November 17, 2024

Newsnap Kannada

The World at your finger tips!

deepa1

ಸರಳ ಧ್ಯಾನ ಎಂದರೆ ಒಂದು ಸಹಜ, ಸ್ವಯಂ ಪ್ರಯೋಗ

Spread the love

ಧ್ಯಾನದ ಸಾಮಾನ್ಯ ಅರ್ಥ,
ಧ್ಯಾನದ ಸಹಜ ಸರಳ ಅಭ್ಯಾಸ,
ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ,
ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು,…….
ಒಂದು ಸಣ್ಣ ವಿವರಣೆ……

ಇದು ಆಧ್ಯಾತ್ಮಿಕ ಚಿಂತನೆಯಲ್ಲ. ಆಧುನಿಕ ಒತ್ತಡದ ಬದುಕಿನಲ್ಲಿ ಧ್ಯಾನ ಎಂಬ ಕ್ರಿಯೆಯಿಂದ ವಾಸ್ತವವಾಗಿ ಸ್ವಲ್ಪಮಟ್ಟಿನ ಲಾಭ ಪಡೆದು ನೆಮ್ಮದಿ ಅಥವಾ ಮನಸ್ಸಿನ ಶಾಂತಿಯ ಮಟ್ಟ ಹೆಚ್ಚಿಸುವ ಪ್ರಯತ್ನ ಮಾತ್ರ….

ಧ್ಯಾನದ ಆಳವಾದ ಅರ್ಥ ಏನೇ ಇರಲಿ ಅಥವಾ ನಿಮಗೆ ಅರ್ಥವಾಗದೇ ಇರಲಿ ಆದರೆ ಧ್ಯಾನದಿಂದ ನಿಜವಾಗಿಯೂ ಕನಿಷ್ಠ ಮಟ್ಟದ ಸ್ವಯಂ ನಿಯಂತ್ರಣ ಸಾಧ್ಯ……

ಧ್ಯಾನಕ್ಕೆ ಹಲವಾರು ವ್ಯಾಖ್ಯಾನಗಳು ಇದ್ದರೂ ಸರಳವಾಗಿ ಹೇಳುವುದಾದರೆ ಮನಸ್ಸಿನ ಮೇಲೆ ಪ್ರಭಾವ ಬೀರುವ ಮತ್ತು ಉಸಿರಿನ ಮೇಲೆ ನಿಯಂತ್ರಣ ಸಾಧಿಸುವ ಯೋಗದ ಒಂದು ವಿಧಾನ.
ಆತ್ಮಾವಲೋಕನದ, ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗವೂ ಹೌದು.

ಸಾಮಾನ್ಯ ಜನ ಸಾಮಾನ್ಯ ರೀತಿಯಲ್ಲಿ ಎಲ್ಲರೂ ಧ್ಯಾನ ಮಾಡಬಹುದು. ಯಾವುದೇ ನಿರ್ಬಂಧವಿಲ್ಲ………

1) ಜ್ಞಾನ ಯೋಗ – ಭಕ್ತಿ ಯೋಗ – ಕರ್ಮ ಯೋಗ – ರಾಜ ಯೋಗ ಎಂಬ ನಾಲ್ಕು ಮಾರ್ಗಗಳಲ್ಲಿ ರಾಜಯೋಗದ ಉಪ ಮಾರ್ಗ ಈ ಧ್ಯಾನ. ಈ ನಾಲ್ಕೂ ಮಾರ್ಗಗಳ ಉದ್ದೀಪನ ವಿಧಾನವೂ ಸಹ. ಇದು ಉಳಿದ ಮೂರು ಮಾರ್ಗಗಳಿಗೆ ಪೂರಕ ಸಹ ಆಗಿದೆ.

2 ) ನೀವು ಯಾವುದೇ ಜಾತಿ ಧರ್ಮ ಭಾಷೆ ಪ್ರದೇಶ ಲಿಂಗ ಹಣ ಅಂತಸ್ತು ಶಿಕ್ಷಣ ಏನೇ ಆಗಿದ್ದರೂ ಧ್ಯಾನ ಮಾಡಬಹುದು.

3) ಧ್ಯಾನವನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದಾದರು ಬೆಳಗಿನ ಸಮಯ ಹೆಚ್ಚು ಸೂಕ್ತ.

