January 15, 2025

Newsnap Kannada

The World at your finger tips!

rashme market

ರಾಮನಗರ ರೇಷ್ಮೆ ಮಾರುಕಟ್ಟೆ ಉಪ ನಿರ್ದೇಶಕ ಅಮಾನತ್ತು – ರೈತರ ಹಣ ದುರುಪಯೋಗದ ಆರೋಪ

Spread the love

ರಾಮನಗರ ರೇಷ್ಮೆ ಮಾರುಕಟ್ಟೆ ಉಪ ನಿರ್ದೇಶಕ ನಾಪತ್ತೆಯಾಗಿದ್ದಾರೆ. ಅಲ್ಲದೇ ರೈತರಿಗೆ ನೀಡಬೇಕಾಗಿರುವ 1.5 ಕೋಟಿಗೂ ಅಧಿಕ ಹಣವನ್ನು ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಡಿಡಿ ಮುನ್ಷಿ ಬಸವಯ್ಯ ಅವರನ್ನು ಅಮಾನತ್ತು ಮಾಡಲಾಗಿದೆ.

ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಡಿಡಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಇಲಾಖೆಯ ಅಧಿಕಾರಿಗಳಿಂದ ಆಗಿರುವ ತಪ್ಪಿಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರಿಗೆ ಆಗಿರುವ ಅನ್ಯಾಯ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮುನ್ಷಿ ಬಸಯ್ಯ ಜೊತೆಗೆ ಇನ್ನು ಕೆಲ ಅಧಿಕಾರಿಗಳ ಕೈವಾಡವೂ ಇದೇ ಎನ್ನಲಾಗುತ್ತಿದೆ. ತನಿಖೆಯ ನಂತರ ಸತ್ಯಾಂಶ ತಿಳಿಯಬೇಕಿದೆ.

ಹಣ ಹೋಗಿದ್ದು ಯಾರಿಗೆ?

ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇತ್ತೀಚಿಗೆ ರೈತರ ಅನುಕೂಲಕ್ಕಾಗಿ ಆನ್‍ಲೈನ್ ಪೇಮೆಂಟ್ ಜಾರಿಗೆ ತರಲಾಗಿತ್ತು. ರೀಲರ್ಸ್‍ಗಳು ಖರೀದಿಸಿದ ಗೂಡಿನ ಹಣವನ್ನು ಮಾರುಕಟ್ಟೆ ಅಧಿಕಾರಿಗಳು ರೈತರಿಗೆ ಸಂದಾಯ ಮಾಡುತ್ತಿದ್ದರು.

ಆದರೆ ಕಳೆದ ಶುಕ್ರವಾರದಿಂದ ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕ ಮುನ್ಷಿ ಬಸಯ್ಯ ನಾಪತ್ತೆಯಾಗಿದ್ದಾರೆ.

ಶುಕ್ರವಾರ ಕರ್ತವ್ಯ ಮುಗಿಸಿ ಮನೆಗೆ ಎಂದು ಹೋಗಿದ್ದ ಅಧಿಕಾರಿ ಮನೆಗೂ ಹೋಗಿಲ್ಲ, ಕಡತಗಳೊಂದಿಗೆ ಅಧಿಕಾರಿ ನಾಪತ್ತೆಯಾಗಿದ್ದಾರೆ. ಸುಮಾರು 400ಕ್ಕೂ ಹೆಚ್ಚು ರೈತರಿಗೆ ಆನ್‍ಲೈನ್ ನಲ್ಲಿ ಹಣ ಸಂದಾಯ ಮಾಡಿಲ್ಲ. ಬರೋಬ್ಬರಿ ಅಂದಾಜು 1.5 ಕೋಟಿ ರೂ ಹಣ ರೈತರಿಗೆ ನೀಡಬೇಕೆಂಬ ಅಂದಾಜು ಮಾಡಲಾಗಿದೆ.

ಗೂಡು ಖರೀದಿಸಿದ ಬಳಿಕ ರೀಲರ್ಸ್‍ಗಳು ಹಣ ಸಂದಾಯ ಮಾಡಿಲ್ಲವೋ ಅಥವಾ ಸಂದಾಯವಾದ ಹಣವನ್ನು ಮುನ್ಷಿ ಬಸಯ್ಯ ರೈತರಿಗೆ ಕೊಟ್ಟಿಲ್ಲವೋ ಎಂಬ ಗೊಂದಲವೂ ಮಾರುಕಟ್ಟೆಯಲ್ಲಿ ಏರ್ಪಟಿದೆ.

ಇದೀಗ ಮೇಲ್ನೋಟಕ್ಕೆ ಉಪನಿರ್ದೇಶಕ ಮುನ್ಷಿ ಬಸಯ್ಯ ನಿಂದಲೇ ಕರ್ತವ್ಯ ಲೋಪವಾಗಿದೆ ಎಂದು ರೇಷ್ಮೆ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ವನಿತಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇನ್ನು ಮುನ್ಷಿ ಬಸಯ್ಯ ಕಾಣಿಯಾಗಿದ್ದಾರೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲು ಮಾಡಿದ್ದಾರೆ. ದೂರು ಕೊಟ್ಟ ಹಿನ್ನೆಲೆಯಲ್ಲಿ ಆರ್.ಆರ್ ನಗರ ಪೊಲೀಸರು ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿ ಮುನ್ಷಿಬಸಯ್ಯ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಜೊತೆಗೆ ಮಾರುಕಟ್ಟೆಯ ಪ್ರಭಾರ ಅಧಿಕಾರಿ ವೆಂಕಟೇಶ್ ಸಹ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮುನ್ಷಿ ಬಸಯ್ಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ದೂರಿನ ಪ್ರತಿ ಸರ್ಕಾರಕ್ಕೂ ತಲುಪಿದೆ.
ಒಟ್ಟಾರೆಯಾಗಿ ರೇಷ್ಮೆಗೂಡು ಮಾರುಕಟ್ಟೆ ಡಿಡಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಇಲಾಖೆಯ ಅಧಿಕಾರಿಗಳಿಂದ ಆಗಿರುವ ತಪ್ಪಿಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!