ಹಬ್ಬದ ದಿನಗಳಲ್ಲಿ ಸ್ಪೂರ್ತಿದಾಯಕ ಸಂದೇಶಗಳು ಭಾಷೆಯ ಬೆಳವಣಿಗೆಗೆ ಪೂರಕ

Team Newsnap
1 Min Read

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂಧರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು – ಸಂದೇಶಗಳು ಅತ್ಯಂತ ಅದ್ಬುತ – ಮನಮೋಹಕ – ರೋಮಾಂಚನಕಾರಿ – ಸ್ಪೂರ್ತಿದಾಯಕ.

ಮೊದಲಿಗೆ ಕೇವಲ ಕೆಲವೇ ಜನರ ಸ್ವತ್ತಾಗಿದ್ದ ಸಾಹಿತ್ಯ, ಕಂಪ್ಯೂಟರ್, ಇಂಟರ್ನೆಟ್ ಮತ್ತು ಮೊಬೈಲ್ ಗಳು ಬಂದ ನಂತರ ಸಾಮಾನ್ಯ ಜನರಿಗೂ ಎಟುಕತೊಡಗಿತು. ಅಲ್ಲಿಯವರೆಗೂ ಮನದಲ್ಲೇ ಅಡಗಿದ್ದ ಭಾವನೆಗಳನ್ನು ವ್ಯಕ್ತಪಡಿಸಲು Facebook Watsapp Twitter Blog ಮುಂತಾದ ವೇದಿಕೆಗಳು ಅವಕಾಶ ಕಲ್ಪಿಸಿದವು.

ಕನ್ನಡ ತಾಯಿ ಭಾಷೆಯ ನನಗೆ,
ಹಬ್ಬದ ಸಂದೇಶಗಳನ್ನು ಓದುತ್ತಿದ್ದರೆ ಭಾಷಾ ಭಂಡಾರ ವಿಶಾಲವಾಗುತ್ತಾ ಹೋಗುತ್ತಿದೆ. ಯೋಚನೆಗೆ ಹೊಸ ಹೊಸ ಅರ್ಥಗಳು ಹೊಳೆಯುತ್ತಿವೆ.

ಯುಗಾದಿ ಹಬ್ಬವೆಂದರೆ ಬೇಂದ್ರೆಯವರ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಕಾವ್ಯ ಮತ್ತು ಹಾಡು ಸದಾ ಮನದಲ್ಲಿ ಗುನುಗುತ್ತಿತ್ತು. ಈಗ ಅದರೊಂದಿಗೆ ಹಲವಾರು ಸಾಹಿತ್ಯ ಕೃತಿಗಳು ಆಕರ್ಷಿಸುತ್ತಿದೆ.

ಹೊಲದಲ್ಲಿ ಬೆವರು ಸುರಿಸುತ್ತಾ ದುಡಿಯುವ ರೈತ, ಅಡುಗೆ ಮನೆಯಲ್ಲಿ ರುಚಿರುಚಿಯಾದ ಊಟ ತಯಾರಿಸುವ ಗೃಹಿಣಿ, ಸಾಪ್ಟ್ ವೇರ್ ಕಂಪನಿಯ ಕೆಲಸದ ಒತ್ತಡದಲ್ಲಿ ಕಳೆದು ಹೋಗುವ ಯುವಕ/ ಯುವತಿಯರು, ಆಟೋ/ಕಾರು/ವಾಹನ ಚಲಾಯಿಸುವ ಚಾಲಕರು, ಲಾಯರ್/ಪೋಲೀಸ್/ಡಾಕ್ಟರ್/ಶಿಕ್ಷಕರು/ವ್ಯಾಪಾರಿಗಳು ಮುಂತಾದ ವೃತ್ತಿನಿರತರು, ಕೂಲಿ ಕಾರ್ಮಿಕರು, ಯುವ ಪ್ರೇಮಿಗಳು/ವಿರಹಿಗಳು, ನಿವೃತ್ತರು ಹೀಗೆ ಸಮಾಜದ ಎಲ್ಲಾ ವರ್ಗದ ಜನರು ಕನಿಷ್ಠ ತಮ್ಮ ಮೊಬೈಲ್‌ ಗಳಲ್ಲಿ ಹಬ್ಬದ ಮನೋಲ್ಲಾಸ ನೀಡುವ ಸ್ಪೂರ್ತಿದಾಯಕ ಸಂದೇಶಗಳನ್ನು ಬರೆಯುತ್ತಾರೆ ಅಥವಾ ಓದುತ್ತಾರೆ. ಇದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹಂತ ಎಂದು ಗುರುತಿಸಬಹುದು.

ಈ ಯುಗಾದಿ ಹಬ್ಬ ಕೇವಲ ಸಾಹಿತ್ಯ ಬೆಳವಣಿಗೆಗೆ ಮಾತ್ರವಲ್ಲದೆ, ನಶಿಸುತ್ತಿರುವ ಮಾನವೀಯ ಮೌಲ್ಯಗಳ/ಸಂಬಂಧಗಳ ಪುನರುಜ್ಜೀವನಕ್ಕೆ ವಸಂತ ಋತುವಿನಂತೆ ಚಿಗುರುವ ಚೈತ್ರಕಾಲವಾಗಲಿ ಎಂದು ಮನದುಂಬಿ ಆಶಿಸುತ್ತಾ…
ಮುಂದಿನ ವರುಷದ ಹಬ್ಬದೊಳಗಾಗಿ ನಮ್ಮಲ್ಲಿ ಬದಲಾವಣೆಯ ಹೊಸಗಾಳಿ ಬೀಸಿ ನಮ್ಮ ಜೀವನಮಟ್ಟ ಉತ್ತಮವಾಗಲಿ ಎಂದು ನಿರೀಕ್ಷಿಸುತ್ತಾ.

ವಿವೇಕಾನಂದ. ಹೆಚ್.ಕೆ.

Share This Article
Leave a comment