January 12, 2025

Newsnap Kannada

The World at your finger tips!

deepa1

ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ

Spread the love

ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ.
ದೀರ್ಘಕಾಲದ ಅನುಭವದಲ್ಲಿ ಇದು ಸತ್ಯ ಎನಿಸುತ್ತದೆ.

ತಾತ್ಕಾಲಿಕವಾಗಿ ನಾವು ನಮ್ಮ ಮುಖವಾಡಗಳಲ್ಲಿ ಯಶಸ್ಸು ಗಳಿಸಬಹುದು. ಆದರೆ ನಿರಂತರವಾಗಿ ಮತ್ತು ಅದೇ ಗುಣಮಟ್ಟ ಬಹಳ ಕಾಲ ಉಳಿಸಿಕೊಳ್ಳಲಾಗದೆ ಕ್ರಮೇಣ ಯಾವುದೋ ಒಂದು ಸಂದರ್ಭದಲ್ಲಿ ಅಗ್ನಿ ಪರೀಕ್ಷೆ ಎದುರಾಗಿ ನಮ್ಮ ನಿಜ ವ್ಯಕ್ತಿತ್ವ ಬಯಲಾಗುತ್ತದೆ.

ಇದು ಎಲ್ಲಾ ಕ್ಷೇತ್ರಗಳಿಗು ಮತ್ತು ಎಲ್ಲಾ ಸಂಬಂಧಗಳಿಗೂ ಅನ್ವಯಿಸುತ್ತದೆ.

ಕ್ರೀಡೆ ಸಾಹಿತ್ಯ ಸಂಗೀತ ಕಲೆ ವಿಜ್ಞಾನ ರಾಜಕೀಯ ಸಂಘಟನೆ ಮತ್ಯಾವುದೇ ವಿಭಾಗವಾಗಿರಲಿ ನಮ್ಮ ವ್ಯಕ್ತಿತ್ವದಲ್ಲಿ ನಿಜ ಸಾಮರ್ಥ್ಯ ಇಲ್ಲದಿದ್ದಲ್ಲಿ ನಾವು ಕ್ರಮೇಣ ಕುಸಿಯತೊಡಗುತ್ತೇವೆ. ತಾತ್ಕಾಲಿಕ ಯಶಸ್ಸು ಮರೆಯಾಗುತ್ತದೆ. ಆಗ ನಾವು ಭ್ರಮನಿರಸನ ಹೊಂದಿ ಅಸಹಿಷ್ಣತೆ ಅಥವಾ ಖಿನ್ನತೆಗೆ ಒಳಗಾಗುತ್ತೇವೆ.

ಉದಾಹರಣೆಗೆ, ನೀವು ಯಾವುದೇ ಪ್ರಕಾರದ ಬರಹಗಾರರು ಆಗಿರಬಹುದು. ನಿಮ್ಮ ಒಳಗಿನ ವ್ಯಕ್ತಿತ್ವದ ಸಹಜ ಭಾವನೆಗಳ ಅನಾವರಣ ನಿಮ್ಮದಾಗಿರದೆ ಕೇವಲ ಅಕ್ಷರ ಜ್ಞಾನದ ಆಧಾರದಲ್ಲಿ ಪದಗಳ ಚಾಕಚಕ್ಯತೆಯ ಮೇಲೆ ಸಾಹಿತ್ಯ ರಚಿಸುತ್ತಿದ್ದರೆ ಪ್ರಾರಂಭದಲ್ಲಿ ಅದು ಒಂದಷ್ಟು ಯಶಸ್ಸು ತಂದುಕೊಡಬಹುದಾದರು ದೀರ್ಘಕಾಲದಲ್ಲಿ ಅದು ಜೊಳ್ಳು ಎಂದು ನಿಜವಾದ ಕಸುಬುದಾರರಿಗೆ ಅರ್ಥವಾಗುತ್ತದೆ.

ಚಾಲಕರೇ ಇರಬಹುದು, ಸಮಾಜ ಸುಧಾರಕರೇ ಇರಬಹುದು, ಮೆಕ್ಯಾನಿಕ್ ಆಗಿರಬಹುದು, ಅದರ ಬಗ್ಗೆ ಸಂಪೂರ್ಣ ನಿಯಂತ್ರಣ ಇದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ವಾಹನ ಚಲಾಯಿಸಿದ ಮಾತ್ರಕ್ಕೆ ಅಥವಾ ಸಂಗೀತದ ಒಂದು ವಾದ್ಯ ನುಡಿಸಿದ ಮಾತ್ರಕ್ಕೆ ನಾನು ಅದರಲ್ಲಿ ಪಂಡಿತ ಎಂದು ಭಾವಿಸಲು ಸಾಧ್ಯವಿಲ್ಲ.

ಹಾಗೆಯೇ,
ಸಂಬಂಧಗಳಲ್ಲಿಯೂ ಸಹ ತೋರಿಕೆಯ ಮನೋಭಾವ ಬಹಳ ದಿನ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿಯೋ, ಸ್ನೇಹವೋ, ಭಕ್ತಿಯೋ, ವಿನಯವೋ,ಧೈರ್ಯವೋ ಅದು ಆಳವಾಗಿ ಸ್ವಾಭಾವಿಕವಾಗಿ ನಮ್ಮ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದ್ದಾಗ ಮಾತ್ರ ಅದು ಬೇರೆಯವರಿಗೆ ಅರ್ಥವಾಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ. ಇಲ್ಲದಿದ್ದರೆ ಚಿಕ್ಕ ಮಗುವಿಗೂ ನಮ್ಮ ಕಪಟತನ ತಿಳಿದುಬಿಡುತ್ತದೆ.

ಗೆಳೆಯ ಗೆಳತಿಯರೆ, ನಮ್ಮ ಬರಹಗಳಲ್ಲಿ ನಿಜವಾದ ಸಾಮರ್ಥ್ಯ ಇದ್ದರೆ ಇಂದಲ್ಲಾ ನಾಳೆ ಅದು ಓದುಗರ ಮನಸ್ಸಿಗೆ ತಲುಪುತ್ತದೆ. ಇಲ್ಲದಿದ್ದರೆ ಹಾಗೆ ಮರೆಯಾಗುತ್ತದೆ.

ಈ ಕ್ಷಣದ ಹೊಗಳಿಗೆ ಮತ್ತು ತೆಗಳಿಕೆ ನಮ್ಮ ಒಟ್ಟು ಸಾಮರ್ಥ್ಯ ಅಥವಾ ಅಸಾಮರ್ಥ್ಯ ನಿರ್ಧರಿಸುವುದಿಲ್ಲ.

ಈ ಕಾಲಘಟ್ಟದಲ್ಲಿ ಪಂಥಗಳ ಬಲೆಯೊಳಗೆ ಬಂಧಿಯಾಗಿರುವ ಮನಸ್ಸುಗಳ ನಡುವೆ, ಅಪರಿಚಿತ ಮತ್ತು ಪರೋಕ್ಷ ಗೆಳೆತನ ಇನ್ನೂ ಗಟ್ಟಿಯಾಗಿ ಬೇರುಬಿಟ್ಟಿರದ ಸಮಯದಲ್ಲಿ ಇಲ್ಲಿನ ಟೀಕೆ ಮತ್ತು ಪ್ರೋತ್ಸಾಹ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ. ಅಹಂ ಅಥವಾ ನಿರ್ಲಕ್ಷ್ಯ ಎರಡೂ ಬೇಡ.

ಕಾಲನ ಪರೀಕ್ಷೆಯಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ನಮ್ಮ ವ್ಯಕ್ತಿತ್ವದ ಭಾಗವೇ ಆಗಿದ್ದರೆ ಯಶಸ್ಸು ನಮ್ಮದಾಗುತ್ತದೆ. ಒಂದು ವೇಳೆ ವಿಫಲವಾದರೆ ಅದು ಕೂಡ ನಮ್ಮ ಸಾಮರ್ಥ್ಯದ ಇತಿಮಿತಿ ಎಂದು ಭಾವಿಸೋಣ.
ಸಾಧ್ಯವಾದಷ್ಟು ಸಮಚಿತ್ತ ಮನೋಭಾವ ಬೆಳೆಸಿಕೊಳ್ಳೋಣ.

ಈಗಿನ ವೇಗದ ಮತ್ತು ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ನಮ್ಮ ನೆಮ್ಮದಿಗಾಗಿ ಇದು ಅತ್ಯಂತ ಅವಶ್ಯ. ನೀವು ಆತುರಕ್ಕೆ ಬಿದ್ದರೆ ಈ ಸೋಷಿಯಲ್‌ ಮೀಡಿಯಾ ಬಹುಬೇಗ ನಿಮ್ಮನ್ನು ನಿರಾಸೆಗೆ ತಳ್ಳಿ ನೀವು ಭ್ರಮನಿರಸನ ಆಗುವಂತೆ ಮಾಡುತ್ತದೆ.

ಆದ್ದರಿಂದ ಇದೊಂದು ಅದ್ಬುತ ಮಾಯಾ ಜಾಲ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿದ್ದರೆ ನಿಧಾನವಾಗಿ ಮತ್ತು ನಿರಂತರವಾಗಿ ಇದರ ಉಪಯೋಗ ಪಡೆಯಬಹುದು.

ದ್ವೇಷಕಾರುವ, ಅಸೂಯೆಪಡುವ, ಉಡಾಫೆ ಅಭಿಪ್ರಾಯ ವ್ಯಕ್ತಪಡಿಸಿ ಮಜಾ ನೋಡುವ, ನಿಮ್ಮನ್ನು ಕೆಣಕುವ, ಇಲ್ಲದ ತಪ್ಪುಗಳನ್ನು ಹುಡುಕುವ, ಸರಿಯನ್ನು ತಪ್ಪು ಮಾಡುವ ವ್ಯಕ್ತಿಗಳು ಅಥವಾ ಗುಂಪುಗಳ ಅನೇಕ ಗುಣಗಳನ್ನು ಆದಷ್ಟೂ ಗುರುತಿಸಿ ಅವರಿಂದ ದೂರ ಇರಲು ಪ್ರಯತ್ನಿಸಿ.

ಕೇವಲ ಬರಹಗಳ, ಅಭಿಪ್ರಾಯಗಳ, ಪದಗಳ ಆಧಾರದ ಮೇಲೆ ಯಾರ ತನವನ್ನೂ ನಿರ್ಧರಿಸಬೇಡಿ. ಅವರ ಇಡೀ ವ್ಯಕ್ತಿತ್ವ ನಿಮಗೆ ಪರಿಚಯವಾಗಿ ಅದು ನಿಮಗೆ ಇಷ್ಟವಾದರೆ ಮಾತ್ರ ಗೆಳೆತನದ ಆಳಕ್ಕೆ ಹೋಗಿ.

ಇದು ಸೂಕ್ಷ್ಮ ಮನಸ್ಸಿನ ಗೆಳೆಯ ಗೆಳೆತಿಯರಿಗೆ ಮಾತ್ರ. ಭಂಡ ಸ್ವಭಾವದರು ಎಲ್ಲಿದ್ದರೂ – ಹೇಗಿದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!