ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಜೆಡಿಎಸ್‍ಗೆ ಗುಡ್ ಬೈ – ಬಿಜೆಪಿಗೆ ಸೇರುವುದು ಖಚಿತ

Team Newsnap
1 Min Read

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಬಲ ಕುಸಿಯುತ್ತಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡರು ಜೆಡಿಎಸ್‍ ಬಿಡುವ ನಿರ್ಧಾರ ಮಾಡಿದ ಬೆನ್ನಲ್ಲೇ ಜೆಡಿಎಸ್‍ಗೆ ಮತ್ತೊಂದು ಆಘಾತವಾಗಿದೆ.

ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಜೆಡಿಎಸ್‍ಗೆ ಗುಡ್ ಬೈ ಹೇಳಿ, ಬಿಜೆಪಿಗೆ ಸೇರುವ ನಿರ್ಧಾರ ವನ್ನು ಪ್ರಕಟಿಸಿದರು. ಕಳೆದ ಒಂದೂವರೆ ವರ್ಷದಿಂದ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮುನಿಸಿಕೊಂಡಿರುವ ಸಂದೇಶ್ ನಾಗರಾಜ್, ಜೆಡಿಎಸ್ ಯಾವುದೇ ಕಾರ್ಯ ಕ್ರಮಕ್ಕೆ ಹೋಗದೇ ಅಂತರ ಕಾಯ್ದುಕೊಂಡು ಬಂದಿದ್ದಾರೆ.

ಸದ್ಯ ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಜೆಡಿಎಸ್ ನಿಂದ ಗೆದ್ದು ಪರಿಷತ್ ಸದಸ್ಯರಾಗಿದ್ದಾರೆ. ಪರಿಷತ್ ಸದಸ್ಯತ್ವದ ಅವಧಿ ಇದೇ ಡಿಸೆಂಬರ್ ಗೆ ಅಂತ್ಯವಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಂದೇಶ್ ನಾಗರಾಜ್ ಒಲವು ತೋರಿದ್ದಾರೆ.

ಈ ಎಲ್ಲಾ ಅಂಶಗಳಿಗೆ ಪುಷ್ಠಿ ನೀಡುವಂತೆ ಇಂದು ಬಿಜೆಪಿ ಕಚೇರಿಗೆ ಆಗಮಿಸಿದ ಜೆಡಿಎಸ್ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾರನ್ನು ಸಹ ಭೇಟಿ ಮಾಡಿದ್ದಾರೆ.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಂದೇಶ್ ನಾಗರಾಜ್, ನಾನು ಬಿಜೆಪಿಗೆ ಬರುತ್ತೇನೆ, ಮತ್ತೆ ಮೂರನೇ ಬಾರಿ ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಯಿಂದ ಗೆದ್ದು ಬರುತ್ತೇನೆ. ಜನವರಿ 5ರ ತನಕ ಜೆಡಿಎಸ್ ಸದಸ್ಯನಾಗಿ ಇರುತ್ತೇನೆ. ಕಳೆದ ಒಂದೂವರೆ ವರ್ಷದಿಂದ ಜೆಡಿಎಸ್ ನಿಂದ ದೂರ ಉಳಿದಿದ್ದೇನೆ. ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯಾಧ್ಯಕ್ಷರ ಭೇಟಿ ಮಾಡಬೇಕಿತ್ತು. ಇಬ್ಬರೂ ಸಿಗಲಿಲ್ಲ ಮುಂದಿನ ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿ ಪಕ್ಷ ಸೇರುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರೋದು ಖಚಿತ. ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನಸ್ಸು ಮಾಡಬೇಕು ಎಂದರು.

Share This Article
Leave a comment