ಬೇಡಿಕೆಗಳ ಪೂರೈಕೆ, ಶತ್ರುಗಳ ನಾಶದ ಶಾಪಕ್ಕಾಗಿ ಈ ಹರಕೆಗಳೆ?

Team Newsnap
3 Min Read

ಹರಕೆ ಮತ್ತು ಶಾಪ……..

ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು…….

ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು…….

ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು……

ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು……..

ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು……

ಆಕಸ್ಮಿಕವಾಗಿ ನಾವು ಶಪಿಸಿದಂತೆ ನಮ್ಮ ವಿರೋಧಿಗಳಿಗೆ ಆಘಾತ ಸಂಭವಿಸಿರಬಹುದು……..

ಹರಕೆಗಳು ಸಂಭವಿಸಲು ಅವು ನಮ್ಮ ಮಿತಿಯಲ್ಲಿರಬೇಕು.
ಮದುವೆ ಮಕ್ಕಳು ಪರೀಕ್ಷೆ ಉದ್ಯೋಗ ಆರೋಗ್ಯ ಆಸ್ತಿ ಅಧಿಕಾರ ಎಲ್ಲವೂ ಕನಿಷ್ಟ ನಾವು ಸ್ಪರ್ಧೆಯಲ್ಲಿ ಇದ್ದಾಗ ಮಾತ್ರ ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಪರ್ಧೆಯಲ್ಲಿ ಇಲ್ಲದೆ ಕೇವಲ ಪ್ರೇಕ್ಷಕರೋ ವೀಕ್ಷಕರೋ ಆಗಿದ್ದರೆ ಹರಕೆ ಪೂರೈಕೆಯಾಗುವುದಿಲ್ಲ.

ಉದಾಹರಣೆಗೆ……
ನೀವು ಮದುವೆ ವಯಸ್ಸಿನವರಾಗಿದ್ದು, ವಧು ವರರ ಹುಡುಕಾಟದಲ್ಲಿ ಇದ್ದಾಗ,
ಉದ್ಯೋಗದ ಹುಡುಕಾಟದಲ್ಲಿ ಇದ್ದಾಗ, ವೈದ್ಯಕೀಯ ಭಾಷೆಯಲ್ಲಿ ಮಕ್ಕಳಾಗುವ ಸಾಧ್ಯತೆ ಇದ್ದಾಗ, ಸಾವಿನ ಖಚಿತತೆ ಇಲ್ಲದಿದ್ದಾಗ, ರಾಜಕೀಯ ಕ್ಷೇತ್ರದಲ್ಲಿ ಅಥವಾ ಬೇರಾವುದೇ ಕ್ಷೇತ್ರದಲ್ಲಿ ಇದ್ದಾಗ ನಿಮ್ಮ ಹರಕೆಗಳು ಪರಿಸ್ಥಿತಿಗೆ ಅನುಗುಣವಾಗಿ ಯಶಸ್ಸಾಗುವ ಶೇಕಡಾವಾರು ಪ್ರಮಾಣ ಹೆಚ್ಚಾಗಿರುತ್ತದೆ. ಇದಲ್ಲದೇ ಕೈಗೆಟುಕದ ಏನೇನೋ ಹರಕೆ ಹೊತ್ತುಕೊಂಡರೆ ಅದು‌ ಸಿದ್ದಿಸುವುದಿಲ್ಲ. ಏಕೆಂದರೆ ಹರಕೆ ಒಂದು ನಂಬಿಕೆ. ಅದನ್ನು ಪೂರೈಸಲು ಯಾರು ಇಲ್ಲ. ಅದು ನಿರ್ಜೀವ ಅಥವಾ ಭ್ರಮೆ. ನಾನು ಪ್ರಧಾನಿಯಾಗಬೇಕು, ನಾನು ಸಿನಿಮಾ ಸೂಪರ್ ಸ್ಟಾರ್ ಆಗಬೇಕು, ನಾನು ಸಾವಿರ ವರ್ಷ ಬದುಕಬೇಕು ಎಂದು ಸಾಮಾನ್ಯ ಪರಿಸ್ಥಿತಿಯಲ್ಲಿ ಹರಕೆ ಹೊತ್ತರೆ ಅದು ಹುಚ್ಚುತನದ ಪರಮಾವಧಿ.

ಯಾರಿಗಾದರೂ ಏನಾದರೂ ಹರಕೆ ಹೊತ್ತ ತಕ್ಷಣ ಎಲ್ಲವೂ ಸಿಗುತ್ತದೆ ಎಂಬುದು ನಿಜವೇ ಆಗಿದ್ದರೆ ಸಾವು ನೋವು ಸಂಕಷ್ಟಗಳು ಇರುತ್ತಿರಲಿಲ್ಲ. ಅದು ಯಾವುದೇ ಧರ್ಮದ ದೇವರೇ ಆಗಿರಬಹುದು, ಅಥವಾ ಅತಿಮಾನುಷ ಶಕ್ತಿ ಆಗಿರಬಹುದು ಅಥವಾ ಮೂರ್ತಿ ವಿಗ್ರಹಗಳೇ ಆಗಿರಬಹುದು ಎಷ್ಟೇ ಬೆಲೆಬಾಳುವ ಅಥವಾ ಭಕ್ತಿ ಪೂರ್ವಕ ಹರಕೆ ಕೊಟ್ಟರೂ ಅದು ಖಚಿತವಾಗಿ ಈಡೇರುವ ವಾಸ್ತವ ಅಲ್ಲ. ಕೇವಲ ಒಂದು ಭರವಸೆ ಮಾತ್ರ.

ಸಾಮಾನ್ಯ ವ್ಯಕ್ತಿಯೊಬ್ಬ ದೇವರಿಗೆ ನಾನು ಸಾವಿರ ಕೋಟಿಯ ಒಡೆಯನಾದರೆ ನೂರು ಕೋಟಿ ವಜ್ರ ಖಚಿತ ಕಿರೀಟ ಮಾಡಿಸುತ್ತೇನೆ ಎಂದು ಹರಕೆ ಹೊತ್ತರೆ ಆ ರೀತಿಯ ಯಾವುದೋ ಅಪರೂಪದ ಯಶಸ್ಸನ್ನು ಹರಕೆಯ ಫಲಿತಾಂಶ ಸಮರ್ಥಿಸಲು ಉದಾಹರಣೆ ಕೊಡುವುದು ಮೂರ್ಖತನ. ಎಲ್ಲಾ ಘಟನೆಗಳು ಸಾರ್ವತ್ರಿಕವಾಗಿ ಸಹಜ ಫಲಿತಾಂಶ ನೀಡುವಂತಿರಬೇಕು.

ಹಾಗೆಯೇ ಶಾಪಗಳು ಸಹ ಕಾಕತಾಳೀಯವಾಗಿ ಯಶಸ್ಸು ಗಳಿಸಬಹುದೇ ಹೊರತು ಅದು ಖಚಿತ ವಾಸ್ತವವಲ್ಲ. ಈಗಿನ ಆಧುನಿಕ ಸ್ಪರ್ಧಾ ಪ್ರಪಂಚದಲ್ಲಿ ಎಲ್ಲರೂ ತಮ್ಮ ವಿರೋಧಿಗಳಿಗೆ ಮನಸ್ಸಿನಲ್ಲಿ ಶಾಪ ಹಾಕಲು ಹಿಂಜರಿಯುವುದಿಲ್ಲ. ಕೆಲವರು ಬಹಿರಂಗವಾಗಿ ಸಹ ಹಾಕುತ್ತಾರೆ. ಆದರೆ ಎಂದೋ ಯಾವುದೋ ಅವಘಡ ಸಂಭವಿಸಿದಾಗ ನಮ್ಮ ಶಾಪ ಕಾರಣ ಎಂದು ಸಮಾಧಾನ ಮಾಡಿಕೊಳ್ಳಬಹುದಷ್ಟೆ.

ಶಾಪಗಳು ಫಲಿಸುವಂತಿದ್ದರೆ ಬಹುಶಃ ಸಮಾಜವೇ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಮನುಷ್ಯರಲ್ಲಿ ಅಷ್ಟರ ಮಟ್ಟಿಗೆ ದ್ವೇಷ ಅಸೂಯೆಗಳು ತುಂಬಿದೆ.

ಹರಕೆಗಳು – ಶಾಪಗಳು – ದೇವರುಗಳು ಈ ಸಮಾಜದ ಬಹುದೊಡ್ಡ ನಂಬಿಕೆಯಾಗಿ ಈಗಲೂ ಉಳಿದಿದೆ. ಯಾರೋ ಹೇಳಿದರು ಹಿಂದೂ ದೇವಸ್ಥಾನಗಳು ತುಂಬಾ ಶಕ್ತಿಶಾಲಿ, ಮತ್ತೊಬ್ಬರು ಇಲ್ಲಾ ದರ್ಗಾಗಳಲ್ಲಿ ಬೇಡಿಕೆ ಇಟ್ಟರೆ ಎಲ್ಲವೂ ಈಡೇರುತ್ತದೆ, ಇನ್ಯಾರೋ ಸಲಹೆ ಕೊಟ್ಟರು ಚರ್ಚುಗಳಲ್ಲಿ ಪ್ರಾರ್ಥಿಸಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಈ ಬೇರೆ ಬೇರೆ ಧರ್ಮಗಳ ಜನರ ನಂಬಿಕೆಯೇ ಈ ಹರಕೆ ಶಾಪಗಳು ಕೃತಕ ಸೃಷ್ಟಿ ಮತ್ತು ವ್ಯಾಪಾರಿಕರಣದ ಒಂದು ತಂತ್ರ ಎಂದು ಸ್ಪಷ್ಟವಾಗಿ ಹೇಳಬಹುದು.

ಅದು ಅವರವರ ನಂಬಿಕೆಗಳು ಅದನ್ನು ಪ್ರಶ್ನಿಸಲು ನೀವು ಯಾರು ? ಹೌದು ನಾವು ಯಾರೂ ಅಲ್ಲ. ಆದರೆ ಸುಳ್ಳು ಭ್ರಮೆಗಳನ್ನು ಶತಮಾನಗಳಿಂದ ಸಮಾಜದಲ್ಲಿ ಸೃಷ್ಟಿಮಾಡಿ ಜನರನ್ನು ಶೋಷಿಸುತ್ತಾ ದೇಶದ ಜನರ ಮಾನಸಿಕ ವ್ಯಕ್ತಿತ್ವವನ್ನು ಜ್ಞಾನಕ್ಕೆ ಬದಲು ನಂಬಿಕೆ, ವಾಸ್ತವಕ್ಕೆ ಬದಲು ಭ್ರಮೆಯಲ್ಲಿ ಇರಿಸಿ ಇಡೀ ಸಮಾಜ ಅಭಿವೃದ್ಧಿಯ ನೆಮ್ಮದಿಯ ಪಥದಲ್ಲಿ ‌ಸಾಗಲು ಅಡ್ಡಿಯಾಗಿರುವ ಸತ್ಯವನ್ನು ಹೇಳುವ ಪ್ರಯತ್ನ ಮಾಡಲೇಬೇಕಾಗಿದೆ.

ಈ ನಂಬಿಕೆಗಳು ಜನರಲ್ಲಿ ಒಂದಷ್ಟು ಆತ್ಮವಿಶ್ವಾಸ ಮತ್ತು ಸಮಾಧಾನದ ಭಾವ ಮೂಡಿಸಬಹುದೇ ಹೊರತು ದೀರ್ಘಕಾಲದ ಸತ್ವಯುತ ಮಾನಸಿಕ ಮತ್ತು ಸಾಮಾಜಿಕ ವ್ಯವಸ್ಥೆ ಸೃಷ್ಟಿಯಾಗಲು ಸಾಧ್ಯವಿಲ್ಲ. ಇಷ್ಟೊಂದು ಸರಳ ವಿಷಯಗಳು ಇನ್ನೂ ನಮ್ಮ ಮನಸ್ಸುಗಳಲ್ಲಿ ಜೀವಂತವಿರುವುದು – ಆಚರಣೆಯಲ್ಲಿರುವುದು ಸೋಜಿಗವೆನಿಸುತ್ತದೆ.

ಇನ್ನು ಮುಂದಾದರು ಈ ಬಗ್ಗೆ ಮತ್ತೊಮ್ಮೆ ಯೋಚಿಸಿ ಎಂಬ ಕಳಕಳಿಯ ಮನವಿಯೊಂದಿಗೆ…..

  • ವಿವೇಕಾನಂದ. ಹೆಚ್.ಕೆ.
Share This Article
Leave a comment