ನವವರಿಗೆ ವರ,
ಬೆಳೆಯುವವರಿಗೆ ಶಾಪ “

ಮಂಗನಿಂದ ಮಾನವನಾದ ಕಾಲ ಮುಗಿದು ಕ್ರಮೇಣ ಮಾನವ ಮಂಗನಾಗುತ್ತಿರುವ ಈ ಸನ್ನಿವೇಶದಲ್ಲಿ ರೈತ ಮಾತ್ರ ಆಗಲೂ ಮಂಗನೇ ಈಗಲೂ ಮಂಗನೇ ಎಂದು ವಿಷಾದದಿಂದ, ದುಃಖದಿಂದ ಮತ್ತು ಆಕ್ರೋಶದಿಂದ ಹೇಳಬೇಕೆನಿಸುತ್ತದೆ.

ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಮುನ್ನಡೆಯುತ್ತಿರುವಾಗ ಶಿಕ್ಷಣ ಸಾಹಿತ್ಯ ಸಂಗೀತ ವಿಜ್ಞಾನ ಆರೋಗ್ಯ ಆಡಳಿತ ಸಾರಿಗೆ ಸಂಪರ್ಕ ದಿನದಿನಕ್ಕೂ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿರುವಾಗ ಭಾರತದ ಕೃಷಿ ಮಾತ್ರ ಎಲ್ಲೋ ಕೆಲವು ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಮೂಲ ನಿಯಮಗಳು ಮಾತ್ರ ಇನ್ನೂ ಗತಕಾಲದ ಅಂಶಗಳನ್ನೇ ಅಳವಡಿಸಿಕೊಂಡಿದೆ.

ಭೂಮಿಯ ಉಪಯೋಗ, ಬಿತ್ತನೆ, ನೀರಾವರಿ, ಸಸ್ಯಗಳ ಬೆಳವಣಿಗೆ, ಕಟಾವು, ಸಂಗ್ರಹಣೆ, ಮಾರುಕಟ್ಟೆ,
ಬೆಲೆ ನಿಗದಿ, ಲಾಭ ಹಣದ ಉಪಯೋಗ, ನಷ್ಟದ ಪರಿಸ್ಥಿತಿಯ ನಿರ್ವಹಣೆ, ಕೌಟುಂಬಿಕ ನಿರ್ವಹಣೆ, ನಂಬಿಕೆಗಳು, ಅರಿವು ಮತ್ತು ಅವರ ಒಟ್ಟು ವ್ಯಕ್ತಿತ್ವ ಸಮಾಜದ ದೃಷ್ಟಿಯಲ್ಲಿ ಇನ್ನೂ ಹಾಸ್ಯಾಸ್ಪದವಾಗಿಯೇ ಇದೆ. ಅವರನ್ನು ಶೋಷಿಸಲು ಯಾವ ತಂತ್ರಗಳೂ ಬೇಡ. ಆತನ ವ್ಯಕ್ತಿತ್ವವೇ ಶೋಷಣೆಯನ್ನು ಸ್ವತಃ ತಾನೇ ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿದೆ.

ವ್ಯಕ್ತಿ ಮೂಲಭೂತವಾಗಿ ಪ್ರಜ್ಞಾವಂತನಾಗಿದ್ದರೆ ಆತ ಮಾಡುವ ಕೆಲಸಗಳು ಸಹ ಘನತೆಯಿಂದ ಕೂಡಿರುತ್ತದೆ. ವೈದ್ಯನೇ ಇರಬಹುದು, ಇಂಜಿನಿಯರೇ ಇರಬಹುದು, ಚಾಲಕ ಶಿಕ್ಷಕ ವಕೀಲ ರಾಜಕಾರಣಿ ವ್ಯಾಪಾರೋದ್ಯಮಿ ಯಾರೇ ಆಗಲಿ ಧೃಡ ಮನಸ್ಸಿನ ಅರಿವಿರುವ ವ್ಯಕ್ತಿತ್ವ ಅವನದಾಗಿದ್ದರೆ ಆತ ಯಾವುದೇ ವ್ಯವಸ್ಥೆಯಲ್ಲಿ ಕನಿಷ್ಠ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು.

ಆದರೆ ಮೂಲ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಆತ ಸೋಲುವ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು.

