November 27, 2024

Newsnap Kannada

The World at your finger tips!

deepa1

ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ

Spread the love

1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು.

ಆಗ ದೇಶದ ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು. ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ ಕಷ್ಟವಾಗಿತ್ತು. ಬೆಳಗ್ಗೆ ಮತ್ತು ರಾತ್ರಿ ಮಾತ್ರ ಊಟ ಮಾಡುತ್ತಿದ್ದರು. ಕೆಲವರಿಗೆ ಅದೂ ಸಿಗುತ್ತಿರಲಿಲ್ಲ.
ಬಡವರು ಅಂದಿನ ಕೂಲಿ ಹಣದಲ್ಲಿ ಅಂದೇ ರಾಗಿ ಜೋಳ ಗೋದಿ ತಂದು ಅದನ್ನು ಪುಡಿ ಮಾಡಿಸಿ ಊಟ ಮಾಡಬೇಕಿತ್ತು.

ಗಮನಿಸಿ ,
ಅಂದಿನ ಕಾಲದಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು.
” ಹಬ್ಬದಲ್ಲಿ ಅನ್ನ ಊಟ ಮಾಡಿದಂತೆ ” ಅಂದರೆ ಹಬ್ಬಗಳಲ್ಲಿ ಮಾತ್ರ ಅನ್ನ ತಿನ್ನುತ್ತಿದ್ದರು. ಉಳಿದಂತೆ ಮುದ್ದೆ ರೊಟ್ಟಿ ಮತ್ತು ಗೊಜ್ಜು.
ತರಕಾರಿಗಳು ಬೇಳೆಗಳು ಹಣ್ಣುಗಳು ಕೇವಲ ಕೆಲವೇ ಶ್ರೀಮಂತರು ಮಾತ್ರ ಉಪಯೋಗಿಸುತ್ತಿದ್ದರು. ಒಣ ದ್ರಾಕ್ಷಿ ಗೋಡಂಬಿ ಬಾದಾಮಿ ಕರ್ಜೂರ ಬಹಳ ಜನ ನೋಡೇ ಇರಲಿಲ್ಲ. ಬನ್ನು ಬ್ರೆಡ್ಡು ಕೇವಲ ಜ್ವರ ಬಂದಾಗ ಮಾತ್ರ ಕೊಡುತ್ತಿದ್ದರು.
ಬನ್ನು ತಿನ್ನುವ ಸಲುವಾಗಿ ಜ್ವರ ಬರಲಿ ಎಂದು ಎಷ್ಟೋ ಜನ ಬಯಸುತ್ತಿದ್ದುದು ಉಂಟು.

ಒಂದು ಕೆಜಿ ಕಡಲೆಕಾಯಿ ಎಣ್ಣೆ ಒಂದು ಕೆಜಿ ಸಕ್ಕರೆ ಇಡೀ ತಿಂಗಳಲ್ಲಿ ಖರ್ಚು ಮಾಡಿದರೆ ಅದೇ ಹೆಚ್ಚು. ಇನು ಶುಗರ್ ಬಿಪಿ ಕೊಲೆಸ್ಟರಾಲ್‌ ಇರುವುದಾದರೂ ಎಲ್ಲಿಂದ.
ಬೊಂಡ ಬಜ್ಜಿ ವಡೆ ಚಕ್ಕುಲಿಗಳೇ ಭಕ್ಷ್ಯ ಭೋಜನ. ಹೋಳಿಗೆ ಪಾಯಸ ಕಜ್ಜಾಯ ಕಡುಬು ಮುಂತಾದ ಸಿಹಿ ತಿನಿಸುಗಳು ಕೆಲವೇ ವಿಶೇಷ ಹಬ್ಬಗಳಿಗೆ ಮಾತ್ರ ಸೀಮಿತವಾಗಿತ್ತು. ಹಾಲು ತುಪ್ಪ ಹಳ್ಳಿಯಲ್ಲೇ ತಯಾರಾದರೂ ಸ್ವಂತಕ್ಕೆ ಉಪಯೋಗಿಸುತ್ತಿದ್ದುದು ತುಂಬಾ ಕಡಿಮೆ. ಅದನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಇದು ಸಾಮಾನ್ಯ ಜನರ ಜೀವನ ಶೈಲಿ.
ಇನ್ನು ಬಡವರ ಸ್ಥಿತಿ ವರ್ಣಿಸಲು ಹೋದರೆ ಅಳು ತಡೆಯಲಾಗುವುದಿಲ್ಲ. ಅದನ್ನು ಮತ್ತೊಮ್ಮೆ ಹೇಳುತ್ತೇನೆ.

ಈಗಿನ ಜೀವನ ಶೈಲಿ ಅಂದರೆ 1990 ರ ನಂತರ ಹುಟ್ಟಿದವರದು ಹೇಗಿದೆ ನೋಡೋಣ…

ಬೆಳಗ್ಗೆ ಬೆಡ್ ಕಾಫಿಯಿಂದ ಶುರುವಾಗಿ breakfast – lunch – evening snack – dinner ಮತ್ತು ಆಗಾಗ ಕುರುಕಲು ತಿಂಡಿ ಅವರ ದಿನನಿತ್ಯದ ಆಹಾರ.
ಇಂದು ಸಿಹಿ ತಿನಿಸುಗಳು – ಮಾಂಸಾಹಾರ – ವಿವಿಧ ರೀತಿಯ ಪಾನೀಯಗಳು ಮುಂತಾದವು ಬಯಸಿದಾಗ ತಿನ್ನಬಹುದು. ದ್ರಾಕ್ಷಿ – ಗೋಡಂಬಿ – ಬಾದಾಮಿ ಮುಂತಾದ ಪದಾರ್ಥಗಳನ್ನು ಉಪ್ಪಿಟ್ಟು ಕೇಸರಿಬಾತ್ ವಾಂಗಿಬಾತ್ ಚಿತ್ರಾನ್ನ ಪಾಯಸ ಎಲ್ಲದರಲ್ಲೂ ಉಪಯೋಗಿಸುತ್ತಾರೆ.
ಅಂದಿನ ಬಹುದೊಡ್ಡ ಸಮಾರಂಭಗಳೆಂದರೆ ಕೇವಲ ಮದುವೆ ಮಾತ್ರ ಆಗಿತ್ತು.

ಆದರೆ ಈಗ,
Engagement,
Marriage,
Reception,
Naming ceremony,
Birthday party,
Kitty party,
Bachelor party,
Marriage anniversary,
Get together..
ಅಬ್ಬಾ,
party ಗೊಂದು ನೆಪ ಸಿಕ್ಕರೆ ಸಾಕು ಮತ್ತು ಅದರಲ್ಲಿ ಎಲ್ಲಾ ರೀತಿಯ ಭಕ್ಷ್ಯ ಭೋಜನ ಮತ್ತು ಪಾನೀಯ ಕಡ್ಡಾಯ.
ಆ ಕಾರಣಕ್ಕಾಗಿ ದೈಹಿಕ ಶ್ರಮ ಕಡಿಮೆಯಾಗಿ ಸಹಜವಾಗಿ ಖಾಯಿಲೆಗಳು ಹೆಚ್ಚಾಗುತ್ತಿದೆ.

ಎಷ್ಟೊಂದು ವ್ಯತ್ಯಾಸ. ಅಂದಿಗೂ ಇಂದಿಗೂ. ಇದನ್ನು ಹೊರತುಪಡಿಸಿ ಇನ್ನೂ ಹಲವಾರು ಬದಲಾವಣೆಗಳು ನಿಮ್ಮ ಮನದಲ್ಲಿ ಮೂಡುತ್ತದೆ.

ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ ಅದರ ದಿಕ್ಕನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಾ ಜೀವನಮಟ್ಟ ಸುಧಾರಿಸಿಕೊಳ್ಳೋಣ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!