ಪ್ರತಿ ಮಿಲನಕ್ಕೂ ಪ್ರೇಯಸಿ ಅನುಮತಿ ಬೇಕು- ಇಲ್ಲದೆ ಹೋದರೆ ಅದು ರೇಪ್ ಪ್ರಕರಣ – ಪತ್ರಕರ್ತನ ಬಂಧನಕ್ಕೆ ಹೈಕೋರ್ಟ್ ಆದೇಶ

Team Newsnap
2 Min Read

ಪ್ರೇಯಸಿಯ ಜತೆ ಅವಳ ಅನುಮತಿ ಮೇರೆಗೆ ಕೆಲವೊಮ್ಮೆ ಮಿಲನ‌ ನಡೆಸಿದ ಮಾತ್ರಕ್ಕೆ ಪದೇ ಪದೇ ಅವಳು ಅದಕ್ಕೆ ಅನುಮತಿ ಕೊಡುತ್ತಾಳೆ ಎನ್ನುವ ಅರ್ಥ ಕಲ್ಪಿಸಿಕೊಳ್ಳುವಂತಿಲ್ಲ. ವಾಟ್ಸ್​ಆಪ್​ನಲ್ಲಿ ಸೆಕ್ಸ್​ಗೆ ಅನುಮತಿ ನೀಡಿ ನಂತರ ಆ ವೇಳೆ ಆಕೆ ಅದಕ್ಕೆ ನಿರಾಕರಿಸಿದರೆ ಆ ವೇಳೆಯೂ ದೈಹಿಕ ಕ್ರಿಯೆ ನಡೆಸಿದರೆ ಅದು ಅಪರಾಧ ಎಂದು‌ ದೆಹಲಿ ಹೈಕೋರ್ಟ್​ ಹೇಳಿದೆ.

ವಾಟ್ಸ್​ಆಪ್​ ಸಂದೇಶವಾಗಲೀ ಅಥವಾ ಈ ಹಿಂದೆ ನಡೆಸಿದ್ದ ಸಂಬಂಧದ ಆಧಾರದ ಮೇಲೆ ಆಕೆಯ ಒಪ್ಪಿಗೆ ಇಲ್ಲದೆಯೇ ಪುನಃ ಸೇರಿದರೆ ಅದು ಅಪರಾಧ ಎಂದು ದೆಹಲಿ ಪಟಿಯಾಲಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಪತ್ರಕರ್ತ ವರುಣ್ ಹಿರೇಮಠ ವಿರುದ್ಧದ ಅತ್ಯಾಚಾರ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಕೋರ್ಟ್​ ಈ ತೀರ್ಪು ನೀಡಿ, ಆತನಿಗೆ ಜಾಮೀನು ನಿರಾಕರಿಸಿದೆ.

ದೂರು ಏನು?

ಯುವತಿಯೊಬ್ಬಳು ನೀಡಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಭಿಪ್ರಾಯವನ್ನು ಕೋರ್ಟ್​ ವ್ಯಕ್ತಪಡಿಸಿದೆ.

ಹೋಟೆಲ್​ ಒಂದಕ್ಕೆ ಕರೆದಿದ್ದ ಸ್ನೇಹಿತ ವರುಣ್​ ಹಿರೇಮಠ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಯುವತಿ ದೂರಿದ್ದಳು. ಈ ಕೇಸ್​ ದಾಖಲಾಗುತ್ತಲೇ ಆತ ತಲೆ ಮರೆಸಿಕೊಂಡಿದ್ದ. ನಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.

ಈ ಸಂದರ್ಭದಲ್ಲಿ ಆತನ ಪರ ವಕೀಲರು ವಾದ ಮಂಡಿಸುತ್ತಾ, ಈ ಹಿಂದೆ ಇಬ್ಬರೂ ಒಪ್ಪಿಕೊಂಡು ಸಂಪರ್ಕ ನಡೆಸಿದ್ದಾರೆ. ಮಾತ್ರವಲ್ಲದೇ ಇನ್‌ಸ್ಟಾಗ್ರಾಂ ಅಥವಾ ವಾಟ್ಸಾಪ್ ಸಂದೇಶಗಳಲ್ಲಿ ಕೂಡ ಆಕೆ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ.

ಆಕೆ ಸ್ವ ಇಚ್ಛೆಯಿಂದ ಆರೋಪಿಯ ಜತೆ ಮಾತನಾಡಿಕೊಂಡೇ ದೆಹಲಿಗೆ ಬಂದಿದ್ದಾಳೆ, ಸಮ್ಮತಿಯ ಮೇರೆಗೆ ಹೋಟೆಲ್‌ನಲ್ಲಿ ವಾಸವಾಗಲು ನಿರ್ಧರಿಸಿದ್ದಾರೆ, ಹೋಟೆಲ್‌ಗೆ ಅಧಿಕೃತ ದಾಖಲೆಗಳನ್ನು ನೀಡಿಯೇ, ವಾಸವಾಗಿದ್ದಾಳೆ. ಈ ವಿಚಾರದಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ, ಇಬ್ಬರ ಅನುಮತಿ ಮೇರೆಗೆ ಸಂಪರ್ಕ ನಡೆದಿದೆ.
ಅದರೂ ಘಟನೆ ನಂತರ ಆತ ಕ್ಷಮೆ ಕೂಡ ಕೇಳಿದ್ದಾನೆ ಎಂದು ವಕೀಲರು ವಾದಿಸಿದರು.

ಆದರೆ ಈ ಸಮಯದಲ್ಲಿ ನಾನು ಅನುಮತಿ ಕೊಟ್ಟಿರಲಿಲ್ಲ ಎಂದು ಯುವತಿ ಹೇಳಿದ್ದಳು. ಆದ್ದರಿಂದ ಕೋರ್ಟ್​ ಹಿಂದೆ ನಡೆದಿರುವ ಘಟನೆ ಅಥವಾ ಮೆಸೇಜ್​ಗಳು ಏನೇ ಇದ್ದರೂ ಆ ಕ್ಷಣದಲ್ಲಿ ಯುವತಿಯ ಅನುಮತಿಯಿಲ್ಲದೇ ಸೇರಿದರೆ ಅದು ಅಪರಾಧ ಎಂದು ಹೇಳಿ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ವರುಣ್​ನನ್ನು ಈಗ ಪೊಲೀಸರು ಬಂಧಿಸಲಿದ್ದಾರೆ.

Share This Article
Leave a comment