ವಾಸ್ತವವಾಗಿ ಭಾರತೀಯ ಬಹುತೇಕ ರೈತರು ಸಾಮಾನ್ಯ ಜ್ಞಾನದಿಂದ ವಂಚಿತರಾಗಿದ್ದಾರೆ. ಜಾಗತೀಕರಣದ ಸ್ಪರ್ಧಾತ್ಮಕ ಬದಲಾವಣೆಗಳನ್ನು ಗಮನಿಸಲೇ ಸಾಧ್ಯವಾಗದಂತ ಕತ್ತಲೆಯಲ್ಲಿ ಮುಳುಗುತ್ತಿದ್ದಾರೆ. ರಾಜಕಾರಣಿಗಳ, ಮಧ್ಯವರ್ತಿಗಳ, ವ್ಯಾಪಾರಿ ವಾಣಿಜ್ಯೋದ್ಯಮಿಗಳ ಬಲೆಯೊಳಗೆ ಬಹು ಸುಲಭವಾಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಬಲಿಷ್ಠ ರಕ್ಷಣಾತ್ಮಕ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರದ ವಿರುದ್ಧ ಇನ್ನೂ ಹಳೆಯ ಅಸ್ತ್ರಗಳಾದ ಪ್ರತಿಭಟನೆ, ಮುತ್ತಿಗೆ, ಉಪವಾಸ, ಸತ್ಯಾಗ್ರಹ ಎಂಬ ಮೊಂಡಾದ ಕತ್ತಿಯನ್ನು ಉಪಯೋಗಿಸುತ್ತಿದ್ದಾರೆ.

ಅತಿಯಾದ ಜನಸಂಖ್ಯೆಯ ಪರಿಣಾಮ ಮತ್ತು ಬಡತನ ಅಜ್ಞಾನದ ಕಾರಣದಿಂದ ಅನಿವಾರ್ಯವಾಗಿ ಒಡೆದು ಆಳುವ ರಾಜಕೀಯ ಪಕ್ಷಗಳ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಅತಿಯಾದ ಹಣದ ಹರಿವಿನಿಂದ ಹಾಗು ಹಣದ ಮಹತ್ವದಿಂದ ರೈತನೆಂಬುದು ಶಾಪವಾಗಿ ಮಾರ್ಪಟ್ಟಿದೆ.

ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬುದನ್ನು ಮರೆಯದಿರಿ. ಮತ ಎಂಬುದು ನಮ್ಮ ಮತಿಯ ( ಮನಸ್ಸಿನ ) ಅಸ್ತ್ರವಾದಾಗ…….

ಒಂದು ವೇಳೆ ಹೊಸ ನಾಯಕತ್ವದ ಹೊಸ ಚಿಂತನೆಯ ಹೊಸ ಗಾಳಿಯೊಂದು ಬಲವಾಗಿ ರೈತರ ಮನಸ್ಸಿನಲ್ಲಿ ಬೀಸಿ ಅವರನ್ನು ಪ್ರಬುದ್ದತೆಯೆಡಗೆ ಆಧುನಿಕತೆಯೆಡೆಗೆ,
ಸ್ವತಂತ್ರ ಚಿಂತನೆಯೆಡೆಗೆ ಮುನ್ನಡೆಸಿದರೆ…..
ವಿಧಾನಸೌದ – ಪಾರ್ಲಿಮೆಂಟು, ಅಧಿಕಾರಶಾಹಿ, ವ್ಯಾಪಾರಿಗಳು, ಮಧ್ಯವರ್ತಿಗಳು,
ವೃತ್ತಿನಿರತರು,
ಅಷ್ಟೇ ಏಕೆ,
ಇಡೀ ವ್ಯವಸ್ಥೆಯೇ ಬುಡಮೇಲಾಗಿ

” ರೈತನೇ ಅನ್ನದಾತ. ನಮ್ಮ ಬದುಕಿನ ಜೀವ ದ್ರವ್ಯ ರೈತನೇ “

ಎಂದು ಕೂಗಿ ಹೇಳುತ್ತಾ ಎಲ್ಲರೂ ಆತನ ಬಗ್ಗೆ ಘನತೆಯಿಂದ ನಡೆದುಕೊಳ್ಳುವ ದಿನಗಳು ಬರುತ್ತದೆ.

ಮುಖ್ಯವಾಗಿ ರೈತನನ್ನು ಹಾಸ್ಯಾಸ್ಪದವಾಗಿ ನೋಡುವ ಮನರಂಜನಾ ಉದ್ಯಮ, ರಾಜಕೀಯ ವ್ಯವಸ್ಥೆ, ವಾಣಿಜ್ಯೋಧ್ಯಮ, ಮಧ್ಯವರ್ತಿ ವೃತ್ತಿಯಲ್ಲಿರುವವರು ತಾವೇ ಹಾಸ್ಯಾಸ್ಪದವಾಗುತ್ತಾರೆ..