4) ಪ್ರಾರಂಭದಲ್ಲಿ ಕನಿಷ್ಠ 15 ನಿಮಿಷದಿಂದ ಆರಂಭಸಿ ಒಂದು ಗಂಟೆ ಅಥವಾ ಸಮಯಾವಕಾಶವಿದ್ದರೆ ಅದಕ್ಕಿಂತ ಹೆಚ್ಚು ವಿಸ್ತರಿಸಬಹುದು.

5 ) ಇದಕ್ಕೆ ಯಾವುದೇ ಒತ್ತಡ ಅಥವಾ ಪೂರ್ವ ತಯಾರಿ ಬೇಕಾಗಿಲ್ಲ. ನೀವಿರುವ ಜಾಗದಲ್ಲಿ ಅಂದರೆ ಹಾಸಿಗೆಯೋ, ಚಾಪೆಯೋ, ನೆಲವೋ ಅಥವಾ ಮೊಣಕಾಲು ನೋವಿದ್ದರೆ ಕುರ್ಚಿಯಾದರೂ ಚಿಂತೆ ಇಲ್ಲ, ಒಂದು ಸ್ಥಳದಲ್ಲಿ ಕಣ್ಣು ಮುಚ್ಚಿ ಮೌನವಾಗಿ ಕುಳಿತುಕೊಳ್ಳಿ.

6) ಒಂದು ವಾರ 15 ನಿಮಿಷ,
ನಂತರದ ವಾರಗಳಲ್ಲಿ 20/25/30 ರ ಅನುಪಾತದಲ್ಲಿ ಹೆಚ್ಚಿಸುತ್ತಾ ಹೋಗಿ. ಇದಕ್ಕಾಗಿ ಅಲಾರಾಂ ಉಪಯೋಗಿಸಿ.

7) ಮನಸ್ಸನ್ನು ಯಾವುದೇ ಕಾರಣಕ್ಕೂ ನಿಯಂತ್ರಿಸಲು ಹೋಗಬೇಡಿ. ಒಳ್ಳೆಯದೋ ಕೆಟ್ಟದ್ದೋ ಒಟ್ಟಿನಲ್ಲಿ ಸ್ವತಂತ್ರವಾಗಿ ಹರಿಯಲು ಬಿಡಿ. ಏನೇ ವಿಚಾರ ಬಂದರೂ ತಲೆಕೆಡಿಸಿಕೊಳ್ಳಬೇಡಿ.

8) ಸುಮಾರು 100 ದಿನಗಳ ಅವಧಿಯಲ್ಲಿ ನೀವು ‌45/60 ನಿಮಿಷ ಕಣ್ಣು ಮುಚ್ಚಿಕೊಂಡು ಒಂದು ಸ್ಥಳದಲ್ಲಿ ಯಾವುದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಭ್ಯಾಸ ಮಾಡಿದರೆ ಅಥವಾ ಅದು‌ ಸಾಧ್ಯವಾದರೆ ನೀವು ಧ್ಯಾನದ ಮೊದಲ ಮೆಟ್ಟಿಲು ಹತ್ತಿದಂತಾಗುತ್ತದೆ. ವಜ್ರಾಸನ, ಪದ್ಮಾಸನ, ಸುಖಾಸನ ಯಾವುದಾದರೂ ಆಗಬಹುದು.

9) ಎರಡನೇ ಹಂತದಲ್ಲಿ ಮನಸ್ಸನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು 1 2 3 4 5…….. ಅಂಕಿಗಳ ಮೊರೆ ಹೋಗಿ. 1 ರಿಂದ 100…. ಮತ್ತೆ ಮತ್ತೆ ಹೀಗೆ ಮನಸ್ಸಿನಲ್ಲಿ ಎಣಿಸುತ್ತಾ ಇರಬೇಕು. ಆಗಲೂ ಮನಸ್ಸು ಎಲ್ಲೆಲ್ಲೂ ಅಲೆಯುತ್ತಿರುತ್ತದೆ. ಆದರೆ ಸಂಖ್ಯೆಗಳು ತಪ್ಪಾಗದಂತೆ ಎಚ್ಚರಿಕೆ ವಹಿಸಿದರೆ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ.

10) ಸುಮಾರು 45 ದಿನಗಳ ಈ ಅಭ್ಯಾಸದ ನಂತರ ಮೂರನೇ ಹಂತ ಓಂ ಪಠಿಸುವುದು. ದೀರ್ಘ ಮತ್ತು ನಿಧಾನಗತಿಯ ಉಚ್ವಾಸ ಮತ್ತು ನಿಶ್ವಾಸ ಮಾಡುವುದರಿಂದ ಮನಸ್ಸು ಮತ್ತಷ್ಟು ನಿಯಂತ್ರಣಕ್ಕೆ ಬರುತ್ತದೆ. ಓಂ ಯಾವುದೇ ಧರ್ಮದ ಮಂತ್ರವಲ್ಲ. ಉಚ್ವಾಸ ನಿಶ್ವಾಸಗಳ ಸರಾಗ ಚಲನೆಗೆ ಅನುಸರಿಸುವ ಧ್ವನಿಯ ವಿಧಾನ. ಭಾರತೀಯರು ಇದನ್ನು ಹೆಚ್ಚಾಗಿ ಬಳಸುತ್ತಾರೆ.

11) ನಂತರ ಉಸಿರಿನ ಏರಿಳಿತ ಗಮನಿಸುವ ಮುಖಾಂತರ ಮತ್ತು ಒಂದು ಗಂಟೆಯಷ್ಟು ದೀರ್ಘಕಾಲ ಧ್ಯಾನ ಮಾಡಿದರೆ ಖಂಡಿತ ಧ್ಯಾನದ ಪ್ರಯೋಜನ ಪಡೆಯಬಹುದು.ಮನಸ್ಸನ್ನು ನಿಯಂತ್ರಿಸಬಹುದು. ಪ್ರಾರಂಭದಲ್ಲಿ ಕಷ್ಟವಾದರೂ ಅಭ್ಯಾಸವಾದ ನಂತರ ನಮ್ಮಲ್ಲಿ ಚೇತೋಹಾರಿ ಮನಸ್ಥಿತಿ ಸೃಷ್ಟಿಸುತ್ತದೆ. ನಿರಾಶೆಯನ್ನು ಕಡಿಮೆ ಮಾಡುತ್ತದೆ.

ಧ್ಯಾನ ಒಂದು ನಿಯಂತ್ರಣಕ್ಕೆ ಬಂದಮೇಲೆ ಧ್ಯಾನದ ನಂತರ ಕೆಲವು ಕ್ಷಣ ನಮ್ಮ ಇರುವಿಕೆಯೇ ಅರಿವಾಗುವುದಿಲ್ಲ ಅಷ್ಟು ಮೈ ಮರೆಸುತ್ತದೆ.

ಕೆಲವು ಸಲಹೆಗಳು:

ಧ್ಯಾನ ಮಾಡುವಾಗ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ಅದರಿಂದ ಏನೂ ತೊಂದರೆ ಇಲ್ಲ. ಕೆಲವು ಕ್ಷಣ ಚೇತರಿಕೊಂಡು ಮತ್ತೆ ಧ್ಯಾನ ಮುಂದುವರಿಸಿ.

ಧ್ಯಾನದ ಅಭ್ಯಾಸ ಮಾಡುವಾಗ ಅದರ ನಿರಂತರತೆ ಕಾಪಾಡುವುದು ಕಷ್ಟ. ಆಗಾಗ ವಿಫಲವಾಗುತ್ತಲೇ ಇರುತ್ತೇವೆ. ಇದನ್ನು ಸೋಲು ಎಂದು ಭಾವಿಸಬೇಡಿ. ಜೀವನದ ಕೊನೆಯ ಉಸಿರಿನವರೆಗೂ ಇದೊಂದು ಅನಿವಾರ್ಯ ಕ್ರಿಯೆ ಎಂದು ಭಾವಿಸಿ ಅಭ್ಯಾಸ ಮಾಡುತ್ತಲೇ ಇರಿ. ಇಲ್ಲಿ ಸೋಲೂ ಗೆಲುವೂ ಇಲ್ಲವೇ ಇಲ್ಲ.. ಇದೊಂದು ಭಾವ ಅಷ್ಟೇ.

ಮತ್ತೊಂದು ಅತ್ಯಂತ ಪ್ರಮುಖ ವಿಷಯವೆಂದರೆ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಧ್ಯಾನ ಮಾಡುವುದು ತುಂಬಾ ಕಷ್ಟ. ವಾಸ್ತವವಾಗಿ ನಮಗೆ ಧ್ಯಾನದ ಅವಶ್ಯಕತೆ ಇರುವುದೇ ಮನಸ್ಸಿನ ಪ್ರಕ್ಷುಬ್ಧ ಸ್ಥಿತಿಯಲ್ಲಿ. ಇದು ಆಗಲೇ ಕೈ ಕೊಡುತ್ತದೆ. ಶಾಂತ ಮತ್ತು ಸಾಮಾನ್ಯ ಮನಸ್ಸಿನ ಸ್ಥಿತಿಯಲ್ಲಿ ಧ್ಯಾನ ಸುಲಭ. ಋಷಿ ಮುನಿಗಳು ಇದನ್ನೇ ಮಾಡುವುದು. ಅವರಿಗೆ ಇದೊಂದು ರೀತಿ ಅನಿವಾರ್ಯ ಕ್ರಿಯೆ.

ಆದರೆ ನಾವು ಧ್ಯಾನವನ್ನು ಋಷಿ ಮುನಿಗಳ ರೀತಿಯಲ್ಲಿ ನೋಡಬಾರದು ಅಥವಾ ಹೋಲಿಕೆ ಮಾಡಬಾರದು. ಅವರ ಉದ್ದೇಶವೇ ಬೇರೆ ಮತ್ತು ಆಳವಾದದ್ದು. ನಮಗೆ ಬೇಕಿರುವುದು ಇರುವ ವ್ಯವಸ್ಥೆಯಲ್ಲಿ ಅದರ ಪ್ರಯೋಜನ ಮಾತ್ರ. ಅದೇ ನಮ್ಮ ನಿರೀಕ್ಷೆಯಾಗಿರಬೇಕು. ಅಗ ಪ್ರಕ್ಷುಬ್ಧ ಸ್ಥಿತಿಯ ಧ್ಯಾನ ಕನಿಷ್ಠ ನಮ್ಮಿಂದ ಬಹುದೊಡ್ಡ ತಪ್ಪುಗಳನ್ನು ಆಗುವುದು ತಪ್ಪಿಸುತ್ತದೆ.

ಜೊತೆಗೆ ಧ್ಯಾನ ಒಂದರಿಂದಲೇ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ ಎಂಬ ಭ್ರಮೆಗೆ ಒಳಗಾಗಬೇಡಿ. ಜ್ಞಾನಕ್ಕೆ ಇರುವ ಶಕ್ತಿ ಧ್ಯಾನಕ್ಜೆ ಇಲ್ಲ. ಬುದ್ಧ ಮಹಾವೀರ ಪರಮಹಂಸ ಸ್ವಾಮಿ ವಿವೇಕಾನಂದ ಮುಂತಾದವರು ಧ್ಯಾನವನ್ನು ಅತಿ ಹೆಚ್ಚು ಅನುಭವಿಸಿದವರು ಆದರೆ ಅದು ಅವರ ಜ್ಞಾನ ಮತ್ತು ಶ್ರಮಕ್ಕೆ ಪೂರಕವಾಗಿ ಮಾತ್ರ.

ಆದ್ದರಿಂದ ಮನಸ್ಸಿನ ನಿಯಂತ್ರಣಕ್ಕೆ ಜ್ಞಾನವೇ ಅತಿಮುಖ್ಯ. ಅದರ ಸ್ವಲ್ಪ ಕೊರತೆಯನ್ನು ಸರಿದೂಗಿಸುವ ಶಕ್ತಿ ಧ್ಯಾನಕ್ಕೆ ಇದೆ ಎಂದು ಮಾತ್ರ ಹೇಳಬಹುದು. ಬಿಪಿ ಶುಗರ್ ಸಹ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ.

ನನ್ನ ಈ ಅಭಿಪ್ರಾಯಕ್ಕೆ ಯಾವುದೇ ದಾಖಲೆ ಅಥವಾ ಸಾಕ್ಷ್ಯ ನನ್ನ ಬಳಿ ಇಲ್ಲ. ಕೇವಲ ನನ್ನ ಅನುಭವದ ಅನಿಸಿಕೆ ಮಾತ್ರ. ಒಪ್ಪುವ ಅಥವಾ ತಿರಸ್ಕರಿಸುವ ಸಂಪೂರ್ಣ ಸ್ವಾತಂತ್ರ್ಯ ನಿಮಗಿದೆ..

ಆದರೆ ಇದರಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಲ್ಲೆ. ಜೊತೆಗೆ ಜೀವನದ ಸಂಕಷ್ಟ ಸಮಯದಲ್ಲಿ ಅತಿದೊಡ್ಡ ಅನಾಹುತಕ್ಕೆ ಕೈ ಹಾಕುವ ಮನಸ್ಥಿತಿಯನ್ನು ತಡೆದು ಬದುಕನ್ನು ಎದುರಿಸುವ ಆತ್ಮವಿಶ್ವಾಸ ಖಂಡಿತ ನೀಡುತ್ತದೆ

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!