December 22, 2024

Newsnap Kannada

The World at your finger tips!

701564d5 514d 4b5e 97ee 4c1c21689931

ದುಂದು ವೆಚ್ಚದ ದಸರಾ ಇಲ್ಲ- ಸರಳ ದಸರಾಕ್ಕೆ ಮುಖ್ಯಮಂತ್ರಿಗಳ ಆದೇಶವಿದೆ – ಸಚಿವ ಎಸ್ ಟಿ ಎಸ್

Spread the love

ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿಗಳ ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ದುಂದು ವೆಚ್ಚದ ಪ್ರಶ್ನೆಯೇ ಇಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ದಸರಾ ಹತ್ತು ದಿನದ ಕಾರ್ಯಕ್ರಮವಾಗಿದೆ. ಹಾಗಾಗಿ ಖರ್ಚು ವೆಚ್ಚಗಳು ಇರುತ್ತವೆ. ಇಷ್ಟಾದರೂ ಸಭೆಯಲ್ಲಿ ಸರಳ ಆಚರಣೆಗೆ ಒತ್ತು ನೀಡಿ ತೀರ್ಮಾನ ಕೈಗೊಳ್ಳುತ್ತೇವೆ. 5 ಕೋಟಿ ರೂ. ವನ್ನು ಮೂಡಾದವರು ಬಿಡುಗಡೆ ಮಾಡಿದ್ದಾರೆ. ಕಳೆದ ಬಾರಿಯ ದಸರಾ ಅನುದಾನದಲ್ಲೇ 8 ಕೋಟಿ ರೂ. ಅನುದಾನ ಬಾಕಿ ಇದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಸರಾ ಕಮಿಟಿಗಳಿಗೆ ಸಂಬಂಧಪಟ್ಟಂತೆ ಸಭೆ ಕರೆಯಲಾಗಿದೆ. ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಸೇರಿದಂತೆ ಆಹ್ವಾನಿತರಾಗುತ್ತಿರುವ ಆಯಾ ಇಲಾಖೆಯ ತಲಾ ಒಬ್ಬರು ಉದ್ಘಾಟಕರ ಹೆಸರನ್ನು ಆಯ್ಕೆ ಮಾಡಿ ಕಳುಹಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಮೈಸೂರು ಅಭಿವೃದ್ಧಿಗೆ ಸಹಕಾರ

ಮೈಸೂರು ನಗರಕ್ಕೆ ಎಲ್ ಇ ಡಿ ಬೀದಿ ದೀಪ ಅಳವಡಿಸುವ ಸಂಬಂಧ ಬಹುವರ್ಷಗಳ ಬೇಡಿಕೆ ಇದೆ ಎಂದು ಶಾಸಕರಾದ ಎಲ್. ನಾಗೇಂದ್ರ , ಎಸ್.ಎ. ರಾಮದಾಸ್, ಸಂಸದರಾದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ನನ್ನ ಬಳಿ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಂಪುಟದಲ್ಲಿ ಒಪ್ಪಿಗೆ ಪಡೆದು ಅನುಮೋದನೆ ಕೊಡಿಸಿದ್ದೇನೆ. ಇನ್ನು ಮುಂದೂ ಸಹ ಮೈಸೂರು ಅಭಿವೃದ್ಧಿಗೆ ಬೇಕಾದ ಕೆಲಸ ಹಾಗೂ ಸಹಕಾರವನ್ನು ಖಂಡಿತವಾಗಿ ಕೊಡುತ್ತೇನೆ ಎಂದು ಸಚಿವರು ತಿಳಿಸಿದರು.

39 ಸಾವಿರ ಕೋಟಿ ರೂ. ಸಾಲ
ರಾಜ್ಯದ ಲ್ಲಿ
15300 ಕೋಟಿ ರು. ರೈತರಿಗೆ ಸಾಲ ಕೊಡಲು ಈಗಾಗಲೇ ಚಾಲನೆ ಕೊಟ್ಟಿದ್ದೇವೆ. ಇದರಲ್ಲಿ ಈಗಾಗಲೇ 12 ಲಕ್ಷ ರೈತರಿಗೆ 7 ಸಾವಿರ ಕೋಟಿಗೂ ಅಧಿಕ ಸಾಲವನ್ನು ನೀಡಿದ್ದೇವೆ. ಇನ್ನು ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ 39 ಸಾವಿರ ಕೋಟಿ ರೂಪಾಯಿ ಸಾಲವನ್ನು ರೈತರು, ಅತಿ ಸಣ್ಣ ಉದ್ಯಮಿಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ನೀಡಲಾಗುತ್ತಿದೆ, 4 ವಿಭಾಗಗಳ ಮೂಲಕ ಸಾಲ ನೀಡಲಾಗುತ್ತದೆ. ಈಗಾಗಲೇ ಬೆಂಗಳೂರು ವಿಭಾಗದಲ್ಲಿ ಮೊನ್ನೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ. ಉಳಿದಂತೆ ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಲ್ಲಿ ಶೀಘ್ರವಾಗಿ ಪ್ರ‍ಾರಂಭಿಸಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಳದ್ದು, ಹೀಗಾಗಿ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Copyright © All rights reserved Newsnap | Newsever by AF themes.
error: Content is protected !!