ಆ ಹೊಸ ನಾಯಕತ್ವ ಮತ್ತು ಚಿಂತನೆಯ ತಂಗಾಳಿಗಾಗಿ ಕಾಯುತ್ತಿರುವ……….

ಏಕೆಂದರೆ……. ಒಂದು ಸಣ್ಣ ಘಟನೆ…..

ಆಕೆ ಉಪಯೋಗಿಸುವ ಮೊಬ್ಯೆಲ್ ಬೆಲೆ 50000 ಕ್ಕೂ ಹೆಚ್ಚು,
ಆಕೆ ಕೈಯಲ್ಲಿರುವ ವ್ಯಾನಿಟಿ ಬ್ಯಾಗ್ ಬೆಲೆ ಸುಮಾರು 15000 ದಷ್ಟು,
ಆಕೆಯ ಬ್ಯೂಟಿ ಪಾರ್ಲರ್ ಖರ್ಚು ತಿಂಗಳಿಗೆ 10000 ವಾಗುತ್ತದೆ.
ಆಕೆ ಓಡಾಡುವ ಕಾರಿನ ಬೆಲೆ 8/10 ಲಕ್ಷಗಳು.

ಆಕೆಯ ಗಂಡ ಒಬ್ಬ ಬಿಸಿನೆಸ್ ಮ್ಯಾನ್,
ಆತ ಓಡಾಡುವುದು 20 ಲಕ್ಷದ ಕಾರಿನಲ್ಲಿ
ಪ್ರತಿಷ್ಠಿತ ಕ್ಲಬ್ ನ ಸದಸ್ಯನಾದ ಆತನ ತಿಂಗಳ ಕ್ಲಬ್ ಬಿಲ್ 30000.
ಆತನ ಒಬ್ಬನೇ ಮಗನ ಶಾಲೆಯ Fees ವಾರ್ಷಿಕ 2 ಲಕ್ಷಕ್ಕೂ ಹೆಚ್ಚು.
ಅವರ ಮನೆಯ ನಾಯಿ ಮತ್ತು ಸೆಕ್ಯುರಿಟಿಗಾಗಿ ತಿಂಗಳಿಗೆ 40000 ಕ್ಕೂ ಹೆಚ್ಚು ಖರ್ಚು ಮಾಡುತ್ತಾರೆ.
ಆತನ ವ್ಯವಾಹಾರದ ವಾರ್ಷಿಕ ಆದಾಯ ಅಧಿಕೃತವಾಗಿಯೇ ಒಂದು ಕೋಟಿ.
ಇದೆಲ್ಲಾ ಅವರ ಶ್ರೀಮಂತಿಕೆಯ ಕೆಲವು ಮೇಲ್ನೋಟದ ಲಕ್ಷಣಗಳು.

ಇತ್ತ ತಳ್ಳುಗಾಡಿಯಲ್ಲಿ ಒಬ್ಬ ವ್ಯಕ್ತಿ ದಿನವೂ ಪ್ರೇಶ್ ತರಕಾರಿ ಮಾರುತ್ತಾ ಅವರ ಮನೆಯ ಬಳಿ ಬರುತ್ತಾನೆ. ಅವರು ಎಷ್ಟೇ ಶ್ರೀಮಂತರಾದರೂ ಇವನ ಬಳಿಯೇ ತರಕಾರಿ ಕೊಳ್ಳುವ ಅಭ್ಯಾಸ ರೂಡಿಸಿಕೊಂಡಿದ್ದಾರೆ.

ಬೃಹತ್ ಬಂಗಲೆಯ ಮೊದಲನೇ ಮಹಡಿಯಲ್ಲಿ ನಿಲ್ಲುವ ಆಕೆ ತರಕಾರಿ ತರಲು ಕೆಳಕ್ಕೆ ಅವರ ಮನೆಯ ಕೆಲಸದಾಕೆಯನ್ನು ಕಳಿಸುತ್ತಾಳೆ. ಮಹಡಿಯ ಮೇಲಿನಿಂದಲೆ ಕೇಳುತ್ತಾಳೆ “ನಿಂಬೆಹಣ್ಣು ಎಷ್ಟು”
ಆತ ” ಹತ್ತು ರೂಪಾಯಿಗೆ ಎರಡು “
ಆಕೆ “ಅಯ್ಯೋ ಅಷ್ಟೊಂದ. ನಮಗೆ ಹತ್ತು ರೂಪಾಯಿಗೆ 3 ಕೊಡು.

ಆಮೇಲೆ ಪಾಲಾಕ್ ಸೊಪ್ಪು ಎಷ್ಟು”
ಆತ ” ಅಮ್ಮ ಕಟ್ಟು 15 ರೂಪಾಯಿ “
ಆಕೆ “ಅಬ್ಬಬ್ಬಾ ಯಾಕಪ್ಪಾ ಅಷ್ಟೊಂದು ರೇಟ್ ಹೇಳ್ತೀಯ 12 ರೂಪಾಯಿ ಮಾಡ್ಕೋ “

ಕೊತ್ತಂಬರಿ ಎಷ್ಟು “
ಆತ “ಅಮ್ಮ ಅದು ಕಟ್ಟು ಹತ್ತು ರೂಪಾಯಿ “
ಆಕೆ “ಓಹೋ ತುಂಬಾ ಜಾಸ್ತಿಯಾಯ್ತು, ಈರಳ್ಳಿ ಬದನೆಕಾಯಿ ಎಲ್ಲಾ ರೇಟ್ ಕಡಿಮೆ ಮಾಡ್ಕೊಂಡು ಒಂದೊಂದು ಕೆಜಿ ಕೊಡು. ನಾವು ಮಾಮೂಲಿ ಗಿರಾಕಿ ಅಲ್ವ. ನಾಳೆಯಿಂದ ತಗೊಬೇಕೊ ಬೇಡ್ವೋ ಹೇಳು”
ಆತ ” ಅಮ್ಮ ನಾನು ನಿಮಗೆ ಸುಳ್ಳು ಹೇಳೋದಿಲ್ಲ. ಮಾರ್ಕೆಟ್ಟಿನಲ್ಲಿ ಇರೋದೆ ಅಷ್ಟು. ನಮಗೂ ಏನೂ ಗಿಟ್ಟೋದಿಲ್ಲ. ಹೆಚ್ಚು ಕಡಿಮೆ ಮಾಡಿ ಹಾಕ್ಕೊಡ್ತಿನಿ.”

ಬೇಕಾದ ತರಕಾರಿ ಎಲ್ಲಾ ತೆಗೆದುಕೊಂಡ ಕೆಲಸದಾಕೆ “ಅಮ್ಮಾ ಒಟ್ಟು 160 ಆಯ್ತುಂತೆ ” ಎಂದು ಮೇಲಕ್ಕೆ ತಿರುಗಿ ಕೂಗುತ್ತಾಳೆ.
ಆಕೆ “ತಗೋ 150 “ಎಂದು ಅದರಲ್ಲೂ ಚೌಕಾಸಿ ಮಾಡಿ ಮೇಲಿನಿಂದ 100+50 ರ ಎರಡು ನೋಟು ಮಡಿಚಿ ಎಸೆಯುತ್ತಾಳೆ.

ಅವರ ಬಂಗಲೆಯ ಮುಂದಿನ ಸಣ್ಣ ಕೊಠಡಿಯಲ್ಲಿ ವಾಸಿಸುವ ನಾನು ಕಿಟಕಿಯಲ್ಲಿ ಬೆಳಗ್ಗೆ ಹಲ್ಲುಜ್ಜುತ್ತಾ ಹೆಚ್ಚು ಕಡಿಮೆ ದಿನವೂ ಈ ದೃಶ್ಯ ನೋಡುತ್ತಿರುತ್ತೇನೆ.

ಇದನ್ನು ಹೇಗೆಂದು ಅರ್ಥೈಸುವುದು?
ವ್ಯಾವಹಾರಿಕ ಕುಶಲತೆಯೇ?
ಹಣ ಉಳಿಸುವ ಜಾಣತನವೇ?
ಅಥವಾ ಮಾನಸಿಕ ಅಸ್ವಸ್ಥತೆಯೇ?
ಗೊಂದಲದಲ್ಲಿದ್ದೇನೆ…………….

ಅದಕ್ಕಾಗಿಯೇ ಹೇಳಿದ್ದು
” ತಿನ್ನುವವನಿಗೆ ವರ
ಬೆಳೆಯುವವರಿಗೆ ಶಾಪ “

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!