November 28, 2024

Newsnap Kannada

The World at your finger tips!

deepa1

ಬದುಕು – ಬರಹಗಳು ಬೇರೆ ಬೇರೆಯಾಗಿ ಬಹಳ ಕಾಲವಾಯಿತು

Spread the love

ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ.
ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ.

ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಅಕ್ಷರ ಲಿಪಿಯ ಸಂಶೋದನೆಯೊಂದಿಗೆ ಓದು ಬರಹ ಸುಲಭವಾಯಿತು.

ಭಾವನೆಗಳ ವ್ಯಕ್ತಪಡಿಸುವಿಕೆ ಕಥೆ, ಕವಿತೆ, ಕಾದಂಬರಿ ಇತ್ಯಾದಿ ಅನೇಕ ರೂಪಗಳಲ್ಲಿ ಹೊರ ಹೊಮ್ಮಲ್ಪಟ್ಟಿತು. ಸೃಷ್ಟಿಯ ಎಲ್ಲವೂ ಬರವಣಿಗೆಯ ವಸ್ತುವಾಯಿತು.

ಅನುಭವಗಳು, ಅನಿಸಿಕೆಗಳು, ವಾಸ್ತವಗಳು, ಆದರ್ಶಗಳು, ಕಲ್ಪನೆಗಳು ಎಲ್ಲವೂ ಬರಹರೂಪಕ್ಕಿಳಿಯಿತು ಮತ್ತು ಅದರಲ್ಲಿ ಅನುಸರಿಸಿದ್ದ, ಅನುಸರಿಸುತ್ತಿರುವ, ಅನುಸರಿಸಬೇಕಾದ ಎಲ್ಲಾ ಜೀವನ ವಿಧಾನಗಳು ಒಳಗೊಂಡಿರುತ್ತಿದ್ದವು.

ಅದನ್ನು ಬರೆಯುತ್ತಿದ್ದವರು ತೀರಾ ಕಡಿಮೆ ಮತ್ತು ನುಡಿದಂತೆ ನಡೆಯುವ ಜನರೇ ಹೆಚ್ಚಿದ್ದರು. ಬದುಕು ಬರಹ ಸಾಮಾನ್ಯವಾಗಿ ಒಂದೇ ಆಗಿತ್ತು ಮತ್ತು ಬಹುತೇಕ ವಾಸ್ತವವು ಆಗಿದ್ದಿತು.

ಆದರೆ ಆಧುನಿಕ ಶಿಕ್ಷಣ ಪದ್ಧತಿ ಪ್ರಾರಂಭವಾದ ಮೇಲೆ ಬದುಕು ಬರಹದ ಅಂತರ ಜಾಸ್ತಿಯಾಯಿತು. ಬದುಕಿದಂತೆ ಬರೆಯಬೇಕಿಲ್ಲ ಬರೆದಂತೆ ಬದುಕಬೇಕಿಲ್ಲ ಎಂಬ ಆತ್ಮವಂಚಕ ಮನಸ್ಸು ಬಹುತೇಕರಲ್ಲಿ ಮೂಡಿತು. ಬರಹಗಳ ದಂಧೆ ಶುರುವಾಯಿತು. ಅಕ್ಷರದ ಅಹಂಕಾರ ಹೆಚ್ಚಾಯಿತು..

ಹೊಟ್ಟೆ ಪಾಡನ್ನೂ ಮೀರಿ ಬರಹ ಆತ್ಮತೃಪ್ತಿಗೆ, ಕ್ರಾಂತಿಗೆ, ಬದಲಾವಣೆಗೆ ನಾಂದಿ ಹಾಡಿತು.
“ಖಡ್ಗ ಕ್ಕಿಂತ ಲೇಖನಿ ಹರಿತ “ಎಂಬಂತಾದರೂ, ಮುಂದೆ ಅಧಿಕಾರ, ಅಂತಸ್ತು, ಭಟ್ಟಂಗಿತನ, ದುಷ್ಟತನ, ಚಾಕಚಕ್ಯತೆಯಿಂದ ಸಮಾಜವನ್ನು ಒಡೆಯುವ ಸಾಧನವೂ ಆಯಿತು.

ಇನ್ನು ಇತ್ತೀಚಿನ ಆಧುನಿಕ ಮಾಧ್ಯಮಗಳಂತೂ ಮನಸ್ಸಗಳನ್ನು ಹೊಡೆದು ಚೂರು ಚೂರು ಮಾಡಿ
ಭಸ್ಮಾಸುರನಂತೆ ಜನರ ಭಾವನೆಗಳನ್ನೇ ನಿಯಂತ್ರಿಸುವ, ಪ್ರಚೋದಿಸುವ ಕೊನೆಗೆ ತಮ್ಮ ನಾಶಕ್ಕೆ ತಾವೇ ಕಾರಣವಾಗುವಂತೆ ಬೆಳೆದು ನಿಂತಿದೆ.

ಬದುಕು ಮತ್ತು ಬರಹಗಳು ಬೇರೆ ಬೇರೆಯಾಗಿ ಬಹಳ ಕಾಲವಾಗಿದೆ. ಅದನ್ನು ಸಮರ್ಥಿಸಲೂ ವಿಕೃತ ವಿಚಾರಧಾರೆಳು ಸೃಷ್ಟಿಯಾಗಿವೆ. ಇದು ತೀರಾ ಅಪಾಯಕಾರಿ ಬೆಳವಣಿಗೆ.

ಬದುಕು ಮತ್ತು ಬರಹ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಇಂದಿನ ಸಮಯದಲ್ಲಿ ಅತ್ಯಂತ
ತಾಳ್ಮೆಯಿಂದ ನಾವೆಲ್ಲರೂ ಅದನ್ನು ಸಾಧ್ಯವಾದ ಮಟ್ಟಿಗೆ ಹತ್ತಿರ ತರಲು ಪ್ರಯತ್ನಿಸಬೇಕಿದೆ,

ನಮ್ಮ ಬರಹ ನಮ್ಮ ಬದುಕನ್ನು ಪ್ರತಿಬಿಂಬಿಸುವುದು ಬಹಳ ಕಷ್ಟವಾದರು ಆದಷ್ಟು ಹತ್ತಿರ ಇರಬೇಕಿದೆ.
ವಾಸ್ತವದಿಂದ ದೂರವಾದ ಯಾವ ಬರಹಗಳೂ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಆತ್ಮವಂಚಕ ಮನಸ್ಸುಗಳು ಸಮಾಜ ಕಂಟಕವೇ.

ಪ್ರೀತಿ, ಪ್ರೇಮ, ಕುಟುಂಬ, ದೇಶ, ಧರ್ಮ, ರಾಜಕೀಯ ಇತ್ಯಾದಿ ಯಾವ ವಿಷಯವೇ ಆಗಿರಲಿ ಬರಹ ಮತ್ತು ಬದುಕು ಹತ್ತಿವಾಗಿರಲಿ. ರಮ್ಯತೆ, ಮನರಂಜನೆ , ಕಾಲ್ಪನಿಕತೆಗಳು ದಾರಿ ತಪ್ಪಿಸದಿರಲಿ.
ಇದಕ್ಕಾಗಿ ನಾವೆಲ್ಲಾ ಪ್ರಯತ್ನಿಸೋಣ

